ದೀಪಾವಳಿಗೆ ಸಿಡಿಯಲಿದೆ ವಿಶಾಲ್ ‘ಚಕ್ರ’

ನಟ ವಿಶಾಲ್ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ‘ಚಕ್ರ’ ಪ್ಯಾನ್ ಇಂಡಿಯಾ ಚಿತ್ರ. ಸೈಬರ್ ಕ್ರೈಮ್ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ. ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡದಲ್ಲೂ ಇದು ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿಯೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಕೋವಿಡ್–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿತ್ತು.
ಈಗ ಒಟಿಟಿಯಲ್ಲಿ ದೀಪಾವಳಿ ಹಬ್ಬದಂದು ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದನ್ನು ವಿಶಾಲ್ ಅವರೇ ದೃಢಪಡಿಸಿದ್ದಾರೆ. ಇದನ್ನು ನಿರ್ದೇಶಿರುವುದು ಎಂ.ಎಸ್. ಆನಂದನ್.
ಇದರಲ್ಲಿ ವಿಶಾಲ್ ಅವರದು ಮಿಲಿಟರಿ ಅಧಿಕಾರಿಯ ಪಾತ್ರವಂತೆ. ಶ್ರದ್ಧಾ ಶ್ರೀನಾಥ್ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಹ್ಯಾಕರ್ಸ್ ತಂಡವೊಂದು ಬೆಂಗಳೂರಿನಲ್ಲಿ 49 ಮನೆಗಳಲ್ಲಿ ದರೋಡೆ ನಡೆಸುತ್ತದೆ. ವಿಶಾಲ್ ಮನೆಯಲ್ಲಿದ್ದ ‘ಅಶೋಕ ಚಕ್ರ’ ಕೂಡ ಕಳವಾಗುತ್ತದೆ. ಹ್ಯಾಕರ್ಸ್ ಪತ್ತೆಗೆ ಈ ಇಬ್ಬರು ಕಾರ್ಯಾಚರಣೆಗೆ ಧುಮುಕುತ್ತಾರೆ. ದರೋಡೆಕೋರರನ್ನು ಹೇಗೆ ಪತ್ತೆ ಹಚ್ಚತ್ತಾರೆ ಎಂಬುದೇ ಇದರ ಹೂರಣ.
ನಟಿ ರೆಜಿನಾ ಕಸ್ಸಂದ್ರ ಕೂಡ ಇದರಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
‘ಭ್ರಷ್ಟಾಚಾರ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ. ನಮಗೆ ಗೊತ್ತಿಲ್ಲದೆ ನಾವು ಸಂಪಾದಿಸಿದ ಹಣದ ಲೂಟಿ ನಡೆಯುತ್ತಿದೆ. ಇದರ ವಿರುದ್ಧವೇ ‘ಚಕ್ರ’ದಲ್ಲಿ ಹೇಳಲಾಗಿದೆ’ ಎಂದಿದ್ದಾರೆ ವಿಶಾಲ್.
ಪ್ರಸ್ತುತ ವಿಶಾಲ್ ಸೇರಿದಂತೆ 25 ಜನರ ಚಿತ್ರತಂಡ ಬಾಕಿ ಉಳಿದಿರುವ ‘ಚಕ್ರ’ದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದೆಯಂತೆ. ‘ಸರ್ಕಾರದ ಮಾರ್ಗಸೂಚಿ ಅನ್ವಯ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರಮಂದಿರಗಳು ಯಾವಾಗ ಶುರುವಾಗುತ್ತವೆ ಎಂಬುದು ಖಾತ್ರಿ ಇಲ್ಲ. ಹಾಗಾಗಿ, ಒಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.