ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ಕುತೂಹಲ ಮೂಡಿಸುವ ಕ್ರೈಂ ಥ್ರಿಲ್ಲರ್‌ ‘ಯದಾ ಯದಾ ಹಿ’

ವಸಿಷ್ಠ ಸಿಂಹ, ದಿಗಂತ್‌, ಹರಿಪ್ರಿಯಾ ಅಭಿನಯದ ಚಿತ್ರ
Published 3 ಜೂನ್ 2023, 6:57 IST
Last Updated 3 ಜೂನ್ 2023, 6:57 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ‘ಯದಾ ಯದಾ ಹಿ’
ಜೂನ್2
3/5
ನಿರ್ದೇಶಕ:ಅಶೋಕ್‌ ತೇಜ
ಪಾತ್ರವರ್ಗ:ದಿಗಂತ್‌, ಹರಿಪ್ರಿಯಾ, ವಸಿಷ್ಠ ಸಿಂಹ, ಅವಿನಾಶ್‌ ಹಾಗೂ ಇತರರು
ಸಂಗೀತ ನಿರ್ದೇಶಕ:ಹರ್ಷ ರಾಜ್‌ವರ್ಧನ್‌

ಕ್ರೈಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ‘ಯದಾ ಯದಾ ಹಿ’ ಸಿನಿಮಾ ಪ್ರಾರಂಭವಾಗುವುದೇ ಮುನ್ನಾರ್‌ನಲ್ಲಿ ನಡೆಯುವ ಒಂದು ಕೊಲೆಯಿಂದ. ಉದ್ಯಮಿ ಪ್ರಿಯಾಂಕ ಶೆಟ್ಟಿಯಾಗಿ ಕಾಣಿಸಿಕೊಂಡಿರುವ ನಟಿ ಹರಿಪ್ರಿಯಾ, ತನ್ನ ಪ್ರೇಮಿಯಾಗಿರುವ ಪೊಲೀಸ್‌ ಅಧಿಕಾರಿ ಆದಿತ್ಯ ವರ್ಮಾನನ್ನು(ವಸಿಷ್ಠ ಸಿಂಹ) ಕೊಲೆ ಮಾಡುತ್ತಾಳೆ. ಅತ್ಯಾಚಾರ ನಡೆಸಲು ಯತ್ನಿಸಿದ ಪೊಲೀಸ್‌ ಅಧಿಕಾರಿಯ ಕೊಲೆ ಎಂದು ಸುದ್ದಿಯಾಗುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ.

ತೆಲುಗಿನ ‘ಎವರು’ ಸಿನಿಮಾ ನೋಡಿದವರಿಗೆ ಕಥೆಯಾಗಿ ಅಷ್ಟೆನೂ ಕುತೂಹಲ ಉಳಿಯುವುದಿಲ್ಲ. ಯಾಕೆಂದರೆ ಮೂಲ ಕಥೆಯಲ್ಲಿ ಹೆಚ್ಚಿನ ಬದಲಾವಣೆ ಮಾಡಿಕೊಂಡಿಲ್ಲ. ಮೊದಲ ಸಲ ನೋಡುವವರಿಗೆ ಕಥೆ ಕುತೂಹಲ ಮೂಡಿಸುತ್ತದೆ. 

ಚಿತ್ರದ ಬಹುಪಾಲು ಕಥೆ ನಡೆಯುವುದು ಮುನ್ನಾರ್‌ನಲ್ಲಿ. ಅದನ್ನು ಬಿಂಬಿಸಲು ಅಲ್ಲಲ್ಲಿ ಮಲೆಯಾಳಂ ಬಳಸಲಾಗಿದೆ. ಆದಾಗ್ಯೂ ಆ ಠಾಣೆಗೆ ಬರುವ ಪ್ರಕರಣಗಳೆಲ್ಲ ಕನ್ನಡಿಗರದ್ದೇ ಆಗಿರುವುದು ಪ್ರಶ್ನೆ ಮೂಡಿಸುವಂತಿದೆ.

ಕೊಲೆಯ ತನಿಖೆಗೆಂದು ಬರುವ ಎಸ್‌ಐ ಅಶೋಕ್‌ ತೇಜ ಪಾತ್ರದಲ್ಲಿ ದಿಗಂತ್‌ ಮೊದಲ ಸಲ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದ ಬಹುಪಾಲು ಕಥೆ ನಟಿ ಹರಿಪ್ರಿಯಾ ಹಾಗೂ ‌ದಿಗಂತ್‌ ಅವರನ್ನೇ ಕೇಂದ್ರೀಕರಿಸಿಕೊಂಡು ಸಾಗುತ್ತದೆ. ಲಂಚ ತಿನ್ನುವ ಅಧಿಕಾರಿಯಾಗಿರುವ ದಿಗಂತ್‌ ಪ್ರೇಕ್ಷಕರನ್ನು ನಗಿಸುವಂತಹ ನಟನೆ ಮಾಡಿದ್ದಾರೆ. ಆದರೆ ಪೊಲೀಸ್‌ ಅಧಿಕಾರಿಗಿರಬೇಕಾದ ಒರಟುತನ, ಗಡಸು ಇಲ್ಲದೆ ಪಾತ್ರಕ್ಕೆ ಸ್ವಲ್ಪ ಹಿನ್ನಡೆ ಎನಿಸುತ್ತದೆ. ಹರಿಪ್ರಿಯಾ ಪಾತ್ರಕ್ಕೆ ಹಲವು ಆಯಾಮಗಳಿದ್ದು ಸನ್ನಿವೇಶಗಳಿಗೆ ತಕ್ಕಂತೆ ಅಭಿನಯಿಸಿದ್ದಾರೆ.

ಪೊಲೀಸ್‌ ಅಧಿಕಾರಿಯಾಗಿದ್ದರೂ ಒಂದು ರೀತಿ ಖಳನಟನ ಪಾತ್ರದಲ್ಲಿ ನಟ ವಸಿಷ್ಠ ಸಿಂಹ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಂಜು ಪಾವಗಡ ಹಾಸ್ಯ ಸನ್ನಿವೇಶಗಳು ಕ್ರೈಂ ಥ್ರಿಲ್ಲರ್‌ ಕಥೆಗೆ ಅಗತ್ಯವಿರಲಿಲ್ಲ ಎನ್ನಿಸುತ್ತದೆ. ಕಥೆ ನಿರೂಪಣೆಯನ್ನು ಇನ್ನೊಂದಷ್ಟು ಕುತೂಹಲಭರಿತವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಹರ್ಷ ರಾಜ್‌ವರ್ಧನ್‌ ಅವರ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ತಕ್ಕಂತಿದೆ. ಆದರೆ ಹಾಡುಗಳು ಗುನುಗುವಂತಿಲ್ಲ. ಛಾಯಾಗ್ರಹಣ ಉತ್ತಮವಾಗಿದೆ. 

ವಿಮರ್ಶೆ–ವಿನಾಯಕ ಕೆ.ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT