ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮತ್ತೆ ‘ಅಣ್ಣನ ನೆನಪು’

Published 29 ಏಪ್ರಿಲ್ 2023, 20:23 IST
Last Updated 29 ಏಪ್ರಿಲ್ 2023, 20:23 IST
ಅಕ್ಷರ ಗಾತ್ರ

ಕ ನ್ನಡಿಗರ ಅಸ್ಮಿತೆ, ಕರ್ನಾಟಕ, ಕನ್ನಡತ್ವಕ್ಕೆ ಧಕ್ಕೆ ಎದುರಾದಾಗಲೆಲ್ಲ ಕುವೆಂಪು, ತೇಜಸ್ವಿ ಅವರು ನಮಗೆ ಮತ್ತೆ ಮತ್ತೆ ನೆನಪಾಗುತ್ತಾರೆ. ಇಂತಹದೊಂದು ಬಿಕ್ಕಟ್ಟಿನ ಸಂದರ್ಭದಲ್ಲೇ ತೇಜಸ್ವಿ ಅವರ ‘ಅಣ್ಣನ ನೆನಪು’ ರಂಗಕೃತಿಯಾಗಿ ಈಚೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಾಗೂ ಬೆಂಗಳೂರಿನ ಕೆ.ಎಚ್‌.ಕಲಾಸೌಧದಲ್ಲಿ ಪ್ರದರ್ಶನ ಕಂಡಿತು. ಬೆಂಗಳೂರಿನ ಪ್ರವರ ಥಿಯೇಟರ್‌ ತಂಡದ ಈ ಪ್ರಯೋಗ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿರೋಧದಂತೆ ಕಂಡುಬಂತು.

ಭಾಷೆ, ಧರ್ಮ, ಸಿದ್ಧಾಂತ, ಸಂಗೀತ, ವಿಜ್ಞಾನ, ರಾಜಕೀಯ, ಪರಿಸರ ಹೀಗೆ ಎಲ್ಲವನ್ನೂ ಮನುಷ್ಯತ್ವದ ನೆಲೆಯಲ್ಲಿ ನೋಡುವ ಕುವೆಂಪು ಹಾಗೂ ತೇಜಸ್ವಿ ಅವರು ಈ ಕಾಲಕ್ಕೆ ಎಷ್ಟು ಹಾಗೂ ಹೇಗೆ ಮುಖ್ಯರು ಎಂದು ನಾಟಕ ಪ್ರತಿಧ್ವನಿಸುತ್ತದೆ.

‘ಅಣ್ಣನ ನೆನಪು’ 1996ರಲ್ಲಿ ಪ್ರಕಟಗೊಂಡು ಈಗಾಗಲೇ 18 ಮರುಮುದ್ರಣ ಕಂಡ ಕೃತಿ. ಇದು ತೇಜಸ್ವಿ ಅವರ ಮೂಲಕ ಕುವೆಂಪು ವ್ಯಕ್ತಿತ್ವವನ್ನು ನೋಡುವ ಕ್ರಮವೂ ಹೌದು. ತೇಜಸ್ವಿ ಅವರ ಆತ್ಮಕಥೆಯ ಕೆಲ ಭಾಗಗಳೂ ಹೌದು. ಕುವೆಂಪು ಸಾಹಿತ್ಯ ಕೃತಿಗಳಷ್ಟೇ ಅಲ್ಲದೆ ಅವರ ಆತ್ಮಕಥೆ ‘ನೆನಪಿನ ದೋಣಿ’ಯಲ್ಲೂ ನೋಡಸಿಗದ ಕುವೆಂಪು ‘ಅಣ್ಣನ ನೆನಪು’ನಲ್ಲಿ ಕಾಣಸಿಗುತ್ತಾರೆ. ಕೃತಿಯಲ್ಲಿ 41 ತಲೆಬರಹದ ಲೇಖನಗಳಿವೆ. ಒಂದೊಂದು ಭಾಗವೂ ಒಂದೊಂದು ನಾಟಕವಾಗುವ ಸನ್ನಿವೇಶಗಳಿವೆ. ಅಷ್ಟಕ್ಕೂ ತೇಜಸ್ವಿ ಅವರು ತಮ್ಮ ಭಾಷೆಯಲ್ಲಿ ಕಟ್ಟಿಕೊಡುವ ರಸಾನುಭವವನ್ನು ರಂಗದಲ್ಲಿ ಸೃಷ್ಟಿಸುವುದು ಬಹುದೊಡ್ಡ ಸವಾಲು. ಈ ಸೂಕ್ಷ್ಮತೆಗಳೊಂದಿಗೆ ರಂಗರೂಪಕ್ಕೆ ತಂದ ಲೇಖಕ ಕರಣಂ ಪವನ್‌ ಪ್ರಸಾದ್‌, ವಿನ್ಯಾಸ ಮತ್ತು ನಿರ್ದೇಶನ ಮಾಡಿದ ಹನು ರಾಮಸಂಜೀವ ಅವರು ದೊಡ್ಡ ಜವಾಬ್ದಾರಿಯನ್ನೇ ಮೆರೆದಿದ್ದಾರೆ.

ಹನು ರಾಮಸಂಜೀವ ಅವರು ಹೇಳಿಕೊಂಡಿರುವಂತೆ ಇದು ‘ಸಾಕ್ಷ್ಯ ನಾಟಕ’. ಅಂದರೆ ಜೀವನಾಧಾರಿತ ನಾಟಕ. ಕುವೆಂಪು ಅವರ ವ್ಯಕ್ತಿತ್ವ ನಿರೂಪಣೆಗೆ ಎಷ್ಟು ಬೇಕೊ ಅಷ್ಟನ್ನು ಮಾತ್ರ ಆಯ್ದಕೊಂಡು, ಅದನ್ನು ರಂಗದಲ್ಲಿ ತರುವಲ್ಲಿ ವಿನ್ಯಾಸಗಾರನ ಜಾಣ್ಮೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.

ಅಷ್ಟು ದೊಡ್ಡ ಕವಿ, ಮನೆಯಲ್ಲಿ ಒಬ್ಬ ತಂದೆಯಾಗಿ ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ, ಸಂಗೀತ ಕಲಿಕೆಗೆ ಅವರನ್ನು ಒಡ್ಡುವ ರೀತಿ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸುವ ಪರಿ, ಗಂಡನಾಗಿ ಹೆಂಡತಿಯನ್ನು ಗೌರವದಿಂದ ಕಾಣುತ್ತಲೇ ಆಕೆಯಲ್ಲಿರುವ ಸಂಪ್ರದಾಯಸ್ಥ ಮನಸ್ಥಿತಿ ಬದಲಿಸುವ ಬಗೆ, ಲೇಖಕನಾಗಿ ಇನ್ನೊಬ್ಬ ಸಾಹಿತಿ ಬಗೆಗಿನ ಅಭಿಪ್ರಾಯ, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳ ಕುರಿತ ಅವರ ಖಚಿತ ಅಭಿಪ್ರಾಯ, ಅವರ ನ್ಯಾಯಪ್ರಜ್ಞೆ, ಸತ್ಯನಿಷ್ಠೆ -ಇವುಗಳೆಲ್ಲವೂ ನಾಟಕದಲ್ಲಿ ನಿಧಾನಕ್ಕೆ ನಿರೂಪಣೆಗೊಂಡು ಪ್ರೇಕ್ಷಕರಿಗೆ ಕುವೆಂಪು ಇನ್ನಷ್ಟು ಆಪ್ತರಾಗುತ್ತಾರೆ. ಈ ‘ಕುವೆಂಪು ಮಾದರಿ’ಯನ್ನು ಹೊಸ ತಲೆಮಾರಿಗೂ ದಾಟಿಸುವ ಹಲವು ಪ್ರಯತ್ನಗಳೂ ನಾಟಕದಲ್ಲಿವೆ.

ಈ ನಾಟಕದಲ್ಲಿ ತೇಜಸ್ವಿ ಅವರ ಗೆಳೆಯ ಕಡಿದಾಳು ಶಾಮಣ್ಣ ಅವರ ಪಾತ್ರ ಬರುತ್ತದೆ. ಜೀವಂತ ಪಾತ್ರದ ಎದುರೇ ನಾಟಕದ ಪಾತ್ರ ಎದುರಾಗುವ ಸನ್ನಿವೇಶವೂ ಈ ಪ್ರಯೋಗಕ್ಕೆ ಒದಗಿಬಂದಿತ್ತು. ವಯೋಸಹಜವಾದ ಬಳಲಿಕೆಯಲ್ಲೇ ಶಾಮಣ್ಣ ಪ್ರೇಕ್ಷಕರ ಮೊದಲ ಸಾಲಿನಲ್ಲಿ ಕುಳಿತು ನಾಟಕ ವೀಕ್ಷಿಸಿ, ಸ್ವಲ್ಪ ಹುರುಪುಗೊಂಡರು.

‘ಮಹಾರಾಜ ಕಾಲೇಜಿನ ಹಲವು ವಿದ್ಯಾರ್ಥಿಗಳು ಕಾಲೇಜಿನ ತಮಗೆ ಅಟೆಂಡನ್ಸ್‌ ಕೊಡಬೇಕೆಂದು ಗಲಾಟೆ ಆರಂಭಿಸುತ್ತಾರೆ. ಅಟೆಂಡನ್ಸ್‌ ಕೊಡಲು ಕುಲಪತಿಯಾಗಿದ್ದ ಕುವೆಂಪು ಅವರಿಗೆ ನಾನು ಹೇಳಬೇಕೆಂದು ಬಹಳ ಕೆಟ್ಟ ಭಾಷೆಯಲ್ಲಿ ಏಕವಚನ ಉಪಯೋಗಿಸಿ ಬೈದರು. ಅವರ ಅಹಂಕಾರದ ಮಾತಿನ ಮರ್ಜಿ, ಅವರ ವೇಷಭೂಷಣ ನೋಡಿದರೆ ಅವರೆಲ್ಲಾ ಆರ್‌ಎಸ್‌ಎಸ್‌ನವರಿರಬಹುದೆಂದು ಕಾಣುತ್ತದೆ. ಏಕೆಂದರೆ ಮಿಕ್ಕವರು ಯಾರೂ ಅಣ್ಣನ ಬಗ್ಗೆ ಎಷ್ಟೇ ಸಿಟ್ಟಿದ್ದರೂ ಅಷ್ಟು ಆಳವಾದ ತಿರಸ್ಕಾರ, ದ್ವೇಷಗಳಿಂದ ಏಕವಚನದಲ್ಲಿ ಮಾತಾಡುತ್ತಿರಲಿಲ್ಲ ಹೀಗೆ ‘ಉದಯರವಿ ಮೇಲೆ ಹಲ್ಲೆ’ ಭಾಗದಲ್ಲಿ ತೇಜಸ್ವಿಯವರು ಬರೆದುಕೊಂಡಿದ್ದಾರೆ. ಆದರೆ, ಅದು ರಂಗದಲ್ಲಿ ಆರ್‌ಎಸ್‌ಎಸ್‌ ಬದಲಿಗೆ ಯಾವುದೋ ‘ಸಂಘ’ದವರು ಎಂದಷ್ಟೇ ಸಂಭಾಷಣೆ ಇದೆ. ಇದು ಇವತ್ತಿನ ಸಮೂಹ ಮಾಧ್ಯಮಗಳ ಬಾಯಿಗೆ ಸಿಕ್ಕು ವಿವಾದಗೊಳ್ಳುವುದನ್ನು ತಪ್ಪಿಸಿಕೊಳ್ಳಲು ರಂಗರೂಪ ಮಾಡಿದವರು, ನಿರ್ದೇಶಕರು ಜಂಟಿಯಾಗಿ ಪ್ರಜ್ಞಾಪೂರ್ವಕವಾಗಿ ಆರ್‌ಎಸ್‌ಎಸ್‌ ಪದ ಕೈಬಿಟ್ಟಿರುವುದಕ್ಕೆ ಸಾಕ್ಷಿ.

ನಾಟಕ ಗಂಭೀರವಾಗಿ ಸಾಗುತ್ತಿರುವಾಗಲೇ ದಿಢೀರ್‌ ಆಗಿ ಕುವೆಂಪು ಅವರ ಪದ್ಯಗಳು ಕೇಳಿಬಂದು, ಅವಕ್ಕೆ ಇತ್ತ ಜನಪದವೂ ಅಲ್ಲ, ಅತ್ತ ಆಧುನಿಕವೂ ಅಲ್ಲದ ನೃತ್ಯ ಸಂಯೋಜನೆ ಮಾಡಿರುವುದು ರಸಾಸ್ವಾದನೆಗೆ ಅಡ್ಡಿಯುಂಟು ಮಾಡುತ್ತವೆ. ಎರಡು ಸಲ ಹೀಗಾಗುತ್ತದೆ. ಇದಕ್ಕೆ ನಾಟಕದಲ್ಲಿ ಯಾವ ಸಮರ್ಥನೆಯೂ ಇಲ್ಲ.

ನಾಟಕದಲ್ಲಿ ಸಂಭಾಷಣೆಯೇ ಜೀವಾಳ. ಆದರೆ ಶಿವಮೊಗ್ಗದಲ್ಲಿ ಧ್ವನಿವರ್ಧಕ ಸಮರ್ಪಕವಾಗಿಲ್ಲದಿದ್ದರಿಂದ ಸಂಭಾಷಣೆಯನ್ನು ಆಸ್ಪಷ್ಟವಾಗಿತ್ತುು. ದೃಶ್ಯಕ್ಕೆ ತಕ್ಕಂತೆ ರಂಗಸಜ್ಜಿಕೆ ಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆಯೂ ಅಲ್ಲಲ್ಲಿ ಇತ್ತು. ಶಾಮಣ್ಣ, ತೇಜಸ್ವಿ ಅವರು ಸಂಗೀತ ಕಲಿಯುವಾಗ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯ ಬೋರ್ಡ್‌ ಕಾಣಿಸುತ್ತದೆ!

ಒಂದೂವರೆ ಗಂಟೆಯ ಈ ಸುದೀರ್ಘ ನಾಟಕದಲ್ಲಿ ತೇಜಸ್ವಿ ಅವರಂತೆ ಕಂಡು, ಅವರನ್ನೇ ಆವಾಹಿಸಿಕೊಂಡಂತೆ ನಟಿಸಿದ್ದು ಹನು ರಾಮಸಂಜೀವ ಅವರು. ಕುವೆಂಪು ಪಾತ್ರಧಾರಿ ಮಹೇಶ್ ಕೂಡ ಸೊಗಸಾಗಿ ನಟಿಸಿದರು. ವಸ್ತ್ರವಿನ್ಯಾಸ (ಮಾಲತೇಶ ಬಡಿಗೇರ), ಸಂಗೀತ (ಅಕ್ಷಯ್‌ ಭೊಂಸ್ಲೆ), ಬೆಳಕು (ಸೂರ್ಯ ಸಾಥಿ) ನಾಟಕದ ಮತ್ತಷ್ಟು ಸಶಕ್ತ ಅಂಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT