ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ | ಮದಗಜ: ನಾಯಕನಿಗಷ್ಟೇ ಬಾಡೂಟ, ಮಿಕ್ಕವರಿಗೆ ಸೊಪ್ಪು

Last Updated 3 ಡಿಸೆಂಬರ್ 2021, 10:02 IST
ಅಕ್ಷರ ಗಾತ್ರ

ಚಿತ್ರ: ಮದಗಜ (ಕನ್ನಡ)
ನಿರ್ಮಾಣ: ಉಮಾಪತಿ ಶ್ರೀನಿವಾಸ ಗೌಡ
ನಿರ್ದೇಶನ: ಎಸ್. ಮಹೇಶ್ ಕುಮಾರ್
ತಾರಾಗಣ: ಶ್ರೀಮುರಳಿ, ದೇವಯಾನಿ, ಆಶಿಕಾ ರಂಗನಾಥ್, ಜಗಪತಿ ಬಾಬು, ಗರುಡಾ ರಾಮ್, ರಂಗಾಯಣ ರಘು, ಚಿಕ್ಕಣ್ಣ

‘ಸಾವೇ ಎದುರಾದರೂ ಸರಿ, ಇದು ಇರುವವರೆಗೂ ಯಾರ ಮೇಲೂ ಕೈಮಾಡಕೂಡದು’ ತಾಯಿ ಕಂಕಣ ಕಟ್ಟುತ್ತ ಆಜ್ಞೆ ಹೊರಡಿಸಿದಾಗಲೇ, ನಮಗೆ ಆ ಕಂಕಣ ಕಳಚಿ ನಾಯಕ ಹೊಡೆಯುವುದೇ ಗ್ಯಾರಂಟಿ ಅಂತ ಖಾತರಿಯಾಗುತ್ತದೆ. ಕಂಕಣ ಎರಡು ಸಲ ಕಳಚುತ್ತದೆ. ಒಮ್ಮೆ, ಹೊಡೆಯಬಂದವನ ಕತ್ತಿಯಂಚಿಗೆ ಸಿಲುಕಿ. ಮತ್ತೊಮ್ಮೆ, ತಾಯಿಯೇ ಅದನ್ನು ಬಿಚ್ಚುವುದರಿಂದ. ಕಂಕಣ ಕಟ್ಟುವ ಮೊದಲು ನಾಯಕ ಚಚ್ಚಪ್ಪನಾಗಿಯೇ ಫೇಮಸ್. ಕಟ್ಟಿದ ಮೇಲೆ ಆಜ್ಞೆಗೆ ಕಟ್ಟಪ್ಪನಾಗುವುದು ಕೆಲವು ನಿಮಿಷಗಳಷ್ಟೆ.

ತೆಲುಗಿನಲ್ಲಿ ಈ ಭಾವದ ಚಿತ್ರಗಳದ್ದೊಂದು ಸಿದ್ಧಭಿತ್ತಿ ಇದೆ. ಕುಟುಂಬದ ನಂಟು, ಅದರಿಂದ ದೂರಾಗಲು ಕಾರಣ ಉಂಟು, ಉದ್ದಕ್ಕೂ ಅಮ್ಮನ ಸೆಂಟಿಮೆಂಟು, ಆಗೀಗ ನಾಯಕಿಯೆಂಬ ಪೆಪ್ಪರಮಿಂಟು, ಕಾಮಿಡಿಯ ಅಂಟು, ಖಳರ ಜಿಗುಟು... ಹೀಗೆ. ಈ ಚಿತ್ರಕ್ಕೂ ನಿರ್ದೇಶಕರು ಅವೆಲ್ಲವನ್ನೂ ಎತ್ತಿಕೊಂಡಿದ್ದಾರೆ. ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಇದ್ದರೂ ಅವರು ಯಾವಾಗ ಕಚಗುಳಿ ಇಡುವರೋ ಎಂದು ಕಾದಿದ್ದೇ ಬಂತು. ಖಳರಲ್ಲಿ ‍ಪೊಗದಸ್ತಾದ ಗಡ್ಡ, ಮೀಸೆ ಇದೆಯಷ್ಟೆ. ಕನಿಷ್ಠ ರಾಚುವಂತೆ ಹೊಡೆಯಲು ಅವರಿಗೆ ಒಂದು ಗಟ್ಟಿ ಡೈಲಾಗೂ ಇಲ್ಲ. ಹಳ್ಳಿಯ ರೈತಾಪಿ ವರ್ಗದ ಭೂಮಿಪುತ್ರರ ದಂಡೇ ಇದ್ದರೂ ಅವರೆಲ್ಲರೂ ಕೈಲಿ ಮಚ್ಚು–ಕುಡ್ಲು (ದೇಸಿ ಭಾಷೆ) ಹಿಡಿದು ಊರು ಸುತ್ತುವರು. ಕೆಲವರು ಓಪನ್ ಜೀಪ್‌ನಲ್ಲಿ ಮೆರವಣಿಗೆ ಹೊರಡುವುದೂ ಇದೆ. ಅವರೆಲ್ಲ ಭೂಮಿ ಹಕ್ಕಿಗೆ ಹೋರಾಡುತ್ತಿರುವ ರಾಜಾಮೀಸೆಯ ಜಗಪತಿ ಬಾಬುಗೆ ಉಘೇ ಉಘೇ ಅನ್ನಬೇಕು. ಒಳ್ಳೊಳ್ಳೆಯ ಹಾಫ್ ಕುರ್ತಾ ಹಾಕಿ ಸ್ಲೋಮೋಷನ್‌ನಲ್ಲೇ ಹೆಚ್ಚಾಗಿ ಕದಲುವ, ಟ್ರಿಮ್ ಮಾಡಿದ ಗಡ್ಡ–ಮೀಸೆಯ ಜಗಪತಿ ಬಾಬು ಕಣ್ಣಲ್ಲಿ ನಿಗಿನಿಗಿ ಕೆಂಡ. ಅವರ ಡೈಲಾಗಿಗಿಂತ ಹಿನ್ನೆಲೆ ವಾದ್ಯದ ಸಂಗೀತವನ್ನೇ ಹೆಚ್ಚು ಮೊಳಗಿಸಿ ರವಿ ಬಸ್ರೂರು ತೂಗಿಸಿಕೊಂಡು ಹೋಗಿರುವುದೂ ಸಿನಿಮೀಯ ಜಾಣ್ಮೆ.

ಶ್ರೀಮುರಳಿ ಇಡೀ ಚಿತ್ರದಲ್ಲಿ ಎದ್ದುಕಾಣಬೇಕು ಅಂತಹ ಬರವಣಿಗೆ ಇದೆ. ಅವರ ಆಂಗಿಕ ಅಭಿನಯ ಕೂಡ ‘ಮಾಸ್’ ಚಿತ್ರಕ್ಕೆ ತಕ್ಕಂತೆ ಇದೆ. ಸಂಭಾಷಣೆಯಲ್ಲಿ ಪಂಚುಗಳೂ ಅವರಿಗಷ್ಟೆ ಮೀಸಲು. ತಾಯಿಯಾಗಿ ದೇವಯಾನಿ ತುಂಬಾ ಸೊರಗಿದಂತೆ ಕಾಣುತ್ತಾರೆ. ಅವರ ನಗು ಹಾಗೂ ಅಳುವಿನ ನಡುವಿನ ವ್ಯತ್ಯಾಸ ಗೊತ್ತೇ ಆಗುವುದಿಲ್ಲ. ನವೀನ್‌ಕುಮಾರ್ ಅವರ ಸಿನಿಮಾಟೊಗ್ರಫಿ ಇಂತಹ ಲೋಪಗಳನ್ನೆಲ್ಲ ತುಂಬಾ ಚೆನ್ನಾಗಿ ಕಾಣಿಸಿದೆ. ಇಡೀ ಚಿತ್ರದ ರಿಲೀಫ್ ನಾಯಕಿ ಆಶಿಕಾ ರಂಗನಾಥ್. ಅವರ ಸುಂದರ ವದನ, ಅಭಿನಯ ನಿಯಂತ್ರಣ ಎರಡೂ ನೆನಪಿನಲ್ಲಿ ಉಳಿಯುತ್ತದೆ. ಅವರ ಪಾತ್ರಪೋಷಣೆಯನ್ನೂ ನಿರ್ದೇಶಕರು ಸರಿಯಾಗಿ ಮಾಡಿಲ್ಲ. ಗರುಡಾ ರಾಮ್ ಅವರ ಗೋಲಿಯಂತಹ ಒಂದು ಕಣ್ಣನ್ನು ನೋಡನೋಡುತ್ತಾ ನಮ್ಮ ಕಣ್ಣೂ ಹೋಗುತ್ತದೆ. ರಂಗಾಯಣ ರಘು ಒಂಥರಾ ಸೂತ್ರಧಾರ.

ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದ ವಾದ್ಯಗಳದ್ದೇ ಚಿತ್ರದಲ್ಲಿ ಸಿಂಹಪಾಲು. ಮೌನವನ್ನು ಸಂಪೂರ್ಣ ಅಳಿಸಿ, ಸದ್ದು–ಗುದ್ದಿಗೆ ಜೈ ಎನ್ನದೆ ಅವರಿಗೆ ವಿಧಿಯಿಲ್ಲ. ಸಣ್ಣಪುಟ್ಟ ರೋಮಾಂಚನಗಳು ಇದ್ದೂ ಕಮರ್ಷಿಯಲ್ ಕಾಡಿನಲ್ಲಿ ‘ಮದಗಜ’ ವಿಪರೀತ ಒಂಟಿ ಎನಿಸುತ್ತದೆ. ಉಳಿದ ಪ್ರಾಣಿಗಳಿಗೆ ಸೊಪ್ಪು ತಿನ್ನಿಸಿ, ಅವರಿಗಷ್ಟೇ ಬಾಡೂಟ ಇಟ್ಟರೆ ಹೀಗೆಯೇ ಆಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT