ಮಂಗಳವಾರ, ಆಗಸ್ಟ್ 16, 2022
21 °C
ಕಂಬನಿ ಮಿಡಿದ ಭಾರತೀಯ ಕಲಾಲೋಕ

ಖ್ಯಾತ ನೃತ್ಯಪಟು ಅಸ್ತಾದ್ ದೇಬೂ ನಿಧನ

ಪಿಟಿಐ 26 May, 2017 Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತೀಯ ಮತ್ತು ಪಾಶ್ಚಾತ್ಯ ನೃತ್ಯ ತಂತ್ರಗಳನ್ನು ಸಂಯೋಜಿಸುತ್ತಾ, ಹೊಸ ರೀತಿಯ ನೃತ್ಯ ಪ್ರಕಾರಗಳನ್ನು ಸೃಷ್ಟಿಸುತ್ತಿದ್ದ ಸಮಕಾಲೀನ ಖ್ಯಾತ ನೃತ್ಯಗಾರ ಅಸ್ತಾದ್ ದೇಬೂ (73) ಗುರುವಾರ ಮುಂಜಾನೆ ತಮ್ಮ ನಿವಾಸದಲ್ಲಿ  ನಿಧನರಾಗಿದ್ದಾರೆ.

‘ಅಸ್ತಾದ್‌ ಅವರು ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಿಗ್ಗೆ 11 ಗಂಟೆಗೆ ಮುಂಬೈನ ವರ್ಲಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು‘ ಎಂದು ಅಸ್ತಾದ ಅವರ ದೀರ್ಘಕಾಲದ ಸ್ನೇಹಿತ, ಪತ್ರಕರ್ತೆ ಪದ್ಮಾ ಆಳ್ವಾ ತಿಳಿಸಿದ್ದಾರೆ.

‘ಅಸ್ತಾದ್ ಅವರ ನಿಧನದಿಂದಾಗಿ ಭಾರತ, ಸಾಂಸ್ಕೃತಿಕ ಲೋಕದ ನಿಧಿಯೊಂದನ್ನು ಕಳೆದುಕೊಂಡಂ ತಾಗಿದೆ‘ ಎಂದು ಕಲಾವಿದರು ಕಂಬನಿ ಮಿಡಿದಿದ್ದಾರೆ.

1947ರ ಜುಲೈ 13ರಂದು ಗುಜರಾತ್‌ ನವಸಿರಿ ನಗರದಲ್ಲಿ ಜನಸಿದ ಅಸ್ತಾದ್‌, ಆರಂಭದಲ್ಲಿ ನೃತ್ಯಗುರು ಪ್ರಹ್ಲಾದ್ ದಾಸ್ ಅವರಿಂದ ಕಥಕ್‌ ನೃತ್ಯ ಕಲಿತರು ನಂತರ ಗುರು ಇ.ಕೆ.ಪಣ್ಣಿಕ್ಕರ್ ಅವರ ಬಳಿ ಕಥಕಲಿ ನೃತ್ಯ ಅಭ್ಯಾಸ ಮಾಡಿದರು.

ನೃತ್ಯ ಬದುಕಿನಲ್ಲಿ ಅರ್ಧ ಶತಮಾನವನ್ನು ಕಳೆದ ಅಸ್ತಾದ್‌, ದೇಶ– ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 70ಕ್ಕೂ ಹೆಚ್ಚು ದೇಶಗಳಲ್ಲಿ ಏಕವ್ಯಕ್ತಿ ಹಾಗೂ ಸಮೂಹ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾದ ಕಥಕ್‌ ಮತ್ತು ಕಥಕಲಿಯನ್ನು ಸಂಯೋಚಿಸಿ, ಮತ್ತೊಂದು ರೀತಿ ವಿಶಿಷ್ಟ ನೃತ್ಯ ಪ್ರಕಾರವೊಂದನ್ನು ರಚಿಸಿದ್ದ ಅಸ್ತಾದ್‌, ಈ ಹೊಸ ನೃತ್ಯ ಪ್ರಕಾರಗಳ ಮೂಲಕ ತರಬೇತಿ ನೀಡುತ್ತಿದ್ದರು. 

ದೇಬೂ ಅವರ ನವೀನ ಶೈಲಿಯ ಭಾರತೀಯ ನೃತ್ಯವು 1970 ಮತ್ತು 80 ರ ದಶಕಗಳಲ್ಲಿ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ್ದವು.

ದತ್ತಿ ಸೇವೆಗಳಿಗೆ ಖ್ಯಾತಿಯಾದ ಅಸ್ತಾದ್ ದೇಬೂ, ಎರಡು ದಶಕಗಳ ಕಾಲ ಭಾರತ ಮತ್ತು ವಿದೇಶಗಳಲ್ಲಿರುವ ಕಿವಿ ಕೇಳದ ಮಕ್ಕಳೊಂದಿಗೆ ಕೆಲಸ ಮಾಡಿದ್ದಾರೆ. ಅಂಗವಿಕಲರು ಸೇರಿದಂತೆ ಹಲವು ದುರ್ಬಲ ವರ್ಗದವರಿಗೆ ನೃತ್ಯ ತರಬೇತಿ ನೀಡುವುದಕ್ಕಾಗಿ 2002ರಲ್ಲಿ ಅಸ್ತಾದ್‌ ದೇಬೂ ಡಾನ್ಸ್‌ ಫೌಂಡೇಷನ್‌ ಸ್ಥಾಪಿಸಿದ್ದರು.

ಅಸ್ತಾದ್ ಅವರು ನೃತ್ಯ ಪ್ರದರ್ಶನದ ಜತೆಗೆ, ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ, ವಿಶಾಲ್ ಭಾರದ್ವಾಜ್ ಅವರೊಂದಿಗೆ ಸಿನಿಮಾಗಳಲ್ಲಿ ಹಾಗೂ ಖ್ಯಾತ ಚಿತ್ರ ಕಲಾವಿದ ಎಂ.ಎಫ್ ಹುಸೇನ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

‘ಅವರೊಬ್ಬ ಅದ್ವಿತೀಯ ನೃತ್ಯಗಾರ. ಮರೆಯಲಾಗದ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ವಿಶಿಷ್ಟ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ನೃತ್ಯ ಕಲೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಈ ಪ್ರೀತಿಯಿಂದಾಗಿ ಅವರಿಗೆ ಸಾವಿರಾರು ಸ್ನೇಹಿತರು, ಅಭಿಮಾನಿ ಬಳಗವನ್ನು ಹೊಂದಿದ್ದರು‘ ಎಂದು ಕುಟುಂಬದವರು ಅಸ್ತಾದ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಸ್ತಾದ್ ಅವರ ನೃತ್ಯ ಕ್ಷೇತ್ರದಲ್ಲಿನ ಸೇವೆ ಮತ್ತು ಸಾಧನೆಯನ್ನು ಗುರುತಿಸಿ 1995 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2007ರಲ್ಲಿ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ‘ಪದ್ಮಶ್ರೀ‘ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು