ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಧಾರಿಗಳಾದ ವಿದ್ಯಾರ್ಥಿಗಳು

ಮನಸೆಳೆದ ‘ಆಲಿಬಾಬ ಮತ್ತು ನಲವತ್ತು ಕಳ್ಳರು’ ನಾಟಕ
Last Updated 13 ಜೂನ್ 2019, 8:39 IST
ಅಕ್ಷರ ಗಾತ್ರ

ಅಲ್ಲಿ ಹಿಂಡು ಹಿಂಡಾಗಿ ಮಕ್ಕಳೊಡನೆ ಒಂದಷ್ಟು ಹರೆಯದ ವಿದ್ಯಾರ್ಥಿಗಳು ಕೂಡಾ ಸೇರಿಕೊಂಡಿದ್ದರು. ಪುಟ್ಟ ಕಳ್ಳರ ಗುಂಪು ಆಚಿಂದೀಚೆ ಕಪ್ಪು ವಸ್ತ್ರಧಾರಿಗಳಾಗಿ ಅಡ್ಡಾಡುತ್ತಿತ್ತು. ನೃತ್ಯಗಾತಿಯೊಬ್ಬಳು ತಯಾರಾಗಿ ನಿಂತಿದ್ದಳು. ಸರ್ವಾಲಂಕೃತರಾಗಿ ಹೆಂಗಳೆಯರು ಕಂಗೊಳಿಸುತ್ತಿದ್ದರು. ಆದರೆ ಇವೆಲ್ಲಾ ತೆರೆಮರೆ ಹಿಂದೆ ಅಭಿನಯಕ್ಕಾಗಿ ಸಜ್ಜಾಗುತ್ತಿದ್ದ ದೃಶ್ಯಗಳು.

ಬಾಲ್ಯದಲ್ಲಿ ಈ ಕಥೆ ಅಂದರೆ ಸಾಕು ಅತೀವ ಸಂತಸರಾಗುತ್ತಿದ್ದೆವು. ಇದನ್ನು ಪದೇ ಪದೇ ಓದಬೇಕೆಂದು ಮನಸ್ಸು ಹಂಬಲಿಸುತ್ತಿತ್ತು. ಅಜ್ಜಿಯೊಡನೆ ಈ ಕಥೆಗಾಗಿ ಹಠ ಮಾಡಿದ್ದು ಇನ್ನೂ ಚೆನ್ನಾಗಿ ನೆನಪಿದೆ. ರೋಮಾಂಚನಕಾರಿಯಾಗಿ ಬುದ್ಧಿವಂತಿಕೆಯ ಕುರುಹಾಗಿತ್ತು ಈ ಕಥೆ. ಆದರೆ ಇದನ್ನು ಅಭಿನಯದ ಮೂಲಕ ಕಟ್ಟಿಕೊಡುವವರ ಸಂಖ್ಯೆ ಬಲು ವಿರಳ.

ಹೌದು, ಇದುವೇ ನಮ್ಮೆಲ್ಲರಿಗೂ ಅಚ್ಚುಮೆಚ್ಚಾಗಿದ್ದ ‘ಆಲಿಬಾಬ ಮತ್ತು ನಲವತ್ತು ಕಳ್ಳರು’ ಕಥೆ. ಮಕ್ಕಳ ಪಾಲಿನ ಇಷ್ಟದ ಕಥೆ. ಇದೇ ಕಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಿದ್ಯಾರ್ಥಿಗಳು ಅಭಿನಯಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ವೇದಿಕೆಯಲ್ಲಿ ಆಲಿಬಾಬನೊಬ್ಬ ನೈಜತೆಯನ್ನೇ ಕಟ್ಟಿಕೊಟ್ಟಿದ್ದ. ಸೂತ್ರಧಾರನ ಮಾತುಗಳೊಂದಿಗೆ ಆರಂಭಗೊಳ್ಳುವ ನಾಟಕ ಗಣೇಶನ ಪೂಜೆಯೂ ಸಹಿತ ಮುಸಲ್ಮಾನ ಸಂಸ್ಕೃತಿಯ ಬಿತ್ತರದೊಡನೆ ಸರ್ವ ಧರ್ಮ ಸಮನ್ವಯವನ್ನು ಸಾರುತ್ತಿತ್ತು.

ಒಂದು ಗಂಟೆಯ ನಾಟಕ ದೃಶ್ಯಗಳು ಮನಸಿಗೆ ಅದೇನೋ ಹುರುಪನ್ನು ಕೊಡುವಂತಿದ್ದವು. ವಿಶೇಷ ಎಂಬಂತೆ ಇಲ್ಲಿ ನೈಜತೆ ಎದ್ದು ಕಾಣುತ್ತಿತ್ತು. ಮುಸಲ್ಮಾನ ಸಂಸ್ಕೃತಿಯಲ್ಲಿ ಕೇಳಿಬರುವ ಹಾಡುಗಳು ಸಂಗೀತವಾಗಿ ಎಲ್ಲರನ್ನೂ ತನ್ಮಯಗೊಳಿಸಿದ್ದು ಮತ್ತೂ ವಿಶೇಷತೆ. ವೇದಿಕೆಯ ಮುಂಭಾಗದಲ್ಲಿದ್ದ ಪ್ರೇಕ್ಷಕರನ್ನು ಆಕರ್ಷಿಸುತ್ತಿತ್ತು ಈ ನಾಟಕ ದೃಶ್ಯಗಳು.

ವಿಶೇಷವಾಗಿ ಗಮನ ಸೆಳೆದಿದ್ದವರುನಲವತ್ತು ಕಳ್ಳರು. ಪುಟ್ಟ ಪುಟ್ಟ ವಯೋಮಾನದ ಮಕ್ಕಳು ಕಳ್ಳರ ವೇಷ ಧರಿಸಿದ್ದರು. ಥೇಟ್ಕಳ್ಳರಂತೆ ಬಿಂಬಿತವಾಗುತ್ತಿದ್ದರು. ನಡು ನಡುವೆ ಬರುತ್ತಿದ್ದ ಆಲಿಬಾಬನ ಭಕ್ತಿಯ ಬೆಸುಗೆಯಜೊತೆಗೆ ಈತನ ಮಗ ‘ಮರ್ಜೀನಾ......’ ಎಂದು ಕೂಗುತ್ತಾ ಮಾತನಾಡುತ್ತಿದ್ದರೆ ನಗು ಉಕ್ಕಿ ಬರುವಂತಿತ್ತು. ಈತನ ಹಾಸ್ಯದೊಡನೆ ನಾಟಕ ತಮಾಷೆ ಎಂದೆನಿಸಿದರೆ, ಮತ್ತೊಮ್ಮೆ ಕಳ್ಳರರಾಜ ಹಸನ್‍ನ ರೂಪ ಗಂಭೀರತೆಯನ್ನು ಕಲ್ಪಿಸಿಕೊಡುತ್ತಿತ್ತು.

ಮಕ್ಕಳು ತುಂಬಾ ಶ್ರದ್ಧೆಯಿಂದ ಅಭಿನಯಿಸಿದ್ದು ನಿಜಕ್ಕೂ ಶ್ಲಾಘನೀಯ. ಶ್ರೇಷ್ಠ ಪಾತ್ರಧಾರಿಗಳಂತೆ ತನ್ಮಯತೆಯಿಂದ ನೋಡುಗರ ಗಮನ ಸೆಳೆದರು ಪುಟಾಣಿಗಳು. ಹೆಗ್ಗಡೆ ಕುಟುಂಬದವರ ನೇತೃತ್ವದಲ್ಲಿ ನಡೆದ ನಾಟಕ ಹೇಮಾವತಿ ವಿ ಹೆಗಡೆ ಇವರ ಮಾರ್ಗದರ್ಶನದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ ಅವರ ಕಥೆಯನ್ನಾಧರಿಸಿ, ಯಶವಂತ್ ಬೆಳ್ತಂಗಡಿ ವಿನ್ಯಾಸ ಹಾಗೂ ನಿರ್ದೇಶನದೊಡನೆ ಅದ್ಭುತವಾಗಿ ಮೂಡಿ ಬಂತು.

ಈಗಾಗಲೇ ಎರಡು ಬಾರಿ ಈ ನಾಟಕದಪ್ರದರ್ಶನ ನಡೆದಿದ್ದು, ಜನ ಮತ್ತೆ ಮತ್ತೆ ನೋಡಲು ಕಾತುರರಾಗಿದ್ದಾರೆ. ಶಿಶಿರ ಕಲ್ಕುರ ಹಾಗೂ ಸುಜಿತ್ ಬೆಳಕಿನಲ್ಲಿ ಸಹಕರಿಸಿದ್ದು, ಸಮರ್ಥನ್ ಎಸ್ ರಾವ್ ಹಾಗೂ ಕಮಾಲಾಕ್ಷ ಧರ್ಮಸ್ಥಳ ಸಂಗೀತ ನೀಡಿರುವ ನಾಟಕ ಒಟ್ಟಿನಲ್ಲಿ ಸರ್ವರಿಗೂ ಖುಷಿಯ ಔತಣವನ್ನು ಉಣಬಡಿಸಿದೆ. ‘ಅದೃಷ್ಟವೆಂಬ ನೌಕೆಯಲಿ ನಾವಿಕರೂ ನಾವೂ ನೀವು’ ಎಂಬ ಹಾಡೊಂದರ ಸಾರದೊಂದಿಗೆ ನಮ್ಮ ಬದುಕಿನ ಅದೃಷ್ಟದ ಕಥೆಯನ್ನು ತಿಳಿಸಿಕೊಡುವಂತಿದೆ. ಒಂದೊಳ್ಳೆ ನಾಟಕವನ್ನು ನೀವೂ ಒಂದೊಮ್ಮೆ ನೋಡಿ ಕಣ್ತುಂಬಿಕೊಳ್ಳಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT