ಸೋಮವಾರ, ಮೇ 23, 2022
21 °C

‘ಕಮಲಿ’ಯೊಳಗಿನ ಅಮೂಲ್ಯ

ರೇಷ್ಮಾ Updated:

ಅಕ್ಷರ ಗಾತ್ರ : | |

ಅಮೂಲ್ಯ-ಕಮಲಿ

‘ರಿಷಿ ಸಾರ್‌sss, ನೀವಂದ್ರೆ ನಂಗೆ ಶ್ಯಾನೆ ಇಷ್ಟ’ ಈ ಡೈಲಾಗ್ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಇದು ಕಮಲಿನೇ ಎಂದು ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಕರ್ನಾಟಕ ರಾಜ್ಯದಾದ್ಯಂತ ಮನೆಮಾತಾಗಿದ್ದಾಳೆ ಕಮಲಿ. ಯಾರೀ ಕಮಲಿ? ಅಂತಿರಾ. ಅದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿಯ ನಾಯಕಿ. ಹಳ್ಳಿಯ ಮುಗ್ಧ ಹುಡುಗಿ ಈಕೆ. ಈ ಪಾತ್ರದಲ್ಲಿ ನಟಿಸಿದವರು ಮೈಸೂರು ಮೂಲದ ಅಮೂಲ್ಯ ಗೌಡ.

ನಟನೆ ಇವರ ಆಸಕ್ತಿಯಲ್ಲ. ಶಾಲಾ–ಕಾಲೇಜು ದಿನಗಳಲ್ಲೂ ನಟನೆ ಅಷ್ಟಕಷ್ಟೆ. ಆದರೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಮಾತ್ರ ಆಕಸ್ಮಿಕವಾಗಿ. ಸಿಕ್ಕ ಅವಕಾಶವನ್ನು ಬಿಡುವ ಮನಸ್ಸಾಗದೆ ನಟನಾರಂಗಕ್ಕೆ ಹೆಜ್ಜೆ ಇಡುತ್ತಾರೆ. ಮೊದಲು ನಟಿಸಿದ್ದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸ್ವಾತಿಮುತ್ತು’ ಧಾರಾವಾಹಿಯಲ್ಲಿ.
ಅಲ್ಲಿಂದ ಜೀ ಕನ್ನಡ ವಾಹಿನಿಯ ‘ಪುನರ್‌ವಿವಾಹ’, ಉದಯವಾಹಿನಿಯ ‘ಅರಮನೆ’ ಧಾರಾವಾಹಿಗಳಲ್ಲೂ ನಟಿಸುತ್ತಾರೆ. ಆದರೆ ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಕಮಲಿ ಪಾತ್ರ.

ನಟನೆಯ ಬಗ್ಗೆ ಏನೂ ಅರಿವಿಲ್ಲದೇ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಭಯ ಪಟ್ಟುಕೊಂಡಿದ್ದ ಅಮೂಲ್ಯಗೆ ಈಗ ಕ್ಯಾಮೆರಾವೇ ಸಂಗಾತಿಯಾಗಿದೆ. ಅಷ್ಟರ ಮಟ್ಟಿಗೆ ಅಭಿನಯದಲ್ಲಿ ಪಳಗಿದಿದ್ದಾರೆ ಈ ಸುಂದರಿ.

ಅರಮನೆ ಧಾರಾವಾಹಿಯಲ್ಲಿ ನಟಿಸುವಾಗಲೇ ಕಮಲಿ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಅಮೂಲ್ಯ.

ಕಮಲಿ ಪಾತ್ರದ ಬಗ್ಗೆ ಮಾತನಾಡುವ ಇವರು ‘ಕಮಲಿ ತುಂಬಾ ಒಳ್ಳೆ ಹುಡುಗಿ. ನಿಜ ಜೀವನದಲ್ಲಿ ಅಂತಹ ಹುಡುಗಿಯರು ಇರುವುದು ಕಡಿಮೆ. ಒಂಥರಾ ಸ್ಫೂರ್ತಿ ನೀಡುವ ಪಾತ್ರವಿದು. ಆ ಕಾರಣಕ್ಕೆ ತುಂಬಾ ಇಷ್ಟವಾಗುತ್ತದೆ. ಮೊದ ಮೊದಲು ನನಗೆ ಭಾಷೆ ಸ್ವಲ್ಪ ತೊಡಕಾಗಿತ್ತು. ಆದರೆ ಈಗ ಹಾಗಿಲ್ಲ. ಸ್ಕ್ರೀನ್ ಪೇಪರ್ ನೋಡದೇ ಡೈಲಾಗ್ ಹೇಳುವಷ್ಟು ಭಾಷೆಯಲ್ಲಿ ಪಳಗಿದ್ದೇನೆ’ ಎನ್ನುತ್ತಾರೆ. 

ಕಮಲಿಗೂ ಅಮೂಲ್ಯಗೂ ತುಂಬಾನೇ ವ್ಯತ್ಯಾಸ ಇದೆ ಎನ್ನುವ ಇವರು ‘ನನನ್ನು ಹೊರಗಡೆ ನೋಡಿದವರು ತಕ್ಷಣ ಗುರುತು ಹಿಡಿಯುವುದಿಲ್ಲ. ಕ್ಷಣಕಾಲ ಬಿಟ್ಟು ಹೋ ನೀವು ಕಮಲಿ ಅಲ್ವಾ? ಎಂದು ಬಂದು ಪ್ರೀತಿಯಿಂದ ಮಾತನಾಡಿಸುತ್ತಾರೆ. ದೊಡ್ಡವರೆಲ್ಲಾ ಅವರ ಮನೆ ಮಕ್ಕಳ ಥರವೇ ನನ್ನನ್ನು ಪ್ರೀತಿಸುತ್ತಾರೆ ಇದು ಖುಷಿ ನೀಡುತ್ತದೆ. ಇದಕ್ಕೆಲ್ಲಾ ಕಾರಣ ಧಾರಾವಾಹಿ ಹಾಗೂ ಆ ಪಾತ್ರ’ ಎನ್ನುವ ಖುಷಿ ಇವರದ್ದು. 

’ಧಾರಾವಾಹಿ ತಂಡ ಈಗ ನನಗೆ ಒಂದು ಕುಟುಂಬದಂತೆ ಭಾಸವಾಗುತ್ತದೆ. ಧಾರಾವಾಹಿಯಲ್ಲಿ ಎಲ್ಲರೂ ಒಂದೇ ಮನೆಯವರಂತೆ ಸಮಯ ಕಳೆಯುತ್ತೇವೆ. ಹಿರಿಯ ಕಲಾವಿದರೆಲ್ಲಾ ನಮ್ಮೊಂದಿಗೆ ಚೆನ್ನಾಗಿ ಬೆರೆಯುತ್ತಾರೆ. ಇದೆಲ್ಲಾ ಖುಷಿ ನೀಡುತ್ತದೆ’ ಎಂದು ಧಾರಾವಾಹಿ ತಂಡವು ತನ್ನ ಇನ್ನೊಂದು ಕುಟುಂಬ ಎಂಬ ಭಾವನೆ ವ್ಯಕ್ತಪಡಿಸುತ್ತಾರೆ. 

’ಸಿನಿಮಾ ಹಾಗೂ ಬೇರೆ ಧಾರಾವಾಹಿಗಳಿಂದ ನಟಿಸಲು ಅವಕಾಶ ಬರುತ್ತಿದೆ. ಆದರೆ ಎರಡು ದೋಣಿಯಲ್ಲಿ ಕಾಲಿಡುವುದು ಕಷ್ಟ ಎಂಬ ಕಾರಣಕ್ಕೆ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತೇನೆ’ ಎನ್ನುವ ಇವರಿಗೆ ಭಿನ್ನ ಪಾತ್ರಗಳಲ್ಲಿ ನಟಿಸುವಾಸೆ. ಒಂದೇ ರೀತಿಯ ಪಾತ್ರ ಮಾಡುವುದಕ್ಕಿಂತ ಸಿಕ್ಕಿರುವ ಪಾತ್ರಗಳಿಗೆ ನ್ಯಾಯ ಒದಗಿಸಬೇಕು ಎನ್ನುವ ಇಂಗಿತ ಇವರದ್ದು.

ಕಮಲಿ ಧಾರಾವಾಹಿಯಿಂದ ಮುಂದಿನ ದಿನಗಳಲ್ಲಿ ತುಂಬಾ ಮಹತ್ವದ ತಿರುವನ್ನು ನಿರೀಕ್ಷಿಸಬಹುದು. ಅದನ್ನು ನಾನು ಹೇಳಲು ಸಾಧ್ಯವಿಲ್ಲ. ಇನ್ನು ಮುಂದೆ ಕತೆ ತುಂಬಾನೇ ಆಸಕ್ತಿಕರವಾಗಿದೆ. ಕಮಲಿ ಹಾಗೂ ರಿಷಿ ಮದುವೆಗೆ ಕಾಯುತ್ತಿರುವ ಪ್ರೇಕ್ಷಕರಿಗೆ ಒಂದು ಟ್ವಿಸ್ಟ್ ಇದೆ ಎನ್ನುವ ಇವರು ಅದೇನು ಎಂದು ತಿಳಿಯಲು ಕಾದು ನೋಡಿ ಎನ್ನುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು