ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಕಲಾವಿದ ಸೋಮಶೇಖರ ರಾವ್ ನಿಧನ

Last Updated 3 ನವೆಂಬರ್ 2020, 9:57 IST
ಅಕ್ಷರ ಗಾತ್ರ

ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್‌.ಜಿ. ಸೋಮಶೇಖರ ರಾವ್ (86) ಅವರು ಮಂಗಳವಾರ ನಿಧನರಾದರು.

ವಯೋಸಹಜ ಕಾಯಿಲೆಗಳನ್ನು ಎದುರಿಸುತ್ತಿದ್ದ ಅವರು, ಎರಡು ದಿನಗಳಿಂದ ಅಸ್ವಸ್ಥರಾಗಿದ್ದರು. ಈ ಕಾರಣ ಅವರನ್ನು ಜಯನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡುಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಶ್ರೀನಗರದಲ್ಲಿರುವ ಅವರ ಸ್ವಗೃಹದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಂಜೆ 4 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ) ಅವರ ಸಹೋದರರಾಗಿರುವ ಸೋಮಶೇಖರ ರಾವ್ ಅವರು, ಕೆನರಾ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಮಿಂಚಿನ ಓಟ, ಮಿಥಿಲೆಯ ಸೀತೆಯರು, ಸಾವಿತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನೆನಪು: ಸೋಮಶೇಖರ್‌ ಕೆನರಾ ಬ್ಯಾಂಕ್‌ನಲ್ಲಿ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಆಗಿದ್ದವರು. ವೃತ್ತಿಯಲ್ಲಿದ್ದುಕೊಂಡೇ ಸಾಹಿತ್ಯ, ರಂಗಭೂಮಿ, ಸಿನಿಮಾ ಕ್ಷೇತ್ರಗಳತ್ತ ಅತೀವ ಆಸಕ್ತಿಯನ್ನು ಹೊಂದಿದ್ದವರು. ಹಿರಿಯ ನಟ ದತ್ತಾತ್ರೇಯ (ದತ್ತಣ್ಣ) ಅವರ ಅಣ್ಣ ಸೋಮಶೇಖರ್‌. ಸುಶಿಕ್ಷಿತ, ಸುಸಂಸ್ಕೃತ ಕುಟುಂಬದ ಹಿನ್ನೆಲೆ ಇವರದ್ದು.

ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕಕರ್ತೃಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದವರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981ರಲ್ಲಿ, ಟಿ.ಎಸ್.ರಂಗಾಅವರ ನಿರ್ದೇಶನದ ‘ಸಾವಿತ್ರಿ’ ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್‌ ಅವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ನಂತರ ಕೆ.ಎಸ್‌.ರವಿ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಚಿತ್ರದಲ್ಲಿ ಸೋಮಣ್ಣ ಅವರದ್ದು ಜವಾಬ್ದಾರಿಯುತ ತಂದೆಯ ಪಾತ್ರ. ರವಿ ಅವರ ನಿರ್ದೇಶನದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರರಾಯರು ನೀಡಿದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ಬದುಕಿನ ಅನುಭವ ಕಥನ ಸೇರಿದಂತೆ ಹಲವು ಸಾಹಿತ್ಯ ಕೃತಿಗಳನ್ನೂ ಅವರು ರಚಿಸಿದ್ದಾರೆ.

ಬ್ಯಾಂಕ್‌ ಸೇವೆಯಿಂದ ನಿವೃತ್ತರಾದ ಬಳಿಕ ರಂಗಭೂಮಿಯ ಕಾಯಕದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿದರು.ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ಜೀವವು ತನ್ನ ಭೌತಿಕ ಕಾಯವನ್ನು ಅಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT