ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪೋಷಾಕಿನಲ್ಲಿ ವಿವೇಕ್‌ ಒಬೆರಾಯ್

Last Updated 1 ಜನವರಿ 2019, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಿಂದ ವಲಸೆ ಬಂದಿರುವನಟ ವಿವೇಕ್‌ ಒಬೆರಾಯ್‌ ಹೊಸ ವರ್ಷದಲ್ಲಿ ಮೂರು ಭಾಷೆಯ ಮೂರು ಮಹತ್ವದ ಚಿತ್ರಗಳಲ್ಲಿ ಮಿಂಚಲಿದ್ದಾರೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಜೀವನಕಥೆಯನ್ನಾಧರಿಸಿದ ಹೊಸ ಚಿತ್ರದಲ್ಲಿ ಮೋದಿ ಪೋಷಾಕು ಧರಿಸುವುದು ಖಚಿತವಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ‘ವಿನಯ ವಿಧೇಯ ರಾಮ’ ಟ್ರೇಲರ್‌ನಲ್ಲಿ ವೀಕ್ಷಕರ ಗಮನ ಸೆಳೆದು ಭೇಷ್‌ ಅನಿಸಿಕೊಂಡಿದ್ದಾರೆ ವಿವೇಕ್‌. ಅದೇ ಖುಷಿಯಲ್ಲಿರುವಾಗಲೇ ನರೇಂದ್ರ ಮೋದಿ ಕುರಿತ ಸಿನಿಮಾದ ಆಫರ್‌ ಬಂದಿರುವುದು ಅವರ ಖುಷಿಯನ್ನು ದುಪ್ಪಟ್ಟು ಮಾಡಿದೆ.

ಹಿಂದಿ ಚಿತ್ರರಂಗದಲ್ಲಿ‌ಒಂದಾದ ಮೇಲೊಂದರಂತೆ ಜೀವನಕತೆಯನ್ನಾಧರಿಸಿದ ಚಿತ್ರಗಳು ತೆರೆಗೆ ಬರುತ್ತಲೇ ಇವೆ. ಬಾಕ್ಸಿಂಗ್‌ ತಾರೆ ಮೇರಿ ಕೋಮ್‌ ಕುರಿತ ಸಿನಿಮಾ ನಿರ್ದೇಶಿಸಿದ ಒಮಂಗ್‌ ಕುಮಾರ್‌ ಅವರೇ ಮೋದಿ ಸಿನಿಮಾಗೂ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಸಂಜಯ್‌ ದತ್‌ ನಟನೆಯ ‘ಭೂಮಿ’ ಚಿತ್ರ ನಿರ್ದೇಶಿಸಿದ ಬೆನ್ನಲ್ಲೇ ಒಮಂಗ್‌ ಕೈಗೆತ್ತಿಕೊಂಡದ್ದು ಮೋದಿ ಜೀವನಚರಿತ್ರೆಯ ಈ ಸಿನಿಮಾವನ್ನು. ಒಂದೂವರೆ ವರ್ಷಗಳಿಂದ ಅವರು ಸಿನಿಮಾದ ಕತೆ, ಚಿತ್ರಕತೆ ಸಿದ್ಧಪಡಿಸುವುದರಲ್ಲಿ ತೊಡಗಿಸಿಕೊಂಡಿದ್ದರು.

ಇದೀಗ ವಿವೇಕ್‌ ಒಬೆರಾಯ್‌ ಅವರು ಮೋದಿ ಪಾತ್ರ ಮಾಡಲು ಒಪ್ಪಿಕೊಂಡಿರುವ ಕಾರಣ ಹೊಸ ವರ್ಷದ ಆರಂಭದಲ್ಲೇ ಚಿತ್ರೀಕರಣ ಆರಂಭಿಸಲು ಹಸಿರು ನಿಶಾನೆ ತೋರಿದಂತಾಗಿದೆ. ಮೋದಿ ಕುರಿತ ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವ ಪರೇಶ್‌ ರಾವಲ್‌ ಅವರೇ ಮೋದಿ ಪಾತ್ರವನ್ನೂ ನಿರ್ವಹಿಸುತ್ತಾರೆ ಎಂದು ಹೇಳಲಾಗಿತ್ತು. ಕಳೆದ ಜೂನ್‌ನಲ್ಲೇ ರಾವಲ್‌ ಈ ಬಗ್ಗೆ ಸ್ಪಷ್ಟಪಡಿಸಿಯೂ ಆಗಿತ್ತು. ಆದರೆ ಇದೀಗ, ವಿವೇಕ್‌ ಒಬೆರಾಯ್‌ ಅವರು ಪ್ರಧಾನಿ ಮೋದಿ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿ ಖಚಿತವಾಗಿದೆ. ರಾಜಕೀಯ ಕ್ಷೇತ್ರ ಪ್ರವೇಶಕ್ಕೂ ಹಿಂದಿನ ಚಹಾವಾಲಾ ‘ಯುವ ಮೋದಿ’ಯಾಗಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇತರ ವಯೋಮಾನದ ಪಾತ್ರಗಳನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿವೇಕ್‌ ಒಬೆರಾಯ್, ಈಗಾಗಲೇ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಗುಜರಾತ್‌, ದೆಹಲಿ, ಉತ್ತರಾಖಂಡ ಮತ್ತು ಹಿಮಾಚಲಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಿತ್ರೀಕರಣದಲ್ಲಿ ವಿವೇಕ್‌ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಸಾಧನೆಯ ಹಾದಿಯಲ್ಲಿ ಮೌನ ಯಾನ

ಹಿಂದಿ ಚಿತ್ರರಂಗದ ಖ್ಯಾತ ನಟ ಸುರೇಶ್‌ ಒಬೆರಾಯ್‌ ಅವರ ಮಗ ವಿವೇಕ್‌. ನಟನೆಯನ್ನು ವೃತ್ತಿಯಾಗಿ ಸ್ವೀಕರಿಸುವುದಕ್ಕೂ ಮೊದಲು ಅದರ ಅಕಾಡೆಮಿಕ್‌ ಪಾಠಗಳನ್ನು ಅಧ್ಯಯನ ಮಾಡಬೇಕು ಎಂದು ವಿದೇಶಕ್ಕೆ ಹಾರಿದರು. ನಟನೆಯಲ್ಲಿ ಪದವಿ ಮುಗಿಸಿದ ಬಳಿಕ, 2002ರಲ್ಲಿ ರಾಮ್‌ಗೋಪಾಲ್‌ ವರ್ಮಾ ಅವರ ‘ಕಂಪೆನಿ’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೋಹನ್‌ಲಾಲ್‌, ಅಜಯ್ ದೇವಗನ್‌, ಮನೀಷಾ ಕೊಯಿರಾಲಾ, ಸೀಮಾ ಬಿಸ್ವಾಸ್‌ ಮತ್ತು ಅಂತರಾ ಮಾಲಿ ಅವರು ಪಾತ್ರವರ್ಗದಲ್ಲಿದ್ದ ಈ ಚಿತ್ರ ವಿವೇಕ್‌ಗೆ ಎಂಟ್ರಿಯಲ್ಲಿಯೇ ಉತ್ತಮ ಹೆಸರು ಗಳಿಸಿಕೊಟ್ಟಿತು.

ನಂತರ ‘ರೋಡ್‌’, ‘ದಮ್‌’, ಹಿಟ್‌ ಚಿತ್ರ ‘ಸಾಥಿಯಾ’, ಹಾಸ್ಯ ಚಿತ್ರ ‘ಮಸ್ತಿ’, ‘ಯುವ’, ‘ಕಿಸ್ನಾ: ದಿ ವಾರಿಯರ್‌ ಪೊಯೆಟ್‌’, ‘ಓಂಕಾರ’, ‘ಶೂಟೌಟ್‌ ಅಟ್‌ ಲೋಖಂಡ್ವಾಲಾ’,‘ಮಿಷನ್‌ ಇಸ್ತಾಂಬುಲ್‌’, ‘ಜಯಂತ್‌ಭಾಯ್‌ ಕಿ ಲವ್‌ ಸ್ಟೋರಿ’, ‘ಕುರ್ಬಾನ್‌’, ‘ರಕ್ತಚರಿತ್ರಾ’... ಹೀಗೆ ವಿವೇಕ್‌ ನಟನೆಯ ಚಿತ್ರಗಳು ನಿರಂತರವಾಗಿ ತೆರೆಕಾಣುತ್ತಲೇ ಬಂದವು.

ವಿವೇಕ್‌ ಒಬೆರಾಯ್‌ ನಟನೆಯೊಂದಿಗೆ ನಿರ್ಮಾಣದಲ್ಲಿಯೂ ತೊಡಗಿಸಿಕೊಳ್ಳುತ್ತಲೇ ಬಂದರು. ‘ವಾಚ್‌ ಇಂಡಿಯನ್‌ ಸರ್ಕಸ್‌’ ಸಿನಿಮಾ ಅವುಗಳಲ್ಲೊಂದು. ಚಿತ್ರಮಂದಿರಗಳಲ್ಲಿ ಅದು ಹೆಚ್ಚು ಗಳಿಕೆ ಮಾಡುವಲ್ಲಿ ಸಫಲವಾಗದಿದ್ದರೂ ಬೂಸಾ ನ್‌ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯಧಿಕ ಮತ ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2012ರಲ್ಲಿ ವಿವೇಕ್‌ ನಟಿಸಿದ ‘ಕಿಸ್ಮತ್‌ ಲವ್‌ ಪೈಸಾ ದಿಲ್ಲಿ’ ಬಾಕ್ಸಾಫೀಸ್‌ನಲ್ಲಿ ಸೋತಿತು.

ಚಿತ್ರರಂಗದಲ್ಲಿನ ಸೋಲು ಮತ್ತು ಗೆಲುವಿನ ನಡುವೆಯೇ ವಿವೇಕ್ ಸಾಮಾಜಿಕ ಕಾರ್ಯಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುತ್ತಿದ್ದರು. ಅದು ಅವರಿಗೆ ವಿಶ್ವ ಮಟ್ಟದಲ್ಲಿ ಪ್ರತ್ಯೇಕ ವರ್ಚಸ್ಸನ್ನು ತಂದುಕೊಟ್ಟಿತು. ಹೊಸ ನೀರಿನ ರಭಸಕ್ಕೆ ಹಳೆಯ ನೀರು ಕೊಚ್ಚಿಹೋಗುವಂತೆ ಹೊಸ ನಟರ ಎಂಟ್ರಿಯ ಭರಾಟೆಯಲ್ಲಿ ವಿವೇಕ್‌ ಸಹಜವಾಗಿಯೇ ಹಿಂದಕ್ಕೆ ಸರಿಯಬೇಕಾಯಿತು.

ಆದರೆ ನಟನೆಯನ್ನು ಇತರ ಭಾಷಾ ಚಿತ್ರರಂಗಗಳಿಗೆ ವಿಸ್ತರಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚಿತ ಚಿತ್ರ, ಮಲಯಾಳಂನ ‘ಲೂಸಿಫರ್‌’, ಕನ್ನಡದ ‘ರುಸ್ತುಂ’ ಮತ್ತು ತೆಲುಗಿನ ‘ವಿನಯ ವಿಧೇಯ ರಾಮ’ದಲ್ಲಿ ವಿವೇಕ್‌ ಗಮನ ಸೆಳೆದಿದ್ದಾರೆ. ‘ವಿನಯ ವಿಧೇಯ’ದ ಟ್ರೇಲರ್‌ನಲ್ಲಿ ನಾಯಕ ರಾಮ್‌ಚರಣ್‌ನಷ್ಟೇ ವಿವೇಕ್‌ ಕೂಡಾ ವೀಕ್ಷಕರ ಮನಸ್ಸು ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT