ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೈರವಗೀತ’ ನೆತ್ತರಿನಲ್ಲಿ ಕಮರಿದ ಗುಲಾಬಿ

Last Updated 7 ಡಿಸೆಂಬರ್ 2018, 11:02 IST
ಅಕ್ಷರ ಗಾತ್ರ

ಸಿನಿಮಾ: ಭೈರವ ಗೀತ
ನಿರ್ಮಾಪಕರು: ಭಾಸ್ಕರ್‌ ರಾಶಿ
ನಿರ್ದೇಶನ: ಸಿದ್ಧಾರ್ಥ ತತೊಲು
ತಾರಾಗಣ: ಧನಂಜಯ್‌, ಇರಾ ಮೋರ್‌, ರಾಜ್‌ ಬಾಲವಾಡಿ

ಶಂಕ್ರಪ್ಪ ಜಮೀನ್ದಾರ. ಗುಲಾಮರು ಇರುವುದೇ ತನಗೆ ಪ್ರಾಣ ಕೊಡಲು ಎಂದು ನಂಬಿದವ. ಭೈರವ ಅವನ ಮನೆಯಲ್ಲಿ ಗುಲಾಮಗಿರಿ ಮಾಡಿಕೊಂಡಿದ್ದ ಆಳು. ಪ್ರಾಣ ತೆಗೆದರೂ ಪ್ರಾಣ ಕೊಟ್ಟರೂ ಅದು ಶಂಕ್ರಪ್ಪನಿಗೆ ಎಂಬುದು ಅವನ ಬದ್ಧತೆ. ಶಂಕ್ರಪ್ಪನ ಮಗಳು ಗೀತಾ ಪೇಟೆಯಲ್ಲಿ ಓದು ಮುಗಿಸಿ ಊರಿಗೆ ಬಂದಿದ್ದಾಳೆ.

ಹೀಗೆ ಶುರುವಾಗುವ ಕಥೆಯ ಮುಂದುವರಿದ ಭಾಗವನ್ನು ಯಾರಾದರೂ ಸುಲಭವಾಗಿಯೇ ಊಹಿಸಿಕೊಳ್ಳಬಹುದು. ಪ್ರೇಕ್ಷಕನ ಊಹೆಯನ್ನು ಸುಳ್ಳಾಗಿಸಿ ಅಚ್ಚರಿಗೆ ಕೆಡವಬೇಕು ಎಂಬ ಉದ್ದೇಶ ನಿರ್ದೇಶಕರಿಗೂ ಇಲ್ಲ. ಹೀಗಾಗಿ ಮೊದಲಿಂದ ಕೊನೆಯವರೆಗೂ ‘ಭೈರವ ಗೀತ’ ಸಿನಿಮಾ ಹೆಚ್ಚುಕಮ್ಮಿ ನಾವು ಅಂದುಕೊಂಡ ದಾರಿಯಲ್ಲಿಯೇ ಸಾಗುತ್ತದೆ.

‘ರಕ್ತ ಚರಿತ್ರ’ದಲ್ಲಿ ಉಳ್ಳವರ ನಡುವಿನ ಹೊಡೆದಾಟವನ್ನು ಹೇಳಿದ್ದ ರಾಮ್‌ಗೋಪಾಲ್‌ ವರ್ಮಾ, ಇಲ್ಲಿ ಉಳ್ಳವರು ಮತ್ತು ಗುಲಾಮರ ನಡುವಿನ ಸಂಘರ್ಷದ ಎಳೆಯನ್ನು ಇಟ್ಟುಕೊಂಡು ಕಥೆ ಕಟ್ಟಿದ್ದಾರೆ. ಅಲ್ಲಿ ಪೊಲೀಸರು, ಪಿಸ್ತೂಲುಗಳು ಇದ್ದವು. ಇಲ್ಲಿ ಬರೀ ಕತ್ತಿ ಕೊಡಲಿಗಳಿವೆ. ಹರಿವ ನೆತ್ತರು, ಉರುಳುವ ತಲೆಗಳು, ಅರಚಾಟ ಕಿರುಚಾಟ ಎಲ್ಲವೂ ಅದೇ.ಆರ್‌ಜಿವಿ ಗರಡಿಯಲ್ಲಿ ಪಳಗಿದ ಸಿದ್ಧಾರ್ಥ, ಕ್ರೌರ್ಯವನ್ನು ಬಗೆಬಗೆಯಾಗಿ ತೋರಿಸುವ ದೃಷ್ಟಿಯಿಂದ ಗುರುವಿಗೆ ಸರಿಸಮಾನರಾಗಿ ನಿಲ್ಲುತ್ತಾರೆ.

‘ಗುಲಾಮಗಿರಿ ಕೊನೆಯಾಗಬೇಕು; ಎಲ್ಲರಿಗೂ ನಿಜದ ಅರ್ಥದಲ್ಲಿ ಸ್ವಾತಂತ್ರ್ಯ ಸಿಗಬೇಕು’ ಎಂಬ ಆಶಯ ಈ ಸಿನಿಮಾದ ಕಥೆಯಲ್ಲಿ ಇದ್ದರೂ ಅದು ನೆತ್ತರ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ರಕ್ತಪಾತವನ್ನು ಬಗೆಬಗೆಯಾಗಿ ತೋರಿಸುವ ರೀತಿಯಲ್ಲಿಯೇ ನಿರ್ದೇಶಕರ ಉದ್ದೇಶ ಸ್ಪಷ್ಟವಾಗುತ್ತದೆ. ಹಾಗಿರುವಾಗ ಚಿತ್ರದ ಕೊನೆಯಲ್ಲಿ ತೆರೆಯ ಮೇಲೆ ಬರುವ ‘ಯುದ್ಧ ಸಾಕು’ ಎಂಬ ಸಂದೇಶ ಉಂಡು ತೇಗಿದವನು ಊಟ ಸಾಕು ಅಂದ ಹಾಗೆಯೇ ಕೇಳಿಸುತ್ತದೆ.

ಸುತ್ತ ಝಳಪಿಸುವ ಕತ್ತಿಗಳ ನಡುವೆ ಭೈರವ–ಗೀತಾಳ ಪ್ರೇಮದ ಗುಲಾಬಿಯೂ ನಲುಗಿಹೋಗುತ್ತದೆ. ನಿರ್ದೇಶಕರಿಗೆ ನೆತ್ತರ ಮೇಲೆ ಇದ್ದಷ್ಟು ಪ್ರೀತಿ ಗುಲಾಬಿ ಮೇಲೆ ಇಲ್ಲ. ಹಾಗಾಗಿಯೇ ಭೈರವ ಮತ್ತು ಗೀತ ಸುಖವಾಗಿದ್ದರು ಎನ್ನುವುದನ್ನು ಅಕ್ಷರಗಳಲ್ಲಿ ತೋರಿಸಿದರೆ ಸಾಕು ಎಂದು ಅವರಿಗನ್ನಿಸಿದೆ. ಪ್ರೇಮಗೀತೆ ಹಾಡುವಾಗಲೂ ಧನಂಜಯ್‌ ಮುಖದಲ್ಲಿ ಗಂಟಿಕ್ಕಿದ ಹುಬ್ಬು ಸಡಿಲಗೊಳ್ಳುವುದಿಲ್ಲ. ರಕ್ತಸಿಕ್ತ ಹೆಣಗಳನ್ನು ನೋಡಿ ರೇಜಿಗೆ ಹುಟ್ಟಿದವರಿಗೆ ಇರಾ ಮೋರ್‌ ಮೈಮಾಟದರ್ಶನದ ಒಂದು ಹಾಡು ‘ರಿಲ್ಯಾಕ್ಸ್‌ ಪ್ಲೀಸ್‌’ ಎನ್ನುತ್ತದೆ.

ಮನುಷ್ಯನ ದೇಹವನ್ನು ಬಗೆಬಗೆಯಲ್ಲಿ ಹಿಂಸಿಸಿ ಮೈ ಜುಂ ಅನಿಸುವ ದೃಶ್ಯಗಳು ಚಿತ್ರದುದ್ದಕ್ಕೂ ಇವೆ; ಆದರೆ ನೋಡಿದ ಎಷ್ಟೋ ಹೊತ್ತಿನವರೆಗೂ ಕಾಡುವ, ಕಂಗಳು ತುಂಬಿಸುವ ಆಪ್ತವಾದ ಒಂದೇ ಒಂದು ದೃಶ್ಯವೂ ಈ ಚಿತ್ರದಲ್ಲಿ ಇಲ್ಲ. ಅಂಥ ಹಲವು ಸಾಧ್ಯತೆಗಳನ್ನು ನಿರ್ದೇಶಕರ ಕ್ರೌರ್ಯಪ್ರೇಮವೇ ನುಂಗಿಹಾಕಿದೆ. ಕ್ರೌರ್ಯದ ಮೂಲಕವೇ ಅದರ ನಿಷ್ಟ್ರಯೋಜನವನ್ನು ಕಾಣಿಸುವ ‘ಕಾಣ್ಕೆ’ಯೂ ಇಲ್ಲಿಲ್ಲ.

ತಾಂತ್ರಿಕ ಗಟ್ಟಿತನವೇ ಈ ಚಿತ್ರದ ಜೀವಾಳ. ಕ್ಷಣಕಾಲವೂ ವಿಶ್ರಮಿಸಲು ಅವಕಾಶ ಕೊಡದ ಹಾಗೆ ದೃಶ್ಯಗಳನ್ನು ಪೋಣಿಸಿದ ಅನ್ವರ್ ಅಲಿ ಸಂಕಲನಕ್ಕೆ, ಕಣ್ಣಿಗೆ ಕಾಣುವ ಹಸಿಹಸಿ ಕ್ರೌರ್ಯವನ್ನು ಕಿವಿಯಲ್ಲಿಯೂ ಸುರಿವ ರವಿಶಂಕರ್‌ ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಅಂಕ ಸಲ್ಲಬೇಕು.

ವಿಧೇಯಗುಲಾಮನಾಗಿ, ಸಿಡಿದೆದ್ದ ಜನನಾಯಕನಾಗಿತಮ್ಮ ಪಾತ್ರವನ್ನು ಧನಂಜಯ್‌ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಇಡೀ ಕಥೆಯಾಗಲಿ, ಅಲ್ಲಿನ ಪಾತ್ರಗಳಾಗಲಿ, ಹಾಡುಗಳಾಗಲಿ ಕನ್ನಡದ ಜಾಯಮಾನಕ್ಕೆ ಪೂರ್ತಿಯಾಗಿ ಹೊಂದುವುದಿಲ್ಲ. ಹಲವು ಪಾತ್ರಗಳು ತುಟಿಚಲನೆಗೂ ಮಾತಿಗೂ ಹೊಂದಿಕೆಯಾಗದೆ ‘ಡಬ್ಬಿಂಗ್‌ ಸಿನಿಮಾ’ದಂತೆ ಭಾಸವಾಗುತ್ತದೆ.

ಇಲ್ಲಿನ ಪಾತ್ರಗಳಲ್ಲಿ ಒಳ್ಳೆಯವರು– ಕೆಟ್ಟವರ ನಡುವೆ ಕಪ್ಪು, ಬಿಳುಪು ಎಂಬಷ್ಟು ಸ್ಪಷ್ಟ ಭೇದವಿದೆ. ಆದರೆ ಅವರು ಹರಿಸುವ ರಕ್ತದಲ್ಲಿ, ಕೊಡಲಿಯ ಹೊಡೆತದಲ್ಲಿ ಮಾತ್ರ ಭೇದವಿಲ್ಲ. ಎಲ್ಲರ ಮುಖಕ್ಕೂ ನೆತ್ತರು ಮೆತ್ತಿರುವಾಗ ಮಿತ್ರರು ಯಾರು ಶತ್ರುಗಳು ಯಾರು ಸ್ಪಷ್ಟವಾಗಿ ತಿಳಿಯುವುದಿಲ್ಲ. ಕ್ರೌರ್ಯದ ಭೂತ ಮೈಗೆ ಮೆಟ್ಟಿಕೊಂಡ ನಾಯಕನಿಗೂ ಖಳನಿಗೂ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇದು ‘ಭೈರವಗೀತ’ ಮಾದರಿಯ ಸಿನಿಮಾಗಳ ಬಹುದೊಡ್ಡ ಮಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT