ಶುಕ್ರವಾರ, ಅಕ್ಟೋಬರ್ 7, 2022
28 °C

ವಿಲ್ ಸ್ಮಿತ್ ಕೋಪಗೊಂಡು ಕೆನ್ನೆಗೆ ಹೊಡೆದಿದ್ದು ಇದೇ ಮೊದಲ ಬಾರಿಯಲ್ಲ!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆರಿಕನ್ ನಟ ವಿಲ್ ಸ್ಮಿತ್ ಅವರು ಈ ವಾರ ಭರ್ಜರಿ ಸುದ್ದಿಯಲ್ಲಿದ್ದಾರೆ. ಕಳೆದ ಸೋಮವಾರ ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ನಿರೂಪಕನ ಕೆನ್ನೆಗೆ ಬಾರಿಸಿ ವಿಲ್ ಸ್ಮಿತ್ ತಮ್ಮ ಕೋಪ ಎಂತದ್ದು ಎಂದು ತೋರಿಸಿದ್ದರು.

ಅಷ್ಟಕ್ಕೂ ವಿಲ್ ಸ್ಮಿತ್ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ವರ್ತಿಸಿಲ್ಲ. ಈ ಹಿಂದೆಯೂ ಕೂಡ ಕೆಲ ಸಲ ಅವರು ಮುನಿಸಿಕೊಂಡಿದ್ದರು.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವಿಲ್‌ ಸ್ಮಿತ್ ಅವರನ್ನು ಎಳೆದುಕೊಂಡು ಮುದ್ದಿಸಲು ಮುಂದಾದ ವರದಿಗಾರನ ಕೆನ್ನೆಗೂ ವಿಲ್ ಸ್ಮಿತ್ ಏಟು ಕೊಟ್ಟಿದ್ದರು.

ಈ ಕುರಿತ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ವಿಲ್ ಸ್ಮಿತ್ ಅವರ ಮೊನ್ನೆಯ ಘಟನೆ ಬಗ್ಗೆ ವಿಲ್ ಸ್ಮಿತ್ ತಾಯಿ ಹಾಗೂ ಮನೆಯವರು ಸ್ಮಿತ್ ಈ ಹಿಂದೆ ಎಂದೂ ಕೂಡ ಈ ರೀತಿ ವರ್ತಿಸಿರಲಿಲ್ಲ ಎಂದು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

 

ಇನ್ನು, ಕೆಲ ಹಾಲಿವುಡ್ ನಟರು ವಿಲ್ ಸ್ಮಿತ್ ಅವರ ನಡೆಯನ್ನು ಕಟುವಾಗಿ ಖಂಡಿಸಿದ್ದಾರೆ. ನಟ ಜಿಮ್ ಕ್ಯಾರಿ ಎನ್ನುವರು, ‘ಯಾರಿಗೂ ಈ ರೀತಿ ಹೊಡೆಯುವ ಹಕ್ಕು ಇಲ್ಲ. ವಿಲ್ ಸ್ಮಿತ್ ದುರ್ವರ್ತನೆಯನ್ನು ಖಂಡಿಸಲು ಹಾಲಿವುಡ್‌ಗೆ ಬೆನ್ನುಮೂಳೆ ಇಲ್ಲ’ ಎಂದು ಟೀಕಿಸಿದ್ದಾರೆ.

ಅಂದು ಏನಾಗಿತ್ತು?

ಪ್ರಸಕ್ತ ಸಾಲಿನ ಆಸ್ಕರ್‌ ಪ್ರಶಸ್ತಿಯಲ್ಲಿ  ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ವಿಲ್ ಸ್ಮಿತ್ ಸಮಾರಂಭದ ವೇದಿಕೆ ಮೇಲೆ ಸಹ ನಟನ ಕಪಾಳಕ್ಕೆ ಹೊಡೆದಿದ್ದರು.

ನಟ ಹಾಗೂ ನಿರೂಪಕ ಕ್ರಿಸ್‌ ರಾಕ್ ಅವರಿಗೆ ವಿಲ್‌ ಸ್ಮಿತ್‌ ಕೆನ್ನೆಗೆ ಹೊಡೆದಿರುವ ವಿಡಿಯೊ ವೈರಲ್ ಆಗಿತ್ತು. ಆಸ್ಕರ್‌ ವೇದಿಕೆಯ ಮೇಲೆ ಈ ಘಟನೆ ನಡೆದಿರುವುದಕ್ಕೆ ಆಯೋಜಕರು, ಪ್ರೇಕ್ಷಕರ ಕ್ಷಮೆ ಕೋರಿದ್ದರು.

ವಿಲ್‌ ಸ್ಮಿತ್‌ ಹಾಗೂ ಪತ್ನಿ ಜಾಡಾ ಪಿಂಕೆಟ್‌ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು. ಕ್ರಿಸ್‌ ರಾಕ್ ಅವರು ವೇದಿಕೆಯ ಕೆಳ ಭಾಗದಲ್ಲಿ ವಿಲ್‌ ಸ್ಮಿತ್‌ ದಂಪತಿ ಭೇಟಿಯಾಗಿ ವಿಶ್ ಮಾಡಿದ್ದರು. ಇದೇ ವೇಳೆ ಜಾಡಾ ಪಿಂಕೆಟ್‌ ತಲೆಯ (ಜಾಡಾ ತಲೆ ಬೋಳಿಸಿಕೊಂಡಿದ್ದರು) ಬಗ್ಗೆ ತಮಾಷೆ ಮಾಡಿದ್ದರು.

ಜಾಡಾ ಈ ವಿಷಯವನ್ನು ವಿಲ್‌ ಸ್ಮಿತ್‌ ಅವರಿಗೆ ತಿಳಿಸಿದ್ದರು. ಕ್ರಿಸ್‌ ರಾಕ್‌ ಸಾಕ್ಷ್ಯಚಿತ್ರವೊಂದರ ಪ್ರಶಸ್ತಿ ಘೋಷಣೆಗಾಗಿ ವೇದಿಕೆ ಮೇಲೆ ನಿರೂಪಣೆ ಆರಂಭಿಸುತ್ತಿದ್ದಂತೆ, ವಿಲ್‌ ಸ್ಮಿತ್‌ ವೇದಿಕೆ ಹತ್ತಿ ಕ್ರಿಸ್‌ ರಾಕ್‌ ಕೆನ್ನೆಗೆ ಹೊಡೆದು ಕೆಳಗೆ ಇಳಿದರು. ಈ ಘಟನೆಯಿಂದ ಶಾಕ್ ಆದ ಕ್ರಿಸ್‌ ರಾಕ್‌ ಕೆಲ ಕ್ಷಣ ಮೌನವಾದರು.

 

ಘಟನೆ ಬಳಿಕ ಪತ್ನಿಯ ಬಳಿ ಬಂದು ಕುಳಿತ್ತಿದ್ದ ವಿಲ್ ಸ್ಮಿತ್, 'ನನ್ನ ಪತ್ನಿಯ ಬಗ್ಗೆ ಮಾತನಾಡಬೇಡ' ಎಂದು ಜೋರಾಗಿ ಹೇಳಿದರು. ಕೂಡಲೇ ಕ್ರಿಸ್‌ ರಾಕ್‌ ಓಕೆ..ಓಕೆ ಎಂದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೊಳಕು ಬಾಯಿಂದ ಹೇಳಬೇಡ' ಎಂದು ಕಿರುಚಿದರು. ನಂತರ ಕ್ರಿಸ್ ರಾಕ್ ಸುಮ್ಮನಾದರು. ಇದಾದ ನಂತರ ಕ್ರಿಸ್‌ ರಾಕ್‌ ಕಾರ್ಯಕ್ರಮವನ್ನು ಮುಂದುವರೆಸಿದರು.

ಎಲ್ಲರೂ ಈ ಘಟನೆಯನ್ನು ತಮಾಷೆ ಎಂದು ಭಾವಿಸಿದ್ದರು. ಆದರೆ ಆಸ್ಕರ್‌ ಆಯೋಜಕರು ಸ್ಮಿತ್‌ ಹಾಗೂ ಕ್ರಿಸ್‌ ರಾಕ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದಾಗ ಇದರ ಗಂಭೀರತೆ ತಿಳಿಯಿತು ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ.

'ಕಿಂಗ್ ರಿಚರ್ಡ್ಸ್' ಸಿನಿಮಾದ ನಟನೆಗೆ ವಿಲ್ ಸ್ಮಿತ್‌ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ವಿಲ್‌ ಸ್ಮಿತ್ ಅವರ ನಡೆಯ ಬಗ್ಗೆ ನೆಟ್ಟಿಗರು ಪರ, ವಿರೋಧದ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು