ಮಂಗಳವಾರ, ಅಕ್ಟೋಬರ್ 27, 2020
28 °C

ಪ್ರಭಾಸ್‌ ಹುಟ್ಟುಹಬ್ಬಕ್ಕೆ ಆದಿಪುರುಷ್ ತಂಡದ ಉಡುಗೊರೆ ಏನಿರಬಹುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಮೂಲಕ ಪ್ರಭಾಸ್ ಬಾಲಿವುಡ್‌ಗೂ ಕಾಲಿರಿಸುತ್ತಿದ್ದಾರೆ. ಸಿನಿಮಾ ಘೋಷಣೆಯಾಗಿ ಎರಡು ತಿಂಗಳು ಕಳೆದಿದೆ. ಆದರೂ ಈ ಸಿನಿಮಾದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಕುತೂಹಲ ಕಡಿಮೆಯಾಗಿಲ್ಲ. ಟೀ ಸಿರೀಸ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಕ್ಕೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಆಗಸ್ಟ್‌ನಲ್ಲಿ ಓಂ ರಾವತ್ ಸಿನಿಮಾದ ಶೀರ್ಷಿಕೆಯ ಬಗ್ಗೆ ತಿಳಿಸಿದ್ದರು. ಸೆಪ್ಟೆಂಬರ್‌ನಲ್ಲಿ ಸೈಫ್ ಅಲಿ ಖಾನ್ ಆದಿಪುರುಷ್ ಸಿನಿಮಾಕ್ಕೆ ಖಳನಾಯಕ ಎಂಬುದನ್ನು ಘೋಷಿಸಿದ್ದರು. ಹಾಗಾದರೆ ಅಕ್ಟೋಬರ್‌ನಲ್ಲಿ ರಾವತ್ ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವ ವಿಷಯ ಬಹಿರಂಗ ಪಡಿಸಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಪ್ರಭಾಸ್ ಅಭಿಮಾನಿಗಳಿಗೆ ಅಕ್ಟೋಬರ್ ವಿಶೇಷ ತಿಂಗಳು. ಯಾಕೆಂದರೆ ಅಕ್ಟೋಬರ್ 23 ಪ್ರಭಾಸ್ ಹುಟ್ಟುಹಬ್ಬ. ಈಗಾಗಲೇ #PrabhasbirthdayMonth ಎಂಬ ಹ್ಯಾಷ್‌ಟ್ಯಾಗ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

ಚಿತ್ರತಂಡ ಪ್ರಭಾಸ್ ಹುಟ್ಟುಹಬ್ಬದಂದು ಹೊಸ ವಿಷಯವನ್ನು ತಿಳಿಸಲಿದೆಯಂತೆ. ಮೂಲಗಳ ಪ್ರಕಾರ ಅಂದು ಪ್ರಭಾಸ್‌ಗೆ ನಾಯಕಿಯಾಗಿ ಯಾರಾಗಲಿದ್ದಾರೆ ಎಂಬ ವಿಷಯ ಹೊರ ಬೀಳಲಿದೆಯಂತೆ. ಈ ಸಿನಿಮಾಕ್ಕೆ ನಾಯಕಿಯಾಗಿ ಕಬೀರ್ ಸಿಂಗ್ ಚೆಲುವೆ ಕಿಯಾರಾ ಅಡ್ವಾಣಿ ಆಯ್ಕೆಯಾಗಿದ್ದಾರೆ ಎಂಬ ಮಾತು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಆದಿಪುರುಷ್ ಸಿನಿಮಾವು ಒಂದು ಮಹಾಕಾವ್ಯವನ್ನು ಆಧರಿಸಿದ ಸಿನಿಮಾವಾಗಿದೆ ಎನ್ನಲಾಗುತ್ತಿದೆ. ಅದೇನೆ ಇದ್ದರು ಇದು ರಾಮಾಯಣ ಆಧಾರಿತ ಸಿನಿಮಾವಾಗಿದ್ದು ಪ್ರಭಾಸ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಇವೆ. ಈ ಸಿನಿಮಾದ ಶೂಟಿಂಗ್ ಮುಂದಿನ ವರ್ಷ ಆರಂಭವಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು