ಶನಿವಾರ, ಜೂನ್ 25, 2022
21 °C

Big Boss 8: ಮೊದಲ ವಾರ ಬಿಗ್‌ಬಾಸ್‌ ಮನೆಯಿಂದ ಧನುಶ್ರೀ ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್‌ಬಾಸ್‌ ಎಂಟನೇ ಆವೃತ್ತಿಯ ಮೊದಲ ವಾರ ಪೂರ್ಣಗೊಂಡಿದ್ದು, ಯಾರು ಹೊರಹೋಗುತ್ತಾರೆ ಎನ್ನುವ ಕೌತುಕಕ್ಕೆ ತೆರೆಬಿದ್ದಿದೆ. ಭಾನುವಾರ ಟಿಕ್‌ಟಾಕ್‌ ಸ್ಟಾರ್‌ ಧನುಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. 

8ನೇ ಆವೃತ್ತಿಯ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಶನಿವಾರ ಹಾಗೂ ಭಾನುವಾರ ನಡೆದಿದ್ದು, ಧನುಶ್ರೀ ಅವರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿ ಡೇಜಂರ್‌ ಝೋನ್‌ನಲ್ಲಿ ಇದ್ದರು. ನಿಧಿ ಸುಬ್ಬಯ್ಯ, ಶುಭಾ ಪೂಂಜ, ವಿಶ್ವನಾಥ್‌ ಹಾವೇರಿ, ರಘು ಗೌಡ, ನಿರ್ಮಲಾ ಚೆನ್ನಪ್ಪ ಕೂಡಾ ನಾಮಿನೇಟ್‌ ಆಗಿದ್ದರು. ಇವರೆಲ್ಲರಿಗೂ ಜನರಿಂದ ಹೆಚ್ಚಿನ ಮತಗಳು ಸಿಕ್ಕಿದ ಕಾರಣ ಅವರು ಸೇಫ್‌ ಝೋನ್‌ಗೆ ಮರಳಿದ್ದರು. ಕಡಿಮೆ ಮತಗಳನ್ನು ಪಡೆದ ಧನುಶ್ರೀ ಮನೆಯಿಂದ ಹೊರಕ್ಕೆ ಬಂದಿದ್ದಾರೆ.

‘ಮನೆಯಿಂದ ಹೊರಬಿದ್ದಿರುವುದಕ್ಕೆ ಬೇಸರವಿದೆ. ಇದಕ್ಕಿಂತ ಉತ್ತಮವಾಗಿ ನಾನು ಪ್ರದರ್ಶನ ನೀಡಬಹುದಿತ್ತು. ಟಾಸ್ಕ್‌ಗಳಲ್ಲಿ ನಾನು ಹಿಂದೆ ಬಿದ್ದೆ. ಇತರರು ನನಗಿಂತ ಚೆನ್ನಾಗಿ ಸವಾಲು ಎದುರಿಸಿದರು. ನಾನು ಮನೆಯೊಳಗೆ ಹೆಚ್ಚಿನ ಜನರೊಡನೆ ಸ್ನೇಹ ಬೆಳೆಸಲಿಲ್ಲ. ಹೀಗಾಗಿಯೇ ನನಗೆ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿಲ್ಲ ಎನಿಸುತ್ತದೆ’ ಎಂದಿದ್ದಾರೆ.

ಇನ್ನು ಮನೆಯೊಳಗಿನ ಸದಸ್ಯರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಧನುಶ್ರೀ,‘ನಿರ್ಮಲಾ ಅವರ ವರ್ತನೆ ಭಿನ್ನವಾಗಿದೆ. ಇವರ ಬಗ್ಗೆ ಮನೆಯೊಳಗಿನ ಸದಸ್ಯರಿಗೆ ಭಯವಿದ್ದು, ಮುಂದಿನ ವಾರ ಖಂಡಿತವಾಗಿಯೂ ಇವರು ಮನೆಯಿಂದ ಹೊರಬೀಳುತ್ತಾರೆ’ ಎಂದಿದ್ದಾರೆ. ಲ್ಯಾಗ್‌ ಮಂಜು ಕುರಿತು ಹೇಳಿರುವ ಧನುಶ್ರೀ, ‘ಇನ್ನೊಬ್ಬರ ಭಾವನೆಗಳನ್ನು ನೋಯಿಸಿ ಅವರನ್ನು ಅಪಹಾಸ್ಯ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ. ಇದು ಸೂಕ್ತವೂ ಅಲ್ಲ’ ಎಂದಿದ್ದಾರೆ. ‘ನನ್ನ ಮೇಕ್‌ಅಪ್‌ ಕುರಿತು ಪ್ರಶಾಂತ್‌ ಸಂಬರಗಿ ಹೇಳಿರುವುದು ಸತ್ಯ. ಆದರೆ ಬೇರೆಯವರಿಗಾಗಿ ನಾನು ಬದಲಾಗಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಮನೆಯಿಂದ ಹೊರಹೋಗುವ ಮುನ್ನ ಮುಂದಿನ ವಾರದ ನಾಮಿನೇಷನ್‌ನಿಂದ ರಘು ಅವರನ್ನು ಧನುಶ್ರೀ ಸೇಫ್‌ ಮಾಡಿದ್ದಾರೆ. ಧನುಶ್ರೀ ಹೊರಬಿದ್ದ ಕಾರಣ, ಇದೀಗ ಮನೆಯೊಳಗೆ 16 ಸ್ಪರ್ಧಿಗಳು ನಡುವೆ ಪೈಪೋಟಿ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು