ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯ ಥೆರಪಿ

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಕ್ಕಳು ಆಟವಾಡುವಾಗ ನಟನೆ ಮಾಡುವುದನ್ನು ನೋಡಿದ್ದೀರಾ? ಟೀಚರ್ ಆಟ, ಅಪ್ಪ-ಅಮ್ಮ ಆಟ, ಡಾಕ್ಟರ್ ಆಟ, ಇವೆಲ್ಲದರಲ್ಲಿ ಮಕ್ಕಳು ದೊಡ್ಡವರಂತೆ ಅನುಕರಿಸುವುದನ್ನೂ ನಾವು ನೋಡಿಯೇ ಇರುತ್ತೇವೆ. ಮಕ್ಕಳಾಗಿದ್ದಾಗ ಬಾಲ್ಯದಲ್ಲಿ ಈ ರೀತಿಯ ನಾಟಕಗಳನ್ನು ನಾವು ಆಟಕ್ಕಾಗಿ ಆಡಿಯೂ ಇರಬಹುದು. ಆದರೆ ದೊಡ್ಡವರಾದ ಮೇಲೆ ನಿಜಜೀವನದಲ್ಲಿ ‘ಜೀವನವೇ ಒಂದು ನಾಟಕ ಶಾಲೆ’ ಎಂಬುದನ್ನು ನಂಬಿದವರಂತೆ ವಿವಿಧ ನಟನೆಗಳನ್ನು ಜವಾಬ್ದಾರಿ -ಜಗಳಗಳನ್ನು ತಪ್ಪಿಸಲು ಆಡಲಾರಂಭಿಸುತ್ತೇವೆ!

ಬಾಲ್ಯದಲ್ಲಿ ಸಂತೋಷಕ್ಕಾಗಿಯಷ್ಟೇ ನಾಟಕ ನೋಡಲು ನಮ್ಮನ್ನು ಅಪ್ಪ-ಅಮ್ಮ ಕರೆದುಕೊಂಡು ಹೋಗುತ್ತಿದ್ದರಷ್ಟೆ! ಅಂದರೆ ಆಗ ನಾನೇನೂ ಮಕ್ಕಳ/ದೊಡ್ಡವರ ಮನಸ್ಸಿನ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ದೊಡ್ಡವಳಾಗಿರಲಿಲ್ಲ. ಆಗ ನನಗೆ ನೆನಪಿರುವ ಆಗಿನ ನಾಟಕಗಳು ಹಲವು. ಅದರಲ್ಲಿ ಬರ್ನಾರ್ಡ್ ಷಾನ ‘ಪಿಗ್ಮೇಲಿಯನ್’ ಎಂಬ ನಾಟಕವನ್ನು ಆಧರಿಸಿ ‘ನೀನಾಸಂ’ನವರು ಆಡಿದ ‘ಹೂ ಹುಡುಗಿ’ ಎಂಬ ನಾಟಕದಲ್ಲಿ ಮಾಡಿದ ನಟ ನಟಿಯರು, ಅವರು ಹೇಳಿದ್ದ ಡೈಲಾಗ್‍ಗಳು ಎಷ್ಟು ನೆನಪಲ್ಲುಳಿದಿವೆ ಎಂದರೆ ಈಗಲೂ ಮಕ್ಕಳಿಗೆ ಭಾಷೆ ಕಲಿಸುವಾಗ ‘ಹಕ್ಕಿಯು ಅಕ್ಕಿಯನ್ನು ಹೆಕ್ಕಿ ಹೆಕ್ಕಿ ತಿನ್ನುತ್ತದೆ’ ಎಂಬ ಆ ನಾಟಕದ ವಾಕ್ಯ, ಮಹಾಪ್ರಾಣ ಕಲಿಸುವಾಗ ಹೇಗೆ ಮೇಣದಬತ್ತಿ ದೀಪ ನಂದಿ ಹೋಗುವಂತೆ ಉಚ್ಚರಿಸಬೇಕು ಎಂಬ ತಂತ್ರ ಎಲ್ಲಾ ನೆನಪಾಗುತ್ತವೆ! ಬಾಲ್ಯದಲ್ಲಿ ‘ನೀನಾಸಂ’ಗೆ ಹೋಗುವ, ನಾಟಕ ನೋಡುವ ಅನುಭವ ಸಿಕ್ಕಿದ್ದು, ಈಗಲೂ ಬಾಲ್ಯದ ಸುಂದರ ನೆನಪುಗಳಲ್ಲಿ ಒಂದಾಗಿ ಉಳಿದಿದೆ.
ಶಿವಮೊಗ್ಗೆಯಲ್ಲಿ ನಾಟಕಗಳು ಚೆನ್ನಾಗಿ ಪ್ರದರ್ಶಿತವಾಗುತ್ತಿದ್ದವು. ಬಿ.ವಿ.ಕಾರಂತರ ನಿರ್ದೇಶನದಲ್ಲಿ ‘ಕಿಂದರಿಜೋಗಿ’ಯನ್ನು ನೋಡಿ, ಅಂಗವಿಕಲನಾದ ಹುಡುಗನೊಬ್ಬ ಕೊನೆಯಲ್ಲಿ ತಾನು ಆಚೆಯ ಸುಂದರ ಲೋಕಕ್ಕೆ ಹೋಗಲಾಗದೆ ಹಳ್ಳಿಯಲ್ಲಿಯೇ ಉಳಿದು ಹೋಗಿದ್ದಕ್ಕೆ ಅತ್ತಿದ್ದು ನೋಡಿ ಆಗ ಮಕ್ಕಳಾಗಿದ್ದ ನಮಗೂ ಅಳು ಬಂದ ಹಾಗಾಗಿತ್ತು!

ಸಮಯ ಪ್ರಜ್ಞೆ ಸಂದರ್ಭೋಚಿತ ನಡವಳಿಕೆ ಇವು ನಾಟಕದ ಶಿಸ್ತಿನಿಂದಲೇ ಯಾವುದೇ ಕ್ಷೇತ್ರದ ಕಲಾವಿದರಿಗೂ ಸಹಾಯಕವಾಗಬಲ್ಲಂತಹವು. ಬಾಲ್ಯದಲ್ಲಿ ಶಾಲೆಗಳ ವಾರ್ಷಿಕೋತ್ಸವದಲ್ಲಿ, ಮಕ್ಕಳ ನಾಟಕ ಸ್ಪರ್ಧೆಗಳಲ್ಲಿ ನಾನು ನಾಟಕದಲ್ಲಿ ಭಾಗಿಯಾಗುತ್ತಿದ್ದೆ. ಅಂತಹದ್ದರಲ್ಲಿ ಎರಡು ನಾಟಕಗಳು ನನಗೆ ಇವತ್ತಿಗೂ ಸ್ಮೃತಿಯಲ್ಲಿ ಭದ್ರವಾಗಿ ಕುಳಿತಿವೆ. ಮೊದಲನೆಯದು ಸುಮಾರು 4-5ನೇ ತರಗತಿಯಲ್ಲಿದ್ದಾಗ ನಾನು ಮಾಡಿದ್ದ ‘ವನ್ಯಾಪಹರಣ’ ಎಂಬ ನಾಟಕ. ಇದು ಸುಮಾರು 30 ಮಕ್ಕಳು ಪಾಲ್ಗೊಂಡಿದ್ದ ನಾಟಕ. ನನಗಿದ್ದದ್ದು ಈ ನಾಟಕದಲ್ಲಿ ಎರಡು ಪಾತ್ರಗಳು. ಮೊದಲನೆಯದು ‘ಮರ’, ನಂತರದ್ದು ಮರವನ್ನು ಕಡಿಯಲು ಬರುವ ಕೆಟ್ಟ ಜನ, ನಂತರ ಒಳ್ಳೆಯವರಾಗಿ ಪರಿವರ್ತನೆಯಾಗುವ ಜನ. ನಮಗೆ ಎರಡೆರಡು ‘ಡ್ರೆಸ್’ ಬದಲಿಸುವ ಸಂಭ್ರಮ.

ನಾಟಕ ಚೆನ್ನಾಗಿಯೇ ಬಂತು ಎಂದು ನಾವಂದಕೊಂಡರೂ, ನಮಗೆ ಬಹುಮಾನ ಬರಲಿಲ್ಲ. ‘ಅಭಿನಯ’ ಎಂಬ ರಂಗಸಂಸ್ಥೆಯ ರಂಗಕರ್ಮಿಗಳು ಶಿವಮೊಗ್ಗೆಯಲ್ಲಿ ಉತ್ಸಾಹದಿಂದ ರಂಗಚಟುವಟಿಕೆಗಳನ್ನು ನಡೆಸುತ್ತಿದ್ದರು. ಶೈಲಜಾ ಕುಮಾರಸ್ವಾಮಿ, ವಿಜಯಾ ಕಾಂತೇಶ್, ಹಾಲೇಶ್ ಮೊದಲಾದವರು ನಮ್ಮಂತಹ ಮಕ್ಕಳಿಗೆ ನಾಟಕಗಳನ್ನು ಹೇಳಿಕೊಡುತ್ತಿದ್ದರು. ಹಾಗೆ ಹೇಳಿಕೊಟ್ಟ ಇನ್ನೊಂದು ನಾಟಕ ‘ಗದಾಯುದ್ಧ’, ಆರನೇ ಕ್ಲಾಸಿನಲ್ಲಿದ್ದ ನನ್ನನ್ನು ‘ದುರ್ಯೋಧನ’ನ್ನಾಗಿ ಆರಿಸಿಬಿಟ್ಟಿದ್ದರು!

ಹಿರಿಯ ಮೇಕಪ್ ಪಟು ಎಚ್.ಎಂ.ಪಿ. ಸರ್ ನನ್ನನ್ನು ತಮ್ಮ ಮೇಕಪ್ ಕೌಶಲದಿಂದ ‘ಸುಂದರ ದುರ್ಯೋಧನ’ನ್ನಾಗಿ ಬದಲಿಸಿದರು. ಗಟ್ಟಿಯಾಗಿ ಡೈಲಾಗ್ ಬೇರೆ ಕಲಿತಿದ್ದೆ. ಗದೆ ಮಾತ್ರ ಬಾಡಿಗೆಗೆ ದೊರೆತಿರಲಿಲ್ಲ. ಹಾಗಾಗಿ ನನ್ನ ಅಮ್ಮ ಹೇಗೋ ರೂಲರ್ ಉಪಾಯ ಮಾಡಿ ಒಂದು ಪ್ಲಾಸ್ಟಿಕ್ ತಂಬಿಗೆಗೆ ಬಣ್ಣದ ಪೇಪರ್ ಸುತ್ತಿ, ದೊಣ್ಣೆಯೊಂದಕ್ಕೆ ಸಿಕ್ಕಿಸಿ ಸಿದ್ಧ ಮಾಡಿದ್ದರು. ನಾಟಕವನ್ನೇನೋ ಚೆನ್ನಾಗಿಯೇ ಆಡಿದ್ದೆವು. ಆದರೆ ಅರ್ಜುನನೊಂದಿಗೆ ಕಾದುವಾಗ, ನನ್ನ ಗದೆ ಎರಡು ತುಂಡಾಗಿ ದೊಣ್ಣೆ-ತಂಬಿಗೆ ಬೇರೆಯಾಗಿ ಬಿದ್ದವು. ವೇದಿಕೆಯ ಮೇಲೆ ಹೇಗೋ ಸಾವರಿಸಿಕೊಂಡು ನಾಟಕ ಮುಗಿಸಿದೆ. ಹೊರಬಂದು ‘ಹೋ’ ಎಂದು ಅತ್ತೆ. ಬಹುಮಾನ ಬರದ್ದಕ್ಕಿಂತ ಗದೆ ಮುರಿದದ್ದೇ ನನಗೆ ಅಪಮಾನವಾಗಿ ಹೋಗಿತ್ತು. ಆ ಮೇಲೆ ಆ ನಾಟಕದ ಬಗ್ಗೆ ಯಾರೊಡನೆ ಮಾತನಾಡುತ್ತಲೂ ಇರಲಿಲ್ಲ!

ನಂತರ ನಾಟಕಗಳನ್ನು ಮಾಡುವ ಅಭ್ಯಾಸವೂ ತಪ್ಪಿತ್ತು. ಆದರೆ ನಾಟಕ ನೋಡುವುದು ಮಾತ್ರ ನನಗೆ ಎಂದಿಗೂ ಪ್ರಿಯವೇ ಆಗಿತ್ತು. ಬೆಂಗಳೂರಿನಲ್ಲಿ ಇರುವಾಗಲಂತೂ ನಾನೂ, ಪತಿ ನಾಗರಾಜ್ ನಿಮ್ಹಾನ್ಸ್‌ನಲ್ಲಿ ಓದುವಾಗ ರವೀಂದ್ರ ಕಲಾಕ್ಷೇತ್ರಕ್ಕೆ ಸಮಯವಿದ್ದಾಗ ಓಡುತ್ತಿದ್ದೆವು. ಹಿರಣ್ಣಯ್ಯನವರ ನಾಟಕ ನೋಡಿ ಬಿದ್ದೂ ಬಿದ್ದೂ ನಗುತ್ತಿದ್ದೆವು. ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ ಹಲವು ರೀತಿಯ ನಾಟಕಗಳನ್ನು ನೋಡುತ್ತಿದ್ದೆವು. ಅಲೈಯನ್ಸ್ ಫ್ರಾಂಚೈಸ್‍ನಲ್ಲಿ ನಡೆಯುವ ಇಂಗ್ಲಿಷ್ ನಾಟಕಗಳನ್ನು ನೋಡಿ ಅಚ್ಚರಿ ಪಡುತ್ತಿದ್ದೆವು. ವೃತ್ತಿಯ ಒತ್ತಡ ತಡೆಯಲು ನಮಗೆ ಆಗ ಸಹಾಯ ಮಾಡಿದ್ದು ಈ ನಾಟಕಗಳೇ!

ಇಷ್ಟೆಲ್ಲಾ ನಾಟಕಗಳನ್ನು ನೋಡಿದ್ದರೂ, ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ನಾಟಕಗಳ ಪ್ರಯೋಜನದ ಅರಿವಾಗಿದ್ದು ನನಗೆ ಪ್ರೊ.ಲಕ್ಷ್ಮೀಚಂದ್ರಶೇಖರ್‌ ಅವರ ‘ಹೆಣ್ಣಲ್ಲವೆ?’ ಎಂಬ ಏಕವ್ಯಕ್ತಿ ನಾಟಕವನ್ನು ನೋಡಿದಾಗಲೇ. ಒಂದು ನಾಟಕ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ರಂಜಿಸುವುದಷ್ಟೇ ಅಲ್ಲ, ಮನಸ್ಸುಗಳನ್ನೂ ತನ್ನದೇ ಆದ ರೀತಿಯಲ್ಲಿ ಬದಲಿಸಬಹುದು ಎಂಬುದು ನನಗೆ ಅರ್ಥವಾದದ್ದು ಈ ನಾಟಕವನ್ನು ನೋಡಿಯೇ. ಮನೋವೈದ್ಯೆಯಾದ ಮೇಲೆ ನಾನು ಮಾಡಿದ ಒಂದು ನಾಟಕ ‘ಭೀಷ್ಮಪ್ರಜ್ಞೆ’, ಶೈಲಜಾ ಕುಮಾರಸ್ವಾಮಿಯವರದು. ಹುಡುಗಿಯೊಬ್ಬಳ ವರದಕ್ಷಿಣೆಯ ಸಾವಿಗೆ ಸಮಾಜದ ಇತರ ಮಹಿಳೆಯರು, ಪೊಲೀಸ್ -ಪತ್ರಕರ್ತ- ಕೊನೆಗೆ ವೈದ್ಯ ಇವರೆಲ್ಲ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಈ ನಾಟಕದ ವಸ್ತು. ಮಹಿಳೆಯರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಇಂತಹ ನಾಟಕಗಳ ಮೂಲಕ ಸಾಧ್ಯವಿದೆ ಎಂದು ನನಗೆ ಅನ್ನಿಸಿದ ಕಾರಣವೂ ಹೌದು.

ಮನೋವೈಜ್ಞಾನಿಕ ಕ್ಷೇತ್ರದ ಚರಿತ್ರೆಯನ್ನು ನೋಡಿದರೆ ನಾಟಕಗಳನ್ನು ಚಿಕಿತ್ಸೆಗಾಗಿಯೇ ಉಪಯೋಗಿಸಿದ್ದು ಮೂವತ್ತರ ದಶಕದಲ್ಲಿ. ವೇದಿಕೆಯ ಮೇಲೆ ನಾಟಕಗಳನ್ನು ಆಡುವುದಕ್ಕೂ, ನಟನೆಯ ಚಿಕಿತ್ಸೆ-ಡ್ರಾಮಾ ಥೆರಪಿಗೂ ಕೆಲವು ಸೂಕ್ಷ್ಮ-ಮುಖ್ಯ ವ್ಯತ್ಯಾಸಗಳಿವೆ. ನಟನೆಯ ಮೂಲಕ ಚಿಕಿತ್ಸೆಯಲ್ಲಿ ವೇದಿಕೆಯ ಮೇಲೆ ನಡೆಯುವುದಕ್ಕೆ ವಿರುದ್ಧವಾಗಿ ಇಲ್ಲಿ ವಾಸ್ತವವೂ ನಟನೆಯೂ ಒಂದೇ ಆಗಿರುತ್ತದೆ. ಜೀವನದ ಸಮಸ್ಯೆಗಳಿಗೆ ಅಭಿನಯದ ಮೂಲಕ, ನಟನೆಯ ಮುಖಾಂತರ ಪರಿಹಾರ ಕಂಡುಕೊಳ್ಳುವ ಪ್ರಯತ್ನ. ಮಹಿಳೆಯರ ಮತ್ತು ಮಕ್ಕಳ ಮಾನಸಿಕ ಸಮಸ್ಯೆಗಳಲ್ಲಿ, ಮದ್ಯವ್ಯಸನದಲ್ಲಿ ನಟನೆಯ ಚಿಕಿತ್ಸೆ ವಿಶೇಷವಾಗಿ ಗಮನಾರ್ಹ ಬದಲಾವಣೆಗೆ ಕಾರಣವಾಗಲು ಸಾಧ್ಯವಿದೆ.

ನಿಮ್ಹಾನ್ಸ್‌ನಲ್ಲಿ ಮನೋವೈದ್ಯಕೀಯ ತರಬೇತಿ ಪಡೆಯುವಾಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮನೋಚಿಕಿತ್ಸೆಯ ಬಗೆಗೆ, ವೈದ್ಯ-ರೋಗಿಯನ್ನು ಅರ್ಥ ಮಾಡಿಕೊಳ್ಳುವ ಬಗೆಗೆ ತರಬೇತಿ ನೀಡಲಾಗುತ್ತದೆ. ಇದರ ಅಂಗವಾಗಿರುವ ಒಂದು ಚಟುವಟಿಕೆಯೆಂದರೆ ‘ರೋಲ್ ಪ್ಲೇ’. ರೋಗಿಯಾಗಿ ಒಬ್ಬ ವಿದ್ಯಾರ್ಥಿ ನಟನೆ ಮಾಡಿದರೆ, ಇನ್ನೊಬ್ಬ ವೈದ್ಯನಾಗಿ ಆತನನ್ನು ಸಂದರ್ಶಿಸಬೇಕು. ಉಳಿದವರು ಪ್ರೇಕ್ಷಕರಾಗಿ ವೈದ್ಯ, ರೋಗಿ ಹೇಳಿದ್ದನ್ನು ಕೇಳಿಸಿಕೊಂಡ ರೀತಿ, ತಾನು ಪ್ರತಿಕ್ರಿಯಿಸಿದ ರೀತಿ, ಮಧ್ಯೆ ಹೊತ್ತಾಯಿತೆಂದು ಬಾಯಿಯಲ್ಲಿ ಹೇಳದೆ ತನ್ನ ದೇಹ ಭಾಷೆ- ‘ಬಾಡಿ ಲ್ಯಾಂಗ್ವೇಜ್’ ಮೂಲಕ ತನಗೇ ಗೊತ್ತಿಲ್ಲದೆ ಸಂವಹಿಸಿದ್ದು ಎಲ್ಲವನ್ನೂ ಗಮನಿಸಿ ವಿಮರ್ಶಿಸಬೇಕು. ಆಗ ನನಗೆ ನಟನೆಯಿಂದ ವೈದ್ಯರು ಕಲಿಯಬೇಕಾದ ಹಲವು ಕೌಶಲಗಳ ಬಗ್ಗೆ ಅರಿವು ಮೂಡಿತು.

ಮಹಿಳೆಯರಲ್ಲಿ ಕೌಟುಂಬಿಕ ದೌರ್ಜನ್ಯದಂತಹ ಸಂದರ್ಭಗಳಲ್ಲಿ ಡ್ರಾಮಾ ಥೆರಪಿ ಪಾಶ್ಚಾತ್ಯ ದೇಶಗಳಲ್ಲಿ ಬಲವಾಗಿಯೇ ನಡೆದಿದೆ. ‘ವಾಯ್ಸಸ್‌ ಅಫ್ ಪ್ರೈಡ್’ ಎಂಬ ಯೋಜನೆಯೊಂದರಲ್ಲಿ ತಮ್ಮ ಅಳಲನ್ನು ಹೇಳಿಕೊಳ್ಳಲು, ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಲು, ಇತರ ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು, ಹೊಸ ದಾರಿಗಳನ್ನು ಹುಡುಕಲು ನಾಟಕವನ್ನು ಒಂದು ಸಾಧನವಾಗಿ ಬಳಸಲಾಯಿತು. ಬೈಯುವ -ಕುಡಿಯುವ ಪತಿಯಿಂದ ನಟನೆಯಲ್ಲಿ ದೂರವಾಗುವ ತಂತ್ರ. ಈ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿತು. ಬೇರೆಯವರು ತಮ್ಮ ಕಥೆ ಕೇಳಿದರೆ ತಮ್ಮನ್ನು `ಜಡ್ಜ್' ಮಾಡಿಬಿಡಬಹುದೆಂಬ ಸಂಕೋಚ-ಹಿಂಜರಿಕೆಗಳನ್ನು ಕ್ರಮೇಣ ಬದಿಗೊತ್ತಿ, ‘step into the centre it ...’ ಎಂಬ ವಾಕ್ಯಕ್ಕೆ ವೈಯಕ್ತಿಕ ಅನುಭವಗಳನ್ನು ಅವರು ತೆರೆದಿಡತೊಡಗಿದರು.

ತಮ್ಮ ಅನುಭವದ ಸಾರ್ವತ್ರಿಕತೆ, ತಮ್ಮಂತಹ ಇನ್ನೊಬ್ಬರೂ ಇದ್ದಾರೆ ಎಂಬ ಅರಿವೇ ಒಂದು ರೀತಿಯ ನಿರಾಳತೆಯನ್ನು ನೀಡುವ ಸಾಧ್ಯತೆ ಇಲ್ಲಿತ್ತು. ಕಲ್ಪಿತ ಫೋನ್‌ ಕರೆಗಳಿಗೆ ಪ್ರತಿಕ್ರಿಯಿಸುವುದು, ತಮ್ಮನ್ನು ದೌರ್ಜನ್ಯಕ್ಕೆ ಒಳಪಡಿಸಿದ್ದ ವ್ಯಕ್ತಿಗೆ ಹೇಳಬೇಕೆಂದಿದ್ದ ಹೇಳಲಾಗದ ಮಾತುಗಳನ್ನು ಹೇಳುವ ಅವಕಾಶ, ವರುಷಗಳವರೆಗೆ ಒಳಗೇ ಉಳಿದಿದ್ದ ಮಾತುಗಳನ್ನು ಹೊರಹಾಕುವ ದಾರಿ ಇವು ತಂದದ್ದು ಆಕ್ರೋಶ, ಹತಾಶೆ, ಒತ್ತಡಗಳನ್ನು ರೋಲ್ ರಿವರ್ಸಲ್ - ಪಾತ್ರವನ್ನು ತಿರುಗಿಸುವುದರ ಮೂಲಕ ಸ್ವದೂಷಣೆಯನ್ನು ನಿಲ್ಲಿಸುವುದೂ ಇಲ್ಲಿ ಸಾಧ್ಯವಾದದ್ದು ವಿಶೇಷ. ಈ ನಟನೆಯ ಚಿಕಿತ್ಸೆಯಲ್ಲಿ ಪಾಲ್ಗೊಂಡ ಮಹಿಳೆಯೊಬ್ಬಳು ಹೇಳಿದ ಮಾತುಗಳಿವು - ‘ಏನನ್ನಾದರೂ ಹೇಗೆ ಬೇಕಾದರೂ ವ್ಯಕ್ತಪಡಿಸಲು ಇಲ್ಲಿ ಸಾಧ್ಯ. ಇಲ್ಲಿ ನನ್ನನ್ನು ಯಾರೂ `ಜಡ್ಜ್' ಮಾಡುವವರಿಲ್ಲ. ಇದೇ ಅಚ್ಚರಿ - ನಮ್ಮ ನಟನೆಯೇ, ನಮ್ಮ ಚಿಕಿತ್ಸೆ!’.

ಬಾಲ್ಯದಲ್ಲಿ ನಾಟಕ ನೋಡುವ-ಆಡುವ ಮಜಾ, ಈಗ ಮನೋವೈದ್ಯೆಯಾಗಿ ಮಕ್ಕಳ-ಮಹಿಳೆಯರ ಮಾನಸಿಕ ಆರೋಗ್ಯಕ್ಕಾಗಿ ನಾಟಕ ಮಾಡಿಸುವ, ಹುಡುಕುವ, ಅದನ್ನು ಆರೋಗ್ಯಕ್ಕಾಗಿ ವಿಶ್ಲೇಷಿಸುವ ಕಾಯಕವಾಗಿ ಬದಲಾಗಿದೆ! ಕಲೆಗೂ-ವಿಜ್ಞಾನಕ್ಕೂ ಇರುವ ಸಂಬಂಧವನ್ನು ಹುಡುಕುತ್ತಲೇ ನಾಟಕ ನೋಡುವುದು, ಆಡುವುದು, ಮಾಡಿಸುವುದು ನನಗೆ `ನನ್ನ ನಟನೆ -ನನ್ನ ಚಿಕಿತ್ಸೆ ಎಂಬ ಅರಿವನ್ನೂ ಮೂಡಿಸಿರಬಹುದೇನೋ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT