ಗುರುವಾರ , ಸೆಪ್ಟೆಂಬರ್ 16, 2021
26 °C
ಏಳೂವರೆ ತಾಸು, ವಿನೂತನ ಪ್ರಯೋಗ, ಮಾರ್ಚ್‌ನಲ್ಲಿ ‍ಪ್ರದರ್ಶನ

ಪರ್ವ ಕಾದಂಬರಿಗೆ ನಾಟಕ ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರ ಜನಪ್ರಿಯ ಕಾದಂಬರಿ ‘ಪರ್ವ’, ಕೆಲವೇ ದಿನಗಳಲ್ಲಿ ರಂಗರೂಪದಲ್ಲಿ ಕಲಾಪ್ರೇಮಿಗಳ ಮನದಂಗಳ ಪ್ರವೇಶಿಸಲಿದೆ.

ಮೈಸೂರು ರಂಗಾಯಣದ ವತಿಯಿಂದ, ಮಾರ್ಚ್‌ ಮೊದಲ ವಾರದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ.‌ ಇದಕ್ಕಾಗಿ ವೇದಿಕೆ ಸಜ್ಜುಗೊಂಡಿದ್ದು, ಬಿರುಸಿನ ತಾಲೀಮು ನಡೆದಿದೆ.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಈ ಯೋಜನೆಯ ರೂವಾರಿ. ರಂಗಭೂಮಿ ಕಲಾವಿದ, ನಟ ಪ್ರಕಾಶ್ ಬೆಳವಾಡಿ ಅವರು ಪರ್ವ ಕಾದಂಬರಿಯನ್ನು ರಂಗಭೂಮಿಗೆ ತರುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪರ್ವದ ರಂಗಪಠ್ಯ ಸಿದ್ಧಪಡಿಸಿದ್ದಾರೆ.

ಏಳೂವರೆ ತಾಸಿನ ಸುದೀರ್ಘ ರಂಗ ಪ್ರದರ್ಶನ ಇದಾಗಿದ್ದು, ನಾಟಕದ ನಡುವೆ ಉಪಾಹಾರ ಹಾಗೂ ಚಹಾ ವಿರಾಮ ಸೇರಿದಂತೆ ಒಟ್ಟು ನಾಲ್ಕು ವಿರಾಮಗಳು ಇರಲಿವೆ.

ರಂಗಾಯಣದ ವಿನ್ಯಾಸಕಾರ ಎಚ್.ಕೆ.ದ್ವಾರಕಾನಾಥ್ ರಂಗಸಜ್ಜಿಕೆ ವಿನ್ಯಾಸಗೊಳಿಸಲಿದ್ದಾರೆ. ಪ್ರಸಾದ್‌ ಬಿದಪ್ಪ ವಸ್ತ್ರವಿನ್ಯಾಸ ರೂಪಿಸಿದ್ದಾರೆ. ‘ಮೇಕಿಂಗ್ ಆಫ್ ಪರ್ವ’ ಶೀರ್ಷಿಕೆಯಡಿ, ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಿದ್ದಾರೆ.

‘ಪರ್ವದಂಥ ಬೃಹತ್ ಕಾದಂಬರಿಯನ್ನು ರಂಗಭೂಮಿಗೆ ತರುವುದು ಸವಾಲಿನ ವಿಷಯ. ಆ ಸವಾಲನ್ನು ನಾವು ಧೈರ್ಯದಿಂದ ಸ್ವೀಕರಿಸಿದ್ದೇವೆ. ಈ ವಿಚಾರವಾಗಿ ಭೈರಪ್ಪ ಅವರು ಮೂರು ಬಾರಿ ನಮ್ಮೊಂದಿಗೆ ಸಂವಾದ ನಡೆಸಿದ್ದಾರೆ. ರಂಗಪಠ್ಯ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅಡ್ಡಂಡ ಕಾರ್ಯಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಈ ಪ್ರಯೋಗದ ವಿಚಾರವಾಗಿ ಟೀಕೆ ಟಿಪ್ಪಣಿಗಳಿಗೆ ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧವಾಗಿ ಕಣಕ್ಕಿಳಿದಿದ್ದೇವೆ. ಪ್ರಾಮಾಣಿಕವಾಗಿದ್ದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ವಾಟ್ಸ್‌ಆ್ಯಪ್‌, ಸಾಮಾಜಿಕ ತಾಣಗಳಲ್ಲಿ ಕೆಣಕುವವರಿಗೆ ಕೆಲಸವಿರುವುದಿಲ್ಲ. ಅದರ ಕಡೆ ಗಮನ ಹರಿಸಲು ನಮಗೆ ಸಮಯ ಇಲ್ಲ. ಪರ್ವ ಕಾದಂಬರಿ ದೇಶದ ಹೆಮ್ಮೆ. ಟೀಕೆ ಮಾಡುವವರಿಗೆ ಧಮ್ಮಿದ್ದರೆ, ಕಾದಂಬರಿ ಮುಂದಿಟ್ಟುಕೊಂಡು ಚರ್ಚಿಸಲಿ’ ಎಂದು ಸವಾಲು ಹಾಕಿದರು.

ಪರ್ವ ವಿರಾಟ್‌ ದರ್ಶನ: ಪರ್ವ ನಾಟಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ರಂಗಾಯಣ ಹಾಗೂ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಫೆ.21ರಂದು ಮೈಸೂರಿನ ಕಲಾಮಂದಿರದಲ್ಲಿ ‘ಪರ್ವ ವಿರಾಟ್‌ ದರ್ಶನ’ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಎಸ್‌.ಎಲ್‌. ಭೈರಪ್ಪ, ವಿದ್ವಾಂಸ ಶತಾವಧಾನಿ ಆರ್‌.ಗಣೇಶ್ ಹಾಗೂ ಪ್ರಕಾಶ್‌ ಬೆಳವಾಡಿ ಪಾಲ್ಗೊಳ್ಳಲಿದ್ದಾರೆ.

₹ 50 ಲಕ್ಷ ನೆರವಿಗೆ ಮನವಿ

₹ 60 ಲಕ್ಷ ವೆಚ್ಚದಲ್ಲಿ ಪರ್ವ ನಾಟಕದ ಸರಣಿ ಪ್ರದರ್ಶನ ಆಯೋಜನೆಗೆ ರಂಗಾಯಣ ಯೋಜನೆ ರೂಪಿಸಿದೆ. ಇದಕ್ಕಾಗಿ ತನ್ನ ವಾರ್ಷಿಕ ಅನುದಾನದ ₹ 10 ಲಕ್ಷ ಮೀಸಲಿರಿಸಿದೆ. ₹ 50 ಲಕ್ಷ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

‘ಪರ್ವ ಕಾದಂಬರಿಯನ್ನು ರಂಗದ ಮೇಲೆ ತರಲು ಸರ್ಕಾರದ ಆರ್ಥಿಕ ಸಹಾಯ ಅಗತ್ಯವಿದೆ. ಈ ಸಂಬಂಧ ಪತ್ರ ವ್ಯವಹಾರ ನಡೆದಿದೆ. ಭೈರಪ್ಪ ಅವರ ಹೆಸರು ಕೇಳಿದರೆ ಹಣ ಸಂಗ್ರಹವಾಗದೇ ಇರದು’ ಎಂದು ಅಡ್ಡಂಡ ಕಾರ್ಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

40 ಮಂದಿಯ ತಂಡ

ರಂಗಾಯಣದ 15 ಕಲಾವಿದರು, 20 ಹವ್ಯಾಸಿ ಕಲಾವಿದರು, ತಂತ್ರಜ್ಞರು ಸೇರಿ 40 ಮಂದಿಯ ತಂಡ ತಾಲೀಮು ನಡೆಸುತ್ತಿದೆ.

ಪರ್ವ ಕಾದಂಬರಿಯನ್ನು ರಂಗಭೂಮಿಗೆ ತರಲು ಎಸ್‌.ಎಲ್‌.ಭೈರಪ್ಪ ಸಮ್ಮತಿಸಿದ್ದು, ತಾಲೀಮು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದರು.

ಮೈಸೂರಿನ ಬಳಿಕ 10 ಜಿಲ್ಲೆಗಳಲ್ಲಿ ತಲಾ 2 ಪ್ರದರ್ಶನ ನೀಡಲು ಉದ್ದೇಶಿಸಲಾಗಿದೆ. ಹೊರರಾಜ್ಯದಲ್ಲಿ ನವದೆಹಲಿ, ವಾರಾಣಸಿ ಸೇರಿದಂತೆ ಐದು ಸ್ಥಳಗಳಲ್ಲಿ ಪ್ರದರ್ಶನ ನೀಡಲಾಗುವುದು. ಡಿಜಿಟಲ್‌ ಸ್ಕ್ರೀನ್‌ನಲ್ಲಿ ಸಬ್‌ ಟೈಟಲ್‌ ಪ್ರದರ್ಶಿಸಲಾಗುತ್ತದೆ ಎಂದರು.

***

ಭಾರತೀಯ ರಂಗಭೂಮಿಯಲ್ಲಿ ಇದೊಂದು ವಿಶೇಷ ಪ್ರಯೋಗ ಹಾಗೂ ಮೈಲುಗಲ್ಲು. ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ

- ಅಡ್ಡಂಡ ಸಿ.ಕಾರ್ಯಪ್ಪ, ನಿರ್ದೇಶಕ, ರಂಗಾಯಣ ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು