ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ | ಉಪ್ಪು ಜಾಸ್ತಿಯಾದ ‘ತೋತಾಪುರಿ’ ತುಂಡು

Last Updated 30 ಸೆಪ್ಟೆಂಬರ್ 2022, 13:59 IST
ಅಕ್ಷರ ಗಾತ್ರ

ಚಿತ್ರ: ತೋತಾಪುರಿ
ನಿರ್ದೇಶಕ: ವಿಜಯ ಪ್ರಸಾದ್‌
ತಾರಾಗಣ: ಜಗ್ಗೇಶ್‌, ಅದಿತಿ ಪ್ರಭುದೇವ
ಸಂಗೀತ: ಅನೂಪ್‌ ಸೀಳಿನ್‌
ನಿರ್ಮಾಣ: ಕೆ.ಎ. ಸುರೇಶ್‌

***

‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ನೇರವಾಗಿ ಹೇಳಬಹುದಾದಪಂಪನ ಮಾತನ್ನು ಎರಡೂಕಾಲು ಗಂಟೆ ಹಿಂಜಿದರೆ ಹೇಗೆ? ಇದಿಷ್ಟನ್ನೇ ಹೇಳಬೇಕಾದರೆ ‘ತೋತಾಪುರಿ’ ಎಂಬ ಸಿನಿಮಾದ ಟೈಟಲ್‌ ಕಾರ್ಡ್‌ ಕಂ ಟ್ರೈಲರ್‌ ಎಂಬ ಮೊದಲ ಭಾಗ ಎರಡೂ ಕಾಲು ಗಂಟೆ ತೆಗೆದುಕೊಂಡಿದೆ.

ಸಿನಿಮಾಕ್ಕೆ ಆಯ್ಕೆ ಮಾಡಿದ ವಸ್ತು ಅತ್ಯುತ್ತಮ. ಧರ್ಮಾತೀತ ಮನಸ್ಸುಗಳು, ಸಮ ಸಮಾಜದ ಕನಸು, ಶೋಷಿತರ ಬದುಕು ಇತ್ಯಾದಿಗಳನ್ನು ತೆರೆದಿಟ್ಟು ಒಂದಿಷ್ಟು ಮೌಲ್ಯಗಳನ್ನು ತುರುಕುವ ಪ್ರಯತ್ನ ಸಕಾಲಿಕವೇ.

ನಾಯಕ–ನಾಯಕಿಗಿಂತಲೂ ನಾಯಕನ ಸಹಾಯಕಿ ನಂಜಮ್ಮ (ಹೇಮಾ ದತ್‌) ಕಾಡುವ ಪಾತ್ರವಾಗಿ ಉಳಿಯುತ್ತಾಳೆ.

ತಳ ಸಮಾಜದವರನ್ನು ನಡೆಸಿಕೊಳ್ಳುವ ರೀತಿ, ಅವಮಾನಗಳು, ಹೆಣ್ಣು ಮಕ್ಕಳ ಸಂಕಷ್ಟಗಳು, ಮುಟ್ಟಿನ ಸಮಯದ ಪಾಡು, ಮುಂದೆ ಅವಳೇ ಹೆಣ್ಣುಮಕ್ಕಳಿಗೆ ಪ್ಯಾಡ್‌ ಕೊಡುವ ಮಟ್ಟಕ್ಕೆ ಬೆಳೆಯುವುದು. ಟೈಲರ್‌ ಆಗಿ ಬದುಕು ಕಟ್ಟಿಕೊಳ್ಳುವುದು... ಇಷ್ಟನ್ನು ಹೇಮಾ ದತ್‌ ಚಿತ್ರದ ಮೊದಲಾರ್ಧದಲ್ಲಿ ಪರಿಣಾಮಕಾರಿಯಾಗಿ ಹೇಳಿ ಮುಗಿಸಿದ್ದಾರೆ. ಮತ್ತೆ ಅವರ ಪಾತ್ರವೇನು? ದ್ವಂದ್ವಾರ್ಥಕ್ಕೆ ಒತ್ತು ಕೊಡುವುದಷ್ಟೇ.

ಒಂದೇ ದೃಶ್ಯದಲ್ಲಿ ಬಂದು ಹೋಗುವ ದಿವಂಗತ ಮೋಹನ್‌ ಜುನೇಜ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ರಾಯರ ಮಠಕ್ಕೆ ಹೋಗುವ ಮುಸ್ಲಿಂ ಹುಡುಗಿ, ಕ್ರೈಸ್ತ ಸನ್ಯಾಸಿನಿ, ಮಸೀದಿಗೂ ಹೋಗುವ ನಾಯಕ, ಚರ್ಚನ್ನೂ ಗೌರವಿಸುವ ಎಲ್ಲ ಮನಸ್ಸುಗಳು... ಹೀಗೆ ಮೂರು ಧರ್ಮಗಳ ಸಾಮರಸ್ಯದ ಪಾಠವನ್ನು ಚಿತ್ರದಲ್ಲಿ ಹೇಳಿದ್ದಾರೆ.

ಮೂರೂ ಧರ್ಮಗಳನ್ನು ಪ್ರತಿನಿಧಿಸುವ ಮೂವರು ನಿರೂಪಕರು. ಚಿತ್ರಕ್ಕೊಂದು ನಾಟಕೀಯತೆ (ಸೂತ್ರಧಾರನ ನಿರೂಪಣೆಯಂತೆ) ತಂದಿದ್ದಾರೆ.

ಊರಿನ ಟೈಲರ್‌, ಕೃಷಿಕ ಕಂ ನಾಯಕ ಈರೇಗೌಡನದ್ದು(ಜಗ್ಗೇಶ್‌) ಎಂದಿನಂತೆಯೇ ಇರುವ ಹಾಸ್ಯ ಪಾತ್ರ. ನಾಯಕಿ ಶಕೀಲಾ ಬಾನು (ಅದಿತಿ ಪ್ರಭುದೇವ) ಸುಂದರವಾಗಿ ಕಾಣಿಸಿದ್ದಾರೆ. ‘ಬಾಗ್ಲು ತೆರಿ ಮೇರಿ ಜಾನ್‌...’ ಹಾಡು, ನೃತ್ಯ ಸಂಯೋಜನೆ ಚೆನ್ನಾಗಿದೆ. ಕೊನೆಗೂ ಮನಸ್ಸಿನಲ್ಲಿ ಉಳಿಯುವುದು ಇದೊಂದೇ. ಹಿನ್ನೆಲೆ ಸಂಗೀತದಲ್ಲಿ ಆಗಾಗ ಮಂತ್ರ ಘೋಷ, ಆಜಾನ್‌, ಚರ್ಚ್‌ನ ಕಾಯರ್‌ ಮಾಧುರ್ಯ ಸಮ್ಮಿಳಿತವಾಗಿದೆ. ಕೇಳಲು ಪರವಾಗಿಲ್ಲ. ಛಾಯಾಗ್ರಹಣವೂ ಚೆನ್ನಾಗಿದೆ.

ಕಥೆಯ ತಿರುಳು ಹೇಳಲು ದ್ವಂದ್ವಾರ್ಥಗಳೇ ಪರಿಣಾಮಕಾರಿ ಎಂಬುದು ನಿರ್ದೇಶಕರ ನಂಬಿಕೆ ಇರಬೇಕು. ಆ ನಂಬಿಕೆಯಲ್ಲಿ ಅವರು ಇದೇ ಜಾಡಿನ ಚಿತ್ರಗಳನ್ನುಸರಣಿಯಾಗಿ ಮಾಡಿದ್ದಾರೆ. ಆದರೆ ಎಲ್ಲವನ್ನೂ ಅದೇ ಚೌಕಟ್ಟಿನಲ್ಲಿ ಬಲವಂತವಾಗಿ ತುರುಕಿದರೆ ಪ್ರೇಕ್ಷಕನಿಗೂ ಅದು ರುಚಿಸುವುದು ಕಷ್ಟ. ಒಟ್ಟಿನಲ್ಲಿ ‘ತೋತಾಪುರಿ’ಯ ಮೊದಲ ತುಂಡಿಗೆ ತುರುಕಿದ ದ್ವಂದ್ವಾರ್ಥಗಳು, ಹಿಂಜುವಿಕೆ ಎಂಬ ‘ಉಪ್ಪು’ ಅತಿಯಾಗಿದೆ. ‘ತೋತಾಪುರಿ’ಯ ಅಸಲು ರುಚಿಯೇ ಮಾಯವಾಗಿದೆ.

ಕೊನೇ ಪಕ್ಷ ಈ ಹಿಗ್ಗಿಸುವಿಕೆಗೆ ಅಲ್ಲಲ್ಲಿ ಕತ್ತರಿ ಪ್ರಯೋಗವನ್ನಾದರೂ ಸರಿಯಾಗಿ ಮಾಡಿದ್ದರೆ ಇನ್ನರ್ಧ ಗಂಟೆ ಉಳಿಸಬಹುದಿತ್ತು. ಎರಡನೇ ಭಾಗದಲ್ಲಿ ಕಥೆ ಹೇಳುತ್ತೇವೆ ಎಂಬಂತೆ ಈ ಚಿತ್ರವನ್ನು ಕೊನೆಗೊಳಿಸಿದ್ದಾರೆ. ಡಾಲಿ ಧನಂಜಯ ಒಮ್ಮೆ ಮುಖ ತೋರಿಸಿ ಹೋಗಿದ್ದಾರೆ.

ಕೊನೆಯಲ್ಲಿ ಯಾವನು ಡೈರೆಕ್ಟರು? ಎಂಬ ನಂಜಮ್ಮನ ಪ್ರಶ್ನೆಗೆ ಈರೇಗೌಡ ಉತ್ತರಿಸಿದಾಗ, ಅವಳು ‘ಒಳ್ಳೇ ***ಮಗ’ ಎಂದು ಕೋಪದಿಂದ ಹೇಳುತ್ತಾಳೆ. ಹಾಗಿದ್ದರೆ ಪ್ರೇಕ್ಷಕ ಏನು ಹೇಳಿರಬಹುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT