ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಹೆರಾಯಿಯಾಂ ಸಿನಿಮಾ ವಿಮರ್ಶೆ: ದೀಪಿಕಾ ಭವ–ಭಾವದ ತಂತಿ

Last Updated 11 ಫೆಬ್ರುವರಿ 2022, 9:41 IST
ಅಕ್ಷರ ಗಾತ್ರ

ಚಿತ್ರ: ಗೆಹೆರಾಯಿಯಾಂ (ಹಿಂದಿ)

ನಿರ್ಮಾಣ: ಹೀರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಶಕುನ್ ಬಾತ್ರಾ.

ನಿರ್ದೇಶನ: ಶಕುನ್ ಬಾತ್ರಾ

ತಾರಾಗಣ: ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯಾ ಪಾಂಡೆ, ಧೈರ್ಯ ಕಾರ್ವಾ, ನಾಸಿರುದ್ದೀನ್ ಷಾ, ರಜತ್ ಕಪೂರ್.

ಅಯೇಷಾ ಪಾತ್ರಧಾರಿ ದೀಪಿಕಾ ಕಣ್ಣಲ್ಲಿ ಮಡಚಿಟ್ಟ ಭಾವಗಳ ಆಕಾಶ. ಪ್ರೀತಿಯ ಚುಂಗು ಹಿಡಿದು ಹೊರಟ ಅವರ ಬದುಕಿನಲ್ಲೇಳುವುದು ಎತ್ತರೆತ್ತರದ ಅಲೆಗಳು. ಆ ಎಲ್ಲವನ್ನೂ ತಣ್ಣತಣ್ಣಗೇ ತೋರುವ ಚಿತ್ರಿಕೆಗಳು ಈ ಸಿನಿಮಾ ಯಾಕೆ ಸೂಕ್ಷ್ಮ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತವೆ. ನೋಡಲು ದೊಡ್ಡ ಮಟ್ಟದ ತಾಳ್ಮೆ ಬೇಡುವ ‘ಗೆಹೆರಾಯಿಯಾಂ’ ಯಾವ ಪ್ರಸಂಗಗಳಿಗೂ ತೀರ್ಪು ಕೊಡದೆ ಕಣ್ಣಂಚಲ್ಲಿ ನೀರ ಹನಿಗಳ ತಂದು ನಿಲ್ಲಿಸುತ್ತದೆ. ಅಂತ್ಯವೂ ಆಸಕ್ತಿಕರ.

ಅಯೇಷಾ ಯೋಗ ಹೇಳಿಕೊಡುವ ಮುಂಬೈನ ಯುವತಿ. ಇಷ್ಟದ ಹುಡುಗ ಭವಿಷ್ಯ ಕಟ್ಟಿಕೊಳ್ಳಲು ಹೆಣಗಾಡುವುದನ್ನು ನೋಡುತ್ತಲೇ ತನ್ನ ಭವಿತವ್ಯವನ್ನೂ ಹಸನಾಗಿಸಿಕೊಳ್ಳಲು ಹೊರಟಾಕೆ. ತನ್ನ ದೊಡ್ಡಪ್ಪನ ಮಗಳು ಹಾಗೂ ಅವಳ ಪ್ರಿಯಕರನೊಟ್ಟಿಗೆ ಹಡಗಿನಲ್ಲೊಂದು ಪಯಣ ಹೊರಟಾಗ ಬದುಕಿನ ದಿಕ್ಕು ಬದಲಾಗುತ್ತದೆ. ಆ ದೊಡ್ಡಪ್ಪನ ಮಗಳ ಪ್ರಿಯಕರ ಇವಳಿಗೆ ಹಿಡಿಸುತ್ತಾನೆ. ಅವನಿಗೂ ಇವಳು ಮೆಚ್ಚು. ಬದುಕು ಗಟ್ಟಿಯಾಗಿಸಿಕೊಳ್ಳುವ ಮಹತ್ವಾಕಾಂಕ್ಷೆಯ ಜತೆಗೇ ಅಂಕುರಿಸುವ ಪ್ರೇಮ ಹಲವು ಸಿಕ್ಕುಗಳನ್ನು ಅಯೇಷಾ ಬದುಕಿನಲ್ಲಿ ಸೃಷ್ಟಿಸುತ್ತದೆ. ಕಕ್ಕುಲತೆ, ತಟವಟ, ವ್ಯವಹಾರದ ಏರುಪೇರು ಒಡ್ಡುವ ಸವಾಲು, ಗತ ಬದುಕಿನ ಅಮ್ಮನ ಕಾಡುವ ನೆನಪು, ಅಪ್ಪನ ಮೌನ...ಇವೆಲ್ಲವೂ ಪದರ ಪದರವಾಗಿ ಚಿತ್ರಕಥೆಯಲ್ಲಿ ನಾಜೂಕಾಗಿಯೂ, ಸಹಜವಾಗಿಯೂ ಬೆರೆತುಕೊಂಡಿವೆ.

ಶಕುನ್ ಬಾತ್ರಾ ಜತೆಗೆ ಸುಮಿತ್ ರಾಯ್, ಅಯೇಷಾ ದೇವಿತ್ರೆ ಹಾಗೂ ಯಶ್ ಸಹಾಯ್ ಬರೆದಿರುವ ಚಿತ್ರಕಥೆ ಬಹಳ ಗಟ್ಟಿಯಾದದ್ದು. ಆಧುನಿಕ ಕಾಲದ ಮನಸ್ಸುಗಳ ದೊಡ್ಡ ಕನಸನ್ನು ಎಟುಕಿಸಿಕೊಳ್ಳುವ ತವಕ ಹಾಗೂ ಭವಬಂಧನದ ವಾಸ್ತವವನ್ನು ಎದೆಗೆ ತಾಕುವಂತೆ ಚಿತ್ರ ದಾಟಿಸುತ್ತದೆ.

ದೀಪಿಕಾ ಪಡುಕೋಣೆ ಅಭಿನಯ ಚಿತ್ರದ ಜೀವಾನಿಲ. ‘ಕಾಕ್‌ಟೇಲ್‌’ನಲ್ಲಿ ಕಂಡಿದ್ದ ಅವರ ನಯನಾಭಿನಯ ಮತ್ತೆ ಇಲ್ಲಿ ಕಾಡುವಂತೆ ಮೂಡಿಬಂದಿದೆ. ಆಂಗಿಕ ಅಭಿನಯ, ಇತರೆ ಪಾತ್ರಗಳಿಗೆ ಪ್ರತಿಕ್ರಿಯಿಸುವ ಪರಿ, ಸರಸಕ್ಕೆ ಒಡ್ಡಿಕೊಳ್ಳುವ ಮುಕ್ತತೆ ಎಲ್ಲರದರಲ್ಲೂ ಅವರು ಗಟ್ಟಿಗಿತ್ತಿಯೇ. ಅವರ ಪಾತ್ರದ ಸಂಕೀರ್ಣತೆಯೂ ಹಾಗೆಯೇ ಇದೆ. ಸಿದ್ಧಾರ್ಥ್ ಚತುರ್ವೇದಿ ಪಾತ್ರ ಸ್ವಾರ್ಥದ ಮೂಟೆಯಂತಿರುವುದರಿಂದ ಅವರನ್ನು ಕಣ್ಣುಗಳು ನಿರ್ಲಕ್ಷಿಸಿಬಿಡುತ್ತವೆ. ಅನನ್ಯಾ ಪಾಂಡೆ ಅವರಿಗೂ ಇದು ಅಭಿನಯಕ್ಕೆ ಪೊಗದಸ್ತಾದ ತರಬೇತಿ. ಚಿಕ್ಕ ಪಾತ್ರದಲ್ಲೂ ನಾಸಿರುದ್ದೀನ್ ಶಾ ಅಲ್ಲಾಡಿಸುವಂತೆ ಅಭಿನಯಿಸಿದ್ದಾರೆ.

ಕಣ್ಣಿಗೆ ಕಾಣುವ ಸತ್ಯಗಳು, ಮನದಲ್ಲಿ ಮೂಡಿದ ತಪ್ಪು ಭಾವಗಳು, ಸತ್ಯ–ಸುಳ್ಳಿನ ಸಂತೆಯಲ್ಲಿ ಏಗಲೇಬೇಕಾದ ಜರೂರತ್ತು, ಅವಿತ ಕತೆಗಳು ಅನಾವರಣಗೊಂಡಾಗ ಆಗುವ ಜ್ಞಾನೋದಯ... ಹೀಗೆ ಹಲವು ಭಾವಸೂಕ್ಷ್ಮಗಳನ್ನು ನಿರ್ದೇಶಕರು ಸಾವಧಾನದಿಂದ ತೆರೆಗೆ ತಂದಿದ್ದಾರೆ. ಇಂತಹ ವಸ್ತುವಿಷಯದಲ್ಲಿ ಮನರಂಜನೆಯೊಂದನ್ನೇ ಬಯಸುವುದು ತಪ್ಪಾಗುತ್ತದೆ.

ಹೊಸ ಕಾಲದ ಇಂಗ್ಲಿಷ್ ಪ್ರಣೀತ ಸಂಭಾಷಣೆ, ಹದವರಿತಂತೆ ಆಗೀಗಲಷ್ಟೆ ಮೂಡಿ, ಮೌನವನ್ನೇ ಹೆಚ್ಚು ಉಳಿಸುವ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಪೂರಕ. ಕಬೀರ್ ಕಾಥ್‌ಪಾಲಿಯಾ ಹಾಗೂ ಸವೇರಾ ಮೆಹ್ತಾ ಸಂಯೋಜನೆಯ ಪಾಶ್ಚಾತ್ಯ ರಾಗಗಳ ಹಾಡುಗಳೂ ದೃಶ್ಯಗಳಿಗೆ ಹಿನ್ನೆಲೆಯಾಗಿಯೇ ಬಳಕೆಯಾಗಿರುವುದು ಗಮನಾರ್ಹ.

ಎಂಟು ವರ್ಷಗಳಿಂದ ದೀಪಿಕಾ ತಮ್ಮ ಚಿತ್ರಪಯಣದಲ್ಲಿ ಒಡ್ಡಿಕೊಳ್ಳುತ್ತಿರುವ ಪ್ರಯೋಗಗಳು ಆಸಕ್ತಿಕರ. ಇದು ಆ ಸಾಲಿಗೆ ನಿಸ್ಸಂಶಯವಾಗಿ ಇನ್ನೊಂದು ಸೇರ್ಪಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT