ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಕಿಮ್ಯಾನ್‌ ಸಿನಿಮಾ ವಿಮರ್ಶೆ: ಇದು ಕೃಷ್ಣ ‘ಪರಮಾತ್ಮ’ನಾಟ!

Last Updated 9 ಸೆಪ್ಟೆಂಬರ್ 2022, 11:19 IST
ಅಕ್ಷರ ಗಾತ್ರ

ಸಿನಿಮಾ: ಲಕ್ಕಿಮ್ಯಾನ್‌ (ಕನ್ನಡ)
ನಿರ್ದೇಶನ: ಎಸ್‌. ನಾಗೇಂದ್ರ ಪ್ರಸಾದ್‌
ನಿರ್ಮಾಪಕರು: ಪಿ.ಆರ್. ಮೀನಾಕ್ಷಿ ಸುಂದರಂ ಹಾಗೂ ಆರ್‌. ಸುಂದರ ಕಾಮರಾಜ್
ತಾರಾಗಣ: ಪುನೀತ್‌ ರಾಜ್‌ಕುಮಾರ್‌, ಡಾರ್ಲಿಂಗ್‌ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್‌, ನಾಗಭೂಷಣ್‌, ರಂಗಾಯಣ ರಘು, ಸಾಧು ಕೋಕಿಲ, ಸುಂದರ್‌ ರಾಜ್‌

***

ಹಿಂದೊಮ್ಮೆ ಹೀಗೆ ಬರೆದಿದ್ದೆ. ರಿಮೇಕ್‌ ಸಿನಿಮಾಗಳೆಂದರೆ ಅದು ಈಗಾಗಲೇ ನಡೆದ ಲೈವ್‌ ಕ್ರಿಕೆಟ್‌ ಪಂದ್ಯಾವಳಿಯ ಹೈಲೈಟ್ಸ್‌ ಎಂದು. ಮುಂದೇನಾಗುತ್ತದೆ? ಫಲಿತಾಂಶವೇನು? ಎನ್ನುವುದು ವೀಕ್ಷಕನಿಗೆ ತಿಳಿದಿರುತ್ತದೆ. ಆದರೆ ಕೆಲವೊಮ್ಮೆ ಲೈವ್‌ನಲ್ಲಿ ನೋಡಿದ ಪಂದ್ಯಾವಳಿಗಿಂತಲೂ ಹೈಲೈಟ್ಸ್‌ ಹೆಚ್ಚು ಖುಷಿ ಕೊಡುತ್ತವೆ. ‘ಲಕ್ಕಿಮ್ಯಾನ್‌’ ಸಿನಿಮಾವೂ ಇದೇ ರೀತಿ. ತನ್ನೊಳಗಿನ ಪಾತ್ರಗಳು, ಅವುಗಳ ನಟನಾ ಸಾಮರ್ಥ್ಯ ಹಾಗೂ ಪ್ರಮುಖವಾಗಿ ಪುನೀತ್‌ ರಾಜ್‌ಕುಮಾರ್‌ ಅವರ ಇರುವಿಕೆಯಿಂದ ಈ ಚಿತ್ರವು ರಿಮೇಕ್‌ ಪರಿಧಿಯಿಂದ ಕೊಂಚ ಹೊರಕ್ಕೆ ಹೆಜ್ಜೆ ಇಡುತ್ತದೆ. ನಗಿಸುತ್ತಾ ಸಾಗುವ ಈ ಸಿನಿಮಾ ಅಂತ್ಯದಲ್ಲಿ ನಿಶ್ಯಬ್ದವನ್ನು ಉಳಿಸುವಾಗ, ‘ಪರಮಾತ್ಮ’ ಮತ್ತೆ ಮತ್ತೆ ನೆನಪಾಗುತ್ತಾನೆ, ಕಾಡುತ್ತಾನೆ.

ಎಸ್‌. ನಾಗೇಂದ್ರ ಪ್ರಸಾದ್‌ ನಿರ್ದೇಶನದ ‘ಲಕ್ಕಿಮ್ಯಾನ್‌’, ತಮಿಳಿನಲ್ಲಿ ಅಶ್ವಥ್‌ ಮಾರಿಮುತ್ತು ಆ್ಯಕ್ಷನ್‌ ಕಟ್‌ ಹೇಳಿದ್ದ ‘ಓ ಮೈ ಕಡವುಳೆ’ ಸಿನಿಮಾದ ರಿಮೇಕ್‌. ಪ್ರತಿ ದೃಶ್ಯ ಹಾಗೂ ಸಂಭಾಷಣೆ ಮೂಲ ಸಿನಿಮಾದಂತೆಯೇ ಇದೆ. ಆದರೆ, ಚಿತ್ರಕಥೆಗೆ ಜೀವ ತುಂಬುವ ಕೆಲಸವನ್ನು ಇಲ್ಲಿನ ಪಾತ್ರಗಳು ನಿರ್ವಹಿಸಿದ ರೀತಿ ಉಲ್ಲೇಖಾರ್ಹ. ‘ಲಕ್ಕಿಮ್ಯಾನ್‌’, ಪುನೀತ್‌ ನಟನೆಯ ಕೊನೆಯ ಕಮರ್ಷಿಯಲ್‌ ಸಿನಿಮಾ. ಭೌತಿಕವಾಗಿ ನಮ್ಮ ನಡುವೆ ಇಲ್ಲದ ‘ಪರಮಾತ್ಮ’ ಇಲ್ಲಿ ‘ಪರಮಾತ್ಮ’ನಾಗಿ ವಿಶೇಷ ಪಾತ್ರದಲ್ಲಿ ತೆರೆತುಂಬಿಕೊಂಡಿರುವುದು ಕಾಕತಾಳೀಯ.

ಲಕ್ಕಿಮ್ಯಾನ್‌ ಕಥೆಯೂ ಕೂಡಾ ಒಂದು ಟೆಸ್ಟ್‌ ಪಂದ್ಯಾವಳಿಯಂತೆ. ಕಥಾ ನಾಯಕ ಅರ್ಜುನ್‌ ನಾಗಪ್ಪನಿಗೆ(ಡಾರ್ಲಿಂಗ್‌ ಕೃಷ್ಣ) ಜೀವನದಲ್ಲಿ ಎರಡು ಇನ್ನಿಂಗ್ಸ್‌ ಆಡುವ ಅವಕಾಶ. ಅರ್ಜುನ್‌, ಅನು ಆಂಥೊನಿ ದೋಣಿಯಪ್ಪ(ಸಂಗೀತಾ ಶೃಂಗೇರಿ) ಹಾಗೂ ಶೆಟ್ಟಿ (ನಾಗಭೂಷಣ್‌) ಬಾಲ್ಯ ಸ್ನೇಹಿತರು. ಕಾಲೇಜು ಶಿಕ್ಷಣದ ಬಳಿಕ ಅರ್ಜುನ್‌ನನ್ನೇ ಮದುವೆಯಾಗುವ ಇಚ್ಛೆಯನ್ನು ಅನು ವ್ಯಕ್ತಪಡಿಸುತ್ತಾಳೆ. ಅರ್ಜುನ್‌ ಕೂಡಾ ಇದಕ್ಕೆ ಸಮ್ಮತಿಸಿ ಮದುವೆಯಾಗುತ್ತಾನೆ. ಆದರೆ ಬಾಲ್ಯ ಸ್ನೇಹಿತೆಯನ್ನೇ ಮದುವೆಯಾಗಿದ್ದು, ದಾಂಪತ್ಯ ಜೀವನದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಚ್ಛೇದನ ನೀಡುವ ಹಂತಕ್ಕೂ ಇದು ತಲುಪುತ್ತದೆ. ಕೌಂಟುಂಬಿಕ ನ್ಯಾಯಾಲಯದ ಮೆಟ್ಟಲೇರುವ ಅರ್ಜುನ್‌ ಜೀವನದಲ್ಲಿ ಪರಮಾತ್ಮನ ಪ್ರವೇಶವಾಗುತ್ತದೆ. ‘ಬಾಸ್‌’ ಎಂಬ ಪಾತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಹಾಗೂ ಪರಮಾತ್ಮನ ಸಹಾಯಕನ ಪಾತ್ರದಲ್ಲಿ ಸಾಧು ಕೋಕಿಲ(ಬೇಬಿ) ಪ್ರವೇಶಿಸಿದ ಬಳಿಕ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ. ದೇವರಿಂದ ಜೀವನದ ಎರಡನೇ ಅವಕಾಶ ಪಡೆದ ಅರ್ಜುನ್‌, ಅನುವಿಗೆ ವಿಚ್ಛೇದನ ನೀಡುತ್ತಾನೆಯೇ ಎನ್ನುವುದೇ ಮುಂದಿನ ಕಥೆ.

ಸ್ನೇಹ, ಪ್ರೀತಿಯ ಪಾಠ ಮಾಡುತ್ತಾ ಸಾಗುವ ಚಿತ್ರದ ಮೊದಲಾರ್ಧ ಭರ್ಜರಿ ಮನರಂಜನೆ, ನಗುವಿನ ರಸದೌತಣ. ಪುನೀತ್‌ ಅವರ ಪ್ರವೇಶಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲೂ ಏಕಪರದೆ ಚಿತ್ರಮಂದಿರದ ವಾತಾವರಣ. ಪುನೀತ್‌ ಅವರಿಗೆ ಜೊತೆಯಾಗುವ ಸಾಧುಕೋಕಿಲ ಅವರು ತಮ್ಮ ಹಾವಭಾವ, ಸಂಭಾಷಣೆ ಮುಖಾಂತರ ಪ್ರೇಕ್ಷಕರನ್ನು ನಗಿಸುವ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು, ಯಶಸ್ಸು ಸಾಧಿಸುತ್ತಾರೆ. ಪುನೀತ್‌ ಅವರು ಇಲ್ಲಿ ಹೀರೊ ಆಗದೆ ತಾವು ಇರುವಂತೆಯೇ ಸರಳವಾಗಿ ಕಾಣಿಸಿಕೊಂಡಿದ್ದಾರೆ. ನಾಯಕನನ್ನು ತಮ್ಮ ಮಾತಿನಲ್ಲೇ ಕಾಲೆಳೆಯುತ್ತಾ, ಕಿವಿಮಾತು ಹೇಳುತ್ತಾ ಎಲ್ಲ ಧರ್ಮದ ‘ಪರಮಾತ್ಮ’ನಾಗಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪುನೀತ್‌ ಅವರಿಗೆ ಈ ಚಿತ್ರ ಒಂದು ಅತ್ಯುತ್ತಮ ಅರ್ಪಣೆ. ಡಬ್ಬಿಂಗ್ ಪೂರ್ಣಗೊಳ್ಳದೇ ಇದ್ದರೂ ಪುನೀತ್‌ ಅವರ ಧ್ವನಿಯನ್ನು ಹಾಗೆಯೇ ಉಳಿಸಿಕೊಂಡಿರುವುದು ಪ್ರೇಕ್ಷಕನಿಗೆ, ಅಭಿಮಾನಿಗಳಿಗೆ ಅಪ್ಪುವನ್ನು ಹತ್ತಿರವಾಗಿಸುತ್ತದೆ.ತಮಿಳಿನಲ್ಲಿ ಈ ಪಾತ್ರವನ್ನು ಖ್ಯಾತ ನಟ ವಿಜಯ್‌ ಸೇತುಪತಿ ನಿರ್ವಹಿಸಿದ್ದರು.

ಡಾರ್ಲಿಂಗ್‌ ಕೃಷ್ಣ ಇಲ್ಲಿ ಹೆಚ್ಚು ಅಂಕಗಿಟ್ಟಿಸುತ್ತಾರೆ. ಅವರ ಪ್ರಬುದ್ಧ ನಟನೆಯನ್ನು ಇಲ್ಲಿ ಕಾಣಬಹುದು. ಲಿಫ್ಟ್‌ ಒಳಗೆ ತನ್ನೊಳಗಿನ ಹತಾಶೆ, ನೋವನ್ನು ಹೊರಹಾಕುವ ದೃಶ್ಯದಲ್ಲಿ ಅವರದ್ದು ಪರಕಾಯ ಪ್ರವೇಶ. ಸ್ನೇಹಿತನಾಗಿ ನಾಗಭೂಷಣ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂಗೀತಾ ಶೃಂಗೇರಿ ಅವರಿಗೆ ಇಲ್ಲಿ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿದ್ದು, ಇದನ್ನು ಸದ್ಭಳಕೆ ಮಾಡಿಕೊಂಡುಪ್ರೇಕ್ಷಕನಿಗೆಹಿಡಿಸುತ್ತಾರೆ. ರೋಶಿನಿ ಪ್ರಕಾಶ್‌ ಅವರದ್ದು ನೈಜ ನಟನೆ.

ಕೊನೆಯಲ್ಲಿನ ‘ಬಾರೋ ರಾಜ’ ಹಾಡು, ಅದರಲ್ಲಿನ ಪುನೀತ್‌ ಹಾಗೂ ಪ್ರಭುದೇವ ಅವರ ಡ್ಯಾನ್ಸ್‌ ಕೇಕ್‌ ಮೇಲಿನ ಚೆರಿಯಂತೆ. ಎಂಡ್‌ ಕ್ರೆಡಿಟ್ಸ್‌ ಪ್ರದರ್ಶನದ ವೇಳೆ ಪುನೀತ್‌ ಅವರ ಜೊತೆಗಿನ ಚಿತ್ರೀಕರಣದ ತುಣುಕುಗಳನ್ನು ನೋಡುತ್ತಾ, ಕಣ್ತುಂಬಿಕೊಳ್ಳುತ್ತಾ ಚಿತ್ರಮಂದಿರ ಏಕಾಏಕಿ ನಿಶ್ಯಬ್ಧವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT