ಬುಧವಾರ, ಮೇ 18, 2022
23 °C

ಪ್ರಭಾಕರ್‌ ಛಾಯೆಯಾಚೆಗಿನ ವಿನೋದ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

21 ಚಿತ್ರಗಳವರೆಗಿನ ಸಿನಿಪಯಣ ಹೇಗೆನಿಸಿದೆ?

ಈಗ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಮೊದಲು ಆರಂಭದ ನನ್ನದೇ ಮೂರು ಸಿನಿಮಾಗಳನ್ನು ಡಬ್ಬಿಂಗ್‌ ವೇಳೆಯಲ್ಲಿ ನೋಡಿದಾಗ ನನ್ನ ಅಭಿನಯ ನನಗೇ ಸರಿಬರಲಿಲ್ಲ. ಇನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಹೇಳಿ. ಆದರೆ, ತಂದೆಯವರ ಅಭಿಮಾನಿಗಳು ಮತ್ತು ಕನ್ನಡ ಪ್ರೇಕ್ಷಕರು ಆಶೀರ್ವದಿಸಿ ನನ್ನ ಮೇಲೆ ನಂಬಿಕೆ ಇಟ್ಟು ಪ್ರೋತ್ಸಾಹಿಸಿದರು. ಆ ನಂಬಿಕೆಯನ್ನು ಉಳಿಸಿಕೊಂಡು 21 ನೇ ಸಿನಿಮಾದವರೆಗೆ ಬಂದಿದ್ದೇನೆ.

ಪ್ರಭಾಕರ್‌ ಅವರ ವೈಭವದ ದಿನಗಳ ನಂತರ ನಿಮ್ಮ ಪ್ರವೇಶವನ್ನು ಚಿತ್ರರಂಗ ಹೇಗೆ ಸ್ವೀಕರಿಸಿತು?

ಅವರ (ತಂದೆಯವರ) ಮೇಲೆ ಏನೆಲ್ಲಾ ನಿರೀಕ್ಷೆಗಳಿದ್ದವೋ ಅವೆಲ್ಲವನ್ನೂ ನನ್ನಿಂದಲೂ ಜನ ನಿರೀಕ್ಷಿಸಿದರು. ವೈಯಕ್ತಿಕವಾಗಿ ಹೇಳುವುದಾದರೆ ತಂದೆಯವರು ಸುಮಾರು 500 ಚಿತ್ರಗಳಲ್ಲಿ ನೀಡಿದ ಮಟ್ಟದ ಪ್ರದರ್ಶನವನ್ನು ನನ್ನ ಮೂರು ಚಿತ್ರಗಳಲ್ಲಿ ಕೊಡಲು ಆಗಲಿಲ್ಲ. ಆದರೆ, ಪ್ರಭಾಕರ್‌ ಮಗ ಅನ್ನುವುದಕ್ಕಿಂತ ವಿನೋದ್‌ ಪ್ರಭಾಕರ್‌ ಸಿನಿಮಾ, ನನ್ನದೇ ಆದ ಬ್ರಾಂಡ್‌ ಸ್ಥಾಪಿಸುವುದು, ನನ್ನದೇ ಅಭಿಮಾನಿ ವರ್ಗವನ್ನು ಸಂಪಾದಿಸುವುದು ಬಹಳ ಕಷ್ಟವಾಯಿತು. ಇದನ್ನು ಎಲ್ಲ ನಟರ ಮಕ್ಕಳು ಅನುಭವಿಸಿದ್ದಾರೆ.

ಸಿನಿಮಾ ರಂಗಕ್ಕೆ ಬರಬೇಕಾದರೆ ನಿಮ್ಮ ತಯಾರಿ ಏನಿತ್ತು?

ನಾನು ನನ್ನ ತಾಯಿ ಜೊತೆ ಬೆಳೆದವನು. ಫೈಟ್‌, ಸಾಹಸ ಎಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ನಾನು ಓದಿದ್ದು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌. ನಾನು ಸಿನಿಮಾಕ್ಕೆ ಅರ್ಹನಲ್ಲ ಎಂದುಕೊಂಡಿದ್ದೆ. ಅದಕ್ಕೆ ತಕ್ಕಂತೆ ನನ್ನ ತಂದೆ ಮಾಡಿದ ಒಳ್ಳೆಯ ಹೆಸರನ್ನು ಮಗ ಹಾಳು ಮಾಡಿದ ಎಂಬ ಟೀಕೆಗಳೂ ಜೋರಾಗಿ ಕೇಳಿಬಂದವು. ಆಗ ಎಲ್ಲಿ ಕಳೆದುಕೊಂಡಿದ್ದೆನೋ ಅಲ್ಲೇ ಹುಡುಕಬೇಕು ಅನ್ನುವ ಆಲೋಚನೆ ಬಂದಿತು.

ಈ ಟೀಕೆಗಳಿಗೆ ಉತ್ತರಿಸಲು ನಾನೇನಾದರೂ ಸಾಧಿಸಿಯೇ ತೋರಿಸಬೇಕು ಎಂದುಕೊಂಡು ಮತ್ತೆ ಧುಮುಕಿದೆ. ದೇಹದಾರ್ಢ್ಯತೆಯಲ್ಲಿ 8 ಪ್ಯಾಕ್‌ ಮೈಕಟ್ಟು ಪ್ರದರ್ಶಿಸುತ್ತಿದ್ದೇನೆ. ಹೀಗೇ ಪಯಣ ಸಾಗಿದೆ. ಅದರ ಫಲಿತಾಂಶವೇ ನೋಡಿ, ಈಗ ಶ್ಯಾಡೋ ಚಿತ್ರ ಬಿಡುಗಡೆಗೆ ಮುನ್ನವೇ ನಿರ್ಮಾಪಕರು ಸುರಕ್ಷಿತವಾಗಿದ್ದಾರೆ. ಅವರು ಹಾಕಿದ ಬಂಡವಾಳ ಎಲ್ಲವೂ ಬಂದಿದೆ.

ಸಿನಿಬದುಕಿನಲ್ಲಿ ತಂದೆ ಟೈಗರ್‌ ಪ್ರಭಾಕರ್‌ ಅವರ ಪಾತ್ರ ಎಷ್ಟು?

ತಂದೆಯವರು ತೀರಿಹೋದ ಬಳಿಕ ಚಿತ್ರರಂಗದಲ್ಲಿ ಅವರ ಜಾಗ ತುಂಬುವ ಇನ್ನೊಬ್ಬ ವ್ಯಕ್ತಿ ಬೇಕಿತ್ತೇ ವಿನಾ ವಿನೋದ್‌ ಪ್ರಭಾಕರ್‌ ಬೇಕಾಗಿರಲಿಲ್ಲ. ನಾನೆಷ್ಟೇ ಸಿನಿಮಾ ಮಾಡಿದರೂ ನನ್ನ ನಿರ್ದೇಶಕರು ನನ್ನ ತಂದೆಯವರ ಪಾತ್ರಗಳನ್ನು ಅನುಕರಿಸಲು ಹೇಳುತ್ತಿದ್ದರು. ಹೀಗಾಗಿ ನನ್ನ ನಟನೆಯಲ್ಲಿ ಟೈಗರ್‌ ಪ್ರಭಾಕರ್ ಅವರೇ ಇದ್ದರು. ಅಭಿನಯಗಳಲ್ಲಿ ಅವರ ಛಾಯೆಯನ್ನು ತೆಗೆದು ಹಾಕಬೇಕಿತ್ತು. ‘ಟೈಸನ್’ ಸಿನಿಮಾದಲ್ಲಿ ರಾಮನಾರಾಯಣ್‌ ಮತ್ತು ಬಾಬು ರೆಡ್ಡಿ ಅವಕಾಶ ಕೊಟ್ಟರು. ಅಲ್ಲಿಂದ ಪ್ರಭಾಕರ್‌ ಛಾಯೆಯನ್ನು ಹೊರತೆಗೆದು ನನ್ನದೇ ಆದ ಪಾತ್ರ, ವ್ಯಕ್ತಿತ್ವವನ್ನು ಚಿತ್ರಿಸಿದರು. ಈಗ ವಿನೋದ್‌ ಪ್ರಭಾಕರ್‌ ಸಿನಿಮಾ ಎಂದೇ ಜನ ನೋಡುತ್ತಿದ್ದಾರೆ.

ನಿಮ್ಮ ಚಿತ್ರಗಳ ವಸ್ತು ಅಪರಾಧ, ಪೊಲೀಸ್‌, ಹೊಡೆದಾಟ ಇಂಥವುಗಳಲ್ಲೇ ಸುತ್ತುತ್ತಿವೆಯಲ್ಲಾ?

ನನ್ನ ವ್ಯಕ್ತಿತ್ವ, ದೇಹಾಕೃತಿಗೆ ಅಂತ ವಿಷಯಗಳೇ ಹೊಂದುತ್ತವೆ. ನಾನು ಹೋಗಿ ಮರ ಸುತ್ತುವ ಲವ್‌ ಸಬ್ಜೆಕ್ಟ್‌ ಮಾಡಿದರೆ ಅದು ಚೆನ್ನಾಗಿ ಕಾಣಿಸುವುದೂ ಇಲ್ಲ. ನನ್ನ ಪ್ರೇಕ್ಷಕರೂ ಅದನ್ನು ಬಯಸುವುದಿಲ್ಲ. ಹಾಗಾಗಿ ಅವರು ಕೇಳುವುದನ್ನು ಕೊಡಬೇಕಲ್ಲವೇ. ಈಗ ಶ್ಯಾಡೋ ನೋಡಿದಾಗ ನಿಮಗೆ ಗೊತ್ತಾಗುತ್ತದೆ. ಅದರಲ್ಲಿ ಎರಡೇ ಫೈಟ್‌ ಇದೆ. ಆದರೆ, ಇಡೀ ಸಬ್ಜೆಕ್ಟ್‌ ಅದಕ್ಕೆ ಬೇಕಾದಂತೆ ಇದೆ.

ಬೇರೆ ಭಾಷೆಗಳಲ್ಲಿ ಬೇಡಿಕೆ ಹೇಗಿದೆ?

ಹಿಂದಿಯಲ್ಲಿ ನನ್ನ ಸಿನಿಮಾಗಳಿಗೆ ಮಾರುಕಟ್ಟೆ ಚೆನ್ನಾಗಿದೆ. ಅಲ್ಲಿಂದ ಮುಂದೆ ಭೋಜಪುರಿ ಸೇರಿದ ಹಾಗೆ ಬೇರೆ ಬೇರೆ ಭಾಷೆಗಳ ಪ್ರೇಕ್ಷಕರಿಗೆ ಸಿನಿಮಾ ತಲುಪುತ್ತಿದೆ. ಅಲ್ಲೆಲ್ಲಾ ಫೈಟ್‌, ಆ್ಯಕ್ಷನ್‌ ಸಿನಿಮಾಗಳಷ್ಟೇ ಜನರಿಗೆ ಇಷ್ಟವಾಗುವುದು. ಈಗ ಶ್ಯಾಡೋ ಚಿತ್ರ ಹಿಂದಿಯಲ್ಲಿ ರಿಮೇಕ್‌ ಮತ್ತು ಡಬ್‌ ಆಗುತ್ತಿದೆ.

ಶ್ಯಾಡೋ ಸಿನಿಮಾದ ಬಗ್ಗೆ ಹೇಳಿ

ತನ್ನ ನೆರಳೇ ಕಳೆದುಹೋಗಿದೆ ಎಂದು ದೂರು ಕೊಡುವ ಯುವಕನಿಂದ ಕಥೆ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ಆ್ಯಕ್ಷನ್‌, ಕುತೂಹಲ ಹೀಗೆ ಸಾಗುತ್ತದೆ. ಇದು ಕುಟುಂಬ ಸಮೇತ ನೋಡುವ ಮನರಂಜನಾತ್ಮಕ ಚಿತ್ರ. ಒಳ್ಳೆಯ ಪರಿಕಲ್ಪನೆ ಇಟ್ಟುಕೊಂಡು ರವಿಗೌಡ ಅವರು ನಿರ್ದೇಶನ ಮಾಡಿದ್ದಾರೆ. ಚಕ್ರಿ ಅವರು ನಿರ್ಮಿಸಿದ್ದಾರೆ. ಇದು ಬರೀ ಆ್ಯಕ್ಷನ್‌ ಸಿನಿಮಾ ಅಲ್ಲ. ವಿನೋದ್‌ ಪ್ರಭಾಕರ್‌ನ ಸಹಜ ಸಿನಿಮಾವೇ ಅಲ್ಲ.

ಈ ಕ್ಷೇತ್ರದಲ್ಲಿ ಹೊಸ ಕನಸುಗಳೇನು?

ನಾನು ಸಿನಿಮಾ ನಿರ್ಮಾಣ ಮಾಡಬೇಕು. ಹೊಸಬರಿಗೆ ಅವಕಾಶ ಕೊಡಬೇಕು. ಸಿನಿಮಾರಂಗಕ್ಕೆ ಏನೇನು ಒಳ್ಳೆಯದಾಗುತ್ತದೋ ಅಂಥ ಎಲ್ಲ ಕೆಲಸಗಳನ್ನು ಮಾಡುವ ಕನಸು ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು