ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇರ್ ಡೆವಿಲ್ ಮುಸ್ತಾಫಾ ಚಿತ್ರ ವಿಮರ್ಶೆ: ನಿರೂಪಣೆಗಷ್ಟೆ ಒತ್ತು, ಉದ್ದೇಶ ಹಿಂದೆ ಬಿತ್ತು

Published 20 ಮೇ 2023, 10:07 IST
Last Updated 20 ಮೇ 2023, 10:07 IST
ಅಕ್ಷರ ಗಾತ್ರ

ವಿನಾಯಕ ಕೆ.ಎಸ್‌.

ಚಿತ್ರ: ಡೇರ್‌ ಡೆವಿಲ್‌ ಮುಸ್ತಾಫಾ

ನಿರ್ದೇಶಕರು: ಶಶಾಂಕ್‌ ಸೋಗಲ್‌

ನಿರ್ಮಾಣ: ಟೀಂ ಸಿನಿಮಾಮಾರ

ಪಾತ್ರವರ್ಗ: ಶಿಶಿರ್‌ ಆದಿತ್ಯ ಮಂಡ್ಯ ರಮೇಶ್‌ ಎಂ.ಎಸ್‌.ಉಮೇಶ್‌ ಮತ್ತು ಇತರರು

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳನ್ನು ಓದುವುದೇ ಒಂದು ರೀತಿಯಲ್ಲಿ ಸಿನಿಮಾ ನೋಡಿದ ಅನುಭವ. ಅವರ ಹಲವು ಕೃತಿಗಳಲ್ಲಿ ಏಲಕ್ಕಿ ತೋಟದ ಘಮದ ನಡುವೆ ನಡೆಯುವ ಶಿಕಾರಿಯಲ್ಲಿ ‘ಪುಂಗಿ ಎಂಕ್ಟ’ನಂತಹ ನೆನಪಿನಲ್ಲಿ ಅಚ್ಚಳಿಯದೆ ಉಳಿದುಹೋಗುವ ಅದೆಷ್ಟೋ ಪಾತ್ರಗಳು ಬಂದು ಹೋಗುತ್ತವೆ. ಅಬಚೂರಿನ ಪೋಸ್ಟಾಫೀಸೆಂಬುದು ಮೂಡಿಗೆರೆಯ ಲ್ಯಾಂಡ್‌ಮಾರ್ಕ್‌ ಇದ್ದಂತೆ. ತೇಜಸ್ವಿಯವರ ಇಂತಹದ್ದೆ ಒಂದು ಕಥೆಯನ್ನಾಧರಿಸಿ ತೆರೆಗೆ ಬಂದಿರುವ ಚಿತ್ರ ‘ಡೇರ್‌ ಡೆವಿಲ್‌ ಮುಸ್ತಾಫಾ’. ಕೃತಿಕಾರನ ಅಬಚೂರನ್ನು ತೆರೆಯ ಮೇಲೆ ಸೊಗಸಾಗಿ ಕಟ್ಟಿಕೊಡುವಲ್ಲಿ ಯುವ ನಿರ್ದೇಶಕ ಶಶಾಂಕ್‌ ಸೋಗಲ್‌ ಯಶಸ್ವಿಯಾಗಿದ್ದಾರೆ. 

ತೇಜಸ್ವಿಯವರ ಕಥೆ ಓದಿದವರಿಗೆ ಈ ಚಿತ್ರಕಥೆಯಲ್ಲಿ ಹೊಸತು ಸಿಗಲಾರದು. ಆದರೆ ಕಥೆಯ ನಿರೂಪಣೆಯಲ್ಲಿ ಒಂದಷ್ಟು ಹೊಸತನ ಕಟ್ಟಿಕೊಡಲು ನಿರ್ದೇಶಕರು ಯತ್ನಿಸಿದ್ದಾರೆ. ಪೂರ್ತಿ ಹಿಂದೂಗಳೇ ಇರುವ ಕಾಲೇಜಿಗೆ ಪ್ರವೇಶ ಪಡೆಯುವ ಏಕೈಕ ಮುಸ್ಲಿಂ ವಿದ್ಯಾರ್ಥಿ ‘ಮುಸ್ತಾಫಾ’. ಈತ ಕಾಲೇಜು ಪ್ರವೇಶಿಸುತ್ತಿದ್ದಂತೆ ಮುಸ್ಲಿಮರು ಎಂದರೆ ಸಮಾಜದಲ್ಲಿ ಇರಬಹುದಾದ ಊಹಾಪೋಹ, ಕಲ್ಪನೆಗಳನ್ನೆಲ್ಲ ಕಾಲೇಜಿನ ಇತರ ವಿದ್ಯಾರ್ಥಿಗಳ ಮನದಾಳದ ಮಾತೆಂಬಂತೆ ನಿರ್ದೇಶಕರು ಗ್ರಾಫಿಕ್ಸ್‌ನಲ್ಲಿ ಕಟ್ಟಿಕೊಡುತ್ತಾರೆ. ಅಲ್ಲಿಂದ ಆರಂಭವಾದ ಕಥೆ ಮುಸ್ತಾಫಾ, ಅಯ್ಯಂಗಾರಿ ಮತ್ತು ಆತನ ನಾಲ್ಕಾರು ಗೆಳೆಯರ ಸುತ್ತವೇ ಸುತ್ತುವುದು, ಕಾಲೇಜನ್ನು ಬಿಟ್ಟು ಬಹಳ ಹೊತ್ತು ಆಚೆ ಬಾರದೇ ಇರುವುದು ಸಿನಿಮಾಕ್ಕೆ ಕೊಂಚ ಹಿನ್ನಡೆ ಎನ್ನಿಸುತ್ತದೆ. ಜೊತೆಗೆ ಇದೊಂದು ‘ಮಕ್ಕಳ ಜಗತ್ತು’ ಎಂಬ ಭಾವನೆ ಹುಟ್ಟಿಸಿ, ಹೇಳಹೊರಟಿರುವ ಕೋಮು ಸಾಮರಸ್ಯದ ಗಂಭೀರತೆಯನ್ನು ತುಸು ಕಡಿಮೆಯಾಗಿಸುತ್ತದೆ.

ನಿರೂಪಣೆಯಲ್ಲಿ ಹಾಸ್ಯವನ್ನು ತಂದು ಸಿನಿಮಾವನ್ನು ಚೈತನ್ಯದಾಯಕವಾಗಿಸಲು ನಿರ್ದೇಶಕರು ಬಹಳ ಯತ್ನಿಸಿದ್ದಾರೆ. ಆದರೆ ಕೆಲವು ಕಡೆ ಈ ಸಾಂದರ್ಭಿಕ ಹಾಸ್ಯ ನಗು ತರಿಸುವಲ್ಲಿ ವಿಫಲವಾಗುತ್ತದೆ. ವಿಶೇಷವಾಗಿ ಮೊದಲ 15 ನಿಮಿಷದಲ್ಲೇ ಸಿನಿಮಾದ ಓಟ ಬಹಳ ನಿಧಾನವೆನಿಸಿಬಿಡುತ್ತದೆ. ಮುಸ್ತಾಫನ ಪಾತ್ರದಲ್ಲಿ ನಟ ಶಿಶಿರ್‌ ಹಾಗೂ ಅಯ್ಯಂಗಾರಿ ಪಾತ್ರದಲ್ಲಿ ನಟ ಆದಿತ್ಯ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ನಟ ನಾಗಭೂಷಣ್‌ ಕನ್ನಡ ಪ್ರಾಧ್ಯಾಪಕರಾಗಿ ಎಂದಿನಂತೆ ಪ್ರೇಕ್ಷಕರನ್ನು ನಗಿಸುತ್ತಾರೆ. ಪೂರ್ಣಚಂದ್ರ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೈಹಿಕ ಶಿಕ್ಷಕರಾಗಿ ವಿಜಯ್‌ ಶೋಭರಾಜ್‌ ಇಷ್ಟವಾಗುತ್ತಾರೆ. ಮಂಡ್ಯ ರಮೇಶ್‌, ಉಮೇಶ್‌ ಹಿರಿಯರ ಜವಾಬ್ದಾರಿ ನಿಭಾಯಿಸಿದ್ದಾರೆ.

ಚಿತ್ರದ ಹಾಡುಗಳು ಸೊಗಸಾಗಿವೆ. ನವನೀತ್‌ ಶಾಮ್‌ ಅವರ ಹಿನ್ನೆಲೆ ಸಂಗೀತದ ಚಿತ್ರಕ್ಕೆ ಬೆನ್ನೆಲುಬು. ಛಾಯಾಗ್ರಹಣ ಇನ್ನಷ್ಟು ಉತ್ತಮವಾಗಬಹುದಿತ್ತು. ಕೆಲವು ದೃಶ್ಯಗಳನ್ನು ಕತ್ತರಿಸಿ ಸಿನಿಮಾದ ಅವಧಿಯನ್ನು ತಗ್ಗಿಸಬಹುದಿತ್ತು. ಕೆಲವೆಡೆ ಕೋಮು ಹುಡುಗಾಟಿಕೆ ಕಾಲೇಜಿನ ಪ್ರಾಧ್ಯಾಪಕರು, ಪ್ರಾಂಶುಪಾಲರ ಎದುರೇ ನಡೆದರೂ ಮಕ್ಕಳೆದುರು ದೊಡ್ಡವರೆಸಿಕೊಂಡವರು ಸುಮ್ಮನಿರುವುದು ಕಥೆಗೆ ಕೊಂಚ ಹಿನ್ನಡೆಯೆನಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT