ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್ ಪೋಸ್ಟ್ ಬಾಗಿಲಲ್ಲಿ ಸ್ವಾತಿ

Last Updated 30 ಮೇ 2019, 19:30 IST
ಅಕ್ಷರ ಗಾತ್ರ

ಸ್ವಾತಿ ಕೋಂಡೆ ಹೆಸರು ಕೇಳಿದ ತಕ್ಷಣ ಈ ನಟಿ ಗಾಂಧಿನಗರಕ್ಕೆ ಪರಭಾಷೆಯಿಂದ ಬಂದಿರಬಹುದು ಎನಿಸುವುದು ಯಾರಿಗಾದರೂ ಸಹಜವೇ. ಆದರೆ, ಈ ನೀಳ ಕಾಯದ, ಸಹಜ ಸೌಂದರ್ಯದ ಚೆಲುವೆ, ಬೆಂಗಳೂರಿಗೆ‌ ಮಾರು ದೂರದಲ್ಲಿರುವ ಕಲ್ಪತರು ನಾಡು ತುಮಕೂರಿನವರು. ಅಪ್ಪಟ ಕನ್ನಡದ ನಟಿ. ಒಳ್ಳೆಯ ಅವಕಾಶಗಳು, ಭಿನ್ನ ಪಾತ್ರಗಳನ್ನು ಎದುರು ನೋಡುತ್ತಿರುವ, ಕನ್ನಡದಲ್ಲೇ ನೆಲೆಯೂರಲು ಪ್ರಯತ್ನಿಸುತ್ತಿರುವ ಪ್ರತಿಭಾನ್ವಿತೆ ಈಕೆ. ಈಗಾಗಲೇ ‘ಬ್ಯೂಟಿಫುಲ್‌ ಮನಸುಗಳು’, ‘ವೆನಿಲ್ಲಾ’ ಹಾಗೂ ‘ಕಟ್ಟುಕತೆ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಸ್ವಾತಿ ‘ಕಮರೊಟ್ಟು ಚೆಕ್‌ಪೋಸ್ಟ್‌’ ಸಿನಿಮಾದಲ್ಲಿಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ವಾರ ತೆರೆಗೆ ಬರಲಿರುವ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಸ್ವಾತಿ ಹೊಂದಿದ್ದಾರೆ. ತಮ್ಮ ಸಿನಿಮಾ ಬದುಕಿನ ಬಗ್ಗೆ ಹಲವು ಮಾಹಿತಿಗಳನ್ನು ‘ಸಿನಿಮಾ ಪುರವಣಿ’ಯೊಂದಿಗೆ ಅವರು ಹಂಚಿಕೊಂಡಿದ್ದಾರೆ.

ಈ ಬಣ್ಣದ ಲೋಕ ನಿಮ್ಮನ್ನು ಆಕರ್ಷಿಸಿದ್ದು ಹೇಗೆ? ಎಂದು ಸ್ವಾತಿ ಅವರನ್ನು ಮಾತಿಗೆಳೆದಾಗ, ‘ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ತುಮಕೂರಿನಲ್ಲೇ. ಅಪ್ಪನದು ಪಕ್ಕಾ ಬಯಲು ಸೀಮೆ ಕಲ್ಚರ್‌. ಅಮ್ಮ ಬೇಲೂರು ಸಮೀಪದಅಪ್ಪಟ ಮಲೆನಾಡಿನ ಈಚಲಹಳ್ಳಿಯವರು. ಬಯಲು ಸೀಮೆ ಮತ್ತು ಮಲೆನಾಡು ಹೀಗೆ ಎರಡೂ ಹವಾಗುಣಗಳು, ಸಂಸ್ಕೃತಿಗಳನ್ನು ಮೇಳೈಸಿಕೊಂಡು ಬೆಳೆದವಳು ನಾನು. ಸಿನಿಮಾ ರಂಗಕ್ಕೆ ಬರಬೇಕು, ನಟಿಯಾಗಬೇಕೆಂಬ ಕನಸುಗಳು ಇರಲಿಲ್ಲ. ಯಾವುದಾದರೂಡಾನ್ಸ್‌ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವಹಂಬಲ ಮಾತ್ರ ಚಿಕ್ಕಂದಿನಿಂದಲೂ ತುಡಿಯುತ್ತಿತ್ತು. ಡಾನ್ಸ್‌ ಎಂದರೆ ನನಗೆ ಪ್ರಾಣ. ಜತೆಗೆ ಪೇಂಟಿಂಗ್‌ನಲ್ಲೂ ಆಸಕ್ತಿಇತ್ತು. ಈ ಹವ್ಯಾಸಗಳು ನನ್ನನ್ನು ಕಲಾವಿದೆಯಾಗುವಂತೆ ಪ್ರೇರೇಪಿಸಿರಬಹುದು. ಈ ಬಣ್ಣದ ಲೋಕ ನನ್ನನ್ನು ಆಕಸ್ಮಿಕವಾಗಿಯೇ ಕರೆತಂದಿತು’ಎಂದು ಮಾತು ವಿಸ್ತರಿಸಿದರು.

‘ನನಗೆ ಆ ದಿನ ಚೆನ್ನಾಗಿ ನೆನಪಿದೆ; ನಾಲ್ಕು ವರ್ಷಗಳ ಹಿಂದೆ, ಆಗಸ್ಟ್‌ 22 ಇರಬೇಕು. ದ್ವಿತೀಯ ಪಿಯುಸಿಯಲ್ಲಿದ್ದೆ. ಒಂದು ದಿನ ಟ್ಯೂಷನ್‌ ಮುಗಿಸಿ ಮನೆಗೆ ಬರುವಾಗ, ಪೇಪರ್‌ನಲ್ಲಿ ಸಿನಿಮಾ ಆಡಿಷನ್‌ ಸುದ್ದಿ ಗಮನಿಸಿದ್ದೆ. ಮನೆಗೆ ಬಂದ ತಕ್ಷಣ ನನ್ನ ಫೋಟೊಗಳನ್ನು ಅಪ್ಪನ ಮೊಬೈಲ್‌ನಿಂದ ವಾಟ್ಸ್ ಆ್ಯಪ್‌ ಮಾಡಿದ್ದೆ. ಆಡಿಷನ್‌ಗೆ ಕರೆ ಬಂತು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಆಡಿಷನ್‌ಗೆ ಹೋದೆ. ಸಂಚಾರಿ ವಿಜಯ್‌ ಅಭಿನಯದ ‘ರಿಕ್ತ್‌’ ಎನ್ನುವ ಸಿನಿಮಾಕ್ಕೆ ನೂರಾರು ಸುಂದರಿಯರ ಮಧ್ಯೆ ನನ್ನನ್ನು ಆಯ್ಕೆ ಮಾಡಿದರು. ಆದರೆ, ಅಪ್ಪ ಯಾಕೋ ಹಿಂಜರಿದು, ಈಗಲೇ ಸಿನಿಮಾದಲ್ಲಿ ನಟಿಸುವುದು ಬೇಡವೆಂದರು. ತುಂಬಾ ಹಠ ಹಿಡಿದೆ, ಹಠ ಗೆಲ್ಲಲಿಲ್ಲ, ನಿರಾಸೆಯಾಗಿತ್ತು. ‘ರಿಕ್ತ್’ ಗೆಲ್ಲದೇ ಹೋದಾಗ ಸದ್ಯ ನಾನು ಅದರಲ್ಲಿ ನಟಿಸಲಿಲ್ಲ ಎನ್ನುವ ಸಮಾಧಾನ ಹೇಳಿಕೊಂಡರೂ, ಎಂಥ ಲೆಜೆಂಡ್‌ ನಟನೊಂದಿಗೆ ನಟಿಸುವ ಅವಕಾಶ ಕಳೆದುಕೊಂಡೆನಲ್ಲಾ, ಅದರಲ್ಲಿ ನಟಿಸಿದ್ದರೆ ಖಂಡಿತಾ ನನಗೊಂದು ಐಡೆಂಟಿಟಿ ಸಿಗುತ್ತಿತ್ತು ಎನ್ನುವುದು ಬಹುಸಮಯ ಕಾಡಿತು’ ಎಂದುಸ್ವಾತಿ ನೆನಪಿಸಿಕೊಂಡರು.

ಇದಾದ ನಂತರ,‘ಗೆಳೆಯರೇ, ಗೆಳತಿಯರೇ’ ಸಿನಿಮಾದ ಆಡಿಷನ್ ನಡೆಯುತ್ತಿತ್ತು. ಇದಕ್ಕೆ ಸುಮಾರು ಹದಿನೈದು ಸಾವಿರ ಆಕಾಂಕ್ಷಿಗಳು ಆನ್‌ಲೈನ್‌ನಲ್ಲಿ ಪ್ರೊಫೈಲ್‌ ಕಳುಹಿಸಿದ್ದರಂತೆ. ಅದರಲ್ಲಿ 300 ಮಂದಿಯನ್ನು ಅಂತಿಮ ಹಂತದ ಆಡಿಷನ್‌ಗೆ ಕರೆದರು. ಇದರಲ್ಲಿ ಕೊನೆಗೆ ಮೂವರು ಹುಡುಗರು, ಮೂವರು ಹುಡುಗಿಯರನ್ನು ಆಯ್ಕೆ ಮಾಡಿದರು. ಆ ಮೂವರು ಹುಡುಗಿಯರಲ್ಲಿ ‘ಸ್ಟೇಟ್‌ ಕ್ರಶ್‌’ ರಶ್ಮಿಕಾ ಮಂದಣ್ಣ, ಪಾಯಲ್‌ ರಾಧಾಕೃಷ್ಣ ಹಾಗೂ ನಾನು ಇದ್ದೇವು. ಮೂವರು ಹುಡುಗರಲ್ಲಿ ಪದ್ಮಾವತಿ ಧಾರಾವಾಹಿ ನಾಯಕ ವಿಕ್ರಂ ಕೂಡ ಒಬ್ಬರು. ಇನ್ನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಒಂದು ತಿಂಗಳು ಸಿನಿಮಾಕ್ಕಾಗಿ ವರ್ಕ್‌ಶಾಪ್‌ ನಡೆಯಿತು.ನಾವೆಲ್ಲರೂ ತರಗತಿಗಳನ್ನು ಅಟೆಂಡ್‌ ಮಾಡಿದೆವು. ನಮ್ಮ ಅದೃಷ್ಟ ಇದ್ದದ್ದು ಒಂದು ತಿಂಗಳ ಅವಧಿಗೆ ಮಾತ್ರ ಎನ್ನುವುದು ಗೊತ್ತಾಗಿದ್ದು ಆ ಸಿನಿಮಾ ಸೆಟ್ಟೇರದೇ ಇದ್ದಾಗ. ನನ್ನ ಆರಂಭಿಕ ಹೆಜ್ಜೆ ತಪ್ಪಿತಾ? ಎನ್ನುವಾಗಲೇ ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್‌ ಮನಸುಗಳು’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ರಶ್ಮಿಕಾ ಮಂದಣ್ಣಗೆ ‘ಕಿರಿಕ್ ಪಾರ್ಟಿ’ ಮತ್ತು ಪಾಯಲ್‌ಗೆ ‘ಬೆಂಗಳೂರು ಅಂಡರ್‌ವರ್ಲ್ಡ್‌’ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು. ಬ್ಯೂಟಿಫುಲ್‌ ಮನಸುಗಳಿಂದಾಗಿ ಸ್ವಾತಿ ಕೋಂಡೆ ಯಾರೆನ್ನುವುದು ಗಾಂಧಿನಗರದಲ್ಲಿ ಬಹಳಷ್ಟು ಮಂದಿಗೆ ಗೊತ್ತಾಯಿತು. ಆ ಸಿನಿಮಾ ನನಗೂ ಹೆಸರು, ಐಡೆಂಟಿಟಿ ಕೊಟ್ಟಿತು’ ಎಂದು ಆರಂಭಿಕ ಹೆಜ್ಜೆಗಳನ್ನು ಮೆಲುಕು ಹಾಕಿದರು ಸ್ವಾತಿ.

‘ಕಮರೊಟ್ಟು ಚೆಕ್‌ಪೋಸ್ಟ್‌’ ಸಿನಿಮಾದಲ್ಲಿ ‘ಕೇರಿಂಗ್‌ ವೈಫ್‌’ ಪಾತ್ರ ಮಾಡಿದ್ದೇನೆ. ಇದು ಹಾರರ್‌ ಸಿನಿಮಾವಲ್ಲ, ಹಿನ್ನೆಲೆ ಸಂಗೀತದಿಂದಾಗಿ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ.ಕೆಲವು ದೃಶ್ಯಗಳಲ್ಲಂತೂ ಅಭಿನಯವನ್ನು ಉತ್ತುಂಗಕ್ಕೇರಿಸಿದ್ದೀರಿ ಎನ್ನುವ ಪ್ರಶಂಸೆಯ ಮಾತುಗಳನ್ನು ಚಿತ್ರತಂಡದಿಂದ ಕೇಳಿದ್ದೇನೆ. ನಟ ಉತ್ಪಲ್‌ ಕ್ಲೈಮಾಕ್ಸ್‌ ಅನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ನಾನೂ ಪ್ರೇಕ್ಷಕಿಯಾಗಿಸಿನಿಮಾ ನೋಡಿದ್ದೇನೆ. ಇಷ್ಟು ಚೆಂದವಾಗಿ ಸಿನಿಮಾ ಬಂದಿರುತ್ತದೆ ಎಂದುಕೊಂಡಿರಲಿಲ್ಲ. ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾತರದಿಂದ ಕಾಯುತ್ತಿದ್ದೇನೆ ಎಂದು ‘ಕಮರೊಟ್ಟು ಚೆಕ್‌ಪೋಸ್ಟ್‌’ ಮೇಲೆ ತಮಗಿರುವ ಕುತೂಹಲ ಮತ್ತು ನಿರೀಕ್ಷೆಯನ್ನು ಸ್ವಾತಿ ತೆರೆದಿಟ್ಟರು.

ತಮ್ಮ ಕೈಯಲ್ಲಿರುವ ಮುಂದಿನ ಯೋಜನೆಗಳ ಬಗ್ಗೆಯೂ ಮಾತು ಹೊರಳಿಸಿದ ಸ್ವಾತಿ, ‘ಲೂಸ್‌ ಮಾದ ಯೋಗೀಶ್‌ ಸೋದರ ಸಂಬಂಧಿ ಮಾಧವ್‌ ನಾಯಕನಾಗಿ ನಟಿಸುತ್ತಿರುವ‘ಭರಣಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಈ ಸಿನಿಮಾವನ್ನು ಚನನಿರಾಜು ನಿರ್ದೇಶಿಸುತ್ತಿದ್ದು, ಸಾಜಿದ್‌ ಖುರೇಷಿ ನಿರ್ಮಿಸುತ್ತಿದ್ದಾರೆ. ಎರಡು ಹಾಡುಗಳು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣವಾಗಿದೆ. ನನಗೆ ‘ಭರಣಿ’ ಭವಿಷ್ಯದಲ್ಲಿ ಭರಪೂರ ಅವಕಾಶಗಳನ್ನು ತಂದುಕೊಡುವ ವಿಶ್ವಾಸವಿದೆ’ ಎನ್ನುವ ಮಾತನ್ನು ಸ್ವಾತಿ ಕೋಂಡೆ ಅತ್ಯಂತ ಆತ್ಮವಿಶ್ವಾಸದಿಂದ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT