ಭಾನುವಾರ, ಮೇ 22, 2022
21 °C

ಸಾಮರಸ್ಯದ ತುರ್ತು ‘ರಾಚುವ’ ಅಲೈದೇವ್ರು

ದಯಾನಂದ Updated:

ಅಕ್ಷರ ಗಾತ್ರ : | |

Prajavani

ತೊಂಬತ್ತರ ದಶಕದಿಂದೀಚೆಗೆ ಭಾರತದ ಹಳ್ಳಿಗಳು ಹಲವು ಆಯಾಮಗಳಲ್ಲಿ ಬದಲಾವಣೆ ಕಂಡಿವೆ. ಪಕ್ಷ ರಾಜಕಾರಣ ಹಳ್ಳಿಗಳ ಅರ್ಧ ಆತ್ಮವನ್ನು ಕೊಂದಿದ್ದರೆ, ಧರ್ಮ ರಾಜಕಾರಣ ಉಳಿದರ್ಧ ಆತ್ಮವನ್ನು ಹಿಂಡುತ್ತಾ ಬಂದಿದೆ. 1992ರ ಡಿಸೆಂಬರ್ ತಿಂಗಳ ನಂತರದಲ್ಲಂತೂ ದೇಶ ಹಿಂದೂ ಮುಸ್ಲಿಂ ಎಂಬ ಎರಡು ಬೇರೆ ಬೇರೆ ಹಳಿಗಳ ಮೇಲೆಯೇ ಸಾಗುತ್ತಾ ಬಂದಿದೆ. ಹಾಗೆಂದು ಈ ದೇಶದ ಹಳ್ಳಿಗಳು ಹಿಂದೆ ಸಮಾನತೆಯನ್ನು ಹಾಸಿ ಹೊದ್ದಿದ್ದವೆಂದೇನೂ ಇಲ್ಲ. ಆದರೆ, ಗ್ರಾಮೀಣ ಭಾರತದ ಈಗಿನ ಸ್ಥಿತಿಯನ್ನು ನೋಡಿದರೆ ಧಾರ್ಮಿಕ ಸಾಮರಸ್ಯ ಎಂಬುದು ಬರಿಯ ಆದರ್ಶದ ನೆಲೆಗಷ್ಟೇ ಉಳಿದುಬಿಡುತ್ತದೆಯೇ ಎಂಬ ಆತಂಕ ಕವಿಯುತ್ತದೆ.

ಹಿಂದೂ ಮುಸ್ಲಿಮರು ಒಂದೆಡೆ ಹೆಚ್ಚಾಗಿರುವ ಯಾವುದೇ ಪ್ರದೇಶಗಳೂ ಚುನಾವಣೆಯ ಸಂದರ್ಭದಲ್ಲಷ್ಟೇ ಅಲ್ಲ, ವರ್ಷದ 365 ದಿನಗಳೂ ‘ಸೂಕ್ಷ್ಮ ಪ್ರದೇಶ’ಗಳಾಗಿ ರೂಪಾಂತರವಾಗಿವೆ, ಆಗುತ್ತಿವೆ. ಇಂಥ ವಿಷಮ ಸಂದರ್ಭದಲ್ಲಿ ಮನುಷ್ಯ ಮನುಷ್ಯನನ್ನು ಅರಿತು ಬದುಕಬೇಕೆಂಬ ಸಾಮರಸ್ಯದ ತುರ್ತನ್ನು ನೇರಾನೇರ ಹೇಳುವ 'ಅಲೈದೇವ್ರು' (ರಚನೆ: ಹನುಮಂತ ಹಾಲಿಗೇರಿ / ನಿರ್ದೇಶನ: ಸಿದ್ಧರಾಮ ಕೊಪ್ಪರ) ನಾಟಕ ಇತ್ತೀಚೆಗೆ ಬೆಂಗಳೂರಿನ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ಮೊದಲ ಪ್ರಯೋಗ ಕಂಡಿತು.

ಹಳ್ಳಿಗಳಲ್ಲಿ ದರ್ಗಾಕ್ಕೆ ಸಕ್ಕರೆ ಊದಿಸುತ್ತಿದ್ದ, ಊರಮ್ಮನ ಕೊಂಡಕ್ಕೆ ಉಪ್ಪು, ಅರಳು ಚೆಲ್ಲುತ್ತಿದ್ದ, ಪರ ಮಾಡಲು ಕುರುಜು ಕಟ್ಟುತ್ತಿದ್ದ ಕೈಗಳು, ಅಲೈಹಬ್ಬಕ್ಕೆ ಹೆಜ್ಜೆ ಹಾಕುತ್ತಿದ್ದ ಕಾಲುಗಳು ನಿಧಾನವಾಗಿ ಧರ್ಮದ ಬಣ್ಣ ಬಳಿದುಕೊಳ್ಳತೊಡಗಿವೆ. ಹುಸೇನವ್ವ, ತಾಯಿರಕ್ಕ, ಮೋದ್ಲಣ್ಣ, ತಾತಯ್ಯ, ಬಾಬಣ್ಣ, ಹುಸೇನಪ್ಪ, ಬಾಬು ಪಾಟೀಲ, ಸಾಯಿಬಣ್ಣ ಎಂಬ ಹೆಸರುಗಳು ನಮ್ಮ ನಡುವಿಂದ ದಿನದಿಂದ ದಿನಕ್ಕೆ ಮಾಯವಾಗುತ್ತಿವೆ. ಇದು ಯಾಕೆ ಹೀಗಾಗುತ್ತಿದೆ, ಇದು ಹೀಗೇ ಆಗುತ್ತಾ ಹೋದರೆ ಮುಂದೆ ಬಡಿದಾಡಿಕೊಳ್ಳಲೂ ಜನರು ಉಳಿಯುವುದಿಲ್ಲ ಎಂಬುದನ್ನು ನೇರವಾಗಿ ಹೇಳುವ ಮೂಲಕ ಅಲೈದೇವ್ರು ನಾಟಕ ದೇಶದ ಈ ಹೊತ್ತಿನ ಪ್ರಮುಖ ಸಮಸ್ಯೆಯನ್ನು ದೃಶ್ಯಗಳ ಮೂಲಕ ರಪರಪನೆ ರಾಚುತ್ತಾ ಹೋಗುತ್ತದೆ.

ಮೊಹರಂ ಕುಣಿತ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈಗಲೂ ರೂಢಿಯಲ್ಲಿರುವ ಸಾಮರಸ್ಯದ ಆಚರಣೆ. ಕರ್ನಾಟಕದಲ್ಲಿ ಸೂಫಿ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲೆಲ್ಲ ಮೊಹರಂ ಕುಣಿತದ ಆಚರಣೆ ಇಂದಿಗೂ ಇದೆ. ಆದರೆ, ಈ ಆಚರಣೆಗೇ ಕುತ್ತು ತರುವ ಯತ್ನ ನಡೆಸುವ ಮೂಲಕ ಎರಡೂ ಧರ್ಮಗಳ ಧಾರ್ಮಿಕ ಮೂಲಭೂತವಾದಿಗಳು ಜನಸಾಮಾನ್ಯರ ನಡುವಿನ ಸಾಮರಸ್ಯ ಕದಡುವ ಸಂಚಿನ ಕತೆ ಈ ನಾಟಕದ ಎಳೆ. ಆದರೆ, ಎಚ್ಚೆತ್ತಿರುವ ಜನರು ಇರುವ ತನಕವೂ ಇಂಥ ಯತ್ನಗಳು ಫಲ ಕೊಡುವುದಿಲ್ಲ ಎಂಬ ಸುಖಾಂತ್ಯದೊಂದಿಗೆ ನಾಟಕ ಮುಗಿಯುತ್ತದೆ.

ನಾಟಕ ಎಲ್ಲೂ ಒಂದು ಧರ್ಮದ ಬಗ್ಗೆ ಮಾತ್ರ ಬೊಟ್ಟು ಮಾಡಿ ತೋರುವುದಿಲ್ಲ. ಇಂದು ಸಾಮರಸ್ಯ ಕದಡುತ್ತಿದೆ ಎಂದರೆ ಅದಕ್ಕೆ ಯಾವ ಯಾವ ಕಾರಣಗಳು ಹಿಂದೆ ಕೆಲಸ ಮಾಡುತ್ತಿವೆ ಎಂಬುದನ್ನು ಸಾಧ್ಯವಿದ್ದಷ್ಟೂ ಮಟ್ಟಿಗೆ ಸ್ಪಷ್ಟಪಡಿಸುವ ಪ್ರಯತ್ನ ನಾಟಕದಲ್ಲಿ ನಡೆದಿದೆ. ಕುಣಿತ, ಹಾಡು, ಪ್ರೇಮ, ಪಿತೂರಿಯ ಅಂಶಗಳನ್ನಿಟ್ಟುಕೊಂಡು ನಾಟಕ ಕಟ್ಟಲಾಗಿದೆ. ಧರ್ಮದ ಹೆಸರಲ್ಲಿ ಮನಸ್ಸುಗಳನ್ನು ಕೆಡಿಸಿಕೊಂಡು ಪ್ರಕ್ಷುಬ್ಧ ಸ್ಥಿತಿಯಲ್ಲಿ ಜೀವನ ಸವೆಸುವುದಕ್ಕಿಂತ ಸಾಮರಸ್ಯದ ತಂಪಿನಲ್ಲಿ ಬದುಕು ನಡೆಸುವುದು ಒಳಿತು ಎಂಬ ಸಂದೇಶವನ್ನು ನಾಟಕ ನೇರವಾಗಿ ಹೇಳುತ್ತದೆ. ಹೀಗೆ ನೇರಾನೇರ ಹೇಳುವ ಮೂಲಕ ನಾಟಕ ತಕ್ಷಣದ ಪರಿಣಾಮವನ್ನಂತೂ ನೋಡುಗರ ಮೇಲೆ ಬೀರುತ್ತದೆ.

ಕಲೆಯ ಮೀಮಾಂಸಾತತ್ವಗಳ ಜೋಕಾಲಿಯಾಡುತ್ತಾ ನಾಟಕವನ್ನು ಹೆಣೆಯುವ ಕ್ರಮಕ್ಕಿಂತ ಹೀಗೆ ನೋಡುಗರ ಮೇಲೆ ನೇರ ಪರಿಣಾಮ ಬೀರುವ ಕಲೆಯ ತುರ್ತು ಇಂದು ಹೆಚ್ಚಾಗಿದೆ. ಮರಾಠಿಯ ವಿಜಯ್ ತೆಂಡೂಲ್ಕರರ ‘ಘಾಶೀರಾಮ್ ಕೊತ್ವಾಲ್’ ಅನ್ನು ಮನರಂಜನೆಯೇ ಮುಖ್ಯವಾದ ಸಂಗೀತ ನಾಟಕವೆಂದೇ ಆರಂಭದಲ್ಲಿ ಜನರು ತಿಳಿದಿದ್ದರಂತೆ; ಅದು ರಾಜಕೀಯ ನಾಟಕ ಎಂದು ಜನರಿಗೆ ಅರ್ಥವಾಗುವ ಹೊತ್ತಿಗೆ ಹತ್ತು ಪ್ರದರ್ಶನಗಳು ಆಗಿಹೋಗಿದ್ದವು! ಜನಸಮೂಹದಲ್ಲಿ ಸಂವೇದನೆ ಇರುವ ಕಾಲಕ್ಕೂ, ಸಂವೇದನೆ ಕಳೆದುಹೋಗುತ್ತಿರುವ ಕಾಲಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾವ ಕಾಲದಲ್ಲಿ ಯಾವ ಹಾಡನ್ನು ಹೇಗೆ ಹಾಡಬೇಕೆಂದು ಕಲಾವಿದನಿಗೆ ಗೊತ್ತಿರಬೇಕು. ಅಂಥ ಕಲಾವಿದ ಮಾತ್ರ ಜನರ ಕಲಾವಿದನಾಗುತ್ತಾನೆ, ಜನರ ಮನಸ್ಸಿನಲ್ಲಿ ಉಳಿಯುತ್ತಾನೆ. ಈ ಸೂಕ್ಷ್ಮ ಗೊತ್ತಿದ್ದೂ ಹಾಡಿದ್ದನ್ನೇ ಹಾಡುವವರು ಆಸ್ಥಾನ ಕಲಾವಿದರು ಮಾತ್ರ.

ರಂಗಪ್ರಯೋಗದ ದೃಷ್ಟಿಯಿಂದ ಹಲವು ಮಿತಿಗಳು ಈ ನಾಟಕದಲ್ಲಿವೆ. ಅವನ್ನೆಲ್ಲಾ ಪಟ್ಟಿ ಮಾಡುತ್ತಾ ಹೋಗುವುದರಲ್ಲಿ ಅರ್ಥವಿಲ್ಲ. ಬೆಳಕು (ಮಂಜು ನಾರಾಯಣ್) ಮತ್ತು ಸಂಗೀತ (ಪ್ರಸನ್ನ ಕುಮಾರ್) ನಾಟಕದ ಈ ಮಿತಿಗಳನ್ನು ನುಂಗಿಹಾಕಿ, ಮಿತಿಗಳನ್ನು ಮರೆಗೆ ಸರಿಸಿವೆ. ತಂತ್ರದ ದೃಷ್ಟಿಯಿಂದಲೂ ನಾಟಕದಲ್ಲಿ ಮಿತಿಗಳಿದ್ದರೂ ಸ್ವಾತಂತ್ರ್ಯದ ದೃಷ್ಟಿಯಿಂದ ನಾಟಕ ಹಲವು ಜಿಗಿತಗಳನ್ನು ಕಂಡಿದೆ. ಅಭಿಪ್ರಾಯ-ಭಿನ್ನಾಭಿಪ್ರಾಯಗಳ ಬಗ್ಗೆ ಮುಕ್ತವಾಗಿ ಮಾತನಾಡಲೂ ಸಾಧ್ಯವಿಲ್ಲದ ಸಂದರ್ಭದಲ್ಲಿ ಸತ್ಯವನ್ನು ನೇರಾನೇರವಾಗಿ ರಾಚುವ ರಾಚುವ ರಿಸ್ಕ್‌ ತೆಗೆದುಕೊಂಡ ನಾಟಕ ತಂಡದ ಧೈರ್ಯ ಮೆಚ್ಚುವಂಥದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು