ಬುಧವಾರ, ಜನವರಿ 22, 2020
15 °C

ಮರಾಠಿ ರಂಗಭೂಮಿ ದಶಕದಷ್ಟು ಮುಂದು...

ಡಿ.ಎಸ್.ಚೌಗಲೆ Updated:

ಅಕ್ಷರ ಗಾತ್ರ : | |

Prajavani

ಗಿರೀಶ ಕಾರ್ನಾಡರು ಸಂದರ್ಶನವೊಂದರಲ್ಲಿ, ‘ವಿಜಯ ತೆಂಡೂಲಕರರು ಬರೆದ ‘ಸಖಾರಾಮ ಬೈಂಡರ್’ ತರಹದ ನಾಟಕವು ಭಾರತೀಯ ರಂಗಭೂಮಿಯ ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಬಂದಿಲ್ಲ’ ಎಂದು ಹೇಳಿದ್ದಾರೆ. ಅದರ ಆಶಯವೇ ಅಂತಹದು. ಒರಟಾದ ಪುಂಡ ಪುರುಷನೊಬ್ಬ ತನಗೆ ಬೇಕಾದ ನಿರ್ಗತಿಕ ಹೆಂಗಸರನ್ನು ಮನೆಗೆ ಕರೆತಂದು ಮಡದಿಯರಂತೆ ಇಟ್ಟು ಸಾಕುತ್ತಿರುತ್ತಾನೆ. ಅವರ ಮೇಲೆ ಹಲ್ಲೆ ನಡೆಸುತ್ತಿರುತ್ತಾನೆ. ರಾತ್ರಿ ಲೈಂಗಿಕ ದೌರ್ಜನ್ಯ ಬೇರೆ.

ಅವರಲ್ಲಿ ಲಕ್ಷ್ಮೀ ಬರಿ ಪುಟುಪುಟು ಮಂತ್ರ ಪಠಿಸುತ್ತ ದೇವಪೂಜೆಯ ಮನೋಭಾವದವಳಾದರೆ; ಚಂಪಾ ಸೇರಿಗೆ ಸವ್ವಾಸೇರು ಎನ್ನುವಂತೆ ಸಖಾರಾಮನಿಗೆ ತಕ್ಕಶಾಸ್ತಿ ನೀಡುವ ಹೆಣ್ಣಾಗಿ ಆಕ್ರಮಣಶೀಲಳು. ಇದೊಂದು ಮನೋವೈಜ್ಞಾನಿಕ ನಾಟಕ. ಈ ನಾಟಕದ ಭಾಷೆಗೆ ಆಗಿನ ವೈಟ್‌ ಕಾಲರ್ ಸಮಾಜದ ಮಂದಿ ಖಾರವಾಗಿ ಪ್ರತಿಕ್ರಿಯಿಸಿದ್ದರು. ಅದಕ್ಕೆ ತೆಂಡೂಲಕರ ಕೊಟ್ಟ ಉತ್ತರ ಹೀಗಿತ್ತು: ‘ಮೊದಲು ನಿಮ್ಮ ಅಗ್ರಹಾರ ಬಿಟ್ಟು ಹೊರಬರ‍್ರಿ... ಇನ್ನೊಂದು ಪ್ರಪಂಚವಿದೆ. ಅದನ್ನು ಗಮನಿಸಿರಿ. ಆಮೇಲೆ ಮಾತಾಡಿರಿ.’ ಸಿದ್ಧ ಮಾದರಿ ಬಿಟ್ಟು ಹೊಸತನದ ಕೃತಿಯನ್ನು ಕೊಟ್ಟ ಶ್ರೇಯ ತೆಂಡೂಲಕರರದ್ದು. 

ಮರಾಠಿ ರಂಗಭೂಮಿಯ ಬೆಳವಣಿಗೆಗೆ ಕಾರಣ -ಅದು ಹಿಂದಿ, ಇಂಗ್ಲಿಷ್‌ನ ಕೊಡುಕೊಳು ಮಾಡಿಕೊಂಡಿದ್ದು. ಅದರ ಸಂಗಡ ಮಿಥಿಕ್‌ನ ಆಚೆ ತನ್ನ ವಿಸ್ತಾರವನ್ನು ಕಂಡುಕೊಂಡಿದ್ದು. ವ್ಯಾವಸಾಯಿಕ ರಂಗಭೂಮಿಯನ್ನು ಪೋಷಿಸುತ್ತ ಸಮಾಂತರ ರಂಗಭೂಮಿಯನ್ನು ಶೋಧಿಸಿ, ಬೆಳೆಸಿದ್ದು. ಅದೇ ಕನ್ನಡ ರಂಗಭೂಮಿಯು ರೆಪರ್ಟರಿಗಳು ಹೇಳಿಕೊಟ್ಟ ಯಕ್ಷಗಾನದ ಪಟ್ಟುಗಳನ್ನು ಸತತ ಪ್ರಯೋಗಗಳಿಗೆ ತೆರೆದುಕೊಂಡು ಉತ್ತರ ಕರ್ನಾಟಕದ ಉಳಿದ ಜಾನಪದ ಪ್ರಕಾರಗಳನ್ನು ನಿರ್ಲಕ್ಷಿಸಿತು. ಕಂಬಾರರನ್ನು ಹೊರತುಪಡಿಸಿ ಉಳಿದವರು ಅಷ್ಟಾಗಿ ಬಳಸಲಿಲ್ಲ.

ಎರಡ್ಮೂರು ದಶಕಗಳ ಹಿಂದೆ ಕನ್ನಡ ರಂಗಭೂಮಿ ಉಂಟು ಮಾಡಿದ ಸಂಚಲನ ಮತ್ತು ಅದರ ಶಕ್ತಿ ಈಗಿಲ್ಲ. ಆ ಸಿರಿವಂತ ಪರಂಪರೆಯ ಇಡುಗಂಟಿನ ಮೇಲೆಯೇ ನಮ್ಮ ಇಂದಿನ ರಂಗಭೂಮಿ ನಿಂತಿದೆ ಮತ್ತು ಚಲಾವಣೆಯಲ್ಲಿದೆ. ಶ್ರೀರಂಗ, ಜಡಭರತ, ಕೈಲಾಸಂ, ಕುವೆಂಪು, ಕಂಬಾರ, ಕಾರ್ನಾಡ, ಲಂಕೇಶ ಮುಂತಾದವರು ಹಾಕಿಕೊಟ್ಟ ಮಾದರಿಯಿಂದ ಮುಂದುವರಿಕೆಯಾಗಿ ನಮ್ಮ ನವ ಸೃಷ್ಟಿಗಳು ಹೊರಬಂದಿಲ್ಲ

ಇನ್ನೂ ಅದೇ ಪುರಾಣ, ಮಹಾಕಾವ್ಯ, ಜಾನಪದ, ವಚನ ಸಾಹಿತ್ಯಗಳನ್ನು ತಂದು ಸಮಕಾಲೀನ ರಾಜಕೀಯ, ಸಾಮಾಜಿಕ ಪರಿಕಲ್ಪನೆಯಲ್ಲಿಟ್ಟು ನೋಡುವುದು ನಡೆದಿದೆ. ಈ ಪಠ್ಯಗಳನ್ನು ಕಟ್ಟುವಾಗ ನಿರ್ದೇಶಕ ಅನುಸರಿಸುವುದು ಅದೇ ಹಳೆಯ ಶೈಲಿಕೃತ ಛಾಪು. ತಾವು ರಂಗಶಾಲೆಯಿಂದ ಕಲಿತು ಬಂದು ಆ ರಂಗ ಘರಾಣೆಯ ಆಚೆ ಯೋಚಿಸಿ ಹೊಸತನದ ಹುಡುಕಾಟ ನಡೆಸಿ ಕಟ್ಟುವುದು ಯಾಕೆ ಸಾಧ್ಯವಾಗುತ್ತಿಲ್ಲ?

ಒಬ್ಬ ಸೃಜನಶೀಲ ಲೇಖಕ, ನಾಟಕಕಾರ, ಕಲಾವಿದ ತನ್ನ ಕಾಲದ ವರ್ತಮಾನದ ಬಗ್ಗೆ ಮಾತನಾಡುತ್ತಾನೆ. ಆ ಬಗೆಯ ರಂಗಭೂಮಿ ನಮ್ಮಲ್ಲಿದೆಯೆ? ಅದೇ ಮರಾಠಿ ರಂಗಭೂಮಿ ಕನ್ನಡ ರಂಗಭೂಮಿಗಿಂತ ದಶಕದಷ್ಟು ಮುಂದಿದೆ ಮತ್ತು ಹೆಚ್ಚೆಚ್ಚು ಸಮಕಾಲೀನ ವಸ್ತುವನ್ನು ಪಡೆದಿರುತ್ತದೆ.

ಇದನ್ನೂ ಓದಿ: ಕಾರ್ನಾಡರ ಕೊನೆಯ ನಾಟಕ | ರಂಗಮಂಚದ ಮೇಲೆ ‘ರಾಕ್ಷಸ ತಂಗಡಿ’

ಅಲ್ಲಿಯ ಹೊಸತನದ ನಾಟಕಗಳ ಹುಟ್ಟಿಗೆ ಕಾರಣಗಳನ್ನು ಶೋಧಿಸಲು ಹೊರಟಾಗ ನಾಟಕಕಾರ ಆಶುತೋಷ ಪೋತದಾರ ಹೇಳುವ ವಿಚಾರ ಅಧಿಕ ಪ್ರಸ್ತುತವೆನಿಸುತ್ತದೆ. ‘ಹಳೆಯ ನಾಟ್ಯ ಪರಂಪರೆಯ ಶೋಧದಲ್ಲಿಯೇ ಹೊಸತು ದೊರೆಯುತ್ತದೆ. ಒಂದು ಕಡೆ ವ್ಯಾವಸಾಯಿಕ ರಂಗಭೂಮಿ, ಸಂಗೀತ ನಾಟಕಗಳು ಪುನರುಜ್ಜೀವನಗೊಳ್ಳುತ್ತ ಪ್ರೇಕ್ಷಕರ ನಡುವೆ ಇರುವಾಗ ಹೊಸ ಪ್ರಾಯೋಗಿಕ ನಾಟಕ ರಚನೆ, ಪ್ರಯೋಗಗಳು ಹೊಸತನಕ್ಕೆ ತುಡಿಯುತ್ತಿರುತ್ತವೆ. ಮರಾಠಿಯಲ್ಲಿ ಮೊದಲಿಂದಲೂ ಇರುವ ಮಹಾರಾಷ್ಟ್ರ ರಾಜ್ಯಮಟ್ಟದ ಏಕಾಂಕ ಸ್ಪರ್ಧೆ ಹಾಗೂ ನಾಟ್ಯ ಸ್ಪರ್ಧೆಗಳು ಹೊಸ ರಚನೆ, ನಿರ್ದೇಶನ, ಅಭಿನಯ ಮತ್ತು ನೇಪಥ್ಯಕ್ಕಾಗಿ ಹುಡುಕುವಂತೆ ಮಾಡುತ್ತವೆ.’

ಇದಷ್ಟೇ ಅಲ್ಲ ‘ಲೋಕಸತ್ತಾ’ ಮರಾಠಿ ಪತ್ರಿಕೆ ಏರ್ಪಡಿಸುವ ‘ಲೋಕಾಂಕಿಕಾ’ ನಾಟಕ ಸ್ಪರ್ಧೆಯೂ ಮಹತ್ವದ್ದು. ಪುಣೆ ಮತ್ತು ಮುಂಬೈ ವಿಶ್ವವಿದ್ಯಾಲಯಗಳ ನಾಟಕ ವಿಭಾಗಗಳ ಕೊಡುಗೆ ಸಹ ದೊಡ್ಡದು. ಇದರ ಜೊತೆ ಮರಾಠಿ ರಂಗಭೂಮಿಯಲ್ಲಿ ನಿರ್ಮಾಪಕರಿದ್ದಾರೆ, ಸೆನ್ಸಾರ್ ಮಂಡಳಿ ಇದೆ (ಅದನ್ನು ವಿರೋಧಿಸಲಾಗುತ್ತಿದೆ). ಮುಖ್ಯವಾಗಿ ಅದು ಪ್ರೇಕ್ಷಕ ರಂಗಭೂಮಿಯೇ ಹೊರತು, ಪ್ರಾಯೋಜನ ಪಡೆವ ರಂಗಭೂಮಿಯಲ್ಲ. ಹಾಗೆಯೇ ಎಲ್ಲಿಯವರೆಗೆ ಕನ್ನಡ ರಂಗಭೂಮಿ ಪ್ರೇಕ್ಷಕರನ್ನು ಆಶ್ರಯಿಸುವುದಿಲ್ಲವೋ ಅಲ್ಲಿಯವರೆಗೆ ಅದರ ಪುನರುಜ್ಜೀವನ ಅಸಾಧ್ಯ. ರೆಪರ್ಟರಿ ಪ್ರಯೋಗಗಳ ಕೊಡುಗೆ ಕನ್ನಡಕ್ಕೆ ದೊಡ್ಡದು. ಇಲ್ಲದಿದ್ದರೆ ರಂಗ ಚಳವಳಿಯು ಚಲನಶೀಲತೆಯನ್ನು ಕಾಣದೇ ಇರುವ ಸಾಧ್ಯತೆ ಇತ್ತು.

ನಾಟಕಕಾರನ ಸಂಶೋಧನೆಯಲ್ಲಿ ಸಮಕಾಲೀನ ರಾಜಕಾರಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಪಗಳು ನಾಟ್ಯ ಕಲೆಯಾಗಿ ಹೊರಬರುತ್ತವೆ. ಜಯಂತ ಪವಾರ ಅವರ ‘ಲಯ್ ಡೇಂಜರ್ ವಾರಾ ಸುಟಲಾಯ್’ ಆಶುತೋಶ ಪೋತದಾರ ಅವರ ‘ಸದಾ ಸರ್ವದಾ ಪೂರ್ವಾಪರ’ ನಾಟಕಗಳು ಗಂಭೀರವಾದ ಇಂದಿನ ಕಾಲದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತವೆ. ಪವಾರರ ಲಯ್‌ ಡೇಂಜರ್... ಮುಂಬೈ ನಗರದ ಚಾಳ (ವಠಾರ) ಅನ್ನು ಕಬಳಿಸುವ ವಸ್ತು. ಅದರ ದೃಶ್ಯಗಳಲ್ಲಿ ಭಯಾನಕ ಸತ್ಯಗಳು ಸ್ಫೋಟಗೊಳ್ಳುತ್ತಾ ಹೋಗುತ್ತವೆ.

ದಾಭೋಳಕರ ಹಾಗೂ ಕಲಬುರ್ಗಿಯವರ ಹತ್ಯೆಯಾದಾಗ ಅತುಲ ಪೇಠೆಯವರು ಮಾತಿಲ್ಲದ ನಾಟಕವೊಂದನ್ನು ಪ್ರಯೋಗಿಸಿದ್ದರು. ಮೌನವೂ ಒಂದು ಮನಕಲಕುವ ಭಾಷೆಯಗಿ ಅರಳಿದ್ದು ಮತ್ತು ಆ ನಾಟಕ ಪ್ರಯೋಗಕ್ಕೆ ವಿಮರ್ಶೆಗಳು ಬಂದಿದ್ದು ವಿಶೇಷ! 
ಇವತ್ತು ಮರಾಠಿ ನಾಟಕದ ರಂಗಪಠ್ಯ ನಿರ್ದಿಷ್ಟ ಒಂದು ಭಾಷೆಯದ್ದಾಗಿ ಉಳಿದಿಲ್ಲ. ಕಾಸ್ಮೋಪಾಲಿಟನ್ ಭಾಷೆಯಾಗಿದೆ. ಹೀಗಾಗಿ ಮರಾಠಿ, ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗಳು ಪಾತ್ರಗಳ ಬೇಡಿಕೆಯಂತೆ ಸೇರಿಕೊಳ್ಳುತ್ತವೆ. ಬಹುಮಾಧ್ಯಮಗಳ ಪ್ರಭಾವಗಳು ಈ ನಿರ್ಮಿತಿ ಹಿಂದಿವೆ. ‘ಎಫ್ ಒನ್/ 105’ ನಾಟಕದ ಭಾಷೆಯೂ ಕಾಸ್ಮೋಪಾಲಿಟನ್ ಆಗಿದೆ.

ಮುಂಬೈ ನಗರದ ವಲಸೆ ಸಮಸ್ಯೆ, ಆ ಮೂಲಕ ದುಡಿಮೆಗೆ ಬಂದ ಬಿಹಾರಿಯ ಪಾತ್ರ ಈ ನಾಟಕದ ಕೇಂದ್ರಬಿಂದು. ಹೊಸ ಐಟಿ ಉದ್ಯೋಗಿಯೊಬ್ಬ ಅಪಾರ್ಟ್‌ಮೆಂಟ್‍ನಲ್ಲಿ ವಾಸವಿದ್ದ. ಅವನ ಮನೆ ಗೋಡೆಗೆ ಬಣ್ಣಹಚ್ಚಲು ಬಂದ ಬಿಹಾರಿಯ ಮಾತುಗಳು ಮರ್ಮಭೇದಕವಾಗಿವೆ. ನೀಲಿ, ಹಸಿರು, ಕೇಸರಿಗಳು ಜಾತಿ ಸೂಚಕವಾದುದರ ಸಾಂಕೇತಿಕ ದುರಂತವು ನಾಟಕದ ಮುಖ್ಯ ತಿರುಳಾಗಿ ಹೊರಹೊಮ್ಮುತ್ತದೆ. ಈ ನಾಟಕದ ಸಂಯೋಜನೆಯೇ ನಾವಿನ್ಯ ಪೂರ್ಣವಾದುದು.  ಹಿಂದೆ ಸ್ಕ್ರೀನ್ ಬಳಸಿದ್ದು ಅದರಲ್ಲಿ ಅಮೂರ್ತ ಕಲಾಕೃತಿಗಳು ದೃಶ್ಯಕ್ಕನುಗುಣವಾಗಿ ತೆರೆದುಕೊಳ್ಳುತ್ತವೆ. ‘ಯು’ ಅಕ್ಷರದಾಕಾರದ ರಂಗಮಂಚ ವಿನ್ಯಾಸವು, ಸುತ್ತಲೂ ಕುಳಿತ ಪಾತ್ರಧಾರಿಗಳು ಪಾತ್ರ ಬಂದಾಗ ಅಭಿನಯಿಸಿ ಅಲ್ಲಿ ಕೂರುವರು.

‘ಬಿನ್ ಕಾಮಾಚ್ಯಾ ಸಂವಾದ’ ನಾಟಕದ ಒಟ್ಟು ವಸ್ತು ವಿಶಿಷ್ಟ, ವಿನ್ಯಾಸ ಸಹ ಕಲಾತ್ಮಕ. ಅದರ ಲೇಖಕ ಧರ್ಮಕೀರ್ತಿ ಸುಮಂತ ಹೇಳುವಂತೆ- ‘ರಾಯಝೋನ್ ಥೇಯರಿಯಂತೆ ಆಲೋಚಿಸಿ ಮರಗಳಿಗೆ ಎಲೆಗಳೂ ಇರುತ್ತವೆ ಮತ್ತು ಅದಕ್ಕೆ ಬೇರೂ ಇರುತ್ತದೆ. ಹಸಿಶುಂಠಿ ಹೂವು ಹೌದು, ಮತ್ತು ಫಲವು ಸರಿ. ಇದನ್ನು ರೂಪಕವಾಗಿ ಲಿನಿಯರ್ ಆಗಿ ಬಳಸಿದೆ. ಚಪ್ಪಟೆ ಆ್ಯಂಡ್ರಾಯ್ಡ್‌ ಫೋನ್ ಅಂಗಡಿಯಲ್ಲಿ ಕೇಳುವ ಸಾಮಾನ್ಯನಿಂದ ಮೋದಿ, ಸ್ಪೋರ್ಟ್ಸ್‌ ಮ್ಯಾನ್, ಸ್ಟಾರ್‌ಗಳು ನಿತ್ಯ ಕರ್ಮವಾಗಿ ಕಾಡುವ ಪರಿಯನ್ನು ನಾಟಕಕಾರ, ನಿರ್ದೇಶಕ ಮತ್ತು ನಟರುಗಳು ಆಗುಮಾಡಿರುವರು. ಈ ನಾಟಕದ ನಿರ್ಮಿತಿಯೇ ಒಂದು ಅನನ್ಯ!

ಕಂಪನಿ ನಾಟಕದ ದಂತಕಥೆ ಬಾಲಗಂಧರ್ವರಿಂದ ಹಿಡಿದು ಇಂದಿನ ಭರತ ಜಾಧವವರೆಗೆ ನಟ ಪರಂಪರೆಯು ಮರಾಠಿ ರಂಗಭೂಮಿಯ ಹೆಗ್ಗಳಿಕೆ. ನೀಳುಫುಲೆ, ಡಾ.ಶ್ರೀರಾಮ ಲಾಗು, ಮೋಹನ ಆಗಾಸೆ, ನಾನಾ ಪಾಟೇಕರ್‌, ಅಮೋಲ ಪಾಲೇಕರ್‌, ಅತುಲ ಕುಲಕರ್ಣಿ, ಪ್ರಶಾಂತ ದಾಮಲೆ, ಅಕ್ಷಯ ಸಿಂಪಿ ಮುಂತಾದ ನಟರನ್ನು ಕೊಟ್ಟ ರಂಗಭೂಮಿಯದು. ವಾಸ್ತವವಾದಿ ನಾಟಕಗಳು ಅಧಿಕವಾಗಿರುವ ಮರಾಠಿಯಲ್ಲಿ ನಟರನ್ನು ಹುರಿಗೊಳಿಸುತ್ತವೆ. ಆದರೆ, ಕನ್ನಡ ರಂಗಭೂಮಿಗೆ ವೃತ್ತಿರಂಗಭೂಮಿ ಹೊರತುಪಡಿಸಿ
ನಟ ಪರಂಪರೆಯನ್ನು ಕಟ್ಟಿಕೊಡಲಾಗಲಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು