ಬೆಂಗಳೂರು: ಜನಪ್ರಿಯ ಒಟಿಟಿ ಡಿಸ್ನಿ+ಹಾಟ್‌ಸ್ಟಾರ್, ರಿಲಾಯನ್ಸ್ ಒಡೆತನದ ‘ಜಿಯೊ ಸಿನಿಮಾ’ದಲ್ಲಿ ವಿಲೀನ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇತ್ತೀಚೆಗೆ ಸ್ಟಾರ್ ಇಂಡಿಯಾ, ರಿಲಾಯನ್ಸ್‌ನ ವಯೋಕಾಂ18 ಸಂಸ್ಥೆಯಲ್ಲಿ ವಿಲೀನವಾಗಿದೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಇಂಡಿಯಾ ಮುನ್ನಡೆಸುವ ಡಿಸ್ನಿ+ಹಾಟ್‌ಸ್ಟಾರ್ ಒಟಿಟಿ ಹಾಗೂ ವಯೋಕಾಂ18 ಮುನ್ನಡೆಸುವ ಜಿಯೊ ಸಿನಿಮಾ ಒಟಿಟಿ ವಿಲೀನ ಆಗಿ ಒಂದೇ ವೇದಿಕೆಯಡಿ ಗ್ರಾಹಕರಿಗೆ ಸಿಗಲಿವೆ ಎಂದು ವರದಿಯಾಗಿದೆ.
ಆದರೆ, ಈ ಕುರಿತು ರಿಲಾಯನ್ಸ್ ಕಂಪನಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಜಾಗತಿಕವಾಗಿ ಸ್ಟಾರ್ ಎಂಟರ್‌ಟೈನ್‌ಮೆಂಟ್ ಕಂಪನಿ ವಾಲ್ಟ್ ಡಿಸ್ನಿ ಜೊತೆಯಾಗಿ ಡಿಸ್ನಿ+ಹಾಟ್‌ಸ್ಟಾರ್ ಮುನ್ನಡೆಸುತ್ತದೆ. ಇದೀಗ ಈ ಕಂಪನಿ ಭಾರತದಲ್ಲಿ ರಿಲಾಯನ್ಸ್ ಜೊತೆ ಕೈಜೋಡಿಸಿದೆ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಅಮೆಜಾನ್ ಫ್ರೈಂ, ಯೂಟ್ಯೂಬ್, ನೆಟ್‌ಫ್ಲಿಕ್ಸ್ ಗೆ ಸಡ್ಡು ಹೊಡೆಯುವುದೇ ಆಗಿದೆ ಎನ್ನಲಾಗಿದೆ.
ವಯೋಕಾಂ18 ಮೂಲಗಳ ಹೇಳಿಕೆ ಆಧರಿಸಿ ಈ ಕುರಿತು ದಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಭಾರತದಲ್ಲಿ ಡಿಸ್ನಿ+ಹಾಟ್‌ಸ್ಟಾರ್ ಒಟಿಟಿಗೆ 3.8 ಕೋಟಿ ಚಂದಾದಾರರಿದ್ದಾರೆ. ಜಿಯೊ ಸಿನಿಮಾ ಒಟಿಟಿಗೆ 12.5 ಕೋಟಿ ಚಂದಾದಾರರಿದ್ದಾರೆ.