ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗದಲ್ಲಿ ‘ಮತ್ತೊಬ್ಬ ಮಾಯಿ’

Published : 3 ಸೆಪ್ಟೆಂಬರ್ 2019, 19:45 IST
ಫಾಲೋ ಮಾಡಿ
Comments

ಸಾಹಿತ್ಯ ತತ್ವ ಮತ್ತು ಜೀವನ ತತ್ವ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್‌ರೂಮಿನಲ್ಲಿ ಕುಳಿತು ಒಬ್ಬರನೊಬ್ಬರು ಕೆಣಕುತ್ತ, ಗೇಲಿ ಮಾಡಿಕೊಳ್ಳುತ್ತ, ಟೀಕಿಸುತ್ತ ಹಾಗೂ ಪ್ರೀತಿಸುತ್ತ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿಕೊಡುತ್ತದೆ. ಒಬ್ಬ ಇಂಗ್ಲಿಷ್‌ ಅಧ್ಯಾಪಕ, ಕತೆಗಾರನೂ ಆದ ಮೂರ್ತಿ, ಮತ್ತೊಬ್ಬ ಕನ್ನಡ ಅಧ್ಯಾಪಕ, ತಾನು ಹೇಳುತ್ತಿರುವುದು ಕತೆಯಲ್ಲ: ಜೀವನ ಎಂದು ವಾದಿಸುವ ಪಾಂಡುರಂಗ ಡಿಗಸ್ಕರ್. ಕುಣಕಾಲ ಹುಡುಗಿಯ ಜೀವಂತ ಸಂಗತಿಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ಡಿಗಸ್ಕರ್ ಭಾಷೆ ಜವಾರಿಯದ್ದಾಗಿದೆ. ಹಿಂದುಸ್ಥಾನಿ ಭಾಷೆಯಲ್ಲಿ ದಾಸ್ತಾಂಗೋಯಿ ಎಂಬ ಕತೆ ಹೇಳುವ ಪರಂಪರೆಯೊಂದಿದೆ ಆ ಮಾದರಿಯಲ್ಲಿ ಇಲ್ಲಿನ ಎರಡು ಪಾತ್ರಗಳು ನಿರೂಪಣಾ ಸರಣಿಯನ್ನು ರಂಗದ ಮೇಲೆ ಸೃಷ್ಟಿಸುತ್ತವೆ.

ಲಕ್ಷ್ಮಿ ಎಂಬ ಹುಡುಗಿ ಕುಣಕಾಲ ಹುಡುಗಿಯಾಗಿ ಮಾವಿನಗಿಡ ವಶಪಡಿಸಿಕೊಳ್ಳುವ ಝಾನ್ಸಿರಾಣಿಯಾಗಿ, ಕೊಕ್ಕೊ ಆಟದ ರೂವಾರಿಯಾಗಿ ಮಿಂಚಿನಂಥ ಸಂಚಾರದ ಶಕ್ತಿಯುಳ್ಳ ಹುಡುಗಿ ಕೊನೆಕೊನೆಗೆ ತೀರ ಒಂಟಿತನವನ್ನು ಆಶ್ರಯಿಸಿ ವಾಮಾಚಾರದ ಸಂಗತಿಗಳಲ್ಲಿ ತನ್ನನ್ನು ತೊಡಗಿಸಿಕೊಂಡು ವಿಚಿತ್ರವಾದ ಯಾತನೆಯನ್ನು ಅನುಭವಿಸುತ್ತಾಳೆ. ಡಿಗಸ್ಕರ್ ನಡೆದ ಸಂಗತಿಯನ್ನು ಹೇಳುವಾಗ ಮೂರ್ತಿ ತನ್ನ ಯಾವತ್ತಿನ ಕಥನದ ಫಾರ್ಮುಲಾಕ್ಕೆ ಹೊಂದಿಸಿ ನೋಡುತ್ತಾನೆ. ಡಿಗಸ್ಕರ್ ಜವಾರಿ ಭಾಷೆಯಲ್ಲಿ ವಿವರಗಳನ್ನು ಕಟ್ಟಿಕೊಡುತ್ತಾ ಹೋಗುತ್ತಾನೆ. ಈ ಎರಡು ಪಾತ್ರಗಳು ಭಿನ್ನ ಎನಿಸಿದರೂ ಕಡೆ ಗಳಿಗೆಯಲ್ಲಿ ಒಂದೇ ಆಗಿ ಅಲ್ಲಿನ ಸಂಗತಿಯನ್ನು ವಿವರಿಸುವುದು ಗಾಢವಾದ ಅನುಭವ ಕಟ್ಟಿಕೊಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT