ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೇ ನಿಂತ ಬಿಗ್‌ಬಾಸ್‌: ಎಲ್ಲರೂ ವಿಜೇತರೇ!

Last Updated 13 ಮೇ 2021, 19:30 IST
ಅಕ್ಷರ ಗಾತ್ರ

ಮತ್ತೆ ಬರುವುದಿಲ್ಲ ಬಿಗ್‌ಬಾಸ್‌ ಪಯಣ

‘ಬಿಗ್‌ಬಾಸ್‌ ಪಯಣ ಇಲ್ಲಿಗೇ ಮುಗಿಯುತ್ತದೆ ಎನ್ನುವಾಗ ಒಂದು ಕ್ಷಣ ಆಘಾತವಾಯಿತು. ಹೇಗೆ ಇದಕ್ಕೆ ಪ್ರತಿಕ್ರಿಯೆ ನೀಡಬೇಕು ಎಂದು ತೋಚಲಿಲ್ಲ. ಜೀವನದಲ್ಲಿ ಮುಂದೇನು ಎನ್ನುವ ಪ್ರಶ್ನೆ ಮೂಡಿತು. ಆದರೆ ಜೀವನವನ್ನು ನಂಬಿದ್ದೇನೆ. ಅದೇ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಎಷ್ಟೇ ಕೋಟಿ ಗಳಿಸಿದರೂ, ಬಿಗ್‌ಬಾಸ್‌ ಪಯಣ ಮತ್ತೆ ಬರುವುದಿಲ್ಲ’ ಎಂದು ಕಿರುತೆರೆ ನಟಿ, ಬಿಗ್‌ಬಾಸ್‌ ಸ್ಪರ್ಧಿ ವೈಷ್ಣವಿ ಹೇಳಿದರು.

ಲಾಕ್‌ಡೌನ್‌ ಮುಗಿದ ಮೇಲೆ ಎಂಟನೇ ಆವೃತ್ತಿ ಮುಂದುವರಿಸ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ವೈಷ್ಣವಿ, ‘ನನಗೆ ಇದರ ಬಗ್ಗೆ ಒಂದಿಷ್ಟೂ ಸುಳಿವಿಲ್ಲ. ತಂಡದವರು ಚರ್ಚೆ ನಡೆಸುತ್ತಿದ್ದಾರೆ. ಹೊಸ ಯೋಚನೆಯೊಂದಿಗೆ ಅವರು ಬರುತ್ತಾರೆ ಎಂದುಕೊಂಡಿದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದರು.

ವೈಷ್ಣವಿ ಯಾಕಿಷ್ಟು ಮೌನಿ ಎಂಬುವುದಕ್ಕೆ ಉತ್ತರಿಸುತ್ತಾ, ‘ನಾನು ನಿಜಜೀವನದಲ್ಲೂ ಹೆಚ್ಚು ಮಾತನಾಡುವುದಿಲ್ಲ. ನೀನು ರೊಬೊನಾ? ನಿನಗೆ ಭಾವನೆಗಳೇ ಇಲ್ವಾ? ಎಂದು ಎಲ್ಲರೂ ಕೇಳುತ್ತಾರೆ. ಹಾಗೇನಿಲ್ಲ. ನನಗೂ ಭಾವನೆಗಳಿಗೆ. ಒಂದು ಪರಿಸ್ಥಿತಿಯನ್ನು ನಿಭಾಯಿಸಲು ಕೋಪ ಮಾತ್ರವೇ ಒಂದು ವಿಧವಲ್ಲ. ಮನಃಸ್ತಾಪ ಆಗಿದ್ದರೆ ಅದನ್ನು ನಿಭಾಯಿಸಲು ನಾನಾ ರೀತಿಯಿದೆ. ನಾನು ಶಾಂತ ರೀತಿಯಿಂದ ಎಲ್ಲವನ್ನೂ ನಿಭಾಯಿಸಲು ಬಯಸುತ್ತೇನೆ. ನನ್ನ ಸಂತೋಷ ನನ್ನದು. ನನ್ನ ಕೋಪ ನನ್ನ ಕೈಯಲ್ಲಿದೆ. ಶಾಂತಿ, ಖುಷಿ, ನಗು ಪಸರಿಸಲು ನಾನು ಮನೆ ಒಳಗೆ ಹೋಗಿದ್ದೆ. ಇದರಲ್ಲಿ ಸ್ವಲ್ಪ ಯಶಸ್ವಿಯಾಗಿದ್ದೇನೆ’ ಎಂದರು.

‘ಮನೆಯಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ನನ್ನ ಫೇವರೇಟ್‌ ಆಗಿದ್ದರು. ಇದರಲ್ಲಿ ತುಂಬಾ ಫೇವರೇಟ್‌ ದಿವ್ಯಾ ಉರುಡುಗ. ಕೊನೆಯ ದಿನಗಳಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರಾದೆವು. ಅನಾರೋಗ್ಯದ ಕಾರಣ ಅವರು ಹೊರಗಡೆ ಬಂದ ಸಂದರ್ಭದಲ್ಲಿ ಅವರನ್ನು ಮಿಸ್‌ ಮಾಡಿಕೊಂಡೆ. ಬಿಗ್‌ಬಾಸ್‌ ಪಯಣವೇ ವಿಶೇಷವಾಗಿತ್ತು’ ಎಂದರು.

‘ದಿವ್ಯ ಉರುಡುಗ ನನ್ನನ್ನು ಆಯ್ಕೆ ಮಾಡಿಕೊಂಡಾಗಿದೆ’

ಬಿಗ್‌ಬಾಸ್‌ ಮನೆಯಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಅರವಿಂದ್‌ ಹಾಗೂ ದಿವ್ಯಾ ಉರುಡುಗ ಜೋಡಿ. ಈ ಕುರಿತಂತೇ, ದಿವ್ಯ ಉರುಡುಗ ಹಾಗೂ ಬಿಗ್‌ಬಾಸ್‌ ಗೆಲ್ಲುವುದರಲ್ಲಿ ನಿಮಗೆ ಮುಖ್ಯವಾಗಿದ್ದು ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅರವಿಂದ್‌, ‘ದಿವ್ಯ ಉರುಡುಗ(ಡಿಯು) ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಆಯ್ಕೆ ಮಾಡಬೇಕೆಂದಿಲ್ಲ. ಬಿಗ್‌ಬಾಸ್‌ ಗೆಲ್ಲುವುದನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಬಿಗ್‌ಬಾಸ್‌ ಪ್ರವೇಶಿಸಿದ್ದು ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಅಲ್ಲ. ಆದರೆ ಆಟ ಆಡುವಾಗ ಎಲ್ಲರೂ ಸ್ನೇಹಿತರಾಗುತ್ತಾರೆ. ನಾನು ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೂಡಲೇ ದಿವ್ಯಾಗೆ ಕರೆ ಮಾಡಿದ್ದೆ. ಅವರ ಆರೋಗ್ಯ ಚೇತರಿಸಿಕೊಂಡಿದೆ. ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆಗೆ ಸೇರಿದ್ದಾರೆ. ಅವರು ಖುಷ್‌ಖುಷಿಯಾಗಿದ್ದಾರೆ. ಡಿಯು ಕೊಟ್ಟಿರೋ ರಿಂಗ್‌ ಕೈಯಲ್ಲೇ ಇದೆ. ಅದು ಯಾವಾಗಲೂ ತೆಗೆಯಲ್ಲ. ಅವರು ಕೊಟ್ಟಿರುವ ಒಲವಿನ ಉಡುಗೊರೆಗೆ ಅಷ್ಟೇ ಮೌಲ್ಯವಿದೆ. ಸ್ವಲ್ಪ ಬಿಗಿಯಾಗಿದೆ, ಅದನ್ನು ಸರಿಮಾಡಿಸಬೇಕಷ್ಟೇ’ ಎಂದು ಮುಗುಳ್ನಗೆಯಲ್ಲೇ ಉತ್ತರಿಸಿದರು.

‘ಮನೆ ಒಳಗಡೆ ಹೋಗುವಾಗ ಯಾವ ಯೋಚನೆಯೂ ನನ್ನ ತಲೆಯಲ್ಲಿ ಇರಲಿಲ್ಲ. ಮನೆಯಲ್ಲಿದ್ದ ಮತ್ತೆಲ್ಲರೂ ಮನರಂಜನಾ ಕ್ಷೇತ್ರದಿಂದ ಬಂದವರಾಗಿದ್ದರು. ಮನೆಯ ಎಲ್ಲ ಸದಸ್ಯರೂ ಒಳ್ಳೆಯವರಾಗಿದ್ದ ಕಾರಣ ಹೊಂದಿಕೊಂಡು ಹೋಗಲು ಸಾಧ್ಯವಾಯಿತು. ಒಂದು ವಾರ ಉಳಿದುಕೊಳ್ಳುತ್ತೇನೋ ಎಂಬ ಪ್ರಶ್ನೆ ಇತ್ತು. ಟಾಸ್ಕ್‌ಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಬಲ್ಲೆ
ಎಂಬ ನಂಬಿಕೆ ಇತ್ತು. ಬಿಗ್‌ಬಾಸ್‌ ಪಯಣ ಈ ರೀತಿ ಅಂತ್ಯವಾಗುತ್ತದೆ ಎಂದು ಯಾರೂ ಕನಸಲ್ಲಿ ಅಂದುಕೊಂಡಿರಲಿಲ್ಲ. ಬಿಗ್‌ಬಾಸ್‌ ಮನೆ ನಡೆಸಲು 800 ಜನರ ಶ್ರಮ ಈ ರೀತಿ ಅರ್ಧಕ್ಕೇ ನಿಂತುಹೋಗಿರುವುದು ಕಂಡು ಬೇಜಾರಾಗಿದೆ. ಬಿಗ್‌ಬಾಸ್‌ ಮನೆಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಈಗಿನ ಪರಿಸ್ಥಿತಿಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT