ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದಿಯ ಬಿಗ್‌ ಬಾಸ್ 13 ನೇ ಆವೃತ್ತಿಯ ವಿಜೇತ ಹಾಗೂ 'ಬಾಲಿಕಾ ವಧು‘ ಧಾರಾವಾಹಿ ಖ್ಯಾತಿಯ ಸಿದ್ಧಾರ್ಥ ಶುಕ್ಲಾ (40) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

‘ಎದೆ ನೋವಿನಿಂದ ಅವರು ಇಂದು ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

ಸಿದ್ಧಾರ್ಥ್ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೊದಲು ರೂಪದರ್ಶಿಯಾಗಿದ್ದ ಶುಕ್ಲಾ ಅವರು, ದೂರದರ್ಶನದ ಪ್ರಮುಖ ಧಾರಾವಾಹಿ ‘ಬಾಬುಲ್‌ ಕಾ ಆಂಗನ್ ಚೂಟೆ ನಾ‘ ಮೂಲಕ ನಟನಾ ರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ  ‘ಜಾನೆ ಪೆಹ್ಚಾನೆ ಸೆ ... ಯೆ ಅಜ್ನಬಿ", ‘ಲವ್ ಯು ಜಿಂದಗಿ‘ ನಂತಹ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರೂ, ಅವರು ದೂರದರ್ಶನದಲ್ಲಿ ದೀರ್ಘಕಾಲ ಪ್ರಸಾರವಾದ ‘ಬಾಲಿಕಾ ವಧು‘ ಧಾರಾವಾಹಿ ಮೂಲಕ ದೇಶದಾದ್ಯಂತ ಮನೆಮಾತಾಗಿದ್ದರು.

ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿ ಕೊಡುವ ಬಿಗ್‌ ಬಾಸ್‌ನ 13 ನೇ ಆವೃತ್ತಿಯಲ್ಲಿ ಭಾಗವಹಿಸಿ ವಿಜೇತರಾಗಿದ್ದ ಅವರು ಕರಣ್ ಜೋಹರ್ ನಿರ್ಮಾಣದ 'ಹಂಪ್ಟಿ ಶರ್ಮಾ ಕಿ ದುಲ್ಹೇನಿಯಾ' ಸಿನಿಮಾದಲ್ಲೂ ನಟಿಸಿದ್ದರು. ಅಲ್ಲದೇ 'ಡ್ಯಾನ್ಸ್‌ ದಿವಾನೇ 3' ರಲ್ಲಿ ಸೇರಿದಂತೆ ಅನೇಕ ಹಿಂದಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಉತ್ತರ ಪ್ರದೇಶ ಮೂಲದ ಶುಕ್ಲಾ ಅವರು, ಡಿಸೆಂಬರ್ 12, 1980 ರಲ್ಲಿ ಜನಿಸಿ, ಮುಂಬೈನಲ್ಲಿ ಶಿಕ್ಷಣ ಪಡೆದುಕೊಂಡು ಅಲ್ಲಿಯೇ ನೆಲೆ ನಿಂತಿದ್ದರು. ಅವರ ನಿಧನಕ್ಕೆ ಬಾಲಿವುಡ್ ಸೇರಿದಂತೆ ಅನೇಕ ಜನ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು