ಸೋಮವಾರ, ಡಿಸೆಂಬರ್ 5, 2022
22 °C

ಹೊಸ ಧಾರಾವಾಹಿ | ಬಾಗಿಲು ತೆರೆಯಲಿದ್ದಾಳೆ ‘ಭಾಗ್ಯಲಕ್ಷ್ಮೀ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. ದಸರಾ ಮುಗಿದು ದೀಪಾವಳಿ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ‘ಭಾಗ್ಯಲಕ್ಷ್ಮೀ’ ಕಿರು ತೆರೆಯಲ್ಲಿ ಹೆಜ್ಜೆ ಹಾಕಲಿದ್ದಾಳೆ. ಅಕ್ಟೋಬರ್‌ 10ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. 

ಈ ಧಾರಾವಾಹಿ ದೊಡ್ಡ ತಾರಾಬಳಗವನ್ನು ಹೊಂದಿದೆ. ನಿರೂಪಕಿ ಸುಷ್ಮಾ ಕಥಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ(ಬ್ರೋ ಗೌಡ), ಸುದರ್ಶನ್, ಪದ್ಮಜಾ ರಾವ್, ಭೂಮಿಕಾ, ತಾಂಡವ ಸೂರ್ಯವಂಶಿ ತಾರಾಬಳಗದಲ್ಲಿದ್ದಾರೆ. ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಅಕ್ಕತಂಗಿಯ ಬಾಂಧವ್ಯದ ಕಥೆ ಹೊಂದಿದೆ ಈ ಧಾರಾವಾಹಿ.

ಸುಷ್ಮಾ ಮಾತನಾಡಿ, ‘ಭಾಗ್ಯಲಕ್ಷ್ಮೀ ಮೂಲಕ ಹತ್ತು ವರ್ಷಗಳ ನಂತರ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಜೀವನದಲ್ಲಿ ಏನೇ ಬಂದರೂ ಅದನ್ನು ಖುಷಿಯಿಂದ ಸ್ವಾಗತಿಸಿ ಸುತ್ತಮುತ್ತಲಿನವರನ್ನು ಖುಷಿಯಿಂದ ಇಡುವ, ಮನೆಯ ಜವಾಬ್ದಾರಿಯನ್ನು ಹೊತ್ತು ಇಡೀ ಜೀವನವನ್ನೇ ಸಂಸಾರಕ್ಕಾಗಿ ಮುಡಿಪಾಗಿಟ್ಟಿರುವ ಹೆಣ್ಣು ಮಗಳ ಪಾತ್ರ ನನ್ನದು’ ಎಂದರು.

ಹಿರಿಯ ಕಲಾವಿದೆ ಪದ್ಮಜಾ ರಾವ್ ಮಾತನಾಡಿ, ‘ಈ ಧಾರಾವಾಹಿಯಲ್ಲಿ ನನ್ನದು ಅತ್ತೆಯ ಪಾತ್ರ. ಇಲ್ಲಿ ನಾನು ಗಟ್ಟಿಗಿತ್ತಿಯಾದ ಅತ್ತೆ ಪಾತ್ರ ನಿರ್ವಹಿಸುತ್ತಿದ್ದೇನೆ. ಗದರುವ ಪಾತ್ರ ನನ್ನದು. ಇಲ್ಲಿವರೆಗೂ ಮೃದು ಪಾತ್ರಗಳನ್ನು ಮಾಡಿದ್ದ ನನಗೂ ಬದಲಾವಣೆ ಬೇಕಿತ್ತು. ಈ ಪಾತ್ರ ತುಂಬಾ ಗಟ್ಟಿಯಾಗಿದೆ. ಆರಂಭದಲ್ಲಿ ಪಾತ್ರಕ್ಕೆ ಒಗ್ಗಿಕೊಳ್ಳಲು ಮೂರು–ನಾಲ್ಕು ದಿನ ಬೇಕಾದವು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು