ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಗನ್ನಡದ ಮಹತ್ವ ಸಾರುವ ‘ಕವಿಜಂಗಮ’ ವಿದ್ಯಾರ್ಥಿಗಳು

Last Updated 23 ನವೆಂಬರ್ 2019, 9:45 IST
ಅಕ್ಷರ ಗಾತ್ರ

ಹಳಗನ್ನಡ ಸಾಹಿತ್ಯವನ್ನು ಓದುವ ಪರಂಪರೆ ದಿನೇದಿನೇ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳಿರಲಿ, ಕನ್ನಡ ಅಧ್ಯಾಪಕರು, ಉಪನ್ಯಾಸಕರೂ ಹಳಗನ್ನಡದ ಕಾವ್ಯಗಳನ್ನು ಬಿಡಿಸಿ, ಓದಿ, ಅರ್ಥೈಸಲು ಕಷ್ಟಪಡುತ್ತಾರೆ. ಕನ್ನಡದ ವಿದ್ಯಾರ್ಥಿಗಳಿಗಂತೂ ಅದು ಕಬ್ಬಿಣದ ಕಡಲೆಯೇ ಸರಿ. ಹಳಗನ್ನಡ ಸಾಹಿತ್ಯದ ಮಹತ್ವವನ್ನು ಯುವಪೀಳಿಗೆಗೆ ತಿಳಿಸುವ ಉದ್ದೇಶದಿಂದ ರಂಗ ನಿರ್ದೇಶಕ ಸತೀಶ್ ಪೊನ್ನಾಚಿ ಅವರು ‘ಕವಿ ಜಂಗಮರು’ ಎಂಬ ನಾಟಕವನ್ನು ನಿರ್ದೇಶಿಸುತ್ತಿದ್ದಾರೆ.

ರತ್ನತ್ರಯರಾದ ಪಂಪ, ರನ್ನ, ಪೊನ್ನ ಹಾಗೂ ಕುಮಾರವ್ಯಾಸ ಅವರ ಕಾವ್ಯಗಳ ಆಯ್ದ ಭಾಗಗಳು, ವಚನಕಾರರ ಆಯ್ದ ವಚನಗಳನ್ನು ಆಧರಿಸಿ ಈ ನಾಟಕವನ್ನು ರೂಪಿಸಲಾಗಿದೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹ ಸಂಶೋಧಕ ಆಗಿರುವ ಡಾ.ಕುಪ್ನಳ್ಳಿ ಎಂ.ಬೈರಪ್ಪ ಅವರು ಹಳಗನ್ನಡದ ಪದ್ಯಗಳನ್ನು ಹೊಸಗನ್ನಡದಲ್ಲಿ ನಾಟಕಕ್ಕೆ ಅಳವಡಿಸಿಕೊಂಡಿದ್ದಾರೆ. ವಚನಗಳನ್ನು ಬೈರಪ್ಪ ಹಾಗೂ ಸತೀಶ್ ಪೊನ್ನಾಚಿ ರಂಗರೂಪಕ್ಕೆ ಇಳಿಸಿದ್ದಾರೆ.

ನಕ್ಷತ್ರ ಫೌಂಡೇಷನ್ ಸಂಸ್ಥೆ ಆಶ್ರಯದಲ್ಲಿ ಮೈಸೂರು ಫಿಲ್ಮ್ ಇನ್‌ಸ್ಟಿಟ್ಯೂಟ್‌ನ 15 ವಿದ್ಯಾರ್ಥಿಗಳು ಈ ನಾಟಕದಲ್ಲಿ ಅಭಿನಯಿಸುತ್ತಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ.

ಮೈಸೂರು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳಿನಿಂದ ಕಾರ್ಯಾಗಾರ ಹಮ್ಮಿಕೊಂಡಿದ್ದು, ನಟನೆ, ಹಾಡುಗಾರಿಕೆ, ಮಾರ್ಷಲ್ ಆರ್ಟ್ಸ್, ದೇಹಭಾಷೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಿಗೆ ನಾಟಕವನ್ನು ಹೇಳಿಕೊಡಲಾಗುತ್ತಿದೆ ಎಂದು ಸತೀಶ್ ಪೊನ್ನಾಚಿ ತಿಳಿಸಿದರು.

10ನೇ ತರಗತಿಯ ಕನ್ನಡ ಪ್ರಥಮ, ದ್ವಿತೀಯ, ತೃತೀಯ ಭಾಷಾ ವಿಷಯದಲ್ಲಿರುವ ಹಳಗನ್ನಡದ ಪದ್ಯಗಳನ್ನು ಆಯ್ದುಕೊಂಡು ಅದನ್ನು ಹೊಸಗನ್ನಡಕ್ಕೆ ರೂಪಾಂತರಿಸಲಾಗಿದೆ. 12ನೇ ಶತಮಾನದ ವಚನಕಾರರಾದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯ ಅವರ ವಚನಗಳ ಮಹತ್ವ ಹಾಗೂ ಅಂದಿನ ಜಾತಿ ವ್ಯವಸ್ಥೆ, ಅಸಮಾನತೆ ವಿರುದ್ಧ ವಚನಗಳ ಮೂಲಕ ಪರಿವರ್ತನೆ ತಂದ ಬಗೆಯನ್ನು ನಾಟಕದಲ್ಲಿ ದೃಶ್ಯರೂಪಕ್ಕೆ ಇಳಿಸಲಾಗಿದೆ ಎಂದರು.

ಮೈಸೂರು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸತೀಶ್‌ ಪೊನ್ನಾಚಿ
ಮೈಸೂರು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸತೀಶ್‌ ಪೊನ್ನಾಚಿ

ಪಂಪ–ರನ್ನನ ಪ್ರಸಂಗ: ನಾಟಕದಲ್ಲಿ ಆರು ನಿರೂಪಕರು ಬರುತ್ತಾರೆ. ಅವರು ಇಡೀ ನಾಟಕವನ್ನು ನಿರೂಪಿಸುತ್ತಲೇ ಪಾತ್ರಧಾರಿಗಳಾಗಿ ಪರಿವರ್ತನೆಯಾಗುತ್ತಾರೆ. ಪಂಪ ಹಿನ್ನೆಲೆಯನ್ನು ಹೇಳುತ್ತಿದ್ದಂತೆ ರನ್ನ ಬರುತ್ತಾನೆ. ಅಲ್ಲಿ ಇಬ್ಬರ ಸಂವಾದ ನಡೆಯುತ್ತದೆ. ‘ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಬರೆದಿದ್ದೀರಿ ಸರಿ. ಆದರೆ, ದ್ರೌಪದಿ ಅರ್ಜುನನಿಗೆ ಮಾತ್ರ ಸ್ವಂತ ಅಂತ ಬರೆದಿದ್ದೀರಲ್ಲಾ ಏಕೆ’ ಎಂದು ರನ್ನ ಪ್ರಶ್ನಿಸುತ್ತಾನೆ.

ದ್ರೌಪದಿಗೆ ಸ್ವಯಂವರ ನಡೆದಾಗ ರಾಜರು, ದೊರೆಗಳು, ಕ್ಷತ್ರಿಯರ ಮುಂದೆ ಅರ್ಜುನನೊಬ್ಬನೇ ಮೀನಿನ ಕಣ್ಣಿಗೆ ಬಾಣ ಹೊಡೆಯುತ್ತಾನೆ. ಹೀಗಾಗಿ, ಅವನಿಗೆ ಮಾತ್ರ ಸ್ವಂತ ಎಂದು ಹೇಳಿದ್ದೇನೆ ಎಂದು ಪಂಪ ವಿವರಿಸುತ್ತಾನೆ.

ಸತೀಶ್ ಪೊನ್ನಾಚಿ
ಸತೀಶ್ ಪೊನ್ನಾಚಿ

‘ಅರಿಕೇಸರಿ ಹೇಗೆ ನಿಷ್ಠಾವಂತ ಎಂಬುದನ್ನು ಹೇಗೆ ಬರೆದಿದ್ದೇನೆ ಎಂಬುದನ್ನು ವಿವರಿಸುತ್ತೇನೆ’ ನೋಡು ಎನ್ನುತ್ತಿದ್ದಂತೆ ಆಯಾ ಪಾತ್ರಧಾರಿಗಳು ವೇದಿಕೆಗೆ ಬಂದು ಅಭಿನಯಿಸುತ್ತಾರೆ.

ಗದಾಯುದ್ಧಕ್ಕೆ ಸಂಬಂಧಿಸಿದ ಪ್ರಸಂಗ: ಈ ಪ್ರಸಂಗದಲ್ಲಿ ರನ್ನ ಹಾಗೂ ಪೊನ್ನನ ನಡುವೆ ಸಂವಾದ ಏರ್ಪಡುತ್ತದೆ. ರನ್ನ ಬರೆಯುವುದರಲ್ಲಿ ಮಗ್ನರಾಗಿರುತ್ತಾನೆ. ಅಲ್ಲಿಗೆ ಪೊನ್ನ ಬರುತ್ತಾನೆ. ‘ಪಂಪ ಅರ್ಜುನನ್ನು ಪ್ರಧಾನವಾಗಿ ತೆಗೆದುಕೊಂಡು ಬರೆದಿದ್ದಾರೋ ಹಾಗೆಯೇ ಭೀಮನನ್ನು ಪ್ರಧಾನವಾಗಿ ಇಟ್ಟುಕೊಂಡು ನಾನು ಗದಾಯುದ್ಧ ಬರೆದಿದ್ದೇನೆ’ ಎಂದು ರನ್ನ ಹೇಳುತ್ತಿದ್ದಂತೆ ಅಲ್ಲಿ ಗದಾಯುದ್ಧ ಪಾತ್ರಧಾರಿಗಳ ಪ್ರವೇಶವಾಗುತ್ತದೆ.

ಕರ್ಣ ಮತ್ತು ಕೃಷ್ಣ ಪ್ರಸಂಗ: ಕರ್ಣನ ಹುಟ್ಟಿನ ಸತ್ಯವನ್ನು ಕೃಷ್ಣ ಈ ಪ್ರಸಂಗದಲ್ಲಿ ವಿವರಿಸುತ್ತಾನೆ. ಜತೆಗೆ ಉತ್ತರ ಕುಮಾರ ಹಾಗೂ ಬೃಹನ್ನಳೆ ಪ್ರಸಂಗವೂ ಬರುತ್ತದೆ.

ಈ ನಾಟಕದಲ್ಲಿ ಎಸ್.ಪ್ರಶಾಂತ್ ನಿರ್ವಹಣೆ, ಉದಯ್ ಕುಮಾರ್ ಹೆಜ್ಜೆಗೆಜ್ಜೆ ಪ್ರಸಾದನ, ನಾರಾಯಣ್ ಸಂಗೀತ, ಜೀವನ್ ಕುಮಾರ್ ಹೆಗ್ಗೋಡು ಬೆಳಕು ವಿನ್ಯಾಸದ ಹೊಣೆ ಹೊತ್ತಿದ್ದಾರೆ.

ಮನಗಳಿಗೆ ತಲುಪಿದ್ದ ವಚನಗಳು
ಹನ್ನೆರಡನೇ ಶತಮಾನದಲ್ಲಿ ಅಸಮಾನತೆ ವಿರುದ್ಧ ವಚನಕಾರರು ಧ್ವನಿ ಎತ್ತಿದ್ದರು. ಅಂದು ಅಸ್ತಿತ್ವದಲ್ಲಿದ್ದ ಜಾತಿ ಪದ್ಧತಿ, ಮೌಢ್ಯದ ವಿರುದ್ಧ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಜನರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿ, ಮನೆ– ಮನಗಳಿಗೆ ತಲುಪಿದ್ದರು ಎಂಬುದನ್ನು ನಾಟಕದಲ್ಲಿ ವಿವರಿಸಲಾಗಿದೆ ಎಂದು ಸತೀಶ್‌ ಪೊನ್ನಾಚಿ ತಿಳಿಸಿದರು.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯ ಪಾತ್ರಧಾರಿಗಳು ತಮ್ಮ ರಚನೆಯ ವಚನಗಳನ್ನು ಹೇಳುವ ಮೂಲಕ ಅರಿವು ಮೂಡಿಸುತ್ತಾರೆ. ‘ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ’, ‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ...’, ‘ನೀರ ಕಂಡಲ್ಲಿ ಮುಳುಗುವರಯ್ಯಾ’ ಮೊದಲಾದ ವಚನಗಳನ್ನು ಬಳಸಿಕೊಳ್ಳಲಾಗಿದೆ ಎಂದರು.

ಅನುಭವ ಮಂಟಪ ಪ್ರಸಂಗ: ಕಾಶ್ಮೀರದಿಂದ ಜಂಬೂದ್ವೀಪದವರೆಗೆ ಜಾತಿ, ಧರ್ಮ, ಲಿಂಗಭೇದವಿಲ್ಲದೆ ಎಲ್ಲ ವಚನಕಾರರು ಕಲ್ಯಾಣದಲ್ಲಿ ಸಮಾವೇಶಗೊಳ್ಳುತ್ತಾರೆ. ಸಮಾನತೆಯ ಮಂತ್ರವನ್ನು ಮೊಳಗಿಸುತ್ತಾರೆ.

ಪೀಠಾಧ್ಯಕ್ಷರಾದ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ನಡುವೆ ಚರ್ಚೆ ನಡೆಯುತ್ತದೆ. ಶಿವಶರಣೆಯಾದ ಅಕ್ಕನ ನಿಜ ಸಂಗತಿ ಬಗ್ಗೆ ಎಲ್ಲ ವಚನಕಾರರಿಗೆ ತಿಳಿವಳಿಕೆ ನೀಡುತ್ತಾರೆ.

ಎಲ್ಲಾ ವಚನಕಾರರು ವಚನಗಳನ್ನು ಹೇಳುತ್ತಿದ್ದಂತೆ ನಾಟಕ ಸಮಾಪ್ತಿಗೊಳ್ಳುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT