ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರು ಹೆಸರು ಹೇಳಿದರೆ ಇಂದ್ರಜಿತ್‌ಗೆ‌ ಏನು ಸಿಗುತ್ತೆ? ಮೇಘನಾ ರಾಜ್‌ ಕಿಡಿ

Last Updated 30 ಆಗಸ್ಟ್ 2020, 11:28 IST
ಅಕ್ಷರ ಗಾತ್ರ

ಡ್ರಗ್ಸ್‌ ಮಾಫಿಯಾ ಜತೆಗೆ ಸ್ಯಾಂಡಲ್‌ವುಡ್‌ನ ಕೆಲವರು ಹೊಂದಿರುವ ನಂಟಿನ ಬಗ್ಗೆ ಮಾತನಾಡುವಾಗ ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ನೀಡಿರುವ ಹೇಳಿಕೆಗೆ ನಟಿ ಹಾಗೂ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್‌ ಕಣ್ಣೀರು ಹಾಕಿದ್ದಾರೆ.

ಇಂದ್ರಜಿತ್ ಹೇಳಿಕೆಗೆ ಈಗ ಕನ್ನಡ ಚಿತ್ರೋದ್ಯಮದಲ್ಲಿ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇಂದ್ರಜಿತ್ ಲಂಕೇಶ್, ‘ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಒಬ್ಬ ಯುವ ನಟ ತೀರಿಹೋದರು. ಅವರ ಮರಣೋತ್ತರ ಪರೀಕ್ಷೆಯೇ ಆಗಲಿಲ್ಲ. ಯಾಕೆ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ’ ಎಂದು ಪ್ರಶ್ನಿಸಿದ್ದರು.

ಇಂದ್ರಜಿತ್ ಮಾಡಿರುವ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ‘ಇಂದ್ರಜಿತ್ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಮೃತಪಟ್ಟಿರುವವರು ಈಗ ಮಾತಾಡಲು ಸಾಧ್ಯನಾ? ಈಗ ಚಿರು ಇಲ್ಲ, ಈಗ ಅವರು ಉತ್ತರ ಕೊಡಲು ಸಾಧ್ಯವೇ?’ ಎಂದು ಬೇಸರ ತೋಡಿಕೊಂಡು, ವಕೀಲ ಪ್ರಶಾಂತ್‌ ಸಂಬರಗಿ ಅವರಿಗೆ ವಾಟ್ಸ್ ಆ್ಯಪ್‌ ಮೆಸೇಜ್‌ ಕಳುಹಿಸಿದ್ದಾರೆ.

‘ಚಿರು ಈಗ ಇಲ್ಲ, ಆದರೂ ಅವರನ್ನು ಜನ ಬಿಡುತ್ತಿಲ್ಲ. ಚಿರು ಸರ್ಜಾ ಹೆಸರು ಹೇಳಿದರೆ ಇವರಿಗೆ ಏನು ಸಿಗುತ್ತೆ?, ಟಿವಿಯಲ್ಲಿ ಚಿರು ಫೋಟೋ ನೋಡಿದರೆ ಕಣ್ಣೀರು ಬರುತ್ತದೆ. ಇಂದ್ರಜಿತ್ ಬೇರೆಯವರ ಹೆಸರನ್ನು ಹಾಳು ಮಾಡಬಾರದು. ಇಂದ್ರಜಿತ್ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಚಿರು ಹೆಸರನ್ನು ಇಂದ್ರಜಿತ್ ಯಾಕೆ ಹೇಳುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ’ ಎಂದು ಮೇಘನಾ ರಾಜ್ ನೋವು ವ್ಯಕ್ತಪಡಿಸಿದ್ದಾರೆ.

ಧ್ರುವ ಸರ್ಜಾ ಅಸಮಾಧಾನ

ಚಿರು ಸಹೋದರ ಧ್ರುವ ಸರ್ಜಾ ಕೂಡ ಇಂದ್ರಜಿತ್‌ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನೀವು ಚಿರು ಪರ ರಕ್ಷಣೆಗೆ ನಿಂತಿದ್ದು ನೋಡಿದೆ. ನಿಮಗೆ ನಮ್ಮ ಕುಟುಂಬದ ಧನ್ಯವಾದಗಳು. ಆದರೆ, ನಮಗೆ ಈ ವಿಚಾರದಿಂದ ಬಹಳ ನೋವಾಗಿದೆ’ ಎಂದು ಧ್ರುವ ಬೇಸರದಿಂದ ಪ್ರಶಾಂತ್‌ ಅವರಿಗೆ ವಾಟ್ಸ್ ಆ್ಯಪ್‌ ಮೆಸೇಜ್ ಮಾಡಿದ್ದಾರೆ.

‘ಮೇಘನಾ ಮನಸು ನೋಯಿಸಬೇಡಿ’

‘ಚಿರು ಮೃತಪಟ್ಟು ಇನ್ನು ಮೂರು ತಿಂಗಳಾಗಿಲ್ಲ. ಅವರ ಕುಟುಂಬ, ಬಂಧುಗಳು ಹಾಗೂ ಸ್ನೇಹಿತರು ಇನ್ನು ನೋವಿನಲ್ಲೇ ಮುಳುಗಿದ್ದಾರೆ. ಅವರ ಪತ್ನಿ, ನಟಿ ಮೇಘನಾರಾಜ್‌ ಅವರು ಗರ್ಭಿಣಿ. ಈ ಹಂತದಲ್ಲಿ ಚಿರು ಹೆಸರು ಸುಖಾಸುಮ್ಮನೆ ಪ್ರಸ್ತಾಪಿಸಿ, ಮೇಘನಾ ಅವರ ಮನಸನ್ನು ಇನ್ನಷ್ಟು ಘಾಸಿಗೊಳಿಸಿ, ನೋಯಿಸಬೇಡಿ’ ಎಂದುನಟ ರಕ್ಷ್ ಮನವಿ ಮಾಡಿದ್ದಾರೆ.

ಇಡೀ ಚಿತ್ರರಂಗಕ್ಕೆ ಕಳಂಕ ಹೊರಿಸಬೇಡಿ

‘ಚಿತ್ರರಂಗವೆಂದರೆ ಕೆಲವು ನಟರು ಮತ್ತು ನಟಿಯರಿಂದ ಕೂಡಿಲ್ಲ. ಇಲ್ಲಿ ನಟರು, ನಟಿಯರು, ಸಹ ಕಲಾವಿದರು, ತಂತ್ರಜ್ಞರು ಸೇರಿ ಲಕ್ಷಾಂತರ ಮಂದಿ ಇದ್ದಾರೆ. ಇಲ್ಲಿ ಕೆಲವರು ಅಪಾರ ಹಣ ಸಂಪಾದಿಸಿ ಶ್ರೀಮಂತಿಕೆಯ ಜೀವನ ಮಾಡುತ್ತಿರಬಹುದು, ಆದರೆ, ಬಹಳಷ್ಟು ಮಂದಿಗೆ ಬದುಕಲು ಅಗತ್ಯವಿರುವಷ್ಟು ಹಣ ಸಂಪಾದನೆಯೂ ಇಲ್ಲ. ಆದರೂ ಎಲ್ಲರೂ ಸೇರಿಯೇ ಚಿತ್ರರಂಗ. ಇದರಲ್ಲಿ ಯಾರು ತಪ್ಪಿತಸ್ಥರೋ ಅವರನ್ನು ಮಾತ್ರ ದೂಷಿಸಿ. ಇಡೀ ಚಿತ್ರರಂಗಕ್ಕೆ ಕಳಂಕ ಹೊರಿಸಬೇಡಿ’ ಎಂದುನಟ ನವೀನ್‌ ಕೃಷ್ಣ ಟ್ವೀಟ್‌ ಮಾಡಿದ್ದಾರೆ.

ಇಂದ್ರಜಿತ್‌ ಹೇಳಿಕೆಗೆ ಅವರು, ‘ಯಾರು ಅಂತ್ ಗೊತ್ತು....ಆದ್ರೆ ಆಮೇಲ್ ಹೇಳ್ತಿನಿ ಅಂದ್ರೆ.... ಹೇಳೋಂಗ್ ಇದ್ರೆ ಫ಼ಸ್ಟೇ ಹೇಳಬೇಕು...ಅದು ಬಿಟ್ಟು ಟ್ರೈಲರ್ ನೋಡಿ ಆಮೇಲ್ ಸಿನೆಮ ನೋಡಿ ಅಂದ್ರೆ’ ಎಂದು ಟ್ವೀಟ್‌ ಮೂಲಕವೇ ಉತ್ತರ ಕೊಟ್ಟಿದ್ದಾರೆ.

‘ಇಂಡಸ್ಟ್ರಿಯಲ್ಲಿ ಯಾರ ಹೆಸರು ಹೇಳಿದರೂ ನನಗೆ ಆಶ್ಚರ್ಯ

‘ಸಿನಿಮಾ ಇಂಡಸ್ಟ್ರಿಯಲ್ಲಿ ನಾವೂ ಸಹ ಹಲವು ಪಾರ್ಟಿಗಳಿಗೆ ಹೋಗಿದ್ದೇವೆ. ಆದರೆ ಯಾರು ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ನಟ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ತಾವು ನಟಿಸುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ದಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಡ್ರಗ್ಸ್ ಎಲ್ಲಿಂದ ಬರುತ್ತದೆ, ಹೇಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ. ಆ ಪ್ರಪಂಚವೇ ನಮಗೆ ಗೊತ್ತಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ಕೇಳಿ ದಿಗ್ಬ್ರಮೆಯಾಯಿತು. ಸರಿಯಾಗಿ ಮಾಹಿತಿ ಸಿಗುವವರೆಗೂ ಮಾತನಾಡುವುದುಸರಿಯಲ್ಲ’ ಎಂದು ಹೇಳಿದ್ದಾರೆ.

‘ಇಂಡಸ್ಟ್ರಿಯಲ್ಲಿ ಇಂಥವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದರೂ ನನಗೆ ಆಶ್ಚರ್ಯವಾಗುತ್ತದೆ. ಯುವ ಜನತೆ ದಯವಿಟ್ಟು ಡ್ರಗ್ಸ್‌ನಿಂದ ದೂರವಿರಿ. ನಶೆಯ ಗುಂಗು ಶಾಶ್ವತ ಅಲ್ಲ. ಡ್ರಗ್ಸ್ ಚಟಕ್ಕೆ ಯಾರಾದೂ ಅಂಟಿಕೊಂಡಿದ್ದರೂ ಅದರಿಂದ ಹೊರಗೆ ಬನ್ನಿ’ ಎಂದು ಉಪ್ಪಿ ವಿನಂತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT