ಬುಧವಾರ, ಜನವರಿ 29, 2020
30 °C

'ದರ್ಬಾರ್' ವಿಮರ್ಶೆ: ಖಾಕಿಗೆ ಕಣ್ಣಿಲ್ಲ, ರಜನಿಗೆ ಬ್ರೇಕಿಲ್ಲ...

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

ಚಿತ್ರ: ದರ್ಬಾರ್‌

ನಿರ್ಮಾಣ: ಲೈಕಾ ಪ್ರೊಡಕ್ಷನ್‌ ಕಂಪನಿ

ನಿರ್ದೇಶನ: ಎ.ಆರ್‌. ಮುರುಗದಾಸ್‌

ತಾರಾಗಣ: ರಜನಿಕಾಂತ್‌, ನಯನತಾರಾ, ನಿವೇದಾ ಥಾಮಸ್‌, ಸುನಿಲ್‌ ಶೆಟ್ಟಿ

ನಿರ್ದೇಶಕ ಮುರುಗದಾಸ್‌ ಮತ್ತು ‘ಸೂಪರ್‌ಸ್ಟಾರ್‌’ ರಜನಿಕಾಂತ್‌ ಮೊದಲ ಬಾರಿಗೆ ಜೊತೆಗೂಡಿ ತೆರೆಗೆ ತಂದಿರುವ ‘ದರ್ಬಾರ್‌’ ಸಿನಿಮಾವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಬೇಕೆಂದರೆ, ‘ಖಾಕಿ ಹೆಣಗಳ ಮೇಲೆ ತುಪಾಕಿ ದರ್ಬಾರ್‌’ ಎನ್ನಬಹುದು.

ರಜನಿಕಾಂತ್‌ 27 ವರ್ಷಗಳ ಬಳಿಕ ಮೊದಲ ಬಾರಿಗೆ ತೆರೆಯ ಮೇಲೆ ಪೊಲೀಸ್‌ ಪಾತ್ರ ನಿರ್ವಹಿಸಿದ್ದಾರೆ. ಈ ಹಿಂದೆ 1992ರಲ್ಲಿ ‘ಪಾಂಡ್ಯನ್‌’ ಚಿತ್ರದಲ್ಲಿ ಹಾಗೂ ಅದಕ್ಕೂ ಹಿಂದೆ 1982ರಲ್ಲಿ ‘ಮೂಂಡ್ರು ಮುಗಮ್‌’ನಲ್ಲಿ ಅವರು ಪೊಲೀಸ್‌ ಪಾತ್ರ ನಿರ್ವಹಿಸಿದ್ದರು. ‘ಗಜನಿ’ ಸಿನಿಮಾದ ನಿರ್ದೇಶಕ ಮುರುಗದಾಸ್‌ ಮತ್ತು ‘ಅಲೆಕ್ಸ್‌ ಪಾಂಡ್ಯನ್‌’ ರಜನಿ ಒಟ್ಟು ಸೇರಿದ ಹಿನ್ನೆಲೆಯಲ್ಲಿ ಭಾರೀ ನಿರೀಕ್ಷೆ ಇಟ್ಟುಕೊಂಡು ಥಿಯೇಟರಿಗೆ ಹೋದರೆ ಈ ಚಿತ್ರ ಸ್ವಲ್ಪ ನಿರಾಶೆ ಹುಟ್ಟಿಸುತ್ತದೆ. ಅದಕ್ಕೆ ಕಾರಣ– ಕಥೆಯ ತೆಳು ಹಂದರ ಮತ್ತು ಹೀರೊ ಮಾತ್ರ ವಿಜೃಂಭಿಸಬೇಕೆಂಬ ನಿರ್ದೇಶಕರ ಕಮರ್ಷಿಯಲ್‌ ಹಟ. ಆದರೆ, ತರ್ಕರಹಿತ ಮನರಂಜನೆಯ ‘ಮಸಾಲೆ ಮಿಕ್ಸ್‌’ ಅನ್ನು ಬಯಸುವ ರಜನಿ ಅಭಿಮಾನಿಗಳಿಗೆ ಇದು ಸಿಹಿ ಪೊಂಗಲ್‌ನಂತೆಯೇ ಇದೆ.

ಮುಂಬೈಯಲ್ಲಿ ಮಾದಕದ್ರವ್ಯ ಜಾಲದ ಹಾವಳಿ ಮಿತಿಮೀರಿದಾಗ, ಐಪಿಎಸ್‌ ಅಧಿಕಾರಿ ಆದಿತ್ಯ ಅರುಣಾಚಲಂನನ್ನು (ರಜನಿಕಾಂತ್‌) ಪೊಲೀಸ್‌ ಕಮೀಷನರ್‌ ಆಗಿ ನಿಯೋಜಿಸಲಾಗುತ್ತದೆ. ಆದರೆ, ಈ ಪೊಲೀಸ್‌ ಅಧಿಕಾರಿಗೆ ತನ್ನ ತುಪಾಕಿಯ ಮೇಲೆ ಅದಮ್ಯ ನಂಬಿಕೆ. ಕ್ರಿಮಿನಲ್‌ಗಳನ್ನು ಪಿಸ್ತೂಲ್‌ನಿಂದ ಸುಡುವುದೇ ಸಮಸ್ಯೆಗೆ ಪರಿಹಾರ ಎಂದು ನಂಬಿದವನು. ಹಾಗಾಗಿ ಸಿನಿಮಾದ ಉದ್ದಕ್ಕೂ ಹೆಣಗಳು ಉರುಳುತ್ತಲೇ ಇರುತ್ತವೆ. ಮುರುಗದಾಸ್‌ ಈ ಹಿಂದೆ ನಿರ್ದೇಶಿಸಿದ್ದ ಪೊಲೀಸ್‌ ಕಥೆಯ ಚಿತ್ರಗಳಾದ ’ರಮಣ’, ‘ತುಪಾಕಿ’ ಮತ್ತು ‘ಕತ್ತಿ’ಯಲ್ಲೂ ‘ರೂಲ್‌ಬುಕ್‌’ ಹಂಗಿಲ್ಲದ ಅಧಿಕಾರಿಯೇ ವಿಜೃಂಭಿಸಿದ್ದರು. ಅದನ್ನೇ ಈ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಅರುಣಾಚಲಂ ಎಂತಹ ಉದ್ಧಟ ಅಧಿಕಾರಿಯೆಂದರೆ, ಎನ್‌ಕೌಂಟರ್‌ಗಳ ತನಿಖೆ ನಡೆಸಲು ಬಂದ ಮಾನವಹಕ್ಕು ಆಯೋಗದ ಸದಸ್ಯರನ್ನೂ ಕೋಣೆಯೊಳಕ್ಕೆ ಕೂಡಿಹಾಕಿ ಪಿಸ್ತೂಲಿನ ನಳಿಕೆ ತೋರಿಸಿ ತನಗೆ ಬೇಕಾದಂತೆ ವರದಿ ಬರೆಯಿಸುತ್ತಾನೆ!

ಚಿತ್ರಕಥೆಯ ಬಿಗಿ, ಸಂತೋಷ್‌ ಶಿವನ್‌ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ (ಅನಿರುಧ್‌ ರವಿಚಂದರ್‌) ಚಿತ್ರದ ಪ್ಲಸ್‌ಪಾಯಿಂಟ್‌. ಹಾಡುಗಳು ಮಾಮೂಲಿ ಅನ್ನಿಸುತ್ತವೆ. ಆರಂಭದಲ್ಲಿ ತಮಾಷೆಯ ದೃಶ್ಯಗಳು, ಮಧ್ಯೆ ಅಪ್ಪ–ಮಗಳ ಮನಕಲಕುವ ಸನ್ನಿವೇಶ ಚಿತ್ರದ ನೆತ್ತರ ಓಟಕ್ಕೆ ಸ್ವಲ್ಪ ಮಟ್ಟಿಗೆ ತಡೆಯೊಡ್ಡಿದೆ. ಮಗಳ ಪಾತ್ರದಲ್ಲಿ ನಿವೇದಾ ಥಾಮಸ್‌ ಗಟ್ಟಿ ಅಭಿನಯದಿಂದ ಗಮನ ಸೆಳೆಯುತ್ತಾರೆ. ನಾಯಕಿಯ ಪಾತ್ರದಲ್ಲಿ ನಯನತಾರಾ ಗ್ಲಾಮರಸ್‌ ಆಗಿದ್ದರೂ ಅರ್ಧ ಕಥೆಯ ಬಳಿಕ ಕಣ್ಮರೆಯಾಗುತ್ತಾರೆ. ಖಳನಾಯಕನ ಪಾತ್ರದಲ್ಲಿ ಸುನಿಲ್‌ ಶೆಟ್ಟಿ, 2004ರಲ್ಲಿ ತೆರೆಗೆ ಬಂದ ಶಾರೂಕ್‌ ಅಭಿನಯದ ‘ಮೈ ಹೂಂ ನಾ’ ಚಿತ್ರದ ತಮ್ಮ ಪಾತ್ರವನ್ನೇ ನೆನಪಿಸುತ್ತಾರೆ. ನಾಯಕ –ಖಳನಾಯಕನ ಮುಖಾಮುಖಿ ಅಷ್ಟೇನೂ ಕುತೂಹಲ ಹುಟ್ಟಿಸದೇ ಚಿತ್ರದ ಕೊನೆ ನೀರಸ ಫೈಟ್‌ನೊಂದಿಗೆ ಮುಗಿಯುತ್ತದೆ.

ತೆರೆಯ ಮೇಲೆ ‘ಯಂಗ್‌ ಆ್ಯಂಡ್‌ ಎನರ್ಜೆಟಿಕ್‌’ ರಜನಿಯ ಸ್ಟೈಲ್‌ಗಳು ಮಾತ್ರ ಎಂದಿನಂತೆ ವಿಜೃಂಭಿಸಿವೆ. ಮ್ಯಾಗ್ಡಲಿನಾ ವಿಸಿಸ್ಲಿಕ್‌ ಅವರ ಮೇಕಪ್‌ ಮತ್ತು ನಿಹಾರಿಕಾ ಖಾನ್‌ ವಸ್ತ್ರವಿನ್ಯಾಸ ಇದಕ್ಕೆ ಕಾರಣ. ಈ ವಯಸ್ಸಲ್ಲೂ ಬನಿಯನ್ ಕಳಚಿ ಜಿಮ್‌ನಲ್ಲಿ ಕಸರತ್ತು ನಡೆಸುತ್ತಾ ಮೈಕಟ್ಟು ಪ್ರದರ್ಶಿಸಿದ ‘ತಲೈವರ್‌’ ಆತ್ಮವಿಶ್ವಾಸಕ್ಕೆ ಜೈ ಎನ್ನಲೇಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು