ಗುರುವಾರ , ಅಕ್ಟೋಬರ್ 17, 2019
24 °C

ಆಯುಧ ಪೂಜೆಗೆ ‘ಯುವರತ್ನ’ ಟೀಸರ್‌ ಬಿಡುಗಡೆ

Published:
Updated:
Prajavani

‘ನಟಸಾರ್ವಭೌಮ’ ಚಿತ್ರದ ಬಳಿಕ ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ‘ಯುವರತ್ನ’ ಸಿನಿಮಾದ ಟೀಸರ್‌ ಬಿಡುಗಡೆಯ ದಿನಾಂಕ ಅಂತಿಮಗೊಂಡಿದ್ದು, ಇದೇ 7ರಂದು ಸಂಜೆ 5.30ಕ್ಕೆ ಬೆಂಗಳೂರಿನ ಸಂತೋಷ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

ನಟ ಪುನೀತ್‌ ರಾಜ್‌ಕುಮಾರ್‌ ಖುದ್ದು ಈ ವಿಷಯವನ್ನು ಟ್ವೀಟರ್‌ನಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಬೆಂಬಲವನ್ನೂ ಕೋರಿದ್ದಾರೆ.

ಸಂತೋಷ್‌ ಆನಂದರಾಮ್ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಕಥೆ, ಚಿತ್ರಕಥೆಯ ನೊಗವನ್ನೂ ಸಂತೋಷ್‌ ಹೊತ್ತಿದ್ದಾರೆ. ಚಿತ್ರಕ್ಕೆ ‘ಪವರ್ ಆಫ್ ಯೂತ್’ ಅಡಿಬರಹವಿದೆ.

ಎರಡು ವರ್ಷದ ಹಿಂದೆ ಸಂತೋಷ್‌ ಆನಂದರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ರಾಜಕುಮಾರ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ‘ಯುವರತ್ನ’ದ ಮೇಲೂ ಪ್ರೇಕ್ಷಕರ ನಿರೀಕ್ಷೆ ದು‍ಪ್ಪಟ್ಟಾಗಿದೆ.  

ಟಾಲಿವುಡ್‌ ಮೂಲಕ ಬಣ್ಣದಲೋಕ ಪ್ರವೇಶಿಸಿದ ಸಯೇಷಾ ಸೈಗಲ್‌, ಪುನೀತ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳಿನಲ್ಲಿ ನಟಿಸಿರುವ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ.

ಈ ಚಿತ್ರಕ್ಕೆ ವಿಜಯ್‌ ಕಿರಗಂದೂರ್‌ ಬಂಡವಾಳ ಹೂಡಿದ್ದಾರೆ. ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಛಾಯಾಗ್ರಹಣವಿದೆ. ಪ್ರಕಾಶ್‌ ರೈ, ಸೋನು ಗೌಡ, ‘ಡಾಲಿ’ ಧನಂಜಯ್, ರಂಗಾಯಣ ರಘು, ಸಾಧುಕೋಕಿಲ ತಾರಾಗಣದಲ್ಲಿದ್ದಾರೆ.

Post Comments (+)