ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆಂಬುದು ಬರಿ ಮಾತಲ್ಲ, ಅದು ಜ್ಯೋತಿರ್ಲಿಂಗ

Last Updated 2 ಮೇ 2019, 9:26 IST
ಅಕ್ಷರ ಗಾತ್ರ

ಮಾತು... ಮಾತು... ಮಾತು... ಮಾತಿನ ಅರಮನೆ ಕಟ್ಟುತ್ತಲೇ ಅದರಿಂದ ಒಂದು ಹೊಸ ರಂಗಪ್ರಕಾರ ಸೃಷ್ಟಿಸಿದ ಕನ್ನಡ ರಂಗಭೂಮಿಯ ಮಹಾನ್ ಪ್ರತಿಭಾವಂತ ಮಾಸ್ಟರ್ ಹಿರಣ್ಣಯ್ಯ. ಹತ್ತು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡ ಅವರ ’ಲಂಚಾವತಾರ’ ನಾಟಕ ಕನ್ನಡ ವೃತ್ತಿರಂಗಭೂಮಿಯಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ. ’ಅತ್ಯಾಚಾರ’, ’ಕಪಿಮುಷ್ಟಿ’, ’ನಡುಬೀದಿ ನಾರಾಯಣ’ -ಮುಂತಾದ ಒಂದೊಂದು ನಾಟಕಗಳೂ ಪ್ರದರ್ಶನ ದಾಖಲೆಯ ಇತಿಹಾಸ ಬರೆದಿವೆ.

ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಗಳಲ್ಲಿ ನಟರಾಗಿ ರಂಗ ಪ್ರವೇಶಿಸಿದ್ದ ಮೈಸೂರಿನ ಕೆ.ಹಿರಣ್ಣಯ್ಯ ಅವರು; ಕೆ.ವಿ.ಅಯ್ಯರ್, ಟಿ.ಪಿ.ಕೈಲಾಸಂ ಒಡನಾಟದಿಂದ ಆಶುಕವಿತೆ ರಚನೆ, ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಕಲೆಯನ್ನು ರೂಢಿಸಿಕೊಂಡಿದ್ದರು. ಎಂ.ಎನ್.ಗೋಪಾಲ್ ಎಂಬುವರೊಂದಿಗೆ ಮೈಸೂರಿನಲ್ಲಿ ಹಿರಣ್ಣಯ್ಯ ಮಿತ್ರಮಂಡಳಿ ಸ್ಥಾಪಿಸಿದ ಕೆ.ಹಿರಣ್ಣಯ್ಯನವರು ’ದೇವದಾಸಿ’, ’ಮಕ್ಮಲ್ ಟೋಪಿ’, ’ಎಚ್ಚಮ ನಾಯಕ’, ’ಪಂಗನಾಮ’ ಎಂಬ ವಿನೂತನ ನಾಟಕಗಳನ್ನು ರಚಿಸಿ ಪ್ರಯೋಗಿಸುವ ಮೂಲಕ ಕನ್ನಡ ವೃತ್ತಿರಂಗಭೂಮಿಗೆ ಭಿನ್ನವಾದ ಸಂಚಲವನ್ನೇ ಉಂಟುಮಾಡಿದ್ದರು. ಇಂಗ್ಲಿಷ್ ಅಧಿಕಾರಿ ಡಾ.ರಾಯನ್ ಅವರು ಕೆ.ಹಿರಣ್ಣಯ್ಯನವರಿಗೆ ’ಕಲ್ಚರ್ಡ್ ಕಮೆಡಿಯನ್’ ಎಂಬ ಬಿರುದು ನೀಡಿ ಗೌರವಿಸಿದ್ದರು.

1934ರ ಫೆಬ್ರವರಿ 15ರಂದು ಮೈಸೂರಲ್ಲಿ ಇಂತಹ ಹಿನ್ನೆಲೆಯ ಕೆ.ಹಿರಣ್ಣಯ್ಯ ಹಾಗೂ ಶಾರದಮ್ಮ ದಂಪತಿಗೆ ಜನಿಸಿದ ಮಾಸ್ಟರ್ ಹಿರಣ್ಣಯ್ಯನವರ ಮೊದಲ ಹೆಸರು ನರಸಿಂಹಮೂರ್ತಿ. ನರಸಿಂಹಮೂರ್ತಿ ಬಾಲಕನಾಗಿದ್ದಾಗ ’ಅಣ್ಣ’ ಎಂದೇ ಎಲ್ಲರೂ ಅವರನ್ನು ಕರೆಯುತ್ತಿದ್ದರು. ತಂದೆ ಕೆ.ಹಿರಣ್ಣಯ್ಯನವರದು ರಂಗಭೂಮಿಯಲ್ಲಿ ದೊಡ್ಡ ಹೆಸರು. ಆದರೂ ಅವರ ಮಗ ನರಸಿಂಹಮೂರ್ತಿ ರಂಗಪ್ರವೇಶ ಮಾಡುವುದು ಅವರಿಗೆ ಇಷ್ಟ ಇರಲಿಲ್ಲ! ಮಗನನ್ನು ಚೆನ್ನಾಗಿ ಓದಿಸಿ ಡಾಕ್ಟರ್ ಅಥವಾ ಎಂಜಿನಿಯರ್ ಮಾಡಬೇಕೆಂದು ಅವರು ಕನಸು ಕಂಡಿದ್ದರು.

ಕೆ.ಹಿರಣ್ಣಯ್ಯ ಎಂಬ ರಂಗದೈತ್ಯ 31 ಮಾರ್ಚ್ 1953ರಲ್ಲಿ ಕೊಡಗಿನಲ್ಲಿ ಇನ್ನಿಲ್ಲವಾಯಿತು. ಮಗ ನರಸಿಂಹಮೂರ್ತಿಗೆ ತಂದೆ ತಾವು ಗಳಿಸಿದ ಹೆಸರನ್ನಷ್ಟೇ ಬಿಟ್ಟು ತೆರಳಿದ್ದರು. ಅವರು ರಚಿಸಿದ್ದ ನಾಲ್ಕು ನಾಟಕಗಳ ಹಸ್ತಪ್ರತಿ, ಹಿರಣ್ಣಯ್ಯ ಮಿತ್ರಮಂಡಳಿ- ಅಷ್ಟೇ ತಂದೆಯಿಂದ ಬಂದ ಆಸ್ತಿ. ಕೊಡಗಿನಲ್ಲಿ ಧೋ ಎಂದು ಮಳೆ ಸುರಿಯುತ್ತಿತ್ತು. ಹಿರಣ್ಣಯ್ಯನವರಿಗೆ ಬೆಂಗಳೂರಲ್ಲಾಗಲಿ, ಮೈಸೂರಲ್ಲಾಗಲಿ ಸ್ವಂತದ ಮನೆ ಇರಲಿಲ್ಲ. ಹಾಗಾಗಿ ಕೆ.ಹಿರಣ್ಣಯ್ಯನವರ ತಾರಾಪತ್ನಿ ಹೆಸರಾಂತ ನಟಿ ಬಳ್ಳಾರಿ ಲಲಿತಮ್ಮನವರು ನಾಟಕದ ಸಾಮಾನು ಸರಂಜಾಮುಗಳನ್ನು ಬಳ್ಳಾರಿಗೆ ಸಾಗಿಸಿದರು. ’ನರಸಿಂಹಮೂರ್ತಿ ಅಲಿಯಾಸ್ ಅಣ್ಣ ಅಲಿಯಾಸ್ ಮಾಸ್ಟರ್ ಹಿರಣ್ಣಯ್ಯ’ ಅಕ್ಷರಶಃ ಬೀದಿಗೆ ಬಿದ್ದಿದ್ದರು. (ಈ ಮಧ್ಯೆ ಬಳ್ಳಾರಿ ಲಲಿತಮ್ಮನವರು ಹೊಸ ನಾಮಕರಣ ಮಾಡಿ ನಡೆಸುತ್ತಿದ್ದ ನಾಟಕ ಕಂಪನಿಯಲ್ಲಿ ೨-೩ ವರ್ಷ ಮಾಸ್ಟರ್ ನಟಿಸಿ ಮತ್ತೆ ಬೆಂಗಳೂರಿಗೆ ವಾಪಸ್ಸಾದರು.) ಬೆಂಗಳೂರಿನ ಕ್ಯಾಂಪ್ ಸಂದರ್ಭಗಳಲ್ಲಿ ತಂದೆ ನಿರ್ಮಿಸುತ್ತಿದ್ದ ರಂಗಮಂದಿರದ ಬಳಿ ಒಂದು ಕೊಳ ಇತ್ತು. ತಂದೆ ಸಂತೋಷ ಅಥವಾ ದುಃಖ ಹೆಚ್ಚಾದಾಗ ಅಲ್ಲಿ ಹೋಗಿ ಕೆಲ ಕಾಲ ಕಳೆದುಬರುತ್ತಿದ್ದರಂತೆ. ಏಕಾಂಗಿ ಹಿರಣ್ಣಯ್ಯನವರಿಗೆ ಈಗ ಆ ಕೊಳವೇ ಆಶ್ರಯ ತಾಣವಾಯಿತು. ಒಂದು ಹಳೆಯ ಟ್ರಂಕ್ ಹಾಗೂ ಹರಕಲು ಚಾಪೆಯೊಂದಿಗೆ ಆ ಕೊಳದಲ್ಲಿ ಒಂದೆರಡು ದಿನ ಉಪವಾಸ ಕಾಲ ಕಳೆದರು ಮಾಸ್ಟರ್. ಕೊಳದಲ್ಲಿ ವಾಸಿಸುತ್ತಿದ್ದ ಯುವಕನನ್ನು ಗಮನಿಸಿದ ಪುಟ್ಟನಂಜಪ್ಪ ಎಂಬ ಶ್ರೀಮಂತರೊಬ್ಬರು ಒಂದು ದಿನ ಎಂಟಾಣೆ ಕೊಟ್ಟರು. ರೂಪಾಯಿಗೆ ೫-೬ ಸೇರು ಅಕ್ಕಿ ದೊರೆಯುತ್ತಿದ್ದ ಕಾಲ ಅದು. ಎರಡು ಮೂರು ಬಾರಿ ಕಾಣಿಸಿಕೊಂಡ ಪುಟ್ಟನಂಜಪ್ಪ ಎಂಟಾಣೆ ಕೊಟ್ಟು ಹೋಗಿಬಿಡುತ್ತಿದ್ದರು.

ನಾಟಕವನ್ನೇ ಮುಂದುವರಿಸು : ಅನಕೃ
ಒಂದು ದಿನ ಎದುರಿಗೆ ಅನಕೃ ಪ್ರತ್ಯಕ್ಷರಾದರು. ’ನೀನು ಓದಿರುವುದು ಪಿಯುಸಿವರೆಗೆ ಮಾತ್ರ. ಅದಕ್ಕೆ ಸಣ್ಣದಾದ ಸರ್ಕಾರಿ ನೌಕರಿ ಮಾಡಬೇಕಾಗುತ್ತದೆ. ಹಾಗಾಗಿ ಅದು ಬೇಡ. ತಂದೆಯ ರಂಗಶ್ರೀಮಂತಿಕೆಯನ್ನೇ ನೀನು ಮುಂದುವರಿಸು’ ಎಂದು ಅನಕೃ ಸಲಹೆ ನೀಡಿದರು. ಸ್ನೇಹಿತರೊಂದಿಗೆ ಹಣ ಕೂಡಿಸಿ ನಾಲ್ಕುಸಾವಿರ ರೂ. ಬಂಡವಾಳವನ್ನೂ ಅನಕೃ ಒದಗಿಸಿಕೊಟ್ಟರು. ತಂದೆಯ ಒಡೆತನದ ಮಿತ್ರಮಂಡಳಿಯಲ್ಲಿ ಈಗಾಗಲೇ ನಟಿಸಿದ್ದ ಬಿ.ಎನ್.ಚಿನ್ನಪ್ಪ, ಮುನಿರಂಗಪ್ಪ, ಪಾರ್ಥಸಾರಥಿ, ನಾಗರತ್ನಮ್ಮನವರನ್ನು ಪತ್ರ ಬರೆದು ಕರೆಸಿಕೊಂಡ ಹಿರಣ್ಣಯ್ಯನವರು ತಂದೆ ಆಡುತ್ತಿದ್ದ ’ದೇವದಾಸಿ’, ’ಮಕ್ಮಲ್ ಟೋಪಿ’, ’ಸುಭದ್ರಾ’, ’ಎಚ್ಚಮ ನಾಯಕ’, ’ಸದಾರಮೆ’ ನಾಟಕಗಳನ್ನೇ ಸಿದ್ಧಪಡಿಸಿಕೊಂಡು ಕಾನಕಾನಹಳ್ಳಿಯಲ್ಲಿ ಮೊದಲ ಕ್ಯಾಂಪ್ ಮಾಡಿದರು. ನಂತರ ಮಳವಳ್ಳಿ, ಕಿನಕಳ್ಳಿ, ಸೋಸಲೆ ಹೀಗೆ ಮುಂದುವರಿಸಿದರು. ಸೋಸಲೆ ಸ್ವಾಮೀಜಿ ಯವರು 500 ರೂಪಾಯಿ ಕೊಟ್ಟು ಹರಸಿದರು.

ಏಳು ಬೀಳಿನೊಂದಿಗೆ ಮಿತ್ರಮಂಡಳಿ ಯಾತ್ರೆ ಆರಂಭಿಸಿತ್ತು. ಮಾಸ್ಟರ್ ಹಿರಣ್ಣಯ್ಯನವರ ಮಿತ್ರ ಮಂಡಳಿಯ ಬೆಂಗಳೂರು ಕ್ಯಾಂಪ್ ಸಂದರ್ಭದಲ್ಲಿ ಮದ್ರಾಸ್‌ನಲ್ಲಿ ಚಿತ್ರನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಬಿ.ಆರ್.ಪಂತುಲು ಅವರು ಸಹಾಯಕನಾಗಿರುವಂತೆ ಮಾಸ್ಟರ್ ಹಿರಣ್ಣಯ್ಯನವರನ್ನು ಆಹ್ವಾನಿಸಿದರು. ಮಾಸ್ಟರ್ ಅವರು ಮಿತ್ರಮಂಡಳಿಯ ನಾಟಕಗಳನ್ನು ಅರ್ಧಕ್ಕೆ ನಿಲ್ಲಿಸಿ ಮದ್ರಾಸ್‌ಗೆ ಪಯಣ ಬೆಳೆಸಿದರು. 1954ರಿಂದ 56ರವರೆಗೆ ಮದ್ರಾಸ್‌ನಲ್ಲಿ ಪಂತುಲುರೊಂದಿಗೆ ಸಿನಿಮಾಗಳ ಸಹಾಯಕನಾಗಿ ಕೆಲಸ ಮಾಡಿದರು ಮಾಸ್ಟರ್.

ಬಳ್ಳಾರಿ ಲಲಿತಮ್ಮ ಕಂಪನಿಗೆ
ಈ ಮಧ್ಯೆ ಮುನಿರಂಗಪ್ಪ ಎಂಬ ವೃತ್ತಿರಂಗಭೂಮಿಯ ದೈತ್ಯ ಸಂಘಟಕ ಮಾಸ್ಟರ್‌ಗೆ ಪತ್ರಬರೆದರು. ’ಈಗ ಬಳ್ಳಾರಿಯಲ್ಲಿ ಲಲಿತಮ್ಮ ಹಾಗೂ ಅವರ ಅಣ್ಣ ವೆಂಕಪ್ಪ ಹಣಕಾಸಿನ ದೃಷ್ಟಿಯಿಂದ ಸುಸ್ಥಿತಿಯಲ್ಲಿದ್ದಾರೆ. ನೀವು ಅವರೊಂದಿಗೆ ಸೇರಿ ಅದ್ದೂರಿಯಾಗಿ ನಾಟಕ ಕಂಪನಿ ಪುನರಾರಂಭ ಮಾಡಬಹುದು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದರು. ಮಾಸ್ಟರ್‌ಗೆ ಸರಿ ಎನಿಸಿತು. ಬಳ್ಳಾರಿಗೆ ಬಂದು ಲಲಿತಮ್ಮ ಹಾಗೂ ಅವರ ಅಣ್ಣ ವೆಂಕಪ್ಪ ಅವರೊಂದಿಗೆ ಸೇರಿ ರಾಘವ ಕಲಾಮಂದಿರದಲ್ಲಿ ’ದೇವದಾಸಿ’ ನಾಟಕನೊಂದಿಗೆ ಅದ್ದೂರಿಯ ಆರಂಭ ಮಾಡಿದರು. ಅಲ್ಲಿಂದ ಮಾಸ್ಟರ್ ಹಿಂತುರಿಗಿ ನೋಡಿದ್ದೇ ಇಲ್ಲ.

’ದೇವದಾಸಿ’ ನಾಟಕದಲ್ಲಿ ಮಾಸ್ಟರ್ ನಾಜೂಕಯ್ಯನ ಪಾತ್ರದಲ್ಲಿ ಅಭಿನಯಿಸಿದರೆ, ಲಲಿತಮ್ಮ ಮಣಿಮಂಜರಿಯಾಗಿ ನಟಿಸಿದರು. ನಾಟಕಗಳು ಭರ್ಜರಿ ಯಶಸ್ಸು ಪಡೆದವು. ನಂತರ ಹೊಸಪೇಟೆ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮುಂತಾದೆಡೆ ಮಿತ್ರಮಂಡಳಿಯ ನಾಟಕಗಳು ಅಭೂತಪೂರ್ವ ಯಶಸ್ಸನ್ನು ಪಡೆಯುತ್ತ ಸಾಗಿದವು. ಕ್ಯಾಂಪ್ ದೊಡ್ಡ ಬಳ್ಳಾಪುರಕ್ಕೆ ಬರುವ ಹೊತ್ತಿಗೆ ಮಾಸ್ಟರ್ ಹಿರಣ್ಣಯ್ಯನವರ ಮದುವೆ ಸಿದ್ಧತೆಗಳು ಆರಂಭವಾದವು. ೧೯೫೮ರ ಡಿಸೆಂಬರ್ ೨೮ರಂದು ಶಾಂತಾ ಅವರನ್ನು ವರಿಸಿದರು.

ಮತ್ತೆ ಮಿತ್ರಮಂಡಳಿ ರಂಗಯಾತ್ರೆ ಯಶಸ್ಸಿನ ದಾರಿಯಲ್ಲಿ ಮುಂದುವರಿಯಿತು. ನಾಟಕ ಚೆನ್ನಾಗಿ ನಡೆಯುತ್ತಿದ್ದವು. ’ವೆಂಕಪ್ಪನವರೊಂದಿಗೆ ಜಂಟಿ ಮಾಲೀಕತ್ವ ಸಾಕು. ನಾಟಕಕ್ಕೆ ನಿಮ್ಮ ಮಾತೇ ಬಂಡವಾಳ. ಸ್ವತಂತ್ರವಾಗಿ ಮುಂದುವರಿಯಿರಿ’ ಎಂದು ಮುತ್ಸದ್ದಿ ಮುನಿರಂಗಪ್ಪ ಸಲಹೆ ನೀಡಿದರು. ಚಿತ್ರದುರ್ಗದ ಕ್ಯಾಂಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ ನವರು ಮಿತ್ರಮಂಡಳಿಯ ಸಂಪೂರ್ಣ ಒಡೆಯರಾದರು. ಮತ್ತೆ ನಾಟಕ ಅಭಿಯಾನ ಶುರುವಾಯಿತು. ಹೊಸದುರ್ಗ, ಶಿವಮೊಗ್ಗ, ದಾವಣಗೆರೆ ಹೀಗೇ ಮುಂದುವರಿಯಿತು. ನಾಟಕವೇನೋ ಯಶಸ್ವಿಯಾಗುತ್ತಿದ್ದವು. ಆದರೆ ಹೊಸತನ ಬೇಕೆನ್ನಿಸಿತು ಮಾಸ್ಟರ್‌ಗೆ.

’ಎಲ್ಲಿಯವರೆಗೆ ತಂದೆಯ ಬೂಟಿನಲ್ಲಿ ಕಾಲಿಟ್ಟು ನಡೆಯುತ್ತೀಯ. ನಿನ್ನದೇ ಭಾಷೆ, ಶೈಲಿ ಬೇಕಲ್ಲವೆ?’ ಎಂದರು ಅನಕೃ, ಬೀಚಿ ಹಾಗೂ ಭೀಮಪ್ಪ ಶೆಟ್ರು. ಆ ಹೊತ್ತಿನಲ್ಲಿ ಸರಿಯಾದ ಸಲಹೆ ನೀಡಿದವರು ಬಳ್ಳಾರಿಯ ಭೀಮಪ್ಪಶೆಟ್ರು ಹಾಗೂ ಭಾಸ್ಕರ ಪಂತುಲು. ’ಲಂಚ’ ಎನ್ನುವುದು ವಿಶ್ವವ್ಯಾಪಿ, ಅದು ಸರ್ವಾತರ್ಯಾಮಿ. ಅದಕ್ಕೆ ಸಾವಿಲ್ಲ. ಲಂಚದ ಕುರಿತೇ ಯಾಕೆ ನಾಟಕ ರಚಿಸಿ ಆಡಬಾರದು ಎಂದೂ ಅವರು ಪ್ರಶ್ನಿಸಿದರು. ಇದರ ಫಲವಾಗಿ ಮೂಡಿಬಂದದ್ದೇ ವೃತ್ತಿರಂಗಭೂಮಿ ಚರಿತ್ರೆಯಲ್ಲಿ ಮೈಲುಗಲ್ಲು ಸ್ಥಾಪಿಸಿದ ’ಲಂಚಾವತಾರ’ ಎಂಬ ನಾಟಕ.

ನಿಜಲಿಂಗಪ್ಪ ಬೆದರಿಕೆ!
ಮಾಸ್ಟರ್ ಅಲಿಯಾಸ್ ನರಸಿಂಹಮೂರ್ತಿ ಬಾಲ್ಯದಿಂದಲೇ ಪಂಚಿಂಗ್ ಮಾತುಗಳನ್ನು ತಮಾಷೆಯ ಶೈಲಿಯಲ್ಲಿ ಹೇಳುವುದರಲ್ಲಿ ನಿಪುಣರಾಗಿದ್ದರು. ಅದನ್ನು ಬಂಡವಾಳವಾಗಿಸಿ ಪ್ರಚಲಿತ ಘಟನೆಗಳನ್ನು ವಿಡಂಬಿಸುತ್ತಲೇ ಯಾಕೆ ನಾಟಕ ಕಟ್ಟಬಾರದು ಎನಿಸಿತು. ತಮ್ಮ ರಂಗಸಂಗಾತಿಗಳಾಗಿದ್ದ ಯೋಗಾನರಸಿಂಹ ಮತ್ತು ಕಣಗಾಲ್ ಪ್ರಭಾಕರಶಾಸ್ತ್ರಿಗಳು ’ಲಂಚಾವತಾರ’ಕ್ಕೆ ಒಂದು ಕಥೆ, ವಿನ್ಯಾಸ ರೂಪಿಸಿದರು. 1959ರ ಡಿಸೆಂಬರ್ 30ರಂದು ಶಿವಮೊಗ್ಗ ಕ್ಯಾಂಪಿನಲ್ಲಿ ’ಲಂಚಾವತಾರ’ದ ನಾಂದಿ ಹಾಡಿಯೇಬಿಟ್ಟರು ಮಾಸ್ಟರ್ ಹಿರಣ್ಣಯ್ಯ. ಅಲ್ಲಿಂದ ಮುಂದಿನ ಅವತಾರವೆಲ್ಲ ಲಂಚಾವತಾರ! ನಭೂತೋ ನಭವಿಷ್ಯತಿ ಯಶಸ್ಸು ಅದಕ್ಕೆ.

1962ರ ಒಂದು ದಿನ ಮಿತ್ರಮಂಡಳಿಯ ಮೈಸೂರು ಕ್ಯಾಂಪ್. ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನಾಟಕ ನೋಡಲು ಆಗಮಿಸಿದ್ದರು. ಪ್ರಜಾವಾಣಿ ಸಂಪಾದಕ ಟಿ.ಎಸ್.ರಾಮಚಂದ್ರರಾಯರು, ಸಾಹಿತಿಗಳಾದ ತರಾಸು, ಅನಕೃ ಆ ದಿನದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು. ಭ್ರಷ್ಟ ರಾಜಕಾರಣಿಗಳು ಹಾಗೂ ಆಡಳಿತ ಪಕ್ಷ ಕಾಂಗ್ರೆಸ್‌ನ ಜನ್ಮ ಜಾಲಾಡುತ್ತಿದ್ದ ಹಿರಣ್ಣಯ್ಯನವರನ್ನು ನೋಡಿ ನಿಜಲಿಂಗಪ್ಪನವರಿಗೆ ಏನನ್ನಿಸಿತೋ, ’ನಾಟಕ ಹೇಗೆ ಮುಂದುವರಿಸುತ್ತಿಯೋ ನೋಡುತ್ತೇನೆ...’ ಎಂದು ಬೆದರಿಕೆ ಹಾಕಿದರು.

ಮಿತ್ರಮಂಡಳಿ ಬೆಂಗಳೂರು ಕ್ಯಾಂಪ್‌ಗೆ ಬರುವ ಹೊತ್ತಿಗೆ ಮುಖ್ಯಮಂತ್ರಿಗಳಿಂದ ನಾಟಕಕ್ಕೆ ತಡೆಯಾಜ್ಞೆ ಬಂದುಬಿಡಬಹುದು ಎಂದು ನಿರೀಕ್ಷಿಸಿದ ಮಾಸ್ಟರ್ ಮೈಂಡ್- ವಕೀಲರಾದ ವಲ್ಲಭಯ್ಯಂಗಾರ್ ಸಲಹೆ ಮೇರೆಗೆ ಕೋರ್ಟಿನಿಂದ ಕೇವಿಯಟ್ ತಂದುಬಿಟ್ಟಿತು. ನಾಟಕ ಪ್ರಯೋಗ ನಿರಾತಂಕವಾಯಿತು. ಕೋರ್ಟಿನಲ್ಲಿ ಎರಡು ತಿಂಗಳು ವಾದ ವಿವಾದ ನಡೆದ ನಂತರ ಮತೀಯ ಭಾವನೆಗಳನ್ನು ಕೆರಳಿಸುವಂತಹದೇನೂ ನಾಟಕದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಿಕ್ಕ ಜಯ ಅದಾಗಿತ್ತು. ಮುಂದೆ ಅದೇ ನಿಜಲಿಂಗಪ್ಪನವರು ಹಿರಣ್ಣಯ್ಯನವರ ನಾಟಕಗಳನ್ನು ಮನಸಾರೆ ಮೆಚ್ಚಿಕೊಂಡಿದ್ದು ಹಾಗೂ ಒಂದು ಲೇಖನ ಬರೆದು ಸಮರ್ಥಿಸಿದ್ದು ಒಂದು ಸ್ವಾಗತಾರ್ಹ ಬೆಳವಣಿಗೆ (ಈ ಸಂಚಿಕೆಯಲ್ಲಿ ಆ ಲೇಖನದ ಆಯ್ದಭಾಗ ಪ್ರಕಟಿಸಲಾಗಿದೆ).

ಇಂದಿರಾಗಾಂಧಿ ಬೆದರಿಕೆ !
’ಕಪಿಮುಷ್ಟಿ’ ನಾಟಕಕ್ಕೂ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಂದ ಇಂತಹದೇ ಬೆದರಿಕೆ ಬಂತು. ನಾಟಕ ಬಂದ್ ಮಾಡುವಂತೆ ನಿಷೇಧಾಜ್ಞೆ ವಿಧಿಸಿದರು. ಕಂಪನಿಯ ಹೊರಗಡೆ ಇಡುತ್ತಿದ್ದ ಬ್ಯಾನರ್‌ಗಳಲ್ಲಿ ಇಂದು ’ದೇವದಾಸಿ’, ’ಎಚ್ಚಮ ನಾಯಕ’ ಎಂದೆಲ್ಲಾ ಬರೆದು ಒಳಗೆ ’ಕಪಿಮುಷ್ಟಿ’ ನಾಟಕ ಪ್ರದರ್ಶಿಸುತ್ತಿದ್ದರು ಹಿರಣ್ಣಯ್ಯ. ಆ ದಿನಗಳಲ್ಲಿ ಸರ್ಕಾರಕ್ಕೆ ಹೀಗೆ ಚಳ್ಳೆಹಣ್ಣು ತಿನ್ನಿಸಲು ಜನಬೆಂಬಲವೇ ಅವರಿಗಿದ್ದ ನೈತಿಕ ಶಕ್ತಿ.

ತೀರ್ಥಹಳ್ಳಿ ಕ್ಯಾಂಪಿನಲ್ಲಿ ಒಬ್ಬ ವ್ಯಕ್ತಿ ಬಂದು ಭಾರೀ ದಾಂಧಲೆಯನ್ನೇ ಎಬ್ಬಿಸಿದ. ಅಷ್ಟೊತ್ತಿಗಾಗಲೇ ಅಪಾರ ಜನಸಮುದಾಯದ ಬೆಂಬಲ ಗಳಿಸಿದ್ದ ಮಾಸ್ಟರ್ ಯಾವುದಕ್ಕೂ ಜಗ್ಗಲಿಲ್ಲ. ಹಿರಣ್ಣಯ್ಯನವರ ರಾಜಕೀಯ ವಿಡಂಬನೆ ಜನಕ್ಕೆ ಎಷ್ಟು ಹಿಡಿಸಿಬಿಟ್ಟಿತ್ತೆಂದರೆ ಮುಂದೆ ಯಾರೂ ಏನು ಮಾಡಲಿಕ್ಕಾಗಲಿಲ್ಲ. ಹಿರಣ್ಣಯ್ಯನವರ ನಾಟಕಗಳಿಗೆ ಅಡ್ಡಿಪಡಿಸುತ್ತಾರೆ ಎಂಬ ಸುಳಿವು ಸಿಕ್ಕಕೂಡಲೇ, ’ಸ್ವಾಮಿ ನಿಮಗೇಂತ ಮಂಗಳಸೂತ್ರ ಬರ್‍ತಾ ಇದೆ’ ಅಂತ ಪೊಲೀಸರೇ ಎಚ್ಚರಿಸಿಬಿಡುತ್ತಿದ್ದರಂತೆ! ’ನಾನು ಜೈಲಿಗೆ ಹೋಗದೇ ಉಳಿದಿದ್ದರೆ ಅದಕ್ಕೆ ಪತ್ರಿಕೆ, ನ್ಯಾಯಾಂಗ, ಪೋಲೀಸ್ ಕಾರಣ. ಅಡ್ಡಿಯಾಗುವ ಸುಳಿವು ಸಿಕ್ಕಕೂಡಲೇ ಮೈಸೂರು, ಚಾಮರಾಜನಗರ, ಗುಂಡ್ಲುಪೇಟೆ ಎಂದು ಹೀಗೇ ಊರೂರು ಸುತ್ತುವೆ...’ ಎಂದು ಹಿರಣ್ಣಯ್ಯ ಮಾರ್ಮಿಕವಾಗಿ ಹಾಗೂ ತಮಾಷೆಯಿಂದ ಅಂದಿನ ದಿನಗಳನ್ನು ಸ್ಮರಿಸುತ್ತಾರೆ.

’ಲಂಚಾವತಾರ’ ಅವರ ಕ್ಯಾಂಪಿನ ಪ್ರಮುಖ ನಾಟಕವಾಗಿತ್ತಾದರೂ, ಅದೊಂದಕ್ಕೇ ಅವರು ತೃಪ್ತಿಪಟ್ಟುಕೊಳ್ಳಲಿಲ್ಲ. ಅದನ್ನು ಸರಿಗಟ್ಟುವಂತೆ ’ಭ್ರಷ್ಟಾಚಾರ’, ’ನಡುಬೀದಿ ನಾರಾಯಣ’, ’ಮಿತಸಂತಾನ’, ’ಅತ್ಯಾಚಾರ’, ’ಎಲ್ಲರೂ ಸಂಪನ್ನರೇ’ ಮುಂತಾದ ನಾಟಕಗಳನ್ನು ರಚಿಸಿದರು. ಎಲ್ಲವೂ ಸಾವಿರಗಟ್ಟಲೆ ಪ್ರಯೋಗಕಂಡಿವೆ. ಶಾಲೆ ಕಾಲೇಜು ಆಡಿಯೋ ವಿಡಿಯೋಗಳಿಗಾಗಿ ೨೦ಕ್ಕೂ ಹೆಚ್ಚು ನಾಟಕಗಳನ್ನು ಮಾಸ್ಟರ್ ಹಿರಣ್ಣಯ್ಯ ಪ್ರಕಟಿಸಿದ್ದಾರೆ. ಭ್ರಷ್ಟಾಚಾರ, ಅನಾಚಾರವನ್ನು ಹೊರಗೆಡಹುವಾಗ ’ಹಲ್ಕನನ್ಮಗ’, ’ಬೇವರ್ಸಿ ನನ್ಮಗ’ ಮುಂತಾದ ಪದಗಳನ್ನು ಅವರು ಹೇರಳವಾಗಿ ಬಳಸಿದ್ದಾರೆ. ಬೈಗಳ ಎಷ್ಟೇ ಪ್ರಮಾಣದಲ್ಲಿದ್ದರೂ ಅದು ಕೋತಿ ಚೇಷ್ಟೆಗೆ ಸೀಮಿತವಾಗದೆ, ರಾಜಕೀಯ ವಿಡಂಬನೆಗೆ ಬಳಕೆಯಾಗುತ್ತಿದ್ದುದರಿಂದ ಯಾರಿಗೂ ಅದು ಅಶ್ಲೀಲವಾಗಿ ಕಂಡಿಲ್ಲ. ಹಾಗಾಗಿ ಅರ್ಧಶತಮಾನ ಕಾಲ ಅವರು ಅನಾಚಾರದ ವಿರುದ್ದ ಮಾತಿನ ಕತ್ತಿ ಝಳಪಿಸಿದರು. ’ಪೊರಕೆಯಿಂದ ಕಸಗುಡಿಸಿ ಕೊಳೆ ತೆಗೆಯುವ ಕೆಲಸದಂತೆ...’ ಎಂದು ತಮ್ಮ ಓತಪ್ರೇತ ಮಾತುಗಾರಿಕೆಯನ್ನು ಅವರು ಆಗಾಗ ಸ್ಮರಿಸಿಕೊಳ್ಳುತ್ತಾರೆ.

ಎಷ್ಟೋ ರಾಜಕಾರಣಿಗಳು ಅವರ ನಾಟಕ ಪ್ರದರ್ಶನಕ್ಕೆ ಬರುವಾಗ ತಾವು ಧರಿಸಿದ್ದ ಗಾಂಧಿ ಟೋಪಿಯನ್ನು ತೆಗೆದು ಜೇಬಲ್ಲಿ ಇಟ್ಟುಕೊಳ್ಳುತ್ತಿದ್ದರಂತೆ. ಕೆಂಗಲ್ ಹನುಮಂತಯ್ಯನವರು ಹಿರಣ್ಣಯ್ಯನವರ ನಾಟಕ ನೋಡಲು ಹೋಗುವಾಗ ಟೋಪಿ ಬೇಡ ಎಂದು ಪೇಟ ಧರಿಸಿ ಹೋಗುತ್ತಿದ್ದರಂತೆ!

ಸ್ವರೂಪದಲ್ಲಿ ಬದಲು
ಸಾಮಾನು ಸರಂಜಾಮು ಹಾಗೂ ೪೦ಮಂದಿ ಕಂಪನಿ ಕಲಾವಿದರೊಂದಿಗೆ ಊರೂರು ಸುತ್ತುವ ನಾಟಕ ಕಂಪನಿಗಳ ಪರಿಪಾಠವನ್ನು ೧೯೮೪ರ ನಂತರ ಮಾಸ್ಟರ್ ಹಿರಣ್ಣಯ್ಯ ಬಿಟ್ಟುಕೊಟ್ಟರು. ಅಭಿಮಾನಿಗಳು ಆಹ್ವಾನಿಸಿದ ಕಡೆ ಹೋಗಿ ನಾಟಕ ಪ್ರದರ್ಶಿಸಿ ಬರಹತ್ತಿದರು. ಆಹ್ವಾನಿತ ನಾಟಕಗಳು ವರ್ಷಕ್ಕೆ ಕನಿಷ್ಟ ೨೦೦ ಇರುತ್ತಿದ್ದವು. ಅಷ್ಟರಲ್ಲೇ ಅವರ ಸಂಸಾರ ರಥ ಸಾಗುತ್ತಿತ್ತು.

ಹಿರಣ್ಣಯನವರದು ಸುಖೀ ಕುಟುಂಬ. ಪತ್ನಿ ಶಾಂತಾ ಅವರ ಪಾಲಿಗೆ ದೇವತೆಯಾಗಿಯೇ ಬಂದವರು. ಹಿರಣ್ಣಯ್ಯನವರ ಕಲಾಯಾತ್ರೆಯ ಜತೆಗೆ ಕುಡಿತ, ಜೂಜುವಿನಂತಹ ವ್ಯಸನಗಳೂ ಅಂಟಿಕೊಂಡಿದ್ದವು. ಆದರೆ ಶಾಂತಮ್ಮ ಮಕ್ಕಳ ಮುಂದೆ ಅವನ್ನೆಂದೂ ಬಣ್ಣಿಸಲಿಲ್ಲ. ಗಂಡನ ವ್ಯಸನಗಳನ್ನು ಗೌಣಗೊಳಿಸಿದರು, ಅಷ್ಟೇ ಅಲ್ಲ, ಮಕ್ಕಳಿಗೆ ನಿಮ್ಮ ತಂದೆ ಕನ್ನಡ ರಂಗಭೂಮಿಯಲ್ಲಿ ಎಷ್ಟು ಎತ್ತರದ ವ್ಯಕ್ತಿ ಎಂದು ಬಣ್ಣಿಸುತ್ತಾ ತಂದೆಯ ಬಗ್ಗೆ ಅಪಾರ ಗೌರವ ಅಭಿಮಾನ ಮೂಡುವಂತೆ ಮಾಡಿದರು. ಹಾಗಾಗಿ ಐದೂ ಜನ ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಕಾಲಮೇಲೆ ತಾವು ನಿಂತುಕೊಂಡಿದ್ದಾರೆ.

ಹಿರಿಯ ಮಗಳು ಶಾರದಾಂಬರನ್ನೂ ಶಾಂತಮ್ಮರ ಸಹೋದರ ಛಾಯಾಪತಿಗೆ ಕೊಟ್ಟು ಮದುವೆ ಮಾಡಿದರು. ಛಾಯಾಪತಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರು. ಎರಡನೆಯವರು ಬಾಬು ಹಿರಣ್ಣಯ್ಯ. ಎಂಜಿನಿಯರಿಂಗ್ ಪದವಿ ಮುಗಿಸಿದ್ದರೂ ನಾಟಕ, ಕಿರುತೆರೆ, ಸಿನಿಮಾಗಳ ಪ್ರಖ್ಯಾತ ನಟನಾಗಿದ್ದು ತಂದೆಯ ಮಿತ್ರಮಂಡಳಿ ಯಾತ್ರೆಯನ್ನು ಮುಂದುವರಿಸಿದ್ದಾರೆ. ಮೂರನೇಯವರು ಶ್ರೀಕಾಂತ. ಅಮೆರಿಕಾದಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿದ್ದಾರೆ. ನಾಲ್ಕನೇ ಮಗಳು ಗೀತಾ. ಐದನೆಯವರು ನಾಗನಾಥ್. ಬೆಂಗಳೂರಿನಲ್ಲಿ ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದಾರೆ. ಮಾಸ್ಟರ್‌ಗೆ ಈಗ ೧೧ಜನ ಮೊಮ್ಮಕ್ಕಳು.

ಅಮೆರಿಕ ಯಾತ್ರೆ
ಅಮೆರಿಕೆಯಲ್ಲಿ ವಾಸವಾಗಿರುವ ಬಿ.ಲಕ್ಷ್ಮಣ್ ಎನ್ನುವವರು ಅಲ್ಲಿನ ತ್ರಿವೇಣಿ ಕನ್ನಡ ಸಂಘದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಾಟಕ ಪ್ರದರ್ಶಿಸುವಂತೆ ೧೯೮೩ರಲ್ಲಿ ಆಹ್ವಾನಿಸಿದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೆರವಿನ ಮೇರೆಗೆ ಅಮೆರಿಕಾ ಯಾತ್ರೆ ಕೈಗೊಂಡ ಮಾಸ್ಟರ್ ಅಲ್ಲಿ ೧೬ಕಡೆ ಉಪನ್ಯಾಸ ಹಾಗೂ ನಾಟಕ ಪ್ರದರ್ಶನ ನೀಡಿಬಂದರು.
ವಿದೇಶಗಳ ಈ ಜೈತ್ರಯಾತ್ರೆ ಅಷ್ಟಕ್ಕೆ ನಿಲ್ಲಲಿಲ್ಲ. ಅಲ್ಲಿಂದ ಮುಂದೆ ಅವರು ಪದೇ ಪದೇ ವಿದೇಶ ಯಾತ್ರೆ ಮಾಡಿದರು. ಆಸ್ಟ್ರೇಲಿಯಾ, ಸಿಂಗಪುರ್, ನ್ಯೂಜಿಲೆಂಡ್, ಇಂಗ್ಲೆಂಡ್, ಬೆಹರಿನ್, ದುಬೈ, ಮಸ್ಕಟ್ ಮುಂತಾದ ದೇಶಗಳನ್ನು ಹಲವಾರು ಬಾರಿ ಸುತ್ತಿ ಕಾರ್ಯಕ್ರಮ ನೀಡಿರುವ ಮಾಸ್ಟರ್ ಅಲ್ಲಿನ ಕನ್ನಡಿಗರ ಮನಸೂರೆಗೊಂಡಿದ್ದಾರೆ.

ಚಿತ್ರರಂಗದಲ್ಲಿ ತಂದೆಯೂ ದುಡಿದಿದ್ದರು. ಯುವಕನಾಗಿದ್ದಾಲೇ ಎರಡು ವರ್ಷ ಮಾಸ್ಟರ್ ಹಿರಣ್ಣಯ್ಯ ಅವರು ಬಿ.ಆರ್.ಪಂತುಲು ಅವರ ಸಹಾಯಕರಾಗಿ ಮದ್ರಾಸ್‌ನಲ್ಲಿ ಕೆಲಸ ಮಾಡಿದ್ದರು. ತಂದೆ ನಿರ್ಮಿಸಿದ ’ವಾಣಿ’ ಚಿತ್ರದಲ್ಲಿ ನಟಿಸಿದ್ದರು. ತಂದೆಯ ನಾಟಕ ಆಧಾರಿತ ’ದೇವದಾಸಿ’ ಚಲನಚಿತ್ರವಾದಾಗ ಅದಕ್ಕೆ ಸಾಹಿತ್ಯ ಒದಗಿಸಿದವರೂ ಹಿರಣ್ಣಯ್ಯನವರೇ. ’ಸಂಪ್ರದಾಯ’ ಎನ್ನುವ ಸಿನಿಮಾವೊಂದನ್ನು ಅವರು ನಿರ್ದೇಶಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಆದರೂ ’ಸಿನಿಮಾ ನನಗೆ ಒಗ್ಗಿ ಬರಲಿಲ್ಲ’ ಎಂಬುದೇ ಮಾಸ್ಟರ್ ಅಭಿಪ್ರಾಯವಾಗಿದೆ. ’ಲಂಚಾವತಾರ’ವನ್ನು ತೆರೆಯ ಮೇಲೇಕೆ ತರಬಾರದು ಎಂಬ ಪತ್ರಕರ್ತರ ಪ್ರಶ್ನೆಗೆ, ’ಚಿತ್ರವನ್ನೇನೋ ತಯಾರಿಸಬಹುದು, ನೀವು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಅದು ತೆರೆಯ ಹಿಂದಿನ ಆಟ’ ಎಂದು ಮಾರ್ಮಿಕವಾಗಿ ಹಿರಣ್ಣಯ್ಯ ಉತ್ತರಿಸುತ್ತಾರೆ.

ಕನ್ನಡ ರಂಗಭೂಮಿಗೆ ಹಿರಣ್ಣಯ್ಯನವರ ಸೇವೆಯನ್ನು ಮನ್ನಿಸಿ ಕನ್ನಡ ರಂಗಭೂಮಿಯ ಅತ್ಯುನ್ನತ ಗುಬ್ಬಿವೀರಣ್ಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಆಳ್ವಾಸ್ ಸಿರಿನುಡಿ, ಶಂಕರೇಗೌಡ ಪ್ರಶಸ್ತಿ ಮುಂತಾದ ೨೦ಕ್ಕೂ ಅಧಿಕ ಗೌರವ ಸನ್ಮಾನಗಳನ್ನು ಸಲ್ಲಿಸಲಾಗಿದೆ.
ಸದಾ ಸರ್ಕಾರದ ಲೋಪಗಳನ್ನು, ಭ್ರಷ್ಟರನ್ನು ಟೀಕಿಸುತ್ತಲೇ ಬಂದ ಹಿರಣ್ಣಯ್ಯನವರನ್ನು ಅದೇ ಸರ್ಕಾರ ಹಲವಾರು ಬಾರಿ ಸನ್ಮಾನಿಸಿತು! ಮಾರ್ಮಿಕವಾಗಿ ಅವರು ಹೇಳಿಕೊಂಡ ಈ ಪ್ರಸಂಗಗಳನ್ನು ಡಾ. ವಿಜಯಾ ’ಮಾಸ್ಟರ್ ಹಿರಣ್ಣಯ್ಯ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಈ ಪುಸ್ತಕ ಪ್ರಕಟಿಸಿದೆ. ಹಿರಣ್ಣಯ್ಯ ಹೀಗೆ ಹೇಳುತ್ತಾರೆ: ನಿರ್ಭಿಡೆಯಿಂದ, ನಿಷ್ಠುರವಾಗಿ ಟೀಕಿಸುವ ತನ್ನಂಥವನಿಗೆ ಈ ಪ್ರಶಸ್ತಿ ಕೊಡುವ ಸರ್ಕಾರದ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಸಮಾಜ ಒಪ್ಪಿದ್ದನ್ನು ಸ್ವೀಕರಿಸುವ ಮನಸ್ಸು, ಸಂಸ್ಕಾರ ಸರ್ಕಾರಕ್ಕಿದೆ ಎಂದು ಭಾವಿಸಿದ್ದೇನೆ. ಆದರೆ ನನ್ನ ವಾಕ್‌ಸ್ವಾತಂತ್ರ್ಯವನ್ನು ಇಂಥ ಯಾವ ಪ್ರಶಸ್ತಿ ಗೌರವದ ಕೃತಜ್ಞತೆಯೂ ಬಂಧಿಸಲಾರದು. ಸಂದುದೆಲ್ಲ ನನ್ನ ಅನ್ನದಾತರ ಅಭಿಮಾನದ ಫಲವಾಗಿಯೇ ವಿನಾ, ಆಳುವವರ ಔದಾರ್ಯದಿಂದ ಅಲ್ಲ ಎಂಬ ಅರಿವು ನನಗಿದೆ.’

ಕನ್ನಡ ರಂಗಭೂಮಿಯೇ ಆಸ್ತಿ
ಕಂಠಪೂರ್ತಿ ಕುಡಿದೂ ಪಾತ್ರಕ್ಕೆ ಯಾವುದೇ ವ್ಯತ್ಯಯ ಬಾರದಂತೆ ನಟಿಸಿದವರಲ್ಲಿ ಹಿರಣ್ಣಯ್ಯ ಅಗ್ರಗಣ್ಯರು. ಅಮೆರಿಕಾಕ್ಕೆ ಮೊದಲ ಪ್ರವಾಸ ಕೈಗೊಂಡಾಗ ಅಲ್ಲಿಯ ಕನ್ನಡಿಗರು ಮತ್ತೆ ಅಮೇರಿಕಾಕ್ಕೆ ಬರುವ ಹೊತ್ತಿಗೆ ಕುಡಿತ ಬಿಡಬೇಕು ಎಂದು ಷರತ್ತು ವಿಧಿಸಿದ್ದರಂತೆ. ಒಮ್ಮೆ ಹರ್ನಿಯಾ ಆಪರೇಷನ್ ಮಾಡಿದ ಡಾಕ್ಟರ್ ವಿಠಲ್ ಅವರು ಹಿರಣ್ಣಯ್ಯನವರಿಗೆ ’ನೀನು ಕುಡಿತ ಬಿಡು, ಅದೇ ನನಗೆ ಕೊಡುವ ಫೀಸು’ ಎಂದರಂತೆ. ಒಂದು ದಿನ ಮಾಸ್ಟರ್ ಹಿರಣ್ಣಯ್ಯನವರು ಕುಡಿತವನ್ನು ಸಂಪೂರ್ಣ ನಿಲ್ಲಿಸೇಬಿಟ್ಟರು. ಕುಡಿದ ಹಿರಣ್ಣಯ್ಯ ಆಗಲಿ, ಕುಡಿಯದ ಹಿರಣ್ಣಯ್ಯ ಆಗಲೀ ಅಭಿನಯದ ಅವರ ಸೃಜನಾತ್ಮಕ ಪ್ರತಿಭೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲವಾದರೂ, ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಕಾರಿಯಾಯಿತು. ಯಾಕೆಂದರೆ ಅವರು ಕನ್ನಡ ಸಾರಸ್ವತ ಲೋಕದ ಆಸ್ತಿ. ಹಿತೈಷಿಗಳ ಹಾರೈಕೆ ಫಲಕೊಟ್ಟಿದೆ. ೮೦ ಸಮೀಪಿಸುತ್ತಿರುವ ಹಿರಣ್ಣಯ್ಯ ರಂಗಸ್ಥಳದ ಮೇಲೆ ಈಗಲೂ ಹಾಗೇ ಮಾತಿನ ಚಾಟಿ ಬೀಸುತ್ತಾರೆ.

ಯಾರಿಗೂ ಹಾನಿಮಾಡದ, ಆ ಕಾರಣಕ್ಕೆ ಭ್ರಷ್ಟರಾಗದ ಕೆಲವು ವ್ಯಸನಗಳು ಕಲಾವಿದರಿಗೆ ಸಾಮಾನ್ಯವಾಗಿ ಇರುತ್ತವೆ. ಹಿರಣ್ಣಯ್ಯನವರಿಗೂ ಕೆಲಕಾಲ ಇಂತಹ ವ್ಯಸನಗಳಿದ್ದವು. ಮಕ್ಕಳು ಆಕ್ಷೇಪಿಸಿದಾಗ ಹಿರಣ್ಯಯ್ಯನವರ ಪತ್ನಿ ಶಾಂತಮ್ಮ ಮಕ್ಕಳಿಗೆ ಕೊಟ್ಟ ಉತ್ತರ ಸನ್ಮಾರ್ಗದಿಂದ ನಡೆಸುವುದಾಗಿತ್ತು: "ನಿಮ್ಮಪ್ಪ ಕನ್ನಡ ರಂಗಭೂಮಿಯ ಆಸ್ತಿ. ಇದೆಲ್ಲ ಅವರ ಸ್ವಂತ ಪರಿಶ್ರಮದಿಂದ ದುಡಿದದ್ದು. ನೀನು ದುಡಿ, ನಂತರ ಮಾತನಾಡು.." ಎಂದು ತಿದ್ದಿ ಬುದ್ದಿ ಹೇಳಿದರು. ಹಾಗಾಗಿ ಮಕ್ಕಳೆಲ್ಲ ಸಂಸ್ಕಾರವಂತರಾದರು. ಹಿರಣ್ಣಯ್ಯನವರ ಯಶಸ್ಸಿನ ಹಿಂದೆ ಶಾಂತಮ್ಮನವರ ಪಾತ್ರ ಮಹತ್ವದ್ದು.

ನಿಮ್ಮದು ಒನ್‌ಮ್ಯಾನ್ ಷೋ..
ಎಲ್ಲ ಸರಿ. ಹಿರಣ್ಣಯ್ಯನವರದು ಏಕಪಾತ್ರಾಭಿನಯವೇ ಅಥವಾ ಅವರ ನಾಟಕದಲ್ಲಿ ಅವರದೊಬ್ಬರದೇ ಭಾಷಣವೆ? ಅದಕ್ಕೆ ಹಿರಣ್ಣಯ್ಯನವರು ಬಹಳ ಚುರುಕಾದ ಉತ್ತರ ನೀಡುತ್ತಾರೆ. ಎಷ್ಟೆಂದರೂ ಕನ್ನಡದಲ್ಲಿ ಹಾಸ್ಯಪ್ರಕಾರವನ್ನು ಬೆಳೆಸಿದ ಟಿ.ಪಿ.ಕೈಲಾಸಂ, ಬೀಚಿ ಅವರ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಅವರದಲ್ಲವೆ?

’ನಿಮ್ಮದು ಒನ್ ಮ್ಯಾನ್ ಷೋ...’ ಎಂದು ಪತ್ರಕರ್ತರು ಪ್ರಶ್ನಿಸಿದರೆ, ’ಸದ್ಯ ನನ್ನನ್ನು ಒಬ್ಬ ಮನುಷ್ಯ ಎಂದಿರಲ್ಲ...’ ಎಂಬುದು ಅವರ ಉತ್ತರ.

ಒಂದು ಕಲಾಪ್ರಕಾರವನ್ನು ನಿಷ್ಠೆಯಿಂದ ಬೆಳೆಸಿ ಪೋಷಿಸಿದರು, ಹಾಗಂತ ಅವರಿಗೆ ಯಾವುದೇ ಭ್ರಮೆಯಿಲ್ಲ. ಜನ ಹೊಗಳಲಿ, ತೆಗಳಲಿ ನಿರರ್ಗಳವಾದ ಅವರ ಮಾತಿನ ಲಹರಿಗೆ ತಡೆ ಇಲ್ಲ. ಅದರ ಕಲಾತ್ಮಕ ನಡೆಗೆ ಯಾವುದೇ ಅಡ್ಡಿಇಲ್ಲ.

ಸಾಹಿತಿ ಗೊ.ರು.ಚನ್ನಬಸಪ್ಪ ಮಾಸ್ಟರ್ ಬಗ್ಗೆ ಹೇಳುವ ಈ ಮಾತುಗಳು ಅವರ ಕೊಡುಗೆಗೆ ಕನ್ನಡಿ ಹಿಡಿದಿವೆ. ’ಮಾಸ್ಟರ್ ಹಿರಣ್ಣಯ್ಯ ರಂಗಭೂಮಿ ಒಂದು ಅಂಗವಷ್ಟೇ ಅಲ್ಲ, ಅವರರೇ ಒಂದು ರಂಗಭೂಮಿ. ಅವರ ನಾಟಕಗಳಿಗೆ ವಸ್ತು ಸಿದ್ಧವಾಗಬೇಕಿಲ್ಲ. ಇದ್ದ ವಸ್ತುವಿಗೇ ಮಾತಿನ ಒಡವೆ ತೊಡಿಸಿ ಪ್ರೇಕ್ಷಕರನ್ನು ರಂಜಿಸಿಬಿಡುತ್ತಾರೆ.’

ಹೌದು. ಮಾತಿಗೆ ಒಂದು ಮಹತ್ವವನ್ನು ತಂದುಕೊಟ್ಟವರು ಮಾಸ್ಟರ್ ಹಿರಣ್ಣಯ್ಯ. ಯಾಕೆಂದರೆ ಮಾತು ನಾಟಕದಲ್ಲಿ ಒಂದು ಪ್ರಮುಖವಾದ ಅಂಗ. ಮಾಸ್ಟರ್ ಹಿರಣ್ಣಯ್ಯನವರಿಗೆ ಮಾತೆಂಬುದು ಬರಿ ಮಾತಲ್ಲ, ಅದು ಜ್ಯೋತಿರ್ಲಿಂಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT