ಭಾನುವಾರ, ಏಪ್ರಿಲ್ 18, 2021
24 °C
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹಣ ದುರುಪಯೋಗದ ಆರೋಪ

ಚಲನಚಿತ್ರ ವಾಣಿಜ್ಯ ಮಂಡಳಿ: ಆಡಳಿತಾಧಿಕಾರಿ ನೇಮಕಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುದ್ಧ ಬೈಲಾ ಉಲ್ಲಂಘನೆ, ಹಣ ದುರುಪಯೋಗ, ನಿಯಮ ಬಾಹಿರ ಚಟುವಟಿಕೆಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಡಳಿಯ ಕಾರ್ಯಕಾರಿ ಸಮಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಬೆಂಗಳೂರು ನಗರ ಜಿಲ್ಲೆ 4ನೇ ವಲಯದ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಶಿಫಾರಸು ಮಾಡಿದ್ದಾರೆ.

‘ಆಡಳಿತಾಧಿಕಾರಿ ನೇಮಕವಾಗುವವರೆಗೆ ಕಚೇರಿ ವೆಚ್ಚಗಳು, ವೇತನ, ಭತ್ಯೆ ಹೊರತುಪಡಿಸಿ ಉಳಿದ ಯಾವುದೇ ಹಣಕಾಸು ಪಾವತಿ ಇದ್ದರೆ ಈ ಅಧಿಕಾರಿಯ ಅನುಮೋದನೆ ಇಲ್ಲದೆ ವ್ಯವಹಾರ ಮಾಡುವಂತಿಲ್ಲ’ ಎಂದು ಆದೇಶಿಸಿ, ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆಡಳಿತಾಧಿಕಾರಿ ನೇಮಕದ ಬಗ್ಗೆ ನೋಂದಣಾಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದಾರೆ.

‘20 ಆರೋಪಗಳು ಬಹಳ ಗಂಭೀರವಾಗಿದ್ದು, ಇವುಗಳನ್ನು ಮೊದಲು ಸರಿಪಡಿಸಿ ಕಾನೂನು ಕ್ರಮ ಕೈಗೊಂಡು ನಂತರ ಕಾರ್ಯಕಾರಿ ಸಮಿತಿಗೆ ಚುನಾವಣೆ ಮಾಡಬೇಕು. ನೂತನ ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡುವವರೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು’ ಎಂದು ಶಿಫಾರಸು ಮಾಡಲಾಗಿದೆ.

ಪ್ರತಿ ವರ್ಷ ಚುನಾವಣೆಯನ್ನು 3–6 ತಿಂಗಳು ಮುಂದೂಡಿಕೆ ಮಾಡುವುದು, ಚಾಲ್ತಿಯಲ್ಲಿ ಇರದ ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಟರು ನಿರ್ಮಾಪಕರ ಸಂಘಕ್ಕೆ ₹1 ಕೋಟಿ ಸಾಲ ನೀಡಿರುವುದು, ಸಚಿವರಾದ ಕೆ.ಗೋಪಾಲಯ್ಯ ಹಾಗೂ ಬಿ.ಸಿ.ಪಾಟೀಲ್‌ ಅವರು ಕೊರೊನಾ ಸಂದರ್ಭದಲ್ಲಿ ನೀಡಿದ್ದ ಆಹಾರ ಸಾಮಗ್ರಿಗಳ ದುರುಪಯೋಗ ಆಗಿರುವುದು, ಸಣ್ಣಪುಟ್ಟ ಕಾಮಗಾರಿಗೆ ₹30 ಲಕ್ಷಕ್ಕೂ ಮೇಲ್ಪಟ್ಟು ಖರ್ಚು ಮಾಡಿ ಸಂಘದ ಹಣ ದುರುಪಯೋಗ ಮಾಡಿರುವುದು, ವಜ್ರ ಮಹೋತ್ಸವ ಸಂದರ್ಭದಲ್ಲಿ ಬೆಳ್ಳಿ ತಟ್ಟೆ ಹಂಚದಿರುವುದು, ಕಳಸಾ ಬಂಡೂರಿ ಹೋರಾಟದ ಹೆಸರಿನಲ್ಲಿ ಸುಳ್ಳು ಲೆಕ್ಕ ನೀಡಿ ಅನಾವಶ್ಯಕ ₹40 ಲಕ್ಷ ಖರ್ಚು ತೋರಿಸಿರುವುದು ಮಂಡಳಿ ವಿರುದ್ಧದ ಆರೋಪ ಪಟ್ಟಿಯಲ್ಲಿ ಸೇರಿವೆ.

ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಮಗ ಅನುಷ್‌ ಸದಸ್ಯನಾಗದೆ, ನಿರ್ಮಾಪಕರಾಗದೆ ಸಂಘದ ಪ್ರಾಥಮಿಕ ಸದಸ್ಯತ್ವ ಹೊಂದದೆ ಏಕಾಏಕಿ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿರುವುದು, ಕಾನೂನು ಬಾಹಿರವಾಗಿ, ಸಂಘದ ಬೈಲಾವನ್ನು ತಮಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿ, ಸಿಸಿಐ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ವೈಯಕ್ತಿಕವಾಗಿ ಸದಸ್ಯರಿಗೆ ಹಾಕಿದ ದಂಡ ₹2.50 ಕೋಟಿಯನ್ನು ಸಂಸ್ಥೆಯಿಂದ ಪಾವತಿಸಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಸಹ ಮಂಡಳಿ ಮೇಲಿನ ಆರೋಪದಲ್ಲಿ ಸೇರಿವೆ. ಈ ಕುರಿತು ತನಿಖೆ ನಡೆಸುವಂತೆ ಕೃಷ್ಣೇಗೌಡ ಮತ್ತು ಪ್ರದೀಪ್‌ ಎಂಬುವವರು ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗೆ ದೂರು ಸಲ್ಲಿಸಿದ್ದರು.

ಇದೊಂದು ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕಾರ್ಯಕಾರಿ ಸಮಿತಿಯು ಪಾರದರ್ಶಕ ಆಡಳಿತ ನೀಡುವಲ್ಲಿ ವಿಫಲವಾಗಿರುವ ಕಾರಣ ಮಂಡಳಿಗೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ (ಎ)ರನ್ವಯ ಆಡಳಿತಾಧಿಕಾರಿ ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡುವುದು ಅನಿವಾರ್ಯ ಎಂಬುದಾಗಿ ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದು ನೋಂದಣಾಧಿಕಾರಿ ಉಲ್ಲೇಖಿಸಿದ್ದಾರೆ.

ಮಾಹಿತಿ ಇಲ್ಲ: ‘ಆಡಳಿತಾಧಿಕಾರಿ ನೇಮಕದ ಶಿಫಾರಸು ಬಗ್ಗೆ ಆದೇಶ ಇನ್ನೂ ನನಗೆ ದೊರೆತಿಲ್ಲ. ಹೀಗಾಗಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಶುಕ್ರವಾರ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡುತ್ತೇನೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್‌ ‘ಪ್ರಜಾವಾಣಿ’ಗೆ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು