ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲನ್‌ನಿಂದ ಜಾನಕಿಯವರೆಗೆ...

Last Updated 26 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

‘ನಾಟಕದ ಸ್ಟೇಜ್‌ ಮೇಲೆ ನಾನು ಬಂದರೆ ಸಾಕು ಹೆಲನ್ ಹೆಲನ್... ಅಂತ ಪ್ರೇಕ್ಷಕರು ಕೂಗ್ತಾರೆ. ನನ್ನನ್ನು ಬರೀ ಡಾನ್ಸರ್ ಆಗಿಯೋ, ಕಾಮಿಡಿ ನಟಿಯನ್ನಾಗಿಯೋ ನೋಡಿರುವ ಆ ಪ್ರೇಕ್ಷಕರಿಗೆ ಈ ಹೆಲನ್ ಒಳಗಿರುವ ಅಪ್ಪಟ ನಟಿಯ ಪರಿಚಯ ಮಾಡಿಸಬೇಕೆಂಬ ಆಸೆ ಬಹು ವರ್ಷಗಳಿಂದ ಇತ್ತು. ಆ ಆಸೆ ಇದೀಗ ‘ಜಾನಕಿ’ ಮೂಲಕ ನನಸಾಗುತ್ತಿದೆ...’

ವೃತ್ತಿರಂಗಭೂಮಿಯ ಖ್ಯಾತ ನಟಿ ಹೆಲನ್ ಮೈಸೂರು ತಮ್ಮ ಮನದಾಳದ ಮಾತುಗಳನ್ನು ಹೀಗೆ ಬಿಚ್ಚಿಡುತ್ತಿದ್ದಾಗ, ಅವರ ಮೊಗದಲ್ಲಿ ನಟನೆಯ ಸಾರ್ಥಕ್ಯಭಾವ ಎದ್ದು ಕಾಣುತ್ತಿತ್ತು. ಕಂಗಳಲ್ಲಿ ಸಂತೃಪ್ತಿಯ ಭಾವ ಸೂಸುತ್ತಿತ್ತು.

ಅಮ್ಮ ಥೆರೇಸಮ್ಮ ಡಿಸೋಜಾ ಕೂಡಾ ವೃತ್ತಿರಂಗಭೂಮಿಯ ಖ್ಯಾತ ನಟಿ. ಅಮ್ಮನಂತೆ ತಾನು ನಟಿಯಾಗಬಾರದು ಅಂದುಕೊಂಡಿದ್ದ ಹೆಲನ್ ಅವರಿಗೆ ಬಿಟ್ಟನೆಂದರೂ ಬಿಡದೀ ಮಾಯೆಯೆಂಬಂತೆ ಕಲೆ ರಕ್ತಗತವಾಗಿಯೇ ಬಂದಿತ್ತು. ಹಸುಗೂಸಿರುವಾಗಲೇ ರಂಗಭೂಮಿಗೆ ಪದಾರ್ಪಣೆ ಮಾಡಿದ ಅವರು, ಇಂದಿಗೂ ಬಣ್ಣದ ನಂಟು ಉಳಿಸಿಕೊಂಡಿದ್ದಾರೆ.

ವೃತ್ತಿ ನಾಟಕ ಕಂಪನಿ ನಷ್ಟದಲ್ಲಿದ್ದಾಗ ಕಲೆಕ್ಷನ್‌ಗಾಗಿ ಹೆಲನ್ ಅವರನ್ನು ನೆನಪಿಸಿಕೊಳ್ಳುತ್ತಿದ್ದರಂತೆ. ಆಗೆಲ್ಲಾ ನೋವಿನಿಂದಲೇ ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಹೆಲನ್ ಅವರು ಇದೇ 27ರಂದು ದಾಖಲೆಯೊಂದಕ್ಕೆ ಸಜ್ಜಾಗಿದ್ದಾರೆ. ಮೊದಲ ಬಾರಿಗೆ ವೃತ್ತಿರಂಗದ ನಟಿಯೊಬ್ಬರು ಹವ್ಯಾಸಿ ಏಕವ್ಯಕ್ತಿ ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದು, ‘ಜನಕ ಜಾತೆ ಜಾನಕಿ’ ಏಕವ್ಯಕ್ತಿ ಪ್ರದರ್ಶನದ ಮೂಲಕ ಹೆಲನ್ ಹೊಸ ದಾಖಲೆ ಸೃಷ್ಟಿಸುವ ಹಾದಿಯಲ್ಲಿದ್ದಾರೆ.

116 ಪಾತ್ರಗಳ ಮೂಲಕ ಮೂಲ ರಾಮಾಯಣದಲ್ಲಿನ ಜಾನಕಿಯ ಮನದ ತಳಮಳ, ಅವಳ ವ್ಯಕ್ತಿತ್ವವನ್ನು ಕಟ್ಟಿಕೊಡಲಿರುವ ಹೆಲನ್, ಸತತ 2 ಗಂಟೆ 40 ನಿಮಿಷಗಳ ಕಾಲ ರಂಗವನ್ನು ಆವರಿಸಲಿದ್ದಾರೆ. ರಾಮ, ಸೀತೆ, ಲಕ್ಷ್ಮಣ, ದಶರಥ, ಸಖಿಯರು... ಹೀಗೆ ನೂರಾರು ಪಾತ್ರಗಳನ್ನು ತಮ್ಮ ಭಾವಾಭಿನಯದಲ್ಲೇ ತುಂಬಿಕೊಂಡಿರುವ ಅವರು ಈ ನಾಟಕಕ್ಕಾಗಿ ತಿಂಗಳಿನಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಿತ್ಯವೂ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಅಭ್ಯಾಸ ನಿರತರಾಗಿದ್ದಾರೆ.

ರಂಗಭೂಮಿ ಕಲಾವಿದೆ ಹೆಲೆನ್‌
ರಂಗಭೂಮಿ ಕಲಾವಿದೆ ಹೆಲೆನ್‌

‘ಇದುವರೆಗೂ ನಾನು ಏಕವ್ಯಕ್ತಿ ಪ್ರದರ್ಶನಗಳನ್ನು ನೋಡಿಯೇ ಇಲ್ಲ. ‘ಜಾನಕಿ’ ನಾಟಕಕ್ಕೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದಾಗ, ರಾಮಾಯಣದ ಸೀತೆಯ ಪಾತ್ರಕ್ಕೆ ಆಯ್ಕೆ ಮಾಡಿರಬಹುದು ಅಂದುಕೊಂಡಿದ್ದೆ. ಅದೂ ಕೆಲವೇ ದೃಶ್ಯಗಳಲ್ಲಿ ನಾನಿರಬಹುದು ಅಂದುಕೊಂಡಿದ್ದೆ. ಆದರೆ, ಇಡೀ ನಾಟಕದಲ್ಲಿ ನಾನೊಬ್ಬಳೇ ಇರುವುದು ಎಂದು ತಿಳಿದಾಗ ನಾನು ಮಾಡಬಲ್ಲನೇ ಎಂದು ಒಂದು ಕ್ಷಣ ಅಳುಕಿತ್ತು. ಆದರೆ, ನಿರ್ದೇಶಕರ ಮಾರ್ಗದರ್ಶನ ದೊರೆತ ಮೇಲೆ ನನ್ನಲ್ಲೊಂದು ಆತ್ಮವಿಶ್ವಾಸ ಮೂಡಿತು’ ಎನ್ನುತ್ತಾರೆ ಹೆಲನ್.

‘ವೃತ್ತಿರಂಗಭೂಮಿಯಲ್ಲಿ ಹವ್ಯಾಸಿ ರಂಗದಂತೆ ಸ್ಟೇಜ್ ಮೇಲೆ ಬ್ಲಾಕಿಂಗ್ ಇರೋದಿಲ್ಲ. ಹವ್ಯಾಸಿ ರಂಗಶಿಸ್ತನ್ನು ‘ಜಾನಕಿ’ ನಾಟಕದ ಮೂಲಕ ಕರಗತಗೊಳಿಸಿಕೊಂಡಿದ್ದೇನೆ. ದಿನವಿಡೀಯ ಅಭ್ಯಾಸಕ್ಕೆ ಮನೆಯಲ್ಲಿ ತಾಯಿ, ತಂಗಿ ಮತ್ತು ನನ್ನ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ‘ಜಾನಕಿ’ ಪಾತ್ರ ಈಗಲೂ ಹೆಣ್ಣಿನ ಮನಸ್ಸಿನೊಳಗೆ ನಡೆಯುತ್ತಿರುವ ತುಮುಲುಗಳ ಪ್ರತೀಕ. ನಮ್ಮ–ನಿಮ್ಮ ಪ್ರತಿ ಮನೆಯ ಹೆಣ್ಣೂ ಜಾನಕಿಯಂತೆಯೇ’ ಎಂದು ತಮ್ಮ ಪಾತ್ರದ ಆಳ–ಅಗಲವನ್ನು ಬಿಚ್ಚಿಡುತ್ತಾರೆ ಹೆಲನ್.

‘ಮೂಲ ರಾಮಾಯಣದಲ್ಲಿನ ಜಾನಕಿಯೇ ಇಲ್ಲಿದ್ದಾಳೆ. ಆಗ ಒಬ್ಬ ರಾವಣನಿದ್ದ ಈಗ ನೂರಾರು ರಾವಣರಿದ್ದಾರೆ. ಸೀತೆಯ ಅಂತಃಶಕ್ತಿ, ಸಂಯಮತೆಯ ಕಾರಣಕ್ಕಾಗಿ ರಾವಣ ಹೆದರಬೇಕಾಯಿತು. ಸೀತೆಯ ಈ ಶಕ್ತಿಗಳನ್ನು ನಮ್ಮ ಹೆಣ್ಣುಮಕ್ಕಳೂ ರೂಪಿಸಿಕೊಂಡರೆ ಒಳ್ಳೆಯದು. ಪುರುಷ ಸಾಮ್ರಾಜ್ಯದಲ್ಲಿ ವೃತ್ತಿರಂಗ ನಟಿಯಾಗಿ ಅನೇಕ ನೋವುಗಳನ್ನು ಅನುಭವಿಸಿದ್ದೇನೆ. ಆದರೆ, ಆ ಎಲ್ಲಾ ನೋವುಗಳನ್ನು ಮೀರಿದ ಮೇಲೆಯೇ ನನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಯಿತು. ಡಾ.ಎಸ್.ಎಲ್‌.ಎನ್. ಸ್ವಾಮಿ ಅವರ ನಿರ್ದೇಶನದಲ್ಲಿ ಈ ನಾಟಕ ಮಾಡುತ್ತಿರುವುದು ನಿಜಕ್ಕೂ ಸಂತಸವಾಗಿದೆ ಎನ್ನುವ ಹೆಲನ್ ಅವರಿಗೆ ಈ ನಾಟಕ ಮಾಡುವಾಗ ಅನೇಕರು ಬೆದರಿಕೆಯನ್ನೂ ಒಡ್ಡಿದ್ದಾರಂತೆ. ನಾನು ಕ್ರಿಶ್ಚಿಯನ್, ಹಿಂದೂ ಪಾತ್ರ ಹೇಗೆ ಮಾಡುತ್ತೀಯಾ ಅಂತ ಕೇಳ್ತಾರೆ. ಕಲಾವಿದರಿಗೆ ಪಾತ್ರವಷ್ಟೇ ಮುಖ್ಯ ಹೊರತು, ಪಾತ್ರದ ಧರ್ಮ, ಜಾತಿಯಲ್ಲ’ ಅನ್ನುವ ಉತ್ತರ ಅವರದ್ದು.

ಈ ಜಾನಕಿ ಅವಳಲ್ಲ!

ನಮ್ಮಲ್ಲಿ ಸೀತೆ ಕುರಿತು ಅನೇಕ ನಾಟಕಗಳು, ಮಹಾಕಾವ್ಯಗಳು ಬಂದಿವೆ. ಆದರೆ, ಮೂಲ ವಾಲ್ಮೀಕಿ ರಾಮಾಯಣದಲ್ಲಿರುವ ಜಾನಕಿಯೇ ಬೇರೆ. ಮೂಲ ರಾಮಾಯಣದಲ್ಲಿ ಜಾನಕಿಗೆ ಲಕ್ಷ್ಮಣ ರೇಖೆ ಹಾಕುವುದಿಲ್ಲ. ಇಂಥ ಅನೇಕ ಸಂಗತಿಗಳು ಮೂಲ ರಾಮಾಯಣದಲ್ಲಿವೆ. ನನ್ನ ಗುರು ಪಾವಗಡ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ‘ವಾಲ್ಮೀಕಿ ರಾಮಾಯಣ’ವನ್ನು ನಾಟಕ ರೂಪದಲ್ಲಿ ಬರೆದಿದ್ದೇನೆ. ಅದರಲ್ಲಿನ ಜಾನಕಿಯೇ ‘ಜನಕ ಜಾತೆ ಜಾನಕಿ’ ನಾಟಕದ ಕಥಾ ವಸ್ತು ಎನ್ನುತ್ತಾರೆ ನಿರ್ದೇಶಕ ಡಾ.ಎಸ್.ಎಲ್‌.ಎನ್. ಸ್ವಾಮಿ.

‘ಬಹುತೇಕ ರಾಮಾಯಣಗಳು ದಶರಥನ ದರ್ಬಾರ್‌ನಿಂದ ಆರಂಭವಾಗುತ್ತದೆ. ಬೇಕಾದ ರಂಜನೀಯ ದೃಶ್ಯಗಳನ್ನಷ್ಟೇ ನಾಟಕಕಾರರು ಕಟ್ಟಿಕೊಟ್ಟಿದ್ದಾರೆ. ಆದರೆ, ಕಾವ್ಯಾತ್ಮಕವಾಗಿ ಸಂಪೂರ್ಣ ವಿವರಣೆ ಒಳಗೊಂಡಿರುವಂಥದ್ದು ಇಲ್ಲ. ಜಾನಕಿಯನ್ನೇ ಕೇಂದ್ರವಾಗಿಸಿಕೊಂಡು ಕಟ್ಟಿಕೊಡುವ ಪ್ರಯತ್ನಗಳು ಅಷ್ಟಾಗಿ ಆಗಿಲ್ಲ. ಅದನ್ನು ನೀಗಿಸುವ ಪ್ರಯತ್ನ ಈ ನಾಟಕದ್ದು. ಎಲ್ಲವನ್ನೂ ಪರಿತ್ಯಜಿಸಿ ವನವಾಸಕ್ಕೆ ಹೋಗಿರುವ ಸೀತೆ ಕೇವಲ ಮಾಯಾಜಿಂಕೆಗಾಗಿ ಮುಗ್ಧಳಾಗಿ ಪರಿತಪಿಸುತ್ತಾಳೆ. ಸೀತೆಯ ಸಂಪೂರ್ಣ ವ್ಯಕ್ತಿತ್ವದ ಅನಾವರಣ ‘ಜನಕ ಜಾತೆ ಜಾನಕಿ’ ನಾಟಕದಲ್ಲಿ ಆಗುತ್ತದೆ. ಏಕವ್ಯಕ್ತಿಯಾಗಿ ಹೆಲನ್ ಮೈಸೂರು ಅವರು 116 ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇದು ನಿಜಕ್ಕೂ ವಿಶೇಷ ಪ್ರಯತ್ನ’ ಅನ್ನುವುದು ಅವರ ಅಭಿಮತ.

‘ವೃತ್ತಿರಂಗಭೂಮಿಯ ನಟಿಯಾಗಿ ಹೆಲನ್ ಅವರಿಗೆ ಈ ಪಾತ್ರ ಸವಾಲಿನದ್ದಾಗಿದೆ. ನಾಟಕೋತ್ಸವವೊಂದರಲ್ಲಿ ಹೆಲನ್ ಗಂಡು ಪಾತ್ರವೊಂದನ್ನು ಮಾಡಿದ್ದರು. ಅದನ್ನು ನೋಡಿ, ಹೆಲನ್ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ಮಾಡಬಲ್ಲರು ಎಂಬ ವಿಶ್ವಾಸ ಮೂಡಿತು. ಕನ್ನಡ ರಂಗಭೂಮಿಯ ಮಹಿಳಾ ಅಭಿನಯದ ಸುದೀರ್ಘ ಏಕವ್ಯಕ್ತಿ ನಾಟಕವಿದು. ಸೀತಾ ವೃತ್ತಾಂತದ ಪೂರ್ಣ ಅನಾವರಣದ ಪ್ರಥಮ ಪ್ರಯತ್ನವಿದು’ಎನ್ನುತ್ತಾರೆ ಸ್ವಾಮಿ.

‘ಜನಕ ಜಾತೆ ಜಾನಕಿ’ ಏಕವ್ಯಕ್ತಿ ರಂಗಪ್ರದರ್ಶನ

ಅವಧಿ–2 ಗಂಟೆ 40 ನಿಮಿಷ. ಪ್ರಸ್ತುತಿ–ರಂಗಬದುಕು ಟ್ರಸ್ಟ್‌. ರಚನೆ, ಪರಿಕಲ್ಪನೆ, ನಿರ್ದೇಶನ– ಡಾ.ಎಸ್‌.ಎಲ್‌.ಎನ್. ಸ್ವಾಮಿ.ಏಕವ್ಯಕ್ತಿ ಪ್ರದರ್ಶನ: ಹೆಲೆನ್. ಸಾನ್ನಿಧ್ಯ–ಮಧುಸೂದನಾನಂದಪುರಿ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಪಂಡಿತಾರಾಧ್ಯ ಸ್ವಾಮೀಜಿ. ಅತಿಥಿಗಳು–ಆರ್.ಕೆ. ಪದ್ಮನಾಭ, ಜಿ.ವಿ.ಶಾರದಾ, ಡಾ.ಸಿದ್ದಲಿಂಗಯ್ಯ, ಪ್ರೊ.ಕೆ.ಪಿ.ಪುತ್ತೂರಾಯ, ನಾಗಲಕ್ಷ್ಮಿ ಬಾಯಿ, ಗಂಗಾಂಬಿಕೆ ಮಲ್ಲಿಕಾರ್ಜುನ್, ಪ್ರಮೋದ್ ಮುತಾಲಿಕ್, ಹ.ರಾ. ನಾಗಾರಾಜಾಚಾರ್ಯ, ಗಿರಿಜಾ ಲೋಕೇಶ್, ಶಶಿಧರ್ ಕೋಟೆ, ಟಿ. ಬಸಪ್ಪ. ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಶನಿವಾರ ಸಂಜೆ 4.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT