ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೈವ’ ಸಿನಿಮಾ ವಿಮರ್ಶೆ | ನೈಜ, ಕಲ್ಪನೆಯ ಮಿಶ್ರಣ ಈ ‘ಕೈವ’

Published 10 ಡಿಸೆಂಬರ್ 2023, 12:28 IST
Last Updated 10 ಡಿಸೆಂಬರ್ 2023, 12:28 IST
ಅಕ್ಷರ ಗಾತ್ರ

ಚಿತ್ರ: ಕೈವ (ಕನ್ನಡ)

ರಚನೆ ಮತ್ತು ನಿರ್ದೇಶನ: ಜಯತೀರ್ಥ

ನಿರ್ಮಾಣ: ರವೀಂದ್ರ ಕುಮಾರ್‌ 

ತಾರಾಗಣ: ಧನವೀರ್‌, ಮೇಘ ಶೆಟ್ಟಿ, ಮಹಾಂತೇಶ್ ಹಿರೇಮಠ್, ಜಯರಾಮ್ ಕಾರ್ತಿಕ್, ರಮೇಶ್‌ ಇಂದಿರಾ, ನಂದಗೋಪಾಲ್, ಉಗ್ರಂ ಮಂಜು, ರಾಘು ಶಿವಮೊಗ್ಗ, ಬಿ.ಎಂ.ಗಿರಿರಾಜ್‌ ಮತ್ತಿತರರು. 

‘ಬನಾರಸ್‌’ ಎಂಬ ಭಿನ್ನವಾದ ಸಿನಿಪ್ರಯೋಗದ ಬಳಿಕ ನಿರ್ದೇಶಕ ಜಯತೀರ್ಥ ಅವರು ನೈಜ ಘಟನೆಯ ಜಾಡು ಹಿಡಿದು ಹೊರಟು, ರೌಡಿಸಂ ಲೋಕಕ್ಕೆ ಹೆಜ್ಜೆ ಇಟ್ಟು ‘ಕೈವ’ನನ್ನು ತೆರೆಗೆ ತಂದಿದ್ದಾರೆ. ಮಚ್ಚು, ಲಾಂಗುಗಳ ಲೋಕದಲ್ಲಿ ಪ್ರೇಮಕಥೆಯೊಂದು ಸಾಮಾನ್ಯ. ಇಲ್ಲಿಯೂ ಒಂದು ಹದವಾದ ಪ್ರೇಮಕಥೆಯಿದೆ; ಅದೇ ರೀತಿ ರಕ್ತದೋಕುಳಿಯೂ ಹರಿದಿದೆ. 

1983ರಲ್ಲಿ ನಡೆದ ನೈಜ ಕಥೆ ಇದಾಗಿದೆ. ಅದಕ್ಕೆ ಒಂದಿಷ್ಟು ಕಲ್ಪನೆಯ ಹೂರಣವನ್ನು ನಿರ್ದೇಶಕರು ಬೆರೆಸಿದ್ದಾರೆ. ಬೆಂಗಳೂರಿನ ತಿಗಳರಪೇಟೆ ಸುತ್ತಮುತ್ತ ನಡೆಯುವ ಘಟನೆಗಳೇ ಸಿನಿಮಾದ ಕಥಾಹಂದರ. ಕೆಲಸ ಅರಸುತ್ತಾ ನೇಕಾರರ ಅನಾಥ ಹುಡುಗ ‘ಕೈವ’(ಧನವೀರ್) ಬೆಂಗಳೂರು ತಲುಪುತ್ತಾನೆ. ಕೈವಾರದ ಈ ಬಂಡೆ ಕ್ರೀಡೆಯಲ್ಲಿ ಮುಂದು. ಕರಗ ಉತ್ಸವದ ಸಂದರ್ಭದಲ್ಲಿ ‘ಸಲ್ಮಾ’(ಮೇಘ ಶೆಟ್ಟಿ) ಎಂಬಾಕೆಯ ಭೇಟಿಯಿಂದ ‘ಕೈವ’ ಕರಗುತ್ತಾನೆ. ಇವರಿಬ್ಬರ ಈ ಪ್ರೀತಿಯ ಪಯಣದ ನಡುವೆ ನಡೆಯುವ ಘಟನೆಯೊಂದು ಇಡೀ ಸಿನಿಮಾಗೆ ತಿರುವು ನೀಡುತ್ತದೆ. ‘ಕೈವ’ ರಕ್ತದೋಕುಳಿಯಲ್ಲಿ ಮಿಂದೇಳುತ್ತಾನೆ; ಅಲ್ಲಿಂದ ರಕ್ತವರ್ಷ...

ಈ ಸಿನಿಮಾ ಮೂಲಕ ಹೊಸ ಜಾನರ್‌ಗೆ ಜಯತೀರ್ಥ ಕೈಹಾಕಿದ್ದಾರೆ. ಅದರಲ್ಲಿ ಗೆದ್ದಿದ್ದಾರೆ ಎನ್ನಲೂಬಹುದು. 1983ಕ್ಕೆ ಇಳಿದು ಆ ಕಾಲದ ಭೂಗತಲೋಕವನ್ನು, ಅವರ ದಂಧೆಗಳನ್ನು ‘ಪಕಾಲಿ’, ‘ತಂಬು’ ಮುಂತಾದ ಸಾಲು ಸಾಲು ಭಿನ್ನ ಪಾತ್ರಗಳ ಮೂಲಕ ಅವರು ತೆರೆಗೆ ತಂದಿದ್ದಾರೆ. ಈ ಹಂತದಲ್ಲಿ ಪಾತ್ರಗಳ ಆಯ್ಕೆ ವಿಚಾರದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜಯರಾಮ್ ಕಾರ್ತಿಕ್, ರಮೇಶ್‌ ಇಂದಿರಾ, ಉಗ್ರಂ ಮಂಜು, ರಾಘು ಶಿವಮೊಗ್ಗ, ಬಿ.ಎಂ.ಗಿರಿರಾಜ್‌ ಮತ್ತಿತರರು ಇಲ್ಲಿನ ಪಾತ್ರಗಳಿಗೆ ಜೀವತುಂಬಿದ್ದಾರೆ. ಆರಂಭದಲ್ಲಿ ಧುಮ್ಮಿಕ್ಕುವ ಚಿತ್ರಕಥೆ ಕುತೂಹಲ ಹೆಚ್ಚಿಸುತ್ತದೆ. ಈ ವೇಗಕ್ಕೆ ಸರಿಯಾಗಿ ಪ್ರೇಮಕಥೆಯನ್ನೂ ಹೆಣೆದಿದ್ದರೆ ಸಿನಿಮಾ ಇನ್ನಷ್ಟು ಆಕರ್ಷಕವಾಗುತ್ತಿತ್ತು. ಕೈವ–ಸಲ್ಮಾ ನಡುವಿನ ಹಲವು ದೃಶ್ಯಗಳನ್ನು ಚುಟುಕಾಗಿಸಬಹುದಿತ್ತು. ಠಾಣೆಯೊಳಗೆ ‘ಕಬ್ಬಿಣದ ಸರಳುಗಳ ಒಳಗೆ’ ಬಂಧಿಯಾಗಿದ್ದ ‘ಕೈವ’ ಹೇಗೆ ಹೊರಬೀಳುತ್ತಾನೆ ಎನ್ನುವುದು ತರ್ಕಕ್ಕೆ ಸಿಗದ ವಿಷಯ!     

ಧನವೀರ್‌ ಹಾಗೂ ಮೇಘ ಶೆಟ್ಟಿ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಮೇಘ ಅವರ ನಟನೆಗೆ ಹೆಚ್ಚು ಅಂಕ ಸಲ್ಲಬೇಕು. ರಮೇಶ್‌ ಇಂದಿರಾ ತಮ್ಮ ಮಾತಿನ ಧಾಟಿಯಲ್ಲೇ ಸೆಳೆಯುತ್ತಾರೆ. ಉಗ್ರಂ ಮಂಜು ನಟನೆಯ ಶೈಲಿ ಇಷ್ಟವಾಗುತ್ತದೆ. ಸಂಭಾಷಣೆ ಇಡೀ ಚಿತ್ರದ ಆಸ್ತಿ. ‘ಕಲೀಂ’ ಎಂಬ ರೌಡಿಯ ಕೊಲೆಯ ದೃಶ್ಯದಲ್ಲಿನ ಸಂಭಾಷಣೆ ಈ ಮಾತಿಗೆ ಸಾಕ್ಷಿಯಂತಿದೆ. ಮರೆಯಾಗುತ್ತಿರುವ ಬೊಂಬೆಯಾಟವನ್ನು ಬಳಸಿಕೊಂಡು ಚಿತ್ರದ ಆರಂಭದಲ್ಲಿ ಕರಗದ ಇತಿಹಾಸವನ್ನು ತೆರೆಮೇಲೆ ತಂದಿರುವುದು ಶ್ಲಾಘನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT