ಶನಿವಾರ, ಜನವರಿ 18, 2020
20 °C

ದಬಾಂಗ್‌ 3| ಹಳೇ ಬಾಟಲಿಯಲ್ಲಿ ಹೊಸ ಮದ್ಯದ ಕಿಕ್: ಖಳನಾಗಿ ಮಿಂಚಿದ ಸುದೀಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರ: ದಬಾಂಗ್‌ 3(ಹಿಂದಿ)
ನಿರ್ಮಾಣ: ಸಲ್ಮಾನ್‌ ಖಾನ್‌ ಫಿಲ್ಸ್ಮ್, ಅರ್ಬಾಜ್‌ ಖಾನ್‌ ಪ್ರೊಡಕ್ಷನ್‌, ಸಪ್ರೋನ್‌ ಬ್ರಾಡ್‌ಕಾಸ್ಟ್‌ ಅಂಡ್‌ ಮಿಡಿಯಾ ಲಿಮಿಟೆಡ್‌
ನಿರ್ದೇಶನ: ಪ್ರಭುದೇವ
ತಾರಾಗಣ: ಸಲ್ಮಾನ್‌ ಖಾನ್‌, ಸೋನಾಕ್ಷಿ ಸಿನ್ಹಾ, ಸುದೀಪ್‌, ಸಾಯಿ ಮಂಜ್ರೇಕರ್‌

ತರ್ಕರಹಿತ ಮನರಂಜನೆಯ ಸಿನಿಮಾಯುಗ ಆರಂಭವಾಗಿ ಸಾಕಷ್ಟು ವರ್ಷಗಳೇ ಕಳೆದಿವೆ. ಅದರಲ್ಲೂ ಪೊಲೀಸ್‌ ಅಧಿಕಾರಿಯ ಬಾಹುಬಲವನ್ನೇ ವಿಜೃಂಭಿಸಿ ಬಂದಿರುವ ಸಿನಿಮಾಗಳು ತಮ್ಮದೇ ಆದ ಪ್ರೇಕ್ಷಕ ವರ್ಗವನ್ನೂ, ಸೂಪರ್‌ ಸ್ಟಾರ್‌ಗಳನ್ನೂ ಸೃಷ್ಟಿಸಿವೆ. ಹೊಡಿಬಡಿ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ ‘ದಬಾಂಗ್‌ 3’.

ಹಾಲಿವುಡ್‌ನಲ್ಲಿ ಜನಪ್ರಿಯವಾಗಿರುವ ಸರಣಿ ಸಿನಿಮಾ ಮಾದರಿಯನ್ನು ಈಗ ಹಿಂದಿಯಲ್ಲೂ ಅನುಸರಿಸಲಾಗುತ್ತಿದೆ. ಈ ಹಿಂದಿನ ‘ದಬಾಂಗ್‌’ ಮತ್ತು ‘ದಬಾಂಗ್‌ 2’ ಚಿತ್ರಗಳ ಮುಂದುವರಿದ ಚಿತ್ರಕಥೆಯೇ ‘ದಬಾಂಗ್‌ 3’. ಹಿಂದಿನ ಚಿತ್ರಗಳಂತೆ ಇಲ್ಲಿ ಇನ್‌ಸ್ಪೆಕ್ಟರ್‌ ಚುಲ್‌ಬುಲ್‌ ಪಾಂಡೆಯೇ (ಸಲ್ಮಾನ್‌ ಖಾನ್‌) ಚಿತ್ರದ ತುಂಬ ವ್ಯಾಪಿಸಿದ್ದಾನೆ. ಜೊತೆಗೆ ಹಿಂದಿನ ಚಿತ್ರಗಳಲ್ಲಿ ಸಲ್ಮಾನ್‌ಗೆ ನಾಯಕಿಯಾಗಿದ್ದ ರಜ್ಜೂ (ಸೋನಾಕ್ಷಿ ಸಿನ್ಹಾ) ಕೂಡಾ ಇದ್ದಾರೆ. ಹಿಂದಿನ ಎರಡು ಸಿನಿಮಾಗಳನ್ನು ನೀವು ನೋಡಿದ್ದರೆ ‘ದಬಾಂಗ್‌ 3’ ನಿಮಗೆ ವಿಶೇಷ ಎಂದೇನೂ ಅನ್ನಿಸುವುದಿಲ್ಲ. ಆದರೆ, ‘ತರ್ಕರಹಿತ ಮನರಂಜನೆಯೇ ಲೇಸು’ ಎಂದಾದಲ್ಲಿ ಇಲ್ಲಿನ ಭರಪೂರ ಆ್ಯಕ್ಷನ್‌ ದೃಶ್ಯಗಳು, ಮನರಂಜಿಸುವ ಹಾಡು –ಕುಣಿತಗಳು, ಬಡಿದೆಬ್ಬಿಸುವ ಡೈಲಾಗ್‌ಗಳು ನಿಮ್ಮನ್ನು ರಂಜಿಸುತ್ತವೆ.

ಖಳನಟ ಬಾಲ್ಲಿ ಸಿಂಗ್‌ (ಕಿಚ್ಚ ಸುದೀಪ್‌) ಹೆಣ್ಣುಮಕ್ಕಳ ಕಳ್ಳಸಾಗಣೆ ಮಾಡುವ ಕ್ರೂರಿ. ಆದರೆ, ಆತನದ್ದೂ ಒಂದು ಲವ್‌ಸ್ಟೋರಿ ಇದೆ. ಹಿಂದಿನ ಎರಡು ಚಿತ್ರಗಳಲ್ಲಿ ಇನ್‌ಸ್ಪೆಕ್ಟರ್ ‘ಚುಲ್‌ಬುಲ್‌ ಪಾಂಡೆ ಏನೆಲ್ಲ ಮಾಡಿದ’ ಎನ್ನುವುದನ್ನೇ ನಿರ್ದೇಶಕರು ತೋರಿಸಿದ್ದರು. ಪ್ರಭುದೇವ, ಈ ಚಿತ್ರದಲ್ಲಿ ಆತನಿಗೆ ಚುಲ್‌ಬುಲ್‌ ಎನ್ನುವ ಹೆಸರು ಹೇಗೆ ಬಂತು, ಆತ ಪೊಲೀಸ್‌ ಅಧಿಕಾರಿ ಹೇಗೆ ಆದ ಎನ್ನುವುದನ್ನು ತೋರಿಸಲು ಒಂದು ‘ಫ್ಲ್ಯಾಷ್‌ಬ್ಯಾಕ್‌’ ನೀಡಿದ್ದಾರೆ.

ಈ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಬರುವ ಖುಷಿ (ಸಾಯಿ ಮಂಜ್ರೇಕರ್‌) ಚುಲ್‌ಬುಲ್‌ ಪಾಂಡೆಯ ‍ಪ್ರಿಯತಮೆ. ಇಬ್ಬರ ಮದುವೆ ಆಗಬೇಕು ಎನ್ನುವಷ್ಟರಲ್ಲಿ ಬಾಲ್ಲಿ ಸಿಂಗ್‌ ಅವರ ಬಾಳಲ್ಲಿ ಬಿರುಗಾಳಿಯಂತೆ ಬರುತ್ತಾನೆ. ಆತನೂ ಖುಷಿಯನ್ನು ಪ್ರೀತಿಸಿದವನೇ, ಮದುವೆಯಾಗಲೂ ಸಿದ್ಧನಾಗಿದ್ದ. ಆದರೆ, ಆಕೆ ಚುಲ್‌ಬುಲ್‌ನನ್ನು ಪ್ರೇಮಿಸುತ್ತಾಳೆಂದು ತಿಳಿದ ಬಳಿಕ ಆಕೆ ಮತ್ತು ಆಕೆಯ ತಂದೆಯನ್ನು ಕೊಲೆ ಮಾಡುತ್ತಾನೆ. ಈ ಕೊಲೆಗೆ ಪ್ರತೀಕಾರವಾಗಿ ಚುಲ್‌ಬುಲ್‌ ಪಾಂಡೆ, ಬಾಲ್ಲಿಯನ್ನು ಪ್ರಪಾತಕ್ಕೆ ತಳ್ಳುತ್ತಾನೆ. ಸತ್ತೇ ಹೋಗಿದ್ದಾನೆಂದು ಎಲ್ಲರೂ ಭಾವಿಸಿದ್ದ ಬಾಲ್ಲಿ ಸಿಂಗ್‌, ಮತ್ತೆ ಬಂದು ಚುಲ್‌ಬುಲ್ ಪಾಂಡೆಯನ್ನು ಕಾಡುವುದೇ ‘ದಬಾಂಗ್‌ 3’ಯ ಕಥೆ.

ಹಿಂದಿನ ಎರಡು ‘ದಬಾಂಗ್‌’ಗಳಲ್ಲಿ ತೋರಿದ ‘ಸ್ಟೈಲ್‌’ಗಳನ್ನು ಮತ್ತು ಡೈಲಾಗ್‌ಗಳನ್ನು ಸಲ್ಮಾನ್‌ ಖಾನ್‌ ಈ ಚಿತ್ರದಲ್ಲೂ ಮುಂದುವರಿಸಿ ಪ್ರೇಕ್ಷಕರ ಸಿಳ್ಳೆ ಗಳಿಸುತ್ತಾರೆ. ಕಥೆ, ಚಿತ್ರಕಥೆ, ಡೈಲಾಗ್‌, ನಿರ್ಮಾಣ (ಸಂಕಲನದಲ್ಲೂ ಕೈಯಾಡಿಸಿಡುವ ಸುದ್ದಿ ಇದೆ) ಎಲ್ಲವನ್ನೂ ನಿರ್ವಹಿಸಿರುವ ಸಲ್ಮಾನ್‌ ಖಾನ್‌, ಚಿತ್ರದ ಒಂದಿಂಚೂ ಬಿಡದೆ ಆವರಿಸಿದ್ದಾರೆ. ಆದರೆ ಈ ಹಳೇ ಬಾಟಲಿಗೆ ಹೊಸ ಮದ್ಯದ ‘ಕಿಕ್‌’ ನೀಡಿರುವುದು ಕಿಚ್ಚ ಸುದೀಪ್‌ ಹೆಗ್ಗಳಿಕೆ.

ಖಳನಟನಾಗಿ ಸುದೀಪ್‌ ವಿಶಿಷ್ಟ ಮ್ಯಾನರಿಸಂ ಮತ್ತು ಡೈಲಾಗ್‌ ಡೆಲಿವರಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಹಿಂದಿಯ ಈ ಸಿನಿಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಡಬ್‌ ಆಗಿದ್ದು, ನಾಲ್ಕೂ ಭಾಷೆಗಳಲ್ಲಿ ಕಿಚ್ಚ ಸುದೀಪ್‌ ಸ್ವತಃ ಡಬ್ಬಿಂಗ್‌ ಮಾಡಿರುವುದು ವಿಶೇಷ. ಕ್ಲೈಮ್ಯಾಕ್ಸ್‌ನಲ್ಲಿ ಶರ್ಟು ಬಿಚ್ಚಿ ಹೊಡೆದಾಡುವ ಸಲ್ಮಾನ್‌ಗೆ ಪೈಪೋಟಿಯೆಂಬಂತೆ ಶರ್ಟು ಬಿಚ್ಚಲು, ಸುದೀಪ್‌ಗೆ ಹಿಂದಿನ ‘ಪೈಲ್ವಾನ್‌’ ಚಿತ್ರದಲ್ಲಿ ಹುರಿಗಟ್ಟಿಸಿದ ಮೈಕಟ್ಟು ಕೂಡಾ ಇಲ್ಲಿ ನೆರವಿಗೆ ಬಂದಿದೆ. ಈವರೆಗೆ ಬಂದಿರುವ ‘ದಬಾಂಗ್‌’ ಚಿತ್ರಗಳ ಖಳನಟರಿಗೆ ಹೋಲಿಸಿದರೆ ಸುದೀಪ್‌ ಒಂದು ಕೈ ಮೇಲೆ ಎನ್ನಿಸುತ್ತಾರೆ.

ಸಂದೀಪ್‌ ಶಿರೋಡ್ಕರ್‌, ಸಾಜಿದ್‌–ವಾಜಿದ್‌ ಸಂಗೀತ ನಿರ್ದೇಶನದಲ್ಲಿ ಎಲ್ಲ ಹಾಡುಗಳೂ ಇಂಪಾಗಿವೆ. ಹಿಂದಿನ ಚಿತ್ರದ ‘ಮುನ್ನಿ ಬದ್‌ನಾಮ್‌ ಹುಯೀ’ ಹಾಡನ್ನು ನಾಯಕನಿಗೆ ತಕ್ಕಂತೆ ಬದಲಾಯಿಸಿ ‘ಮುನ್ನಾ ಬದ್‌ನಾಮ್‌ ಹುವಾ’ ಎಂದು ‘ಐಟಂ ನಂಬರ್‌’ ಮಾಡಲಾಗಿದೆ. ಎರಡು ಹಾಡುಗಳನ್ನು ಕಿತ್ತು ಹಾಕಿ, ಸ್ಲೋ ಮೋಷನ್‌ ದೃಶ್ಯಗಳನ್ನು ವೇಗವಾಗಿಸಿದ್ದರೆ ಸಿನಿಮಾವನ್ನು ಅನಗತ್ಯವಾಗಿ ಲಂಬಿಸಿದ ಕಿರಿಕಿರಿ ತಪ್ಪುತ್ತಿತ್ತು. ಖುಷಿಯ ಪಾತ್ರ ನಿರ್ವಹಿಸಿದ (ನಿರ್ದೇಶಕ ಮಹೇಶ್‌ ಮಂಜ್ರೇಕರ್‌ ಪುತ್ರಿ) ಸಾಯಿ ಮಂಜ್ರೇಕರ್‌ರದ್ದು ಸಣ್ಣ ಅವಕಾಶವಾದರೂ ಮೊದಲ ಸಿನಿಮಾದಲ್ಲೇ ಅಭಿನಯದಿಂದ ಮನಗೆಲ್ಲುತ್ತಾರೆ. ಚುಲ್‌ಬುಲ್‌ ಪಾಂಡೆಯ ತಂದೆಯ ಪಾತ್ರದಲ್ಲಿ ಮೊದಲ ಎರಡು ‘ದಬಾಂಗ್‌’ಗಳಲ್ಲಿ ನಟಿಸಿದ್ದ ಹಿರಿಯ ನಟ ದಿ.ವಿನೋದ್‌ ಖನ್ನಾ, ಬದಲಿಗೆ ಈ ಚಿತ್ರದಲ್ಲಿ ಅವರ ಸೋದರ ಪ್ರಮೋದ್‌ ಖನ್ನಾ ನಟಿಸಿರುವುದು ವಿಶೇಷ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು