ಸಾಹಿತ್ಯ ಕೃತಿಗಳನ್ನು ಆಧರಿಸಿ ಕಟ್ಟುವ ರಂಗ ಪ್ರಯೋಗಗಳು ‘ಶಬ್ಧ’ವನ್ನು ಆಧರಿಸಿರುತ್ತವೆ. ಸಾಹಿತ್ಯ ಕೃತಿಯ ನೆರವಿಲ್ಲದೆ ‘ಚಿತ್ರ’ (ಇಮೇಜ್) ಗಳ ಮೂಲಕವೆ ಒಂದು ರಂಗ ಪ್ರಯೋಗವನ್ನು ಹೇಗೆ ಸಶಕ್ತಗೊಳಿಸಬಹುದು ಎಂಬುದಕ್ಕೆ ಕೇರಳದ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡದ ‘ಕುಹೂ’ ನಾಟಕ ಉತ್ತಮ ಉದಾಹರಣೆ.

‘ನಿರ್ದಿಗಂತ’ ನಿರ್ಮಿಸಿರುವ ಅರುಣ ಲಾಲ್ ನಿರ್ದೇಶನದ ‘ಕುಹೂ’ ನಾಟಕ ಈಚೆಗೆ ಹೆಗ್ಗೋಡಿನಲ್ಲಿ ನೀನಾಸಂ ಆಯೋಜಿಸಿದ್ದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ರೈಲು, ರೈಲು ನಿಲ್ದಾಣವನ್ನೆ ರೂಪಕವಾಗಿಟ್ಟುಕೊಂಡು ಭಾರತದ ಇತಿಹಾಸ, ಸಾಮಾಜಿಕ, ರಾಜಕಾರಣದ ಕಥನಗಳನ್ನು ಬಿಚ್ಚಿಡುತ್ತ ನಾಟಕ ವರ್ತಮಾನಕ್ಕೆ ಮುಖಾಮುಖಿಯಾಗುತ್ತದೆ. ರೈಲು, ರೈಲು ನಿಲ್ದಾಣಗಳ ಕುರಿತು ಇರುವ ಕತೆಗಳೆ ‘ಕುಹೂ’ ನಾಟಕದ ಪಠ್ಯ. ರೈಲು ಪ್ರಯಾಣ ಎಂಬುದೇ ಒಂದು ‘ಜೀವನ ದರ್ಶನ’ ಎಂಬ ತಾತ್ವಿಕತೆ ಈ ನಾಟಕದ ಹಿಂದಿದೆ.

ರೈಲು, ರೈಲು ನಿಲ್ದಾಣದ ಕುರಿತ ಆಟವೊಂದರ ಮೂಲಕ ಬಿಚ್ಚಿಕೊಳ್ಳುವ ಕಥನ ಒಂದೊಂದೆ ‘ಚಿತ್ರ’ಗಳ ಮೂಲಕ ನಿರೂಪಿತಗೊಳ್ಳುತ್ತ ಸಾಗುತ್ತದೆ. 70-80 ರ ದಶಕದವರೆಗೆ ಪ್ರಯಾಣದಲ್ಲಿ ಬಳಕೆಯಾಗುತ್ತಿದ್ದ ಟ್ರಂಕ್ಗಳೆ ಇಲ್ಲಿನ ರೈಲು ಬೋಗಿಗಳು, ಹಳಿಗಳು ಚಕ್ರಗಳಾಗುವ ಜೊತೆಗೆ ನಿಲ್ದಾಣದ ಪರಿಕರಗಳಾಗಿಯೂ ಬಳಕೆಯಾಗಿವೆ.

ಜನಸಂದಣಿಯ ರೈಲು ಪ್ರಯಾಣದ ಸಂಕಟ, ಶೌಚಾಲಯದ ಅವ್ಯವಸ್ಥೆ, ನಿಲ್ದಾಣದಲ್ಲಿನ ಪ್ರೇಮ ಪ್ರಸಂಗಗಳು, ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬಾರದೆ ರೈಲು ತಪ್ಪಿಸಿಕೊಂಡವರ ದುಗುಡ, ರೈಲುಗಳಲ್ಲಿನ ಕಳ್ಳತನ-ಹೀಗೆ ವಿವಿಧ ಘಟನೆಗಳನ್ನು ವಿಡಂಬನಾತ್ಮಕ ಶೈಲಿಯಲ್ಲಿ ಅಳವಡಿಸಲಾಗಿದೆ.

ರೈಲು ನಿಲ್ದಾಣದಲ್ಲಿ ನಡೆಯುವ ಕಳ್ಳ-ಪೊಲೀಸ್ ಆಟದಲ್ಲಿ ಪೊಲೀಸನೆ ಕಳ್ಳನಾಗಿ ಪರಿವರ್ತನೆಯಾದಾಗ ಬರುವ ‘ಚೌಕಿದಾರ್ ಚೋರ್ ಹೈ’ ಎಂಬ ಮಾತು ಇಂದಿನ ರಾಜಕೀಯದ ಪರಿಭಾಷೆಯನ್ನು ಪ್ರತಿಬಿಂಬಿಸುತ್ತದೆ. ನಿಲ್ದಾಣದಲ್ಲಿ ಮಹಿಳೆಯೊಬ್ಬಳ ಸಾವಾಗಿ ಆಕೆಯೆ ದೆವ್ವವಾಗಿ ಕಾಡುತ್ತಾಳೆ ಎಂಬ ನಂಬಿಕೆಯಿಂದ ಒಂದು ರೈಲು ನಿಲ್ದಾಣವನ್ನೆ ಬಂದ್ ಮಾಡಿದ ಕತೆಯೂ ನಾಟಕದಲ್ಲಿ ಅನಾವರಣಗೊಂಡಿದೆ. ಈ ಭಾಗವನ್ನು ಕೇರಳದ ಜನಪದೀಯ ಶೈಲಿಯಲ್ಲಿ ಪ್ರಸ್ತುತಪಡಿಸುತ್ತ ಮೌಢ್ಯವೆ ಹೇಗೆ ನಿಜದ ನಂಬಿಕೆಯಾಗುತ್ತದೆ ಎಂಬ ವಿದ್ಯಮಾನವನ್ನು ನಾಟಕ ನಿರೂಪಿಸುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಸೈನಿಕರು ತಮ್ಮ ಪ್ರಯಾಣಕ್ಕೆ ರೈಲನ್ನೆ ಅವಲಂಬಿಸಿರುತ್ತಾರೆ. ಯುದ್ಧಕ್ಕೆ ಹೊರಟು ನಿಂತ ಸೈನಿಕನಿಗೆ ಆತನ ಪತ್ನಿ ಹಸುಗೂಸಿನೊಂದಿಗೆ ‘ಯುದ್ಧ ಯಾವಾಗ ಮುಗಿಯುತ್ತದೆ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೆ ಆತ ಪಯಣಿಸುತ್ತಾನೆ. ಮುಂದೆ ಅದೇ ರೈಲಿನಲ್ಲಿ ಸೈನಿಕ ಧರಿಸಿದ್ದ ಶೂ ಮಾತ್ರ ಮರಳುತ್ತದೆ. ‘ಎಲ್ಲೋ ದೂರದಲ್ಲಿ ಯುದ್ಧ ನಡೆಯುತ್ತಿದೆ ಎಂದು ವಿರಮಿಸಬೇಡಿ, ಅದು ನಿಮ್ಮ ಮನೆ ಬಾಗಿಲಿಗೂ ಬಂದೀತು’ ಎಂಬ ಎಚ್ಚರವನ್ನು ನಾಟಕ ಧ್ವನಿಸುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಕರಿಯ ಎಂಬ ಕಾರಣಕ್ಕೆ ಗಾಂಧಿಯನ್ನು ರೈಲಿನಿಂದ ಹೊರಕ್ಕೆ ದಬ್ಬಿದ ಘಟನೆ, ದೇಶ ವಿಭಜನೆ ಸಂದರ್ಭದಲ್ಲಿ ಎರಡೂ ಕಡೆಯವರೂ ಪಟ್ಟ ಪರಿಪಾಟಲು, ಯುದ್ಧದಲ್ಲಿ ಮಡಿದ ಅಸಂಖ್ಯಾತ ಯೋಧರ ಶವಗಳಿಗೆ ಸಾಕ್ಷಿಯಾಗುವ ನಾಗಾಲ್ಯಾಂಡ್ ನ ರೈಲು ನಿಲ್ದಾಣ, ರೈಲಿನ ಕಿಟಕಿ ಬಾಗಿಲುಗಳನ್ನು ಮುಚ್ಚಿ ಹೋರಾಟಗಾರರು ಸಾವು ಕಾಣುವಂತೆ ಮಾಡಿದ್ದು, ಗೋದ್ರಾ ಸೇರಿದಂತೆ ವಿವಿಧ ರೈಲು ದುರಂತದ ಘಟನೆಗಳು, ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ... ಇವೆಲ್ಲವನ್ನೂ ರಂಗದ ಮೇಲೆ ಅತ್ಯಂತ ಸಶಕ್ತವಾಗಿ ಚಿತ್ರಿಸಲಾಗಿದೆ.

ದೇಶ ವಿಭಜನೆ ಕುರಿತಂತೆ ‘ವಿಭಜನೆ ಮುಗಿದ ಅಧ್ಯಾಯವಲ್ಲ. ಈಗಲೂ ವಿಭಜಿಸುವ ಕೆಲಸ ನಡೆಯುತ್ತಲೆ ಇದೆ’ ಎಂದು ನಾಟಕದಲ್ಲಿ ಬರುವ ಮಾರ್ಮಿಕ ಮಾತು ಸಮಕಾಲೀನ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಬಾಲಿವುಡ್ನ ಜನಪ್ರಿಯ ಸಿನಿಮಾ ‘ದಿಲ್ ವಾಲೆ ದುನಿಯಾ ಲೇ ಜಾಯೇಂಗೆ’ ನ ಕ್ಲೈಮ್ಯಾಕ್ಸ್ ನಲ್ಲಿ ಚಲಿಸುವ ರೈಲಿನಲ್ಲಿ ನಿಂತ ಶಾರುಖ್ ಖಾನ್ ಸ್ಲೋಮೋಶನ್ಲ್ಲಿ ಫ್ಲಾಟ್ಫಾರಂ ಮೇಲೆ ಓಡಿ ಬರುವ ಪ್ರೇಯಸಿ ಕಾಜೋಲಳ ಕೈ ಹಿಡಿದು ರೈಲಿನೊಳಗೆ ಕರೆದುಕೊಳ್ಳುವ ದೃಶ್ಯವನ್ನೂ ನಾಟಕ ಒಳಗೊಂಡಿದೆ.

ಹೀಗೆ ರೈಲುಗಳೆ ನಾಯಕರಾಗಿರುವ ‘ಕುಹೂ’ ನಾಟಕದಲ್ಲಿ ನಮ್ಮ ಇತಿಹಾಸ, ಸಾಮಾಜಿಕ, ರಾಜಕೀಯ ಕಥನಗಳನ್ನು ರೈಲಿನ ಆವರಣದೊಳಗೆ ರಂಗ ಪ್ರತಿಮೆಗಳ ಮೂಲಕ ಪ್ರಸ್ತುತಪಡಿಸಿ ವಿಶಿಷ್ಟ ರಂಗಾನುಭವ ನೀಡುವಲ್ಲಿ ಪ್ರಯೋಗ ಯಶಸ್ವಿಯಾಗುತ್ತದೆ.

ನಾಟಕದ ಪಠ್ಯ ಬಿಡಿ ಬಿಡಿ ಪ್ರತ್ಯೇಕ ಘಟನೆಗಳನ್ನು ಒಳಗೊಂಡಿದ್ದರೂ ಅವುಗಳ ಹೆಣಿಗೆ ಬಿಗಿಯಾಗಿರುವುದರಿಂದ ಎಲ್ಲೂ ಸೂತ್ರ ತಪ್ಪದೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ನಾಟಕ ಮುಗಿದ ನಂತರವೂ ಟ್ರಂಕ್ಗಳ ಮೂಲಕ ಪಾತ್ರಧಾರಿಗಳು ಹೊರಡಿಸುವ ರೈಲಿನ ಚಲನೆಯ ಶಬ್ಧ ಚಿತ್ರ ರೂಪದಲ್ಲಿ ಪ್ರೇಕ್ಷಕರಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ.

‘ಯುವರ್ ಅಟೆನ್ಷನ್ ಪ್ಲೀಸ್’ (ದಯವಿಟ್ಟು ಗಮನ ಕೊಡಿ) ಇದು ರೈಲು ನಿಲ್ದಾಣಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುವ ಒಂದು ಉದ್ಘೋಷ. ನಾಟಕದಲ್ಲಿ ಈ ಉದ್ಘೋಷ ‘ನಮ್ಮ ಸುತ್ತಮುತ್ತ ಏನೇನು ನಡೆಯುತ್ತದೆ ಎಂಬುದನ್ನು ಗಮನಿಸಿ ನೋಡಿಯೂ ನೋಡದಂತಿರಬೇಡಿ’ ಎಂಬ ಎಚ್ಚರದ ಧ್ವನಿಯನ್ನು ದಾಟಿಸುತ್ತದೆ

ಹಿಡಿದಿಡುವ ಚಿತ್ರಕ ಶಕ್ತಿಯ ರೂಪಕ

ಚಲಿಸುವ ರೈಲು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತದೆ. ದೋಣಿಯಲ್ಲಿ ಕುಳಿತು ಬಲೆ ಬೀಸಿ ಮೀನು ಹಿಡಿಯುತ್ತಿದ್ದ ಮೀನುಗಾರನಿಗೆ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಮೇಲೆ ಚಲಿಸುವ ರೈಲಿನ ಚಲನೆ ವಿಭಿನ್ನವಾಗಿ ಕಾಣುವ ದೃಶ್ಯ ನಾಟಕದ ಹೈಲೈಟ್ಗಳಲ್ಲಿ ಒಂದು. ಇಂತಹ ಚಿತ್ರಕ ಶಕ್ತಿಯ ರೂಪಕಗಳೆ ನಾಟಕ ಪರಿಣಾಮಕಾರಿಯಾಗಲು ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.