ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರತ್ನ ಟ್ರೇಲರ್‌ ಬಿಡುಗಡೆಗೆ ಸಿದ್ಧತೆ

Last Updated 12 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ಯುವರತ್ನ’ –ಪುನೀತ್‌ರಾಜ್‌ಕುಮಾರ್‌ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರ ಕಾಂಬಿನೇಷನ್‌ನಡಿ ತೆರೆ ಕಾಣುತ್ತಿರುವ ಎರಡನೇ ಚಿತ್ರ. ಈ ಹಿಂದೆ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ರಾಜಕುಮಾರ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು.

ಪ್ರಸ್ತುತ ‘ಯುವರತ್ನ’ ಚಿತ್ರದ ಮಾತಿನ ಭಾಗದ ಶೇಕಡ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಶೀಘ್ರವೇ, ಟ್ರೇಲರ್‌ ಬಿಡುಗಡೆಗೊಳಿಸುವ ಯೋಚನೆಯಲ್ಲಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ’ನಾಲ್ಕು ಹಾಡುಗಳ ಶೂಟಿಂಗ್‌ ಬಾಕಿಯಿದೆ. ಇನ್ನೂ ಎಲ್ಲಿ ಚಿತ್ರೀಕರಣ ನಡೆಸಬೇಕು ಎಂಬುದು ಅಂತಿಮಗೊಂಡಿಲ್ಲ. ಈ ವಾರದೊಳಗೆ ಲೊಕೇಶನ್‌ ಬಗ್ಗೆ ಅಂತಿಮ ನಿರ್ಧಾರಕೈಗೊಳ್ಳಲಾಗುವುದು’ ಎನ್ನುವುದು ಸಂತೋಷ್‌ ಆನಂದ್‌ರಾಮ್‌ ಅವರ ವಿವರಣೆ.

ಪ್ರಸ್ತುತ ಶೈಕ್ಷಣಿಕ ರಂಗ ವ್ಯಾಪಾರೀಕಣಗೊಂಡಿದೆ. ಸೇವೆ ಎಂಬುದು ಮರೀಚಿಕೆಯಾಗಿದ್ದು, ಹಣ ಮಾಡುವುದು ದಂಧೆಯಾಗಿದೆ. ಈ ಶಿಕ್ಷಣ ಮಾಫಿಯಾದ ಸುತ್ತವೇ ‘ಯುವರತ್ನ’ ಚಿತ್ರದ ಕಥೆ ಹೆಣೆಯಲಾಗಿದೆ. ಸಮಾಜದ ಮೇಲೆ ಈ ಮಾಫಿಯಾ ಬೀರಿರುವ ದುಷ್ಪರಿಣಾಮ ಹಾಗೂ ಅದರಿಂದ ಮಕ್ಕಳ ಭವಿಷ್ಯಕ್ಕೆ ಎದುರಾಗಿರುವ ಕಂಟಕ ಕುರಿತು ಸಿನಿಮಾ ಮಾತನಾಡಲಿದೆಯಂತೆ. ಪುನೀತ್‌ರಾಜ್‌ಕುಮಾರ್‌ ಅವರದು ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯ ಪಾತ್ರ. ಅವರಿಗೆ ತಮಿಳಿನ ಶಯೇಷಾ ನಾಯಕಿಯಾಗಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವ ಸಂತಸದಲ್ಲಿದ್ದಾರೆ.

ಎಸ್. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ. ಇನ್ನೂ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಅಂತಿಮಗೊಂಡಿಲ್ಲ. ಹಾಗಾಗಿ, ಮುಂದಿನ ವರ್ಷ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಸ್ಮ್‌ನಡಿ ವಿಜಯ್‌ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರಕಾಶ್ ರಾಜ್‌, ‘ಡಾಲಿ’ ಖ್ಯಾತಿಯ ಧನಂಜಯ್‌, ವಸಿಷ್ಠ ಸಿಂಹ, ದಿಗಂತ್‌, ನಟಿ ಸೋನು ಗೌಡ ತಾರಾಗಣದಲ್ಲಿದ್ದಾರೆ.

ಈ ಚಿತ್ರದ ಬಳಿಕ ಪುನೀತ್‌ ನಟನೆಯ ‘ಜೇಮ್ಸ್’ ಚಿತ್ರ ಸೆಟ್ಟೇರಲಿದೆ. ಇದಕ್ಕೆ ಚೇತನ್‌ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದೊಂದು ಪಕ್ಕಾ ಎಂಟರ್‌ಟೇನರ್‌ ಚಿತ್ರ. ಇದರಲ್ಲಿ ಪುನೀತ್‌ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅವರು ಲುಕ್‌ ಕೂಡ ಬದಲಾಯಿಸಿಕೊಳ್ಳಲಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT