‘ಎಲ್ಲರೂ ತಮಗೆ ಬೇಕಾದ ಉತ್ತರದ ಅಪೇಕ್ಷೆಯಲ್ಲಿರುವಾಗ ಸತ್ಯ ವಿಫಲವಾಗುತ್ತದೆ.’ ಇತ್ತೀಚೆಗೆ ಬೆನಕ ನಾಟಕ ತಂಡವು ತನ್ನ ಐವತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರದರ್ಶಿಸಿದ ನಾಟಕ ‘ಬಾಬಾ ಕಾರಂತ’ದಲ್ಲಿ ಬಿ.ವಿ.ಕಾರಂತ ಪಾತ್ರಧಾರಿ ಹೇಳುವ ಮಾತಿದು.
ಈ ಮಾತಿಗೆ ಅನುಗುಣವಾದ ರೀತಿಯಲ್ಲಿ ಸರ್ವರಿಗೂ ಪ್ರಿಯವಾಗುವಂತೆ ನಾಟಕ ಕಟ್ಟಲಾಗಿದೆ. ಸಮಕಾಲೀನ ವ್ಯಕ್ತಿ ಅಥವಾ ಘಟನೆಯನ್ನು ಯಾವುದೇ ಕಲಾ ಮಾಧ್ಯಮದಲ್ಲಿ ಹಿಡಿದಿಡಬೇಕಾದರೆ ಅವರ ಕೊಡುಗೆಯ ಬಗ್ಗೆಯೇ ಹೆಚ್ಚು ಒತ್ತುಕೊಡುವ ಭಾವನಾತ್ಮಕ ಒತ್ತಡಗಳಿಂದಾಗಿ, ನಿಷ್ಠೂರ ಚರಿತ್ರೆಯ ಹಂಗು ತೊರೆಯುವುದು ಲೋಕಾರೂಢಿ. ಹೀಗಾಗಿ ಈ ಪ್ರಯೋಗವು ಬಿ.ವಿ. ಕಾರಂತರ ‘ಸೃಜನಾತ್ಮಕ ಕಲಾವಿದ’ನ ವೈರುದ್ಧ್ಯಗಳನ್ನು, ಅದರಿಂದ ಉಂಟಾಗುವ ಸಮಸ್ಯೆಗಳನ್ನು ಬಹಳ ಕರುಣೆಯಿಂದ ನೋಡುತ್ತಾ, ಅವುಗಳಿಂದ ಉಂಟಾದ ವಿವಾದಾತ್ಮಕ ವಿಷಯಗಳನ್ನು ಹೆಚ್ಚು ತಡವದೆ, ನಯವಾಗಿ ನೇವರಿಸಿ ಮುಂದೆ ಸಾಗಿಬಿಡುತ್ತದೆ. ಅವರ ಸಾಧನೆಗಳನ್ನು ಎತ್ತಿಹಿಡಿಯುವತ್ತಲೇ ಹೆಚ್ಚು ಗಮನಕೊಡುತ್ತದೆ. ವೈದೇಹಿ ರಚಿಸಿದ ಬಿ.ವಿ. ಕಾರಂತರ ಜೀವನ ಚರಿತ್ರೆ ಮತ್ತು ಪ್ರೇಮಾ ಕಾರಂತರ ಆತ್ಮಕಥೆಯನ್ನು ಆಧರಿಸಿ ಟಿ.ಎಸ್. ನಾಗಾಭರಣ, ಕೃಷ್ಣಪ್ರಸಾದ ಮತ್ತು ಶ್ರೀಪತಿ ಮಂಜನಬೈಲು ರಚಿಸಿದ ಈ ನಾಟಕವನ್ನು ಟಿ.ಎಸ್.ನಾಗಾಭರಣ ನಿರ್ದೇಶಿಸಿದ್ದಾರೆ.
ನಾಟಕ ಆರಂಭವಾಗುವುದು ‘ಗೋಕುಲ ನಿರ್ಗಮನ’ ನಾಟಕದ ಸಂಗೀತದೊಂದಿಗೆ, ಒಂದು ರೀತಿಯ ರಮ್ಯ ವಿಷಾದದ ಅಲೆಗಳೊಂದಿಗೆ. ನಂತರ ಕಾರಂತರು ಮಕ್ಕಳಿಗೆ ನಾಟಕ ಕಲಿಸುವ ದೃಶ್ಯ. ಆದಾದ ನಂತರ ಕಾರಂತರ ಆತ್ಮಚರಿತ್ರೆಯನ್ನು ಬರೆದ ಲೇಖಕಿಯ ಪಾತ್ರವನ್ನೇ ರಂಗದ ಮೇಲೆ ತರಲಾಗಿದೆ. ಲೇಖಕಿ ವೈದೇಹಿಯವರಿಗೆ ಕಾರಂತರು ತಮ್ಮ ಕಥೆಯನ್ನು ಹೇಳುವ ತಂತ್ರದ ಮೂಲಕ ನಾಟಕ ಮುಂದುವರೆಯುತ್ತದೆ. ಕಾರಂತರ ಬಾಲ್ಯದ ಚೇಷ್ಟೆಗಳು, ತುಡುಗುತನ ಇತ್ಯಾದಿ ಘಟನೆಗಳು ಲವಲವಿಕೆಯಿಂದ ಸಾಗುತ್ತವೆ. ನಂತರದ ತರುಣ ಕಾರಂತ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡುವುದು, ಕಂಪನಿಯ ಮಾಲೀಕರು ಹಣಕಾಸಿನ ಸಹಾಯ ಮಾಡುವುದು ಇವೆಲ್ಲವೂ ಚಕಚಕನೆ ಸಾಗುತ್ತವೆ. ಬಳಿಕ ಕಾರಂತರು ಕಾಶಿಗೆ ಓದಲು ಹೋಗುತ್ತಾರೆ. ಅಲ್ಲಿ ಸಾಹಿತಿ ಹಜಾರಿ ಪ್ರಸಾದ್, ಕಾರಂತರ ಆತ್ಮೀಯರಾಗುತ್ತಾರೆ. ಒಂದು ವರ್ಷ ಪಿಎಚ್.ಡಿ ಮಾಡುವಷ್ಟರಲ್ಲಿ ಸ್ಕಾಲರ್ ಶಿಪ್ ನಿಂತುಹೋಗುತ್ತದೆ. ಇದರ ಮಧ್ಯೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರೇಮಾ ಕಾರಂತರ ಮೊದಲ ಭೇಟಿ ನಡೆದಿರುತ್ತದೆ. ಆ ಸಂದರ್ಭದಲ್ಲಿ ಬರುವ ‘ಎಲ್ಲವಳೆಲ್ಲವಳು, ನಿಲದಾಡವ ಕಂಗಳ ಸೊಲ್ಲವಳು’ ಎಂಬ ಹಿನ್ನೆಲೆ ಹಾಡನ್ನು ಬಿಟ್ಟರೆ ಹೆಚ್ಚೇನೂ ರೊಮ್ಯಾಂಟಿಕ್ ಸಂಗತಿಗಳು ನಡೆಯದೆ ವ್ಯಾವಹಾರಿಕ ಒಪ್ಪಂದದ ರೀತಿ ಇಬ್ಬರೂ ಮದುವೆ ಮಾತುಕತೆ ನಡೆಸಿದರಲ್ಲ ಎಂದು ಅಚ್ಚರಿ ಪಡುತ್ತಿರುವಾಗಲೇ, ಚಿಟಕಿ ಹೊಡೆಯುವಷ್ಟರಲ್ಲಿ ಮದುವೆಯ ದೃಶ್ಯವೂ ಮುಗಿದುಹೋಗುತ್ತದೆ. ಕಾರಂತರು ಎನ್ಎಸ್‌ಡಿಯಲ್ಲಿ ಕಲಿಯುವಾಗ ಅದರ ಅವಧಿ ಎರಡು ವರ್ಷಗಳಿರುತ್ತದೆ. ಇವರು ತಮ್ಮ ಮಿತ್ರರೊಂದಿಗೆ ಸೇರಿ ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿ ಅದನ್ನು ಮೂರು ವರ್ಷಗಳಿಗೆ ಹೆಚ್ಚಿಸುವ ದೃಶ್ಯ ಚೆನ್ನಾಗಿದೆ. ಹಾಗೆ ಹೆಚ್ಚಿಸಲು ಒಂದು ಕಾರಣ ಅವರಿಗೆ ಪ್ರತಿ ತಿಂಗಳು ಸಿಗುತ್ತಿದ್ದ ಇನ್ನೂರು ರೂಪಾಯಿ ಭತ್ಯೆ, ಇನ್ನೊಂದು ವರ್ಷಕ್ಕೆ ಮುಂದುವರೆಯುವುದೂ ಆಗಿತ್ತು. ಬಳಿಕ ಕಾರಂತರು ಮೊದಲು ನಿರ್ದೇಶಿಸಿದ ಮೊದಲ ಹಿಂದಿ ನಾಟಕ ‘ಹಯವದನ’.
ಆನಂತರ ಕರ್ನಾಟಕಕ್ಕೆ ಬಂದ ಕಾರಂತರು ‘ಸತ್ತವರ ನೆರಳು’ ನಾಟಕ ಮಾಡಿಸುತ್ತಾರೆ. ಮುಂದೆ ಎನ್‌ಎಸ್‌ಡಿಗೆ ನಿರ್ದೇಶಕರಾಗಿ ಹೋಗುತ್ತಾರೆ. ಅಲ್ಲಿ ಅವರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ವಿದ್ಯಾರ್ಥಿಗಳು ಇವರ ವಿರುದ್ಧ ದಂಗೆ ಏಳುತ್ತಾರೆ. ಕಾರಂತರು ಅಲ್ಲಿಂದ ಭೋಪಾಲ್‌ಗೆ ಹೋಗುತ್ತಾರೆ. ಅಲ್ಲಿ ಮೊದಲಿನಿಂದಲೇ ಅವರ ಬಗ್ಗೆ ಒಂದಷ್ಟು ಅಸಹನೆ ಇರುವ ಗುಂಪೊಂದು ಬೆಳೆಯುತ್ತದೆ. ಕಾರಂತರಿಗೆ ‘ಆತ್ಮೀಯ’ಳಾಗಿದ್ದ ಪ್ರತಿಭಾನ್ವಿತ ನಟಿ ವಿಭಾ ಮಿಶ್ರಾ ತನ್ನ ಸಿಟ್ಟಿನ ಆವೇಗದಲ್ಲಿ ಬೆಂಕಿ ಹಚ್ಚಿಕೊಂಡ ಮತ್ತು ಕಾರಂತರನ್ನು ಆ ಪ್ರಕರಣದಲ್ಲಿ ಬಲಿಪಶು ಮಾಡಿದ ಒಂದು ದೃಶ್ಯವಿದೆ. ದೇಶದಾದ್ಯಂತ ಬಹಳ ಸದ್ದು ಮಾಡಿದ್ದ ಈ ಪ್ರಕರಣವನ್ನು ಈ ಪ್ರಯೋಗದಲ್ಲಿ ಸಾಕಷ್ಟು ತಣ್ಣಗೆ, ನಿರ್ವಿ ಕಾರವಾಗಿ ಒಂದು ಪತ್ರಿಕಾ ವರದಿಯಂತೆ ತೋರಿಸಲಾಗಿದೆ. ಆ ಗಂಭೀರ ದುರಂತಕ್ಕೆ ಅನುವು ಮಾಡುವ ಯಾವುದೇ ಸಂಘರ್ಷಗಳು ಎಲ್ಲೂ ಸ್ಪಷ್ಟವಾಗಿ ಕಾಣದೆ, ಆ ದೃಶ್ಯ ಬಹುತೇಕ ಮಾತುಕತೆಯಲ್ಲೇ ಘಟಿಸುತ್ತದೆ. ಇಡೀ ನಾಟಕದಲ್ಲಿ ಈ ರೀತಿಯ ಎಲ್ಲ ಸಂದರ್ಭಗಳಲ್ಲಿ, ಉದಾಹರಣೆಗೆ ಎನ್‌ಎಸ್‌ಡಿಯ ವಿದ್ಯಾರ್ಥಿಗಳ ದಂಗೆ, ರಂಗಾಯಣದ ಕಲಾವಿದರೊಂದಿಗಿನ ಸೈದ್ಧಾಂತಿಕ ತಿಕ್ಕಾಟ ಮಾತ್ರವಲ್ಲದೆ, ಕಾರಂತರ ಸರೀಕರೊಂದಿಗಿನ ಜಗಳ, ಅವರ ವ್ಯಸನಗಳು, ಅವರ ಒಳಗಿನ ತುಮುಲಗಳು ಮಾತ್ರವಲ್ಲದೆ, ಕಾರಂತ-ಪ್ರೇಮ ಕಾರಂತರ ಮೊದಲ ಭೇಟಿಯ ಪ್ರಸಂಗವನ್ನು ನಿರ್ದೇಶಕರು ಮೆದುಗೊಳಿಸಿ ನಿಭಾಯಿಸಿದ್ದಾರೆ. ಹೀಗಾಗಿ ನಾಟಕದ ತೀವ್ರತೆ ಹೆಚ್ಚಾಗಬಹುದಾಗಿದ್ದ ಸಾಧ್ಯತೆಯನ್ನು ಗಣನೀಯವಾಗಿ ತಡೆದಿದೆ. ನಾಟಕವು, ಬಹುತೇಕ ಕಾರಂತರ ರಂಗ ಕಾಯಕಗಳ ಉತ್ತಮಿಕೆಯನ್ನು ಸಕಾರಣವಾಗಿ ಆನಂದಿಸುವ ಡಾಕ್ಯುಮೆಂಟರಿಯಾಗಿದ್ದು ಅದನ್ನು ಚೆನ್ನಾಗಿ ನಿರ್ದೇಶಕರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಾರಂತರ ಸಂಗೀತ ನಿರ್ದೇಶನದ ಹಾಡುಗಳು ಇಲ್ಲಿ ವಿಫುಲವಾಗಿದ್ದು, ಪ್ರೇಕ್ಷಕರನ್ನು ಬೇರೆಯೇ ಲೋಕಕ್ಕೆ ಒಯ್ಯುತ್ತವೆ. ಕಾರಂತರ ರಂಗ ಸಂಗೀತದ ವಿಸ್ಮಯಕಾರಿ ಶಬ್ದ ವಿನ್ಯಾಸದ ಪ್ರಸ್ತುತಿ ನಾಟಕದ ಅತ್ಯಂತ ಪ್ರಶಂಸನೀಯ ಅಂಶ. ನಾಟಕದ ಅಂತ್ಯವನ್ನು ಪ್ರೇಕ್ಷಕರ ಮನಸ್ಸಿಗೆ ತಟ್ಟುವ ಭಾವುಕವಾಗಿ ಕಟ್ಟಲಾಗಿದೆ.
ಬಾಲ ಕಾರಂತ (ಅಭಿನಂದನ್), ತರುಣ ಕಾರಂತ (ಪ್ರಭಂಜನ್) ಚೆನ್ನಾಗಿ ನಟಿಸಿದ್ದಾರೆ. ವೃದ್ಧ ಕಾರಂತರ ಪಾತ್ರದಲ್ಲಿ ಮೈಕೊ ಮಂಜು ಅಭಿನಯ ಪ್ರೌಢವಾಗಿದ್ದು, ಬಾಹ್ಯ ಅನುಕರಣೆಯ ಜೊತೆಗೆ ಅವರ ಅಂತರಂಗದ ತಳಮಳ, ಚಡಪಡಿಕೆಗಳನ್ನು ಸೂಕ್ಷ್ಮತೆಯಿಂದ ಹಿಡಿಯುವ ಪ್ರಾಮಾಣಿಕ ಪ್ರಯತ್ನವಿದೆ. ಪ್ರೇಮಾ ಕಾರಂತ ಪಾತ್ರಧಾರಿ ಬೃಂದಾ ವಿಕ್ರಂ ಸುಲಲಿತವಾಗಿ ಅಭಿನಯಿಸಿದ್ದಾರೆ. 50 ವರ್ಷ ದಾಟಿದ ಬೆನಕ ತಂಡದ ಪ್ರಬುದ್ಧ ನಟ ವರ್ಗ ಮತ್ತು ನೇಪಥ್ಯದವರ ವೃತ್ತಿಪರ ರಂಗ ಕಾಯಕ ಮೆಚ್ಚುಗೆಗೆ ಅರ್ಹ.
ಕೆಲವು ಕೊರತೆಗಳ ನಡುವೆಯೂ ಬಹುಕಾಲ ಮನದಲ್ಲಿ ಉಳಿದು ಕಾಡುವ ಉತ್ತಮ ಪ್ರಯೋಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.