ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂತಾರ’ ಅಲೆ - ಇದು ಗುಳಿಗ ಗಳಿಗೆ

Published 6 ಮೇ 2023, 22:39 IST
Last Updated 6 ಮೇ 2023, 22:39 IST
ಅಕ್ಷರ ಗಾತ್ರ

ಕೋಡಿಬೆಟ್ಟು ರಾಜಲಕ್ಷ್ಮಿ

‘ಕಾಂತಾರ’ ಸಿನಿಮಾದ ಗುಳಿಗ ಪಾತ್ರದಿಂದಾಗಿ ‘ಶಿವದೂತ ಗುಳಿಗೆ’ ಪೌರಾಣಿಕ ನಾಟಕ ಕರಾವಳಿಯಿಂದ ಆಚೆಗೂ ಚಾಚುವಂತಾಗಿದೆ. ಮಲೆಯಾಳಂ ಭಾಷೆಗೂ ಇದು ಡಬ್ ಆಗುತ್ತಿದೆ.

ಸಾಮಾನ್ಯವಾಗಿ ಕಲಾಪ್ರಕಾರಗಳ ನಡುವೆ ಕೊಡುಕೊಳ್ಳುವಿಕೆಗಳು ಪರಸ್ಪರ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಹುಕಿಯಲ್ಲಿರುತ್ತವೆ. ರಂಗಭೂಮಿಯಲ್ಲಿ ಕಸರತ್ತಿನ ಅಂಶಗಳು ಇದ್ದರೆ ಸರಿಯೇ, ಯಕ್ಷಗಾನದಲ್ಲಿ ನಾಟ್ಯವು ಎಷ್ಟರ ಮಟ್ಟಿಗೆ ಇರಬೇಕು, ಭರತನಾಟ್ಯದೊಳಗೆ ಯೋಗಾಸನವನ್ನು ನೆನಪಿಸುವ ಭಂಗಿಗಳು ಬೇಕೇ ಬೇಡವೇ... ಹೀಗೆಲ್ಲ ಸಾಗುವ ಚರ್ಚೆಗಳೇ ಒಂದು ಸೃಜನಶೀಲ ಪಥವಿದ್ದಂತೆ. ಅಷ್ಟೇ ಅಲ್ಲ, ಅವು ದೀರ್ಘಕಾಲದ ಪರಿವರ್ತನೆಯ ಹಾದಿಯನ್ನು ಆಧರಿಸಿ ನಡೆಯುವ ಚರ್ಚೆಗಳು. ಈ ನಡುವೆ ರಂಗಭೂಮಿಯ ಪಾತ್ರವೊಂದು ಸಿನಿಮಾದಲ್ಲಿ ಅರಳಿ, ಆ ಸಿನಿಮಾವು ಮತ್ತೆ ರಂಗಭೂಮಿಯ ಜನಪ್ರಿಯತೆಗೆ ಮತ್ತಷ್ಟು ಚೈತನ್ಯ ಕೊಡುವ ಪ್ರಕ್ರಿಯೆ ಕುತೂಹಲಕಾರಿ.

ಇತ್ತೀಚೆಗೆ ತೆರೆಕಂಡ ಕಾಂತಾರ ಸಿನಿಮಾವು ‘ದೈವಾರಾಧನೆ’ ಎಂಬ ಕ್ಷೇತ್ರವನ್ನು ಹೊಸ ಪ್ರೇಕ್ಷಕ ವರ್ಗಕ್ಕೆ ಅರ್ಥಮಾಡಿಸುವಲ್ಲಿ ಯಶಸ್ವಿಯಾಗಿದ್ದರಿಂದ, ಇತ್ತ ದೈವಾರಾಧನೆ ಎಂಬ ಭಕ್ತಿ ಮಾರ್ಗ ಹಾಗೂ ಅತ್ತ ದೈವರಾಧನಾ ಕ್ಷೇತ್ರದಿಂದ ಹೊಮ್ಮಿ ಬಂದ ಕಥೆಗಳ ರಂಗಪ್ರದರ್ಶನಗಳ ಮೇಲೆ ಅಗಾಧವಾದ ಪರಿಣಾಮ ಬೀರಿದೆ.

ದೃಶ್ಯ ಮಾಧ್ಯಮವು ಬಹುಜನರನ್ನು ಸುಲಭವಾಗಿ ತಲುಪುವ ಮಾಧ್ಯಮವಷ್ಟೆ. ಕಥೆಯೂ ಗಟ್ಟಿಯಾಗಿದ್ದಾಗ ಜನಾಕರ್ಷಣೆ ಹೆಚ್ಚು. ಈ ದೃಷ್ಟಿಯಿಂದ ‘ಕಾಂತಾರ’ ಚಿತ್ರವು ಅಪಾರ ಪ್ರೇಕ್ಷಕ ವರ್ಗವನ್ನು ತಲುಪುವುದರೊಂದಿಗೆ ಹೊಸದೊಂದು ಕ್ಷೇತ್ರವನ್ನು ಕರಾವಳಿಯ ಹೊರಗಿನ ಜಗತ್ತಿಗೆ ಪರಿಚಯಿಸಿದಂತಾಗಿದೆ. ಉದಾಹರಣೆಯೊಂದಿಗೆ ಹೇಳುವುದಾದರೆ, ‘ಕಾಂತಾರ’ ಚಿತ್ರ ವೀಕ್ಷಿಸಿದ ಬಳಿಕ, ಕರಾವಳಿಯಲ್ಲಿ ಜನಪ್ರಿಯವಾಗಿರುವ ಗುಳಿಗ ದೈವದ ಕುರಿತು ಬಯಲುಸೀಮೆಯ ಸ್ನೇಹಿತರ ಜೊತೆ ಚರ್ಚಿಸುವುದು ಈಗ ಸುಲಭವಾಗಿದೆ. ಅಷ್ಟೇ ಅಲ್ಲ, ಗುಳಿಗ ಅಥವಾ ಪಂಜುರ್ಲಿ ದೈವದಂತೆಯೇ ನಂಬಿಕೆ ಮತ್ತು ಭಕ್ತಿಯ ಶಾಖೆಯೊಂದು ಕರಾವಳಿಯಲ್ಲಿದೆ ಎಂಬುದನ್ನೂ, ಅದಕ್ಕೆ ಸಂಬಂಧಿಸಿದ ಕಥೆಗಳನ್ನು ಆಲಿಸುವುದಕ್ಕೂ ಅನೇಕರು ಕುತೂಹಲಿಗರಾಗಿದ್ದಾರೆ. ಈ ಕುತೂಹಲದಿಂದಾಗಿ, ತುಳು ರಂಗಭೂಮಿಯತ್ತಲೂ ಹೆಚ್ಚು ಜನರು ತಿರುಗಿ ನೋಡುವುದಕ್ಕೆ ಕಾರಣಗಳು ಸೃಷ್ಟಿಯಾಗಿವೆ.

‘ಕಾಂತಾರ’ ಸಿನಿಮಾದಲ್ಲಿ ಗುರುವನ ಪಾತ್ರ ನಿರ್ವಹಿಸಿದ ಸ್ವರಾಜ್‌ ಶೆಟ್ಟಿ ತುಳು ರಂಗಭೂಮಿಯ ನುರಿತ ಕಲಾವಿದ. ಎರಡು ವರ್ಷಗಳ ಹಿಂದಷ್ಟೇ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ನಿರ್ದೇಶಿಸಿದ ‘ಶಿವದೂತೆ ಗುಳಿಗೆ‘ ಎಂಬ ಪೌರಾಣಿಕ ನಾಟಕದಲ್ಲಿ ಮುಖ್ಯಪಾತ್ರವಾದ ಗುಳಿಗ ದೈವದ ಪಾತ್ರ ನಿರ್ವಹಿಸುತ್ತಿದ್ದರು. ನಾಟಕದಲ್ಲಿ ಅವರ ಅಬ್ಬರದ ಪಾತ್ರವು ಹೊಸ ತಲೆಮಾರಿನ ಯುವಜನರನ್ನು ತುಳು ರಂಗಭೂಮಿಯತ್ತ ಸೆಳೆಯುವಂತೆ ಮಾಡಿದ್ದು ಸುಳ್ಳಲ್ಲ. ತಾವು ನಂಬುವ ದೈವದ ಪಾರಮ್ಯವನ್ನು ಹೇಳುವ ಕಥೆಯನ್ನು ಮತ್ತೆ ಮತ್ತೆ ಕೇಳುವುದು, ನೋಡುವುದು ಒಳಿತೆಂದೇ ಜನರು ಭಾವಿಸುವುದುಂಟು. ಇದೇ ಕಾರಣಕ್ಕೋ ಏನೋ ಸ್ವರಾಜ್‌ ಶೆಟ್ಟಿ ಸಮರ್ಥ ಅಭಿನಯದ ಮೂಲಕ, ‘ಕಾಂತಾರ’ ಚಿತ್ರಕಲಾವಿದರ ತಂಡಕ್ಕೆ ಆಯ್ಕೆಯಾಗಿದ್ದರು. ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಕಲಾವಿದರೊಬ್ಬರು ವಲಸೆ ಹೋಗುವುದು ಹೊಸ ವಿಷಯವೇನಲ್ಲ. ಆದರೆ ಇಲ್ಲಿ ನಡೆದ ವಲಸೆಯು ಇತ್ತ ರಂಗಭೂಮಿಯ ವರ್ಚಸ್ಸನ್ನು ವೃದ್ಧಿಸುವಂತೆ ಮಾಡಿದೆ. ಈಗ ನಾಟಕದ ಕರಪತ್ರಗಳಲ್ಲಿ, ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ ಸ್ವರಾಜ್‌ ಶೆಟ್ಟಿ ಮುಖ್ಯ ಪಾತ್ರಧಾರಿಯಾಗಿದ್ದಾರೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸಲಾಗುತ್ತಿದೆ.

ಹಾಗೆ ನೋಡಿದರೆ, ಭಾರತೀಯ ಕಲಾಪ್ರಕಾರಗಳು ಭಕ್ತಿಪಥದಲ್ಲಿ ಆರಾಧನೆಯ ಭಾಗವಾಗಿಯೇ ಬೆಳೆಯುತ್ತ ಬಂದವು. ಆದರೆ ಪ್ರಾದೇಶಿಕವಾಗಿ ವಿಕಾಸಗೊಂಡ ಕಲಾಪ್ರಕಾರಗಳು ಜಾಗತೀಕರಣದ ಹಿನ್ನೆಲೆಯಲ್ಲಿ ದೊಡ್ಡ ಪ್ರೇಕ್ಷಕ ವರ್ಗವನ್ನು ತಲುಪುವುದಕ್ಕೆ ಕೆಲವು ಮಾಧ್ಯಮಗಳು ಹೆಚ್ಚು ಪೂರಕವೆನಿಸುತ್ತದೆ.

‘ಶಿವದೂತೆ ಗುಳಿಗೆ’ ತುಳು ನಾಟಕವಾದರೂ, ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಅದನ್ನು ಕನ್ನಡಕ್ಕೆ ಅನುವಾದಿಸಿಕೊಂಡು, ತುಳು ಭಾಷಾ ವಲಯವನ್ನು ಮೀರಿ ನಾಟಕವು ತನ್ನ ಪ್ರದರ್ಶನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಸ್ವತಃ ಗುಳಿಗ ದೈವದ ಭಕ್ತರೂ ಆಗಿರುವ ಸ್ವರಾಜ್‌ ಶೆಟ್ಟಿ, ತಮ್ಮ ದೈವಶ್ರದ್ಧೆಯ ಬಗ್ಗೆಯೂ ತಮ್ಮ ಕಲಾಸಾಧನೆಯ ಹಾದಿಯಲ್ಲಿ ದೊರೆತ ಯಶಸ್ಸಿನ ಬಗ್ಗೆಯೂ ವಿನಮ್ರವಾಗಿ ಮಾತನಾಡುತ್ತಾರೆ. ‘ಕಾಂತಾರ ಚಿತ್ರವು ತೆರೆಕಂಡ ಬಳಿಕ, ಹೊರಜಿಲ್ಲೆಗಳಿಂದ ‘ಶಿವದೂತೆ ಗುಳಿಗೆ’ ನಾಟಕಕ್ಕಾಗಿ ಬೇಡಿಕೆ ಹೆಚ್ಚಾಯಿತು. ದಾವಣಗೆರೆ ಅಥವಾ ಹುಬ್ಬಳ್ಳಿಯಂಥ ಪ್ರದೇಶಗಳಲ್ಲಿ ನಾಟಕ ಪ್ರದರ್ಶನಕ್ಕೆ ಕಿಕ್ಕಿರಿದ ಜನಸ್ತೋಮ ಜಮಾಯಿಸುತ್ತಿದೆ. ಈಗ ಅಲ್ಲಿನ ಪ್ರೇಕ್ಷಕರು ಕಥಾವಸ್ತುವಿನ ಬಗ್ಗೆ ಪೂರ್ವ ಮಾಹಿತಿಯುಳ್ಳವರಾಗಿದ್ದಾರೆ. ‘ಕಾಂತಾರ’ ಸಿನಿಮಾದ ಮೂಲಕ ಅವರು ಗುಳಿಗ ದೈವದ ಹಿನ್ನೆಲೆಯ ಬಗ್ಗೆ ಹಾಗೂ ದೈವಾರಾಧನೆಯ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡವರಾಗಿದ್ದಾರೆ. ಸಿನಿಮಾ ತೆರೆಕಾಣುವ ಮುನ್ನ ಗುಳಿಗ ದೈವ ಅಥವಾ ಪಂಜುರ್ಲಿ ದೈವದ ಪರಿಕಲ್ಪನೆಯ ಬಗ್ಗೆ ವಿವರವಾದ ಹಿನ್ನೆಲೆ ಪರಿಚಯ ಕೊಟ್ಟರಷ್ಟೇ ಈ ನಾಟಕವು ಅವರಿಗೆ ಅರ್ಥವಾಗುತ್ತಿತ್ತು. ಅಷ್ಟೇ ಏಕೆ, ಪರಿಚಯಾತ್ಮಕ ಮಾಹಿತಿ ಕೊಟ್ಟಾಗ್ಯೂ ಅದನ್ನು ಹೊಸ ಪ್ರೇಕ್ಷಕವರ್ಗ ಸ್ವೀಕರಿಸುವುದು ತಕ್ಕಮಟ್ಟಿಗಷ್ಟೇ ಇತ್ತು. ಆದರೆ ಈಗ ದೈವಾರಾಧನೆಯ ಬಗ್ಗೆ ಸಾಕಷ್ಟು ಅರಿವುಳ್ಳ ಹೊಸ ಪ್ರೇಕ್ಷಕವರ್ಗವು ‘ಶಿವದೂತೆ ಗುಳಿಗೆ’ ಪ್ರದರ್ಶನವನ್ನು ಕಾಣಲು ದೊಡ್ಡ ಸಂಖ್ಯೆಯಲ್ಲಿ ಧಾವಿಸಿ ಬರುತ್ತಿದೆ’ ಎನ್ನುತ್ತಾರೆ. ಅಂದಹಾಗೆ, ನಾಟಕವು ಈಗ ಮಲಯಾಳಂ ಭಾಷೆಗೆ ಡಬ್‌ ಆಗುತ್ತಿದೆ. ಹಿಂದಿ ಸೇರಿದಂತೆ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುವ ಪ್ರಯತ್ನ ಸಾಗಿದೆ.

ನಾಟಕದ ಸಂಭಾಷಣೆಗಳನ್ನು ಮೊದಲೇ ಧ್ವನಿಮುದ್ರಿಸಿ ಅಭಿನಯ ಮತ್ತು ತುಟಿಚಲನೆಯ ಮೂಲಕ ಸಂಭಾಷಣೆ ಹೇಳುವ ನಾಟಕ ಶಿವದೂತೆ ಗುಳಿಗೆ. ಈಗಾಗಲೇ ರಾಜ್ಯದಾದ್ಯಾಂತ 450ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ನಾಟಕಕ್ಕಾಗಿ ಸ್ವರಾಜ್‌ ಶೆಟ್ಟಿ ಎಂಟು ಸಿನಿಮಾಗಳ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದಾರೆ. ಮುಂದಿನ ಜನ್ಮದಲ್ಲಿ ಗುಳಿಗ ದೈವದ ಸೇವಕನಾಗಬೇಕೆಂದು ಹೇಳುವಷ್ಟು ವಿನೀತರು.  

ಸ್ವರಾಜ್‌ ಶೆಟ್ಟಿ
ಸ್ವರಾಜ್‌ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT