ಗುರುವಾರ , ಏಪ್ರಿಲ್ 2, 2020
19 °C

ಸಿನಿಮಾ ವಿಮರ್ಶೆ 'ಕನ್ನಡ್‌ ಗೊತ್ತಿಲ್ಲ': ಕನ್ನಡ ಕನವರಿಕೆ; ಪರಭಾಷಿಕರಿಗೆ ಬೇಸರಿಕೆ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

ಚಿತ್ರ: ಕನ್ನಡ್‌ ಗೊತ್ತಿಲ್ಲ

ನಿರ್ಮಾಪಕ: ಕುಮಾರ ಕಂಠೀರವ

ನಿರ್ದೇಶನ: ಮಯೂರ ರಾಘವೇಂದ್ರ

ತಾರಾಗಣ: ಹರಿಪ್ರಿಯಾ, ಸುಧಾರಾಣಿ, ಪವನ್‌ ಕುಮಾರ್‌, ಧರ್ಮಣ್ಣ, ಸಂತೋಷ್‌ ಕರ್ಕಿ

‘ಕನ್ನಡ್‌ ಗೊತ್ತಿಲ್ಲ’ –ಕನ್ನಡ ಗೊತ್ತಿಲ್ಲದ ಪರಭಾಷಿಕರು ಹೇಳುವ ಸಾಮಾನ್ಯ ಮಾತಿದು. ಕರ್ನಾಟಕದಲ್ಲಿ ಇದ್ದುಕೊಂಡೇ ಕನ್ನಡ ಕಲಿಯಲು ಪ್ರಯತ್ನಿಸದೆ ಈ ಮಾತು ಹೇಳುವವರೇ ಹೆಚ್ಚು. ಇದರಿಂದಾಗುವ ತೊಂದರೆ ಏನು? ಭಾಷೆ ಕಲಿತರೆ ಸಿಗುವ ಲಾಭವೇನು? ಇಂಥ ಒಂದೊಂದು ಪ್ರಶ್ನೆಗಳನ್ನೇ ‘ಕನ್ನಡ್‌ ಗೊತ್ತಿಲ್ಲ’ ಚಿತ್ರದಲ್ಲಿ ಎಳೆ ಎಳೆಯಾಗಿ ಜೋಡಿಸಿಟ್ಟು ಕನ್ನಡ ಭಾಷಾ ಪ್ರೇಮ ಸಾರಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಮಯೂರ ರಾಘವೇಂದ್ರ.

ಮಹಾನಗರದ ಕ್ಯಾನ್ವಾಸಿನಲ್ಲಿ ಮಾತೃಭಾಷೆ ಕನ್ನಡಕ್ಕೆ ಎದುರಾಗಿರುವ ಆಪತ್ತಿನ ಒಳಸುಳಿಗಳನ್ನು ಶೋಧಿಸುವ ಅವರ ಪ್ರಯತ್ನ ಶ್ಲಾಘನಾರ್ಹ. ಆದರೆ, ಕನ್ನಡದ ರಕ್ಷಣೆಯ ನೆಪದಲ್ಲಿ ಕಾನೂನು ಪಾಲಿಸಬೇಕಾದ ಕಾನ್‌ಸ್ಟೆಬಲ್‌ ಮೂಲಕವೇ ಅನ್ಯಭಾಷಿಕರನ್ನು ಹತ್ಯೆ ಮಾಡಿಸುವ ಪರಿಕಲ್ಪನೆ ಮಾತ್ರ ಬಾಲಿಶ.  

ಕನ್ನಡ ಉಳಿಸಲು ಹೊರಟ ಕಾನ್‌ಸ್ಟೆಬಲ್‌ನ ತಳಮಳ, ಪರಭಾಷಿಕರ ಅಪಹರಣದಲ್ಲಿ ರೋಚಕ ತಿರುವು, ಪ್ರಕರಣದ ತನಿಖೆಯಲ್ಲಿನ ಚುರುಕುತನ –ಇವುಗಳ ಜೋಡಣೆಯಲ್ಲೊಂದು ಹದ ದೊರೆಕ್ಕಿದ್ದರೆ ಚಿತ್ರದ ಪರಿಣಾಮ ಮತ್ತಷ್ಟು ಪ್ರಖರವಾಗಿರುತ್ತಿತ್ತು. ತೆಳುವಾದ ಕಥೆಯ ಹಲವು ಸಂಗತಿಗಳ ನಡುವೆಯೇ ನಿರ್ದೇಶಕರು ತರ್ಕ ಬೆಸೆಯಲು ಪ್ರಯತ್ನಿಸಿದ್ದಾರೆ. ಹಾಗಾಗಿಯೇ, ಚಿತ್ರಕಥೆ ಗಟ್ಟಿತನ ಕಳೆದುಕೊಂಡಿದೆ. ಸಂಭಾಷಣೆಯಲ್ಲೂ ಹದವಿಲ್ಲ. ಚಿತ್ರದ ನಿರೂಪಣೆಯು ಪ್ರೇಕ್ಷಕರ ಸಹನೆಗೆ ಸವಾಲೊಡ್ಡುತ್ತದೆ. ಮತ್ತೊಂದೆಡೆ ಈ ಕಥನದ ಮೂಲಕ ಅವರು ಹೇಳಲು ಹೊರಟಿರುವ ವಿಷಯವೂ ನೋಡುಗರ ಮನದಲ್ಲಿ ಅಸ್ಪಷ್ಟ ಚಿತ್ರಣವಾಗಿಯೇ ಉಳಿಯುತ್ತದೆ.

ಬೆಂಗಳೂರಿನಲ್ಲಿ ಹಿಂದಿ, ತೆಲುಗು, ತಮಿಳು, ಬಂಗಾಳಿ ಸೇರಿದಂತೆ ಎಂಟು ಮಂದಿ ಅನ್ಯಭಾಷಿಕರ ಅಪಹರಣವಾಗುತ್ತದೆ. ಈ ನಿಗೂಢ ಪ್ರಕರಣ ಭೇದಿಸುವುದು ಪೊಲೀಸ್‌ ಇಲಾಖೆಗೆ ಸವಾಲಾಗಿ ಕಾಡುತ್ತದೆ. ಇದು ರಾಷ್ಟ್ರಮಟ್ಟದ ಸುದ್ದಿಯಾಗಿಯೂ ಬಿತ್ತರವಾಗುತ್ತದೆ. ಪ್ರಕರಣದ ತನಿಖೆಯ ಜವಾಬ್ದಾರಿಯು ವಿಶೇಷ ಅಧಿಕಾರಿ ಶ್ರುತಿ ಚಕ್ರವರ್ತಿಯ ಹೆಗಲಿಗೇರುತ್ತದೆ. ತನಿಖಾ ತಂಡದ ಕಾನ್‌ಸ್ಟೆಬಲ್‌ ಸೋಮು ಎಂಬಾತನೇ ಈ ಅಪಹರಣದ ಸೂತ್ರಧಾರ. ಆತ ಏಕೆ ಇಂಥ ದುಷ್ಕೃತ್ಯಕ್ಕೆ ಇಳಿಯುತ್ತಾನೆ ಎಂಬುದೇ ಚಿತ್ರದ ಕೌತುಕ.   

ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಹರಿಪ್ರಿಯಾ ಅವರ ನಟನೆ ಪೇಲವವಾಗಿದೆ. ಪವನ್‌ಕುಮಾರ್‌, ಧರ್ಮಣ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗಿರಿಧರ್‌ ದಿವಾನ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯ. ನಕುಲ್‌ ಅಭಯಂಕರ್ ಅವರ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು