ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಂಡೆನಾಮ: ಲಾಕ್‌ಡೌನ್‌ ಕಾಲದ ಮಾನವೀಯತೆ ಪಾಠ

Last Updated 15 ಏಪ್ರಿಲ್ 2023, 19:31 IST
ಅಕ್ಷರ ಗಾತ್ರ

ಚಿತ್ರ: ಉಂಡೆನಾಮ
ನಿರ್ದೇಶನ: ಕೆ.ಎಲ್‌.ರಾಜಶೇಖರ್‌
ತಾರಾಗಣ: ಕೋಮಲ್‌, ಹರೀಶ್‌ ರಾಜ್‌, ತನಿಷಾ ಕುಪ್ಪಂಡ, ಧನ್ಯಾ ಬಾಲಕೃಷ್ಣ, ತಬಲಾ ನಾಣಿ, ಅಪೂರ್ವಶ್ರೀ
ಸಂಗೀತ: ಶ್ರೀಧರ್‌ ವಿ. ಸಂಭ್ರಮ್‌. ಛಾಯಾಗ್ರಹಣ: ನವೀನ್‌
ನಿರ್ಮಾಣ: ಟಿ.ಆರ್‌. ಚಂದ್ರಶೇಖರ್‌, ನಂದಕಿಶೋರ್‌ ಸಿ. (ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌)

ಪ್ರಸ್ಥ ಅಂದರೇನು ಎಂಬ ಕುತೂಹಲ ತಣಿಸಿಕೊಳ್ಳಲು ಅಡ್ಡದಾರಿಯಲ್ಲಿ ಪ್ರಯತ್ನಿಸುವ ಯುವಕ, ಅಚಾನಕ್ಕಾಗಿ ಯುವತಿಯ ಸಾವಿನ ಪ್ರಕರಣದೊಳಗೆ ಸಿಲುಕಿ ಅದರಿಂದ ಹೊರಬರುವುದು ಹೇಗೆ ಎಂಬುದನ್ನು ಮೌಲ್ಯ ಸೇರಿಸಿ ಹೇಳಿದ್ದಾರೆ ನಾಯಕ ಕೋಮಲ್‌ ಹಾಗೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕೆ.ಎಲ್‌. ರಾಜಶೇಖರ್‌.

ಮಗನ ಪ್ರಸ್ಥ ನಡೆದರೆ ತಾನು ಸಾಯುತ್ತೇನೆ ಎಂದು ಜ್ಯೋತಿಷಿಯ ಮಾತು ಕೇಳಿ ಮದುವೆಯನ್ನೇ ಮಾಡದಿರಲು ತಂತ್ರ ಹೂಡುವ ಅಪ್ಪ (ತಬಲಾನಾಣಿ), ಯಾವಾಗಲೂ ಭಯಗ್ರಸ್ತ ಮನಸ್ಸಿನ ಅಪಶಕುನಗಳನ್ನೇ ನುಡಿಯುವ ಅಮ್ಮ(ಅಪೂರ್ವಶ್ರೀ) ಕೊನೆಗೂ ಅಡ್ಡದಾರಿ ಹಿಡಿದು ಕಾಲ್‌ಗರ್ಲ್‌ ಕರೆಸಿಕೊಳ್ಳುವ ನಾಯಕ. ಮಂಚದಲ್ಲಿ ಇದ್ದಕ್ಕಿದ್ದಂತೆಯೇ ಸಾಯುವ ಕಾಲ್‌ಗರ್ಲ್‌ (ತನಿಷಾ ಕುಪ್ಪಂಡ). ಅವಳ ಮೃತದೇಹ ಹೊರಹಾಕಲು ಅಡ್ಡಿಯಾಗುವ ಕೋವಿಡ್‌ ಕಾಲದ ಲಾಕ್‌ಡೌನ್‌, ಸೀಲ್‌ಡೌನ್‌ ಸನ್ನಿವೇಶಗಳು... ಕಾಲ್‌ಗರ್ಲ್‌ ಜೊತೆ ಕಾಲ ಕಳೆಯಲೆಂದು ತಂದ ಎರಡು ಸಾವಿರ ರೂಪಾಯಿಯ ಕಾಂಡೋಮ್‌ ಬಾಕ್ಸ್‌ ಏನಾಯಿತು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ಮೇಲಿನ ವಿವರಣೆ ನೋಡಿ ಇದೇನು ಪೋಲಿ ಚಿತ್ರವೇ ಎಂದು ಅಂದುಕೊಳ್ಳಬೇಕಿಲ್ಲ. ಎಲ್ಲವೂ ತಿಳಿಹಾಸ್ಯದ ಲೇಪದಲ್ಲಿ ನೋಡಿಸಿಕೊಂಡು ಹೋಗುತ್ತವೆ. ಕೋಮಲ್‌ ಮತ್ತು ಹರೀಶ್‌ ರಾಜ್‌ ಇಬ್ಬರೂ ಅಭಿನಯದಲ್ಲಿ ಒಬ್ಬರನ್ನೊಬ್ಬರು ಮೀರಿಸಿದ್ದಾರೆ. ಚಿತ್ರದ ಉತ್ತರಾರ್ಧವಂತೂ ಪ್ರೇಕ್ಷಕರನ್ನು ಮೌನವಾಗಿಸುತ್ತದೆ. ಕಾಲ್‌ಗರ್ಲ್‌ ಆದರೇನು, ಆಕೆಯೂ ಮನುಷ್ಯಳೇ. ಅವಳಿಗಾಗಿಯೂ ಕಾಯುವ ಜೀವವೊಂದಿದೆ. ಆ ಜೀವದ ಸಂಕಟಕ್ಕೆ ಮಿಡಿಯುವ ಬಗೆಯನ್ನು ಹೇಳುತ್ತಾ ಮಾನವೀಯ ಮೌಲ್ಯಗಳ ಪಾಠವನ್ನು ಹೆಚ್ಚು ಮಾತುಗಳಿಲ್ಲದೇ ದೃಶ್ಯಗಳಲ್ಲಿ ಈ ಚಿತ್ರ ಕಟ್ಟಿಕೊಟ್ಟಿದೆ.

ಸದಾ ಎದುರುಮನೆಯನ್ನೇ ಕಪ್ಪು ಕನ್ನಡಕಗಳಿಂದ ನೋಡುತ್ತಲೇ ಇರುವ ಬ್ಯಾಂಕ್‌ ಜನಾರ್ದನ್‌ ನಟನೆ, ಸಂಭಾಷಣೆ ಖುಷಿಕೊಡುತ್ತವೆ. ಪಕ್ಕದ ಮನೆ ಆಂಟಿಯರು, ಅವರಲ್ಲೊಬ್ಬಳನ್ನು ಪಟಾಯಿಸುವ ನಾಯಕನ ಗೆಳೆಯ, ಪೊಲೀಸ್‌ ಕಾನ್‌ಸ್ಟೆಬಲ್‌, ಮನೆಯೊಳಗಾಡುವ ತುಂಟ ಮಕ್ಕಳು, ಕೊನೆಗೂ ನಾಯಕನಿಗೆ ಮೊದಲು ನೋಡಿದ ಹುಡುಗಿಯೇ ಒಲಿಯುವುದು ಇವೆಲ್ಲಾ ಚಿತ್ರದ ಲವಲವಿಕೆಗೆ ಪೂರಕವಾಗಿವೆ.

ಚಿತ್ರ ತೆರೆದುಕೊಳ್ಳುವುದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ. ನಾಯಕ ಕೋಮಲ್‌ ಕೈಮುಗಿದು ನಿಲ್ಲುವ ದೃಶ್ಯವೇ ಸುಮಾರು 3ರಿಂದ 5 ಸೆಕೆಂಡ್‌ ಇವೆ. ಅವರು ಕೈಮುಗಿದ ನೋಟ ಪ್ರೇಕ್ಷಕರನ್ನು ವಿನಮ್ರವಾಗಿ ಭಿನ್ನವಿಸಿದಂತೆ ಫ್ರೇಮ್‌ನಲ್ಲಿ ಮೂಡಿಬಂದಿದೆ. ಕೋಮಲ್‌ ಅವರ ಸೆಕೆಂಡ್‌ ಇನ್ನಿಂಗ್ಸ್‌ಗೆ ಈ ಚಿತ್ರ ಉತ್ತಮ ಆರಂಭ ಕೊಟ್ಟಿದೆ.

ಹಾಡುಗಳು ಚೆನ್ನಾಗಿವೆ. ತಾಯಿ ಮಗುವಿನ ಭಾವ–ಬಂಧದ ಭಾವುಕ ಹಾಡು ಚಿತ್ರಮಂದಿರವನ್ನು ಮೌನವಾಗಿಸುತ್ತದೆ. ಹಿನ್ನೆಲೆ ಸಂಗೀತ ಹಿತಮಿತವಾಗಿದೆ. ಛಾಯಾಗ್ರಹಣವೂ ಉತ್ತಮವಾಗಿದೆ.

ಒಂದು ಮನೆ, ವಠಾರ, ಲಾಕ್‌ಡೌನ್‌ನ ವಿಹಂಗಮ ನೋಟ, ಕಚೇರಿ ಇವಿಷ್ಟೇ ಸನ್ನಿವೇಶಗಳಲ್ಲಿ ಎರಡೂವರೆ ಗಂಟೆಗಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳಲಾಗಿದೆ. ಒಂದಿಷ್ಟು ತಿರುಳು, ಸಂದೇಶಕ್ಕೆ ಹಾಸ್ಯದ ಲೇಪ ಬಯಸುವವರಿಗೆ ಇಷ್ಟವಾಗುವ ಚಿತ್ರವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT