ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ʻಸ್ಪಂದನʼಕ್ಕೆ ಐವತ್ತು – ‘ಪಾರಿಜಾತ’ ಹುಟ್ಟಿತ್ತು

ಬಿ. ಸುರೇಶ
Published 28 ಅಕ್ಟೋಬರ್ 2023, 23:30 IST
Last Updated 28 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಕನ್ನಡ ಹವ್ಯಾಸೀ ರಂಗಭೂಮಿಯ ಪ್ರಮುಖ ತಂಡಗಳಲ್ಲಿ ‘ಸ್ಪಂದನ’ ಪ್ರಮುಖವಾದುದು. ಎಪ್ಪತ್ತರ ದಶಕದ ಕನ್ನಡ ಹವ್ಯಾಸೀ ರಂಗಭೂಮಿಯ ಉಚ್ಚ್ರಾಯದ ಕಾಲದಲ್ಲಿ ಹುಟ್ಟಿದ ಹಲವು ರಂಗತಂಡಗಳಂತೆ ಎಚ್‌.ವಿ. ವೆಂಕಟಸುಬ್ಬಯ್ಯ ಮತ್ತು ರಾಣಿರಾವ್‌ ಅವರ ನಾಯಕತ್ವದಲ್ಲಿ ಹುಟ್ಟಿದ ತಂಡ ‘ಸ್ಪಂದನ’. ಆ ತಂಡಕ್ಕೆ ಪಾತ್ರಧಾರಿಯಾಗಿ ಬಂದ ಬಿ. ಜಯಶ್ರೀ ಅವರು ನಂತರ ʻಜಸ್ಮಾಒಡನ್ʼ ನಾಟಕದ ನಿರ್ದೇಶನದ ಮೂಲಕ ‘ಸ್ಪಂದನ’ ದ ರೂವಾರಿ ಆದರು. ಅಲ್ಲಿಂದಾಚೆಗೆ ʻಕರಿಮಾಯಿʼ, ʻಲಕ್ಷಾಪತಿ ರಾಜನ ಕತೆʼ, ʻಅಗ್ನಿವರ್ಣʼ, ʻಗಿರಿಜಾ ಕಲ್ಯಾಣʼ ಮುಂತಾದ ಜನಪದ ಪ್ರಕಾರಗಳನ್ನು ಬಳಸಿಕೊಂಡು ಯಶಸ್ವಿ ರಂಗಪ್ರದರ್ಶನಗಳನ್ನು ಕಟ್ಟುತ್ತಾ ಬಂದಿರುವ ʻಸ್ಪಂದನʼ ತಂಡವು ʻವೈಶಾಖʼ, ʻಬಾಳೂರ ಗುಡಿಕಾರʼದಂತಹ ಜನಪದವಲ್ಲದ ರಂಗಶೈಲಿಯನ್ನು ಬಳಸಿದ ನಾಟಕಗಳನ್ನೂ ಕಟ್ಟಿರುವುದುಂಟು. ಇವುಗಳಲ್ಲಿ ಬಹುತೇಕ ನಾಟಕಗಳನ್ನು ಸ್ವತಃ ಬಿ. ಜಯಶ್ರೀ ಅವರು ನಿರ್ದೇಶಿಸಿದ್ದಾರೆ ಮತ್ತು ಪ್ರಧಾನ ಕಲಾವಿದರಾಗಿ ಮೇಳವನ್ನು ಮುನ್ನಡೆಸಿದ್ದಾರೆ. ನಮ್ಮ ನಾಡಿನ ಶ್ರೇಷ್ಟ ರಂಗಸಂಗೀತ ಪ್ರಸ್ತಿತಿಗಾರರಲ್ಲಿ ಒಬ್ಬರಾದ ಬಿ. ಜಯಶ್ರೀ ಅವರು ಸ್ವತಃ ಅದ್ಭುತ ನಟಿಯೂ ಹೌದು. ಗುಬ್ಬಿ ವೀರಣ್ಣನವರ ಮೊಮ್ಮಕ್ಕಳಲ್ಲಿ ಒಬ್ಬರಾದ ಬಿ. ಜಯಶ್ರೀ ಬಾಲ್ಯದಿಂದಲೇ ರಂಗಸಾಂಗತ್ಯದಲ್ಲಿ ಇದ್ದವರು. ತಾಯಿ ಮಾಲತಮ್ಮನವರ ಮೂಲಕ ವೃತ್ತಿ ರಂಗಭೂಮಿಯ ಹಾಡುಗಳನ್ನು ಮತ್ತು ರಂಗಪ್ರಸ್ತುತಿಯ ವಿಶೇಷಗಳನ್ನು ಕಲಿತವರು. ನಂತರ ಎನ್.ಎಸ್.ಡಿ. ಪದವಿಯನ್ನೂ ಪಡೆದು ಕೇವಲ ಕರುನಾಡಿಗಲ್ಲದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ನಾಟಕಗಳನ್ನು ಪ್ರದರ್ಶಿಸಿದವರು. ಇಂತಹ ಇತಿಹಾಸವುಳ್ಳ ರಂಗತಂಡವೊಂದು ತನ್ನ ಐವತ್ತನೆಯ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹೊಸ ನಾಟಕವೊಂದನ್ನು ಕಟ್ಟುವ ಯೋಚನೆ ಮಾಡುವುದೇ ಮೆಚ್ಚತಕ್ಕ ಅಂಶ. ಈ ಸಂದರ್ಭಕ್ಕೆ ʻಸ್ಪಂದನʼ ಆರಿಸಿಕೊಂಡದ್ದು ಕೆ.ವೈ. ನಾರಾಯಣಸ್ವಾಮಿ ಅವರು ಬರೆದ ‘ಪಾರಿಜಾತ’ ನಾಟಕವನ್ನು.

ಪಾರಿಜಾತದ ಹಾದಿ

ನಮ್ಮ ನಾಡಿನ ನೃತ್ಯ-ಸಂಗೀತ ಎರಡನ್ನೂ ಬಳಸಿಕೊಳ್ಳುವ ಜನಪದ ಪ್ರಕಾರಗಳಲ್ಲಿ ದೊಡ್ಡಾಟ ಹಾಗೂ ಸಣ್ಣಾಟ ಪ್ರಖ್ಯಾತವಾದುದು. ಅದರಲ್ಲಿ ಸಣ್ಣಾಟವು ಕಾಲಾಂತರದಲ್ಲಿ ಪಾರಿಜಾತ ಎಂಬ ಹೆಸರಲ್ಲಿ ನಮ್ಮ ನಾಡಲ್ಲಿ ಬಳಕೆಗೆ ಬಂದುದು ಭಕ್ತಿ ಚಳವಳಿಯ ಕಾಲದಲ್ಲಿ. ಸರಿಸುಮಾರು ಹದಿನೈದನೇ ಶತಮಾನದಿಂದ ಮರಾಠಿ ಮತ್ತು ಕನ್ನಡದ ನುಡಿಯಾಡುವ ಜನರ ನಡುವೆ ಕೃಷ್ಣ ಭಕ್ತಿಯ ಈ ಕತೆ ಹಲವು ಸ್ವರೂಪಗಳಲ್ಲಿ ಪ್ರದರ್ಶನವಾಗುತ್ತಾ ಇದೆ. ಈ ಹಾದಿಯಲ್ಲಿ ಹಲವರು ಪಾರಿಜಾತ ಬಳಸಿ ಶಿವಭಕ್ತಿಯ ಕತೆಗಳನ್ನು ಹೇಳಿರುವುದೂ ಉಂಟು. ಇಂದಿಗೂ ಪಾರಿಜಾತವನ್ನು ಅಭಿನಯಿಸುವ ಹಲವು ಜನಪದ ತಂಡಗಳು ಬೆಳಗಾವಿ, ಬಾಗಲಕೋಟೆ, ಧಾರಾವಾಡದಲ್ಲಿವೆ.

ಕೃಷ್ಣನ ಬಳಿಗೆ ಬರುವ ನಾರದನು ಆತ ರುಕ್ಮಿಣಿಯ ಜೊತೆಗಿರುವಾಗ ತಾನು ನಾಕದಿಂದ ತಂದಿದ್ದ ಏಕೈಕ ಪಾರಿಜಾತದ ಹೂವನ್ನು ನೀಡುತ್ತಾನೆ. ಅದನ್ನು ರುಕ್ಮಿಣಿಯು ತಾನೇ ಮುಡಿದುದನ್ನು ಕಂಡ ನಾರದನು ಈ ವಿಷಯವನ್ನು ಸತ್ಯಭಾಮೆಗೆ ತಿಳಿಸಿ ಕೃಷ್ಣನ ಪ್ರೀತಿ ಅತ್ತ ಕಡೆಗೆ ಹೆಚ್ಚೂ ಎಂದು ಚಾಡು ಹೇಳುತ್ತಾನೆ. ಇದರಿಂದ ಮುನಿಸಿಕೊಂಡ ಸತ್ಯಭಾಮೆಯನ್ನು ಒಲಿಸಲು ಸ್ವತಃ ಕೊರವಂಜಿ ವೇಷ ಧರಿಸಿ ಬರುವ ಕೃಷ್ಣನನ್ನು ರುಕ್ಮಿಣಿಯು ಆರಾಧಿಸಿದರೆ, ಸತ್ಯಭಾಮೆಯು ಇನ್ನೂ ಸಿಟ್ಟಲ್ಲಿಯೇ ಇರುತ್ತಾಳೆ. ಅವಳಿಗಾಗಿ ತಾನು ಪಾರಿಜಾತದ ಮರವನ್ನೇ ತರುವುದಾಗಿ ಹೇಳಿ ಸ್ವರ್ಗಕ್ಕೆ ಸಾಗಿ, ಇಂದ್ರನ ಜೊತೆಗೆ ಯುದ್ಧ ಮಾಡಿ ಪಾರಿಜಾತದ ಗಿಡ ತರುವಾಗ, ಆ ಗಿಡವು ಹುಡುಗಿಯಾಗಿ ಅಮೃತಮಥನದ ಕಾಲದಲ್ಲಿ ನೆಲಕ್ಕೆ ಬಿದ್ದ ಏಕೈಕ ಅಮೃತದ ಹನಿಯನ್ನು ಕಶ್ಯಪರು ಹೆಣ್ಣಾಗಿಸಿದ್ದು, ಆ ಹೆಣ್ಣನ್ನು ಗಿಡವಾಗಿಸಿ ಸ್ವರ್ಗಕ್ಕೆ ಸಾಗಿಸಿ ಇಂದ್ರನಿಗೆ ಒಪ್ಪಿಸಿದ್ದು, ಮರಳಿ ವಿಷ್ಣುವು ಹೆಣ್ಣಾಗಿ ಪಾರಿಜಾತವನ್ನು ಮುಟ್ಟಿದಾಗ ಆ ಗಿಡವು ಮರಳಿ ಹೆಣ್ಣಾಗುವುದು ಎಂಬ ಹಳೆಯ ಕತೆಯು ಬಿಚ್ಚಿಕೊಂಡು, ಕೃಷ್ಣನು ಆ ಪಾರಿಜಾತ ಎಂಬ ಹೆಣ್ಣನ್ನೇ ಮನೆಗೆ ತಂದಾಗ ಮತ್ತೊಬ್ಬ ಸವತಿ ಬಂದಳೆಂದು ಸತ್ಯಭಾಮೆಯ ಹುಯಿಲೆಬ್ಬಿಸುವುದು, ಪಾರಿಜಾತವು ತಾನು ಗಿಡವಾಗಿಯೇ ಉಳಿಯಲು ಬೇಡಿಕೊಳ್ಳುವುದು ಈ ಶ್ರೀಕೃಷ್ಣ ಪಾರಿಜಾತದ ಕಥಾವಸ್ತು. ಜನಪದರು ಈ ಕತೆಯಲ್ಲಿ ಕೃಷ್ಣನ ಪವಾಡವನ್ನು ಮತ್ತು ಆ ಮೂಲಕ ಆತನ ಭಕ್ತಿಯನ್ನು ತಿಳಿಸಲು ವಾರಗಟ್ಟಲೇ ಅಭಿನಯಿಸುವ ಸಂಪ್ರದಾಯವಿದೆ. ಈ ಬಗೆಯ ಆಟದಲ್ಲಿ ಭಾಗವತನ ಪಾತ್ರವೇ ಪ್ರಧಾನವಾಗಿ ಇಡಿಯ ನಾಟಕವನ್ನು ನಿರ್ವಹಿಸುತ್ತದೆ. ಈ ಭಾಗವತ ಕೇಳುವ ಪ್ರಶ್ನೆಗಳು ಅದಕ್ಕೆ ಪಾತ್ರಗಳು ಉತ್ತರಿಸುತ್ತಾ ಮೂಡುವ ತಮಾಷೆಗಳು ಇಲ್ಲಿ ಪ್ರಧಾನ. ಕಾಲಾಂತರದಲ್ಲಿ ಈ ಪಾರಿಜಾತದ ಪ್ರದರ್ಶನಗಳಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂಬ ಮಾತಿದೆ.

ʻಸ್ಪಂದನʼದ ಪಾರಿಜಾತ

ಕೆ.ವೈ.ನಾರಾಯಣಸ್ವಾಮಿ ಕನ್ನಡ ರಂಗಭೂಮಿಯ ಪ್ರಧಾನ ನಾಟಕಕಾರರಲ್ಲಿ ಒಬ್ಬರು. ಅವರು ಬರೆದ ʻಅಭಿಜ್ಞಾನʼ, ʻಭಾರತʼ, ʻಮಲ್ಲಿಗೆʼ ಮುಂತಾದ ನಾಟಕಗಳು ಜನಪ್ರಿಯವಾಗಿ ಹಲವು ಪ್ರದರ್ಶನಗಳನ್ನು ಕಂಡಿವೆ. ಈಗ ʻಸ್ಪಂದನʼ ತಂಡಕ್ಕಾಗಿಯೇ ಕೆ.ವೈ.ಎನ್.‌ ‘ಪಾರಿಜಾತ’ ಬರೆದಿದ್ದಾರೆ. ಜನಪದ ಪಾರಿಜಾತದಲ್ಲಿ ಕೃಷ್ಣ ಭಕ್ತಿಯೇ ಪ್ರಧಾನವಾದರೆ ಈ ನಾಟಕದಲ್ಲಿ ಹೆಣ್ಣಿನ ಸ್ವಾತಂತ್ರ್ಯವನ್ನು ಆಧುನಿಕ ಸ್ರ್ತೀವಾದದ ಹಿನ್ನೆಲೆಯಲ್ಲಿ ಮುಂದಿರಿಸಿಲಾಗಿದೆ. ನಾಟಕದ ಅಂತ್ಯದಲ್ಲಿ ತನ್ನ ಕಾರಣವಾಗಿ ಸತ್ಯಭಾಮೆ ಮತ್ತು ಕೃಷ್ಣನ ನಡುವೆ ಜಗಳವಾಗುವಾಗ ಮುಂದೆ ಬಂದು ಮಾತಾಡುವ ಪಾರಿಜಾತ, ಹೇಗೆ ಹುಟ್ಟಿನಿಂದ ಗಂಡಾಳ್ವಿಕೆಯು ತನ್ನನ್ನು ವಸ್ತುವನ್ನಾಗಿ ನೋಡಿದೆ ಎಂದು ಹೇಳುತ್ತಾ ತನಗೊಂದು ಹಿಡಿ ಮಣ್ಣು ಕಾಲಿನ ಬಳಿ ಇದ್ದರೆ ಸಾಕು ತಾನು ಮರಳಿ ಗಿಡವಾಗಿ ಉಳಿದುಹೋಗುತ್ತೇನೆ ಎನ್ನುವ ಮೂಲಕ ಒಟ್ಟಾರೆ ಸ್ತ್ರೀಕುಲದ ದನಿಯಾಗುತ್ತಾಳೆ. ಈ ಹಂತದಲ್ಲಿ ಕೆ.ವೈ.ಎನ್.‌ ಅವರ ಲೇಖನಿಯು ಕಾವ್ಯಾತ್ಮಕವಾಗಿ ಇಡಿಯ ಪ್ರಸಂಗವನ್ನು ನಿರ್ವಹಿಸಿರುವುದು ಗಮನಿಸಬೇಕಾದ ವಿಷಯವಾಗಿದೆ.

ನಾರದನ್ನು ಪಾರಿಜಾತದ ಹೂ ಹಿಡಿದು ಭೂಲೋಕಕ್ಕೆ ಬಂದಾಗಲೇ ಆತನಿಗೆ ಸಿಗುವ ಪಾರಿಜಾತ ಅಭಿನಯಿಸುವ ತಂಡ ಹಾಗೂ ಆ ತಂಡದವರ ಒತ್ತಾಯಕ್ಕೆ ನಾರದನೇ ಭಾಗವತನಾಗಿ ಆ ನಾಟಕವನ್ನು ಮುನ್ನಡೆಸುವುದು ಈ ನಾಟಕದ ಆರಂಭಕ್ಕೆ ಒಂದು ಚೇತೋಹಾರಿ ಓಘವನ್ನು ಸೃಷ್ಟಿಸುತ್ತದೆ. ನಂತರ ನಾಟಕದುದ್ದಕ್ಕೂ ಭಾಗವತನೂ ಆಗಿ, ನಾರದನೂ ಆಗಿ ಕಥನದ ಸೂತ್ರವನ್ನು ಎಳೆದೊಯ್ಯುವ ನಾರದನ ಪಾತ್ರಧಾರಿಯು ಪ್ರದರ್ಶನದುದ್ದಕ್ಕೂ ಉತ್ಸಾಹ ತುಂಬುತ್ತಾರೆ.

ʻಸ್ಪಂದನʼ ತಂಡದ ನಾಟಕವೆಂದರೆ ಹಾಡು ಮತ್ತು ಕುಣಿತವು ಪ್ರಧಾನ. ಈ ನಾಟಕದಲ್ಲಿಯೂ ವೃತ್ತಿಪರ ಹಾಡುಗಾರರ ಜೊತೆಗೆ ಸ್ವತಃ ಬಿ. ಜಯಶ್ರೀ ಅವರು ಮೇಳವನ್ನು ಮುನ್ನಡೆಸುತ್ತಾರೆ. ನಾಟಕದುದ್ದಕ್ಕೂ ಮೇಳವೂ ಸಹ ನಾಟಕದ ಪಾತ್ರವಾಗಿ, ಪಾತ್ರಗಳು ಮೇಳದವರಾಗಿ ಹಲವು ಕೆಲಸಗಳನ್ನು ನಿರ್ವಹಿಸುತ್ತಾ ಇಡಿಯ ನಾಟಕಕ್ಕೆ ಲವಲವಿಕೆ ತುಂಬುವುದು ಈ ಪ್ರದರ್ಶನದ ವಿಶೇಷ. ಬಹುತೇಕ ಪ್ರಧಾನ ಪಾತ್ರಗಳನ್ನು ಕೃಷ್ಣನೂ ಸೇರಿದಂತೆ ನೃತ್ಯವನ್ನು ಚೆನ್ನಾಗಿ ಬಲ್ಲ ಹೆಣ್ಣುಮಕ್ಕಳು ನಿರ್ವಹಿಸಿದ್ದಾರೆ. ಹಾಗಾಗಿ ಹಾಡುಗಳ ಲಯಕ್ಕೆ ತಕ್ಕಂತೆ ನೃತ್ಯವನ್ನು ಮಾಡುತ್ತಾ ನಟನೆಯನ್ನೂ ಮಾಡಿರುವುದರಿಂದಾಗಿ ಇಡಿಯ ಪ್ರದರ್ಶನಕ್ಕೆ ವಿಶಿಷ್ಟವಾದ ಚೈತನ್ಯ ಒದಗಿದೆ. ನಾಟಕದ ನಡುವಲ್ಲಿ ಕೊರವಂಜಿಯಾಗಿ, ಅಂತ್ಯದಲ್ಲಿ ಪಾರಿಜಾತ ಪಾತ್ರವಾಗಿ ಲಹರಿ ಭಾರಿಘಾಟ್‌ ಅವರು ನೃತ್ಯವನ್ನಷ್ಟೇ ಅಲ್ಲದೆ ವಾಚಿಕವನ್ನೂ ನಿರ್ವಹಿಸುವ ರೀತಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ.

ಒಟ್ಟಾರೆಯಾಗಿ ʻಸ್ಪಂದನʼ ತಂಡವು ತನ್ನ ಐವತ್ತನೆಯ ವಸಂತದ ನೆನಪಿನಲ್ಲಿ ಕನ್ನಡ ರಂಗಭೂಮಿಯು ಬಹುಕಾಲ ಉಳಿಸಿಕೊಳ್ಳುವ ಸಾಧ್ಯತೆಯನ್ನುಳ್ಳ ನಾಟಕವೊಂದನ್ನು ನೀಡಿದೆ. ಇದಕ್ಕಾಗಿ ಬಿ. ಜಯಶ್ರೀ ಅವರಾದಿಯಾಗಿ ತಂಡದ ಎಲ್ಲರೂ ಅಭಿನಂದನಾರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT