ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್ ಮಂಗಲ್ | ಹೋಮ್‌ಸೈನ್ಸ್‌ನ ಮಂಗಳಯಾನ

Last Updated 15 ಆಗಸ್ಟ್ 2019, 11:28 IST
ಅಕ್ಷರ ಗಾತ್ರ

ಚಿತ್ರ: ಮಿಷನ್ ಮಂಗಲ್ (ಹಿಂದಿ)
ನಿರ್ದೇಶನ: ಜಗನ್ ಶಕ್ತಿ
ತಾರಾಗಣ: ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಎಚ್‌.ಜಿ. ದತ್ತಾತ್ರೇಯ, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹ, ತಾಪ್ಸಿ ಪನ್ನು, ಶರ್ಮನ್ ಜೋಷಿ, ಕೀರ್ತಿ ಕುಲ್ಹಾರಿ, ವಿಕ್ರಮ್ ಗೋಖಲೆ

---

‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜೀವನಕೆ–ಮಂಕುತಿಮ್ಮ’ ಎಂದು ಡಿವಿಜಿ ಕಗ್ಗದಲ್ಲಿ ಬರೆದಿದ್ದಾರೆ. ನಿರ್ದೇಶಕ ಜಗನ್ ಶಕ್ತಿ ವಿಜ್ಞಾನ ಕಲೆಯನ್ನು ಅಂಥ ಋಷಿವಾಕ್ಯಕ್ಕೆ ಅಲ್ಲ; ಕಲ್ಪನಾ ಕೌಶಲಕ್ಕೆ ಒಗ್ಗಿಸಿ, 17 ಸಾವಿರ ವಿಜ್ಞಾನಿಗಳ ‘ಮಂಗಳಯಾನ’ದಂಥ ಮಹಾಯಜ್ಞವನ್ನು ಕೆಲವೇ ಮಂದಿಯ ಭಾವನಾತ್ಮಕ ಕಥಾನಕವನ್ನಾಗಿ ಅತಿ ಸರಳಗೊಳಿಸಿದ್ದಾರೆ. ಪ್ರೇಕ್ಷಕರನ್ನು ಹಿಡಿದು ಕೂರಿಸಿಬೇಕು ಎನ್ನುವುದು ಅವರ ಉಮೇದು. ಇದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.

ಗೃಹ ವಿಜ್ಞಾನಕ್ಕೂ ಬಾಹ್ಯಾಕಾಶ ವಿಜ್ಞಾನಕ್ಕೂ ಸಂಬಂಧವಿದೆ. ಬಾಣಲೆಯಲ್ಲಿ ಮೊದಲೇ ಕಾಯ್ದ ಎಣ್ಣೆಯಲ್ಲಿ ಒಲೆ ಆರಿಸಿದ ಮೇಲೂ ಪೂರಿ ಉಬ್ಬಬಲ್ಲದು. ಅಂತೆಯೇ ನಾಯಕಿಯ ತಲೆಯಲ್ಲಿ ಇಂಧನ ಉಳಿಸುವ ರಾಕೆಟ್ಟು ಹಾರುತ್ತದೆ. ಇದು ವಿಜ್ಞಾನಿಗಳ ಸಿನಿಮಾ ಆಗಿರುವುದಕ್ಕಿಂತ ಹೆಚ್ಚಾಗಿ ಅಪ್ಪಟ ಭಾರತೀಯ ಹೆಣ್ಣುಮಕ್ಕಳು ಕನಸಿನ ತಾರೆಗಳನ್ನು ಎಟುಕಿಸಿಕೊಳ್ಳುವ ಭಾವುಕ ‘ಡ್ರಾಮಾ’ ಆಗಿದೆ.

ಸಂಪ್ರದಾಯಸ್ಥ ಗಂಡ–ಆಧುನಿಕ ಮಕ್ಕಳ ಸಂಸಾರ ತೂಗಿಸಿಕೊಂಡೇ ಇಸ್ರೋದ ಮಹತ್ವಾಕಾಂಕ್ಷಿ ವಿಜ್ಞಾನಿಯಾಗಿಯೂ ಕಂಗೊಳಿಸುವ ತಾರಾ (ವಿದ್ಯಾ ಬಾಲನ್) ಕೇಂದ್ರ ಪಾತ್ರ. ಕೃತಕ ಗರ್ಭಧಾರಣೆಯಿಂದ ಹೊಟ್ಟೆಯಲ್ಲಿ ಮಗು ಸೃಷ್ಟಿಸಿಕೊಂಡು ಸಂಶೋಧನೆಯ ಚುಂಗು ಹಿಡಿದವಳು ವರ್ಷಾ ಪಿಳ್ಳೈ (ನಿತ್ಯಾ ಮೆನನ್).

‘ನಾಸಾ’ ಸೇರಲು ಇಸ್ರೋ ಚಿಮ್ಮುಹಲಗೆಯಷ್ಟೆ ಎಂದು ಪರಿಗಣಿಸಿದ ಅನಾಥ ಹುಡುಗಿ ಏಕಾ ಗಾಂಧಿ (ಸೋನಾಕ್ಷಿ ಸಿನ್ಹ). ಮುಸ್ಲಿಂ ಎಂಬ ಕಾರಣಕ್ಕೆ ಬಾಡಿಗೆ ಮನೆ ಹಿಡಿಯಲಾಗದ ವಿವಾಹ ವಿಚ್ಛೇದಿತೆ ನೇಹಾ ಸಿದ್ದಿಕಿ (ಕೀರ್ತಿ ಕುಲ್ಹಾರಿ). ಸೇನೆಯಲ್ಲಿ ಕೆಲಸ ಮಾಡುವ ಗಾಯಾಳು ಗಂಡನಿಗೆ ಆಸ್ಪತ್ರೆಯಲ್ಲಿ ತುತ್ತುಣಿಸಿ ಮತ್ತೆ ಪ್ರಯೋಗಶಾಲೆಗೆ ಬಂದು ಕೂರುವಾಕೆ ಕೃತಿಕಾ (ತಾಪ್ಸಿ ಪನ್ನು). ಇವರೆಲ್ಲರ ನಡುವೆ ನಿವೃತ್ತಿಯ ದಿನ ಲೆಕ್ಕಹಾಕುತ್ತಿರುವ ಅನಂತ್ ಅಯ್ಯಂಗಾರ್ (ಎಚ್‌.ಜಿ. ದತ್ತಾತ್ರೇಯ), ಮದುವೆಯಾಗಬೇಕೆಂದು ಇದ್ದಬದ್ದ ದೇವರಿಗೆಲ್ಲ ಅರ್ಚನೆ ಮಾಡಿಸುವ ಪರಮೇಶ್ವರ್ ನಾಯ್ಡು (ಶರ್ಮನ್ ಜೋಷಿ). ಇವರೆಲ್ಲರಲ್ಲಿ ಹುಮ್ಮಸ್ಸು ಮೂಡಿಸುವಾತ, ‘ಮಂಗಳಯಾನ’ದ ರೂವಾರಿ, ಕಥಾನಾಯಕ ರಾಕೇಶ್ (ಅಕ್ಷಯ್ ಕುಮಾರ್).

ಅಕ್ಷಯ್ ಒಂದೆರಡು ಮೆಟ್ಟಿಲು ಕೆಳಗಿಳಿದು ಮಹಿಳಾ ಪಾತ್ರಗಳಿಗೆ ಹೆಚ್ಚು ಮಾತನಾಡಲು ಬಿಟ್ಟಿರುವುದು ಸಿನಿಮಾದ ವಿಶೇಷ. ಇದೇ ಕಾರಣಕ್ಕೆ ಇದು ಕೌಟುಂಬಿಕ ಚಿತ್ರ. ದತ್ತಣ್ಣ ಅಭಿನಯ ಎಂದಿನಂತೆ ಹಸನಾಗಿದೆ. ಅವರು ಮನರಂಜನೆಯ ‘ರಿಲೀಫ್’ ಕೂಡ ಹೌದು. ವಿದ್ಯಾ ಆವರಿಸಿಕೊಂಡಿದ್ದಾರೆ. ಅವರಲ್ಲಿನ ಭಾರತೀಯ ಹೆಣ್ಣುಮಗಳ ಭಾವನಾತ್ಮಕ ಕಳೆ ಪ್ರೇಕ್ಷಕರನ್ನು ಸಮ್ಮೋಹನಗೊಳಿಸುತ್ತದೆ. ನಿತ್ಯಾ, ಕೃತಿ, ತಾಪ್ಸಿ ಅಭಿನಯಸಾಮರ್ಥ್ಯಕ್ಕೆ ಇದರಲ್ಲಿ ಸವಾಲೇನೂ ಇಲ್ಲ.

ಕಡಿಮೆ ವಿಜ್ಞಾನ; ಹೆಚ್ಚು ರಂಜನೆ, ಭಾವನಾತ್ಮಕತೆ–ಈ ವಿಷಯದಲ್ಲಿ ರಾಜಿಯಾಗಿ, ಸಿನಿಮಾ ವೈಯಾಕರಣಿಗಳಾಗದೇ ಹೋದರೆ ಇದೊಂದು ‘ಟೈಂಪಾಸ್ ಸಿನಿಮಾ’ ಅಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT