ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಭೂಮಿ: ಕ್ವಿಯರ್ ಕನಸೂ ತಲ್ಕಿ ತಿನಿಸಿನ ತುಂಡೂ

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕ್ವಿಯರ್‌, ಟ್ರಾನ್ಸ್‌ ಮುಂತಾದ ಅಲ್ಪಸಂಖ್ಯಾತ ತಳಸಮುದಾಯಗಳು ತಮ್ಮ ಕಥೆಗಳನ್ನು ತಾವೆ ರಂಗದ ಮೇಲೆ ಅಭಿನಯಿಸಿ ಪ್ರಸ್ತುತಪಡಿಸುವ ರಂಗಪ್ರಯೋಗಗಳಿಗೆ ಹೊಸಸೇರ್ಪಡೆ ‘ತಲ್ಕಿ’. ಈ ಹಿಂದೆ ಪ್ರದರ್ಶನಗೊಂಡ ‘ಬದುಕು ಬಯಲು’, ‘ನೂರಮ್ಮ’, ‘ಶಹರ್‌ ಇನ್‌ ದಿ ಖಾಕಿ ರೂಂ’ ನನ್ನ ಮಿತಿಯಲ್ಲಿ ಸದ್ಯಕ್ಕೆ ನೆನಪಾಗುತ್ತಿರುವ ಕೆಲವು ನಾಟಕಗಳು. ತಳಸಮುದಾಯದ ಕಲಾಭಿವ್ಯಕ್ತಿಯನ್ನು ಪರಿಚಯಾತ್ಮಕ ಮಾಹಿತಿಯ ಮಟ್ಟಕ್ಕಷ್ಟೆ ಇಳಿಸಿನೋಡುವ ವಿಮರ್ಶಾಜಗತ್ತಿಗೆ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬಹುದಾದ ಪ್ರಯತ್ನವಾಗಿ ‘ತಲ್ಕಿ’ ಸೇರಿ ಇತ್ತೀಚಿನ ಕ್ವಿಯರ್‌ ನಾಟಕಗಳು ನನಗೆ ಗೋಚರಿಸಿವೆ. ಇಲ್ಲಿ ಶ್ರೀಜಿತ್‌ ಸುಂದರಂ ಅವರ ಶ್ರಮ ಎದ್ದು ಕಾಣುತ್ತದೆ. ಸಮುದಾಯದ ಜನರನ್ನೇ, ಅವರ ಜೀವನವನ್ನೇ ಪಾತ್ರವಾಗಿಸಿ ರಂಗದ ಮೇಲೆ ತರುವುದು ಸುಲಭವೇನಲ್ಲ. ಅಭಿನಂದನಾರ್ಹವಾದ ಮತ್ತೊಂದು ಅಂಶವೆಂದರೆ, ‘ಕ್ವಿಯರ್‌ ಅಸ್ತೆಟಿಕ್ಸ್‌’ ಅನ್ನು ಶೋಧಿಸುವ, ಅದನ್ನು ರಂಗದ ಮೇಲೆ ತರುವ ಪ್ರಯತ್ನವನ್ನೂ ಶ್ರೀಜಿತ್‌ ಮಾಡಿರುವುದು. 

ವಯಸ್ಸಾದ ಹಿರಿಯ ನಾನಿ ಮನೆಗೆ ಬರುವುದರ ಮೂಲಕ ಕಥೆ ಆರಂಭವಾಗುತ್ತದೆ. ಚಾಂದಿನಿ ಪಾತ್ರ ನಾನಿಗೆ ‘ನಿನ್ನ ವಯಸ್ಸೆಷ್ಟು?’ ಎಂದು ಕೇಳಿದಾಗ ಮನೆಯಲ್ಲಿರುವ ದಾದಿ, ಬಾಯಿ, ಗುರುಬಾಯಿ, ಕಾಲಾ ಎಲ್ಲರಿಗೂ ಅರವತ್ತು ತುಂಬಿರುವುದರ ಬಗ್ಗೆ ಹೇಳಿ, ಚಾಂದಿನಿಗೂ ನಿನಗೂ ಇನ್ನೇನು ಐವತ್ತು ತುಂಬುತ್ತದೆಯಲ್ಲ ಎಂದು ನೆನಪಿಸಿ ನಾನಿ ಕಿಚಾಯಿಸುತ್ತಾರೆ. ನಡುವಯಸ್ಸಿನಲ್ಲಿ ಆರಂಭವಾಗುವ ಮುಪ್ಪಿನ ಗೆರೆಗಳ ವಾಸ್ತವ ಚಾಂದಿನಿಯನ್ನು ನಡುಗಿಸುತ್ತದೆ. ಬದುಕು, ಅಸ್ಮಿತೆ ಹಾಗೂ ಘನತೆಗಾಗಿನ ಹೋರಾಟದಲ್ಲಿ ಒಳಗೆ ಜತನ ಮಾಡಿಕೊಳ್ಳುತ್ತಲೇ ಬಂದಿರುವ ನನಸೇ ಆಗದಿರುವ ಕನಸಿನ ಬಗ್ಗೆ ಹಳಹಳಿಸುತ್ತಾರೆ. ಒಬ್ವರಿಗೆ ತಾನು ಶಕುಂತಲೆಯಾಗಬೇಕು, ಮತ್ತೊಬ್ಬರಿಗೆ ತಾನು ಅರ್ಧನಾರೀಶ್ವರ, ಇನ್ನು ಕೆಲವರಿಗೆ ಜಯಮಾಲಾ, ಅರಮನೆಯಲ್ಲಿರುವ ಮಹಾರಾಣಿ, ಆಂಡಾಳ್‌, ಹಿರಿಯ ನಾನಿಗೆ ಗೃಹಿಣಿಯಾಗುವ ಕನಸು. ನನಸಾಗದೆ ಉಳಿವ ಕನಸುಗಳನ್ನು ಒಂದು ದಿನದ ಮಟ್ಟಿಗಾದರೂ ಸಂಭ್ರಮಿಸುವ ಯೋಜನೆ ಸಿದ್ಧವಾಗುತ್ತದೆ. ನಾನಿಗೆ ಇಷ್ಟ ಎಂದು ಟ್ರಾನ್ಸ್‌ ಸಮುದಾಯದ ಮನೆಗಳಲ್ಲಿ ಮಾಡುವ ಸುಪ್ರಸಿದ್ಧ ತಿನಿಸಾದ ತಲ್ಕಿ ತಯಾರಿಸುತ್ತಾರೆ. ಈ ನಡುವೆಯೆ ಟ್ರಾನ್ಸ್ ಮಹಿಳೆಯರ ಬದುಕು, ಕನಸು, ನೋವು, ನಲಿವು, ಸಂಭ್ರಮಗಳನ್ನೆಲ್ಲ ನಾಟಕ ತೆರೆದಿಡುತ್ತಾ ಹೋಗುತ್ತದೆ. 

ರಂಗದ ಮೇಲೆ ಅಡುಗೆ ಮನೆ, ಹಾಲ್‌, ನಾನಿಯ ಕೋಣೆ ಎಲ್ಲವೂ ಪ್ರೇಕ್ಷಕರಿಗೆ ಕಾಣಿಸುತ್ತವೆ. ಅಲ್ಲಿ ಯಾವುದಕ್ಕೂ ಗೋಡೆಗಳಿಲ್ಲ. ಪಾತ್ರಗಳು ಒಂದರಿಂದ ಮತ್ತೊಂದಕ್ಕೆ ಲೀಲಾಜಾಲವಾಗಿ ಓಡಾಡುತ್ತವೆ. ಈ ಹೊಳಹು ಕ್ವಿಯರ್‌ ಹಾಗೂ ಟ್ರಾನ್ಸ್‌ ವಿಷಯದ ಸಂಕೇತವಾಗಿ ನಮಗೆ ಕಾಣಿಸುತ್ತದೆ. ಈ ರಂಗಪ್ರಸ್ತುತಿಯಲ್ಲಿ ಪಾತ್ರಗಳು ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುವುದು ಹಾಗೂ ಪ್ರೇಕ್ಷಕರಿಗೆ ಕಥೆ ಹೇಳುವುದು ಎರಡೂ ಒಟ್ಟೊಟ್ಟಿಗೆ ನಡೆಯುತ್ತಿರುತ್ತದೆ. ಟ್ರಾನ್ಸ್‌ ಸಮುದಾಯದ ಭಾಷೆ, ಉಡುಗೆ, ಆಚರಣೆ, ಕಾಲನ ಅಸಹ್ಯ ಭಾರಗಳನ್ನು ತಾಳಿಕೊಳ್ಳಲು ಅವರೆ ಬದುಕಿನಿಂದ ಹಕ್ಕಿನಂತೆ ಪಡೆದುಕೊಂಡರೇನೋ ಎಂಬಂತಿರುವ ಹಾಸ್ಯಪ್ರಜ್ಞೆ ಎಲ್ಲವೂ ಸಹಜವಾಗಿ ತಟ್ಟುತ್ತವೆ. ನಗಿಸುತ್ತವೆ. ಕಣ್ಣುತುಂಬಿಸುತ್ತವೆ. ಸೀಟಿನ ಮುಂಭಾಗದಲ್ಲಿ ಕೂರಿಸುತ್ತವೆ. ಆದರೆ ‘ನಿಮಗೆ ಗೊತ್ತಾ?’ ಎಂದು ಶುರುವಾಗುವ ಪ್ರೇಕ್ಷಕರಿಗೆ ಕಥೆ ಹೇಳುವ ಭಾಗಗಳಲ್ಲಿ ನಾವೆಷ್ಟೆ ಬೇಡವೆಂದರೂ ಇಣುಕಿಬಿಡುವ ‘ವಿಕ್ಟಿಮ್‌ಹುಡ್‌’ ಕಥೆಗಳು ಮುನ್ನೆಲೆಗೆ ಬಂದುಬಿಟ್ಟಿವೆ. ಇದು ನಾಟಕದ ಕಟ್ಟೋಣಕ್ಕೆ ಅಲ್ಲಲ್ಲಿ ಅಡ್ಡಿ ಉಂಟುಮಾಡಿದೆ.

ಇಡೀ ನಾಟಕದಲ್ಲಿ ನಮ್ಮನ್ನು ಸೆಳೆಯುವ ಅಂಶವೆಂದರೆ ಅದರ ಬಣ್ಣ ಸಂಯೋಜನೆ, ಬೆಳಕಿನ ವಿನ್ಯಾಸ ಮತ್ತು ವಸ್ತ್ರವಿನ್ಯಾಸ. ನಾಟಕದಲ್ಲಿ ಅಭಿನಯಿಸಿರುವ ಎಲ್ಲರೂ ತಮ್ಮ ನಿಜ ಜೀವನದ ಪಾತ್ರಗಳನ್ನೆ ರಂಗದಮೇಲೂ ನಿಭಾಯಿಸುತ್ತಿರುವುದರಿಂದ ಒಂದು ಸಹಜತೆ ನಾಟಕಕ್ಕೆ ದಕ್ಕಿದೆ. ಸರವಣ, ಶೋಭನ, ಚಾಂದಿನಿ ಸೇರಿ ಎಲ್ಲರೂ ನಮ್ಮನ್ನು ಇನ್ನಿಲ್ಲದಂತೆ ಆವರಿಸುತ್ತಾರೆ. ಸಹಜತೆಗೊಂದು ಉದಾಹರಣೆ ನೀಡುವುದಾದರೆ, ರೇವತಿ ಒಂದು ದೃಶ್ಯದಲ್ಲಿ ಕ್ವಿಯರ್‌ ಜೀವಗಳ ಆತ್ಮಹತ್ಯೆಯ ಕುರಿತು ಹೇಳುವಾಗ ನಾವು ಇಪ್ಪತ್ನಾಲ್ಕು ವರ್ಷ ವಯಸ್ಸಿನಲ್ಲೇ ಫೆಮಿಲಾ, ಪ್ರವೀಣನನ್ನು ಕಳೆದುಕೊಂಡುಬಿಟ್ಟೆವು ಎಂದು ಹೇಳುವಾಗ ರೇವತಿ ಕಣ್ಣಲ್ಲಿ ಜಿನುಗುವ ಕಣ್ಣೀರು ಪ್ರೇಕ್ಷಕರ ಕಣ್ಣಲ್ಲಿ ನೀರು ನಿಲ್ಲಿಸುತ್ತವೆ. ಮತ್ತೊಂದು ದೃಶ್ಯದಲ್ಲಿ ದೇಹದ ಮೇಲಾಗುವ ಶೋಷಣೆಯನ್ನು ಹೇಳುವಾಗ ನಾನಿಯನ್ನು ಸ್ನಾನ ಮಾಡಿಸುವ ಸರವಣ ‘ಅಯ್ಯೋ ನಾನಿ, ಇಡೀ ಬೆಂಗಳೂರೆ ನಿನ್ನ ದೇಹದ ಮೇಲೆ ಗಾಯದ ನಿಶಾನಿಯಾಗಿ ಕಾಣ್ತಾ ಇವೆಯಲ್ಲ!’ ಎನ್ನುವ ಮಾತೊಂದನ್ನು ಹೇಳುತ್ತಾರೆ. ಇಡೀ ದೃಶ್ಯವನ್ನು ಶ್ರೀಜಿತ್‌ ಸುಂದರಂ ಒಂದು ಮಲ್ಟಿಮೀಡಿಯಾ ಸಹಾಯದಿಂದ ಬೆಂಗಳೂರು ಮ್ಯಾಪ್‌ ಲೊಕೇಟ್‌ ಮಾಡುವ ಮೂಲಕ ಕಟ್ಟಿದ್ದಾರೆ. ಅದು ನಮ್ಮಲ್ಲಿ ಹುಟ್ಟಿಸುವ ದಿಗಿಲು ಬೇರೆಯದೆ ನೆಲೆಯದ್ದು! ನಾಟಕದ ಕೊನೆಯಲ್ಲಿ ಎಲ್ಲ ನೋವುಗಳನ್ನು ನುಂಗಿಕೊಂಡು ಹಾಲಾಹಲ ಕುಡಿದರೂ ಈ ಗೋಳಿನ ನಡುವೆ ನನ್ನೊಳಗಿನ ಕನಸು ನನಸು ಮಾಡಿಕೊಂಡೆ ತೀರುತ್ತೇನೆನ್ನುವ ಹಂಬಲದ ಪ್ರತೀಕವಾಗಿ ಬಣ್ಣಬಣ್ಣದ ವಿನ್ಯಾಸದಲ್ಲಿ ಹಾಡುಗಳ ಹಿನ್ನೆಲೆಯಲ್ಲಿ ಎಲ್ಲ ಜೀವನ್ಮುಖಿ ಪಾತ್ರಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಾಟಕ ಅಂತ್ಯವಾಗುವುದು ಎಲ್ಲಾ ಪಾತ್ರಗಳು ತಲ್ಕಿಯ ತುಂಡನ್ನು ಪ್ರೇಕ್ಷಕರ ಮುಂದೆ ತಿನ್ನುವಂತೆ ಹಿಡಿಯುವ ಮೂಲಕ. ಇದೊಂದು ಶುಭಾಂತ್ಯದಂತೆ ಕಂಡರೂ ಇಡೀ ತಲ್ಕಿ ತಿನಿಸು ಕ್ವಿಯರ್‌ ಮತ್ತು ಟ್ರಾನ್ಸ್‌ ಸಮುದಾಯದ ರೂಪಕವಾಗಿಯೆ ಕಂಡು, ಈ ಜೀವನಗಳು ಹೀಗೆಯೆ ಎನ್ನುವ ಸಣ್ಣ ವಿಷಾದವೊಂದನ್ನು ನಮಗೆ ದಾಟಿಸುತ್ತದೆ. 

ನಾಟಕದಲ್ಲಿ ಎರಡು ಮುಖ್ಯ ಧಾರೆಗಳಿವೆ. ಒಂದು, ಎಲ್ಲರೂ ಸೇರಿ ತಲ್ಕಿ ತಯಾರಿಸುವುದು. ಮತ್ತೊಂದು, ಅವರ ಜೀವನದ ನನಸಾಗದ ಕನಸನ್ನು ಒಂದು ದಿನದ ಮಟ್ಟಿಗಾದರೂ ನನಸು ಮಾಡಿಕೊಳ್ಳುವುದು. ಈ ಎರಡೂ ಧಾರೆಗಳನ್ನು ಒಟ್ಟೊಟ್ಟಿಗೆ ನಿಭಾಯಿಸುವಲ್ಲಿ ನಿರ್ದೇಶಕರು ಸಂಪೂರ್ಣ ಯಶಸ್ಸು ಕಂಡಿಲ್ಲ. ಇನ್ನಷ್ಡು ಪ್ರಯತ್ನ ಹಾಕಿದ್ದರೆ ಇಡೀ ನಾಟಕವನ್ನು ತಲ್ಕಿ ತಿನಿಸಿಗೆ ಪರ್ಯಾಯ ರೂಪಕವಾಗಿ ಕಟೆದು ನಿಲ್ಲಿಸಬಹುದಿತ್ತು. ಕನಸು ನನಸು ಮಾಡಿಕೊಳ್ಳುವ ಯೋಜನೆ ಕೂಡ ಒಂದು ಮಾಯಾವಾಸ್ತವದಂತೆ ನಡೆಯುತ್ತದೆ. ಆ ಧಾರೆಯನ್ನೂ ಮತ್ತಷ್ಟು ಲಾಜಿಕಲ್‌ ಆಗಿ ಕಟ್ಟಬಹುದಿತ್ತು. 

ಇಷ್ಟೆಲ್ಲಾ ಸಣ್ಣ ಪುಟ್ಟ ಚಕಾರಗಳ ಹೊರತಾಗಿ ತಲ್ಕಿ ಒಂದು ಅತ್ಯುತ್ತಮ ನಾಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ತಳಸಮುದಾಯದ ಪ್ರತಿಭಾವಂತ ಕಲಾವಿದರು ಕಲೆಯ ಮೂಲಕ ತಮ್ಮನ್ನು ಶೋಧಿಸಿಕೊಳ್ಳುವುದು ಬರಿ ಕಲಾವಿದರ ಮಟ್ಟಿಗಷ್ಟೆ ಅಲ್ಲದೆ ಕನ್ನಡ ಲೋಕಕ್ಕೆ ಮತ್ತೊಂದಿಷ್ಡು ಮನುಷ್ಯ ಜಗತ್ತು ಅರಿವನ ಜಗತ್ತು ಸೇರ್ಪಡೆಯಾಗುವ ಒಂದು ಮಹತ್ತಾದ ಕಾರ್ಯವೂ ಆಗಿದೆ.

‘ತಲ್ಕಿ’ ನಾಟಕದ ದೃಶ್ಯ
‘ತಲ್ಕಿ’ ನಾಟಕದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT