ಸೋಮವಾರ, ನವೆಂಬರ್ 28, 2022
20 °C

Bigg Boss 9: ರಣಾಂಗಣವಾದ ಮನೆ– ರೂಪೇಶ್ ಶರ್ಟ್ ಹರಿದ ಪ್ರಶಾಂತ್ ಸಂಬರಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 50 ದಿನ ಕಳೆಯುತ್ತಿದ್ದಂತೆ ಕನ್ನಡದ ಬಿಗ್ ಬಾಸ್ ಮನೆ ರಣಾಂಗಣವಾಗಿದೆ. ಗ್ರೂಪ್ ಟಾಸ್ಕ್‌ಗಳು ನಡೆಯುತ್ತಿದ್ದು, ಮನೆಯಲ್ಲಿ ಸದ್ಯ ಕೂಗಾಟ, ಚೀರಾಟ, ಬೈಗುಳಗಳೇ ಕೇಳಿಸುತ್ತಿವೆ.

ಹೌದು, ಈ ಬಾರಿ ಮನೆಯ ಗೊಂಬೆ ತಯಾರಿಸುವ ಟಾಸ್ಕ್ ಅನ್ನು ಸದಸ್ಯರಿಗೆ ನೀಡಲಾಗಿದೆ. ಬಿಗ್ ಬಾಸ್ಕ್ ಫ್ಯಾಕ್ಟರಿ ಎಂದು ಹೆಸರಿಡಲಾಗಿರುವ ಜಾಗದಲ್ಲಿ ಇರಿಸಲಾಗಿರುವ ಮೆಶಿನ್‌ನಿಂದ ಗೊಂಬೆ ತಯಾರಿಸಲು ಬೇಕಾದ ಸಾಮಾಗ್ರಿಗಳು ಹೊರಬರುತ್ತವೆ. ಎರಡೂ ತಂಡಗಳ ಸದಸ್ಯರು ಅಕ್ಕಪಕ್ಕದಲ್ಲಿ ನಿಂತು ಅವುಗಳನ್ನು ಪಡೆದುಕೊಂಡು ಗೊಂಬೆ ತಯಾರಿಸಬೇಕು. ಈ ನಿಯಮವೇ ಮನೆಯ ಸದಸ್ಯರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಹೊಡೆದಾಡಿಕೊಳ್ಳುವ ಹಂತಕ್ಕೂ ಹೋಗಿತ್ತು.

ರೂಪೇಶ್ ಶೆಟ್ಟಿ ಶರ್ಟ್ ಹರಿದ ಸಂಬರಗಿ

ಎರಡೂ ತಂಡಗಳ ಸದಸ್ಯರು ಬಿಗ್ ಬಾಸ್ ಟಾಯ್ ಫ್ಯಾಕ್ಟರಿ ಮೆಶಿನ್‌ನ ಎರಡೂ ಬದಿಯಲ್ಲಿ ನಿಂತು ಗೊಂಬೆ ತಯಾರಿಸಲು ಸಾಮಗ್ರಿ ಸಂಗ್ರಹಿಸುತ್ತಿದ್ದರೆ, ಸಂಬರಗಿ ಮಾತ್ರ ಎದುರಾಳಿ ತಂಡದವರ ಕೈಯಿಂದ ಅವುಗಳನ್ನು ಕಸಿಯುವ ಮತ್ತು ಸ್ಪರ್ಧಿ ಮೇಲೆ ಎಗರುವ ಮೂಲಕ ಕಿರಿಕಿರಿ ಉಂಟುಮಾಡುತ್ತಿದ್ದರು. ಈ ಸಂದರ್ಭ ವಿನೋದ್ ಗೊಬ್ಬರಗಾಲ ಮತ್ತು ರೂಪೇಶ್ ಶೆಟ್ಟಿ, ಸಂಬರಗಿ ಅವರನ್ನು ತಡೆಯುವ ಯತ್ನ ನಡೆಸಿದರು. ಇದರಿಂದ ಕೋಪಗೊಂಡ ಸಂಬರಗಿ, ರೂಪೇಶ್ ಶೆಟ್ಟಿ ಟೀಶರ್ಟ್ ಹಿಡಿದು ಎಳೆದಾಡಿದರು. ರೂಪೇಶ್ ಎಷ್ಟೇ ಕಿರುಚಿದರೂ ಬಿಡಲಿಲ್ಲ. ಕೊನೆಗೆ ಟೀಶರ್ಟ್ ಬಿಟ್ಟೆ ಬಂದುಬಿಟ್ಟರು. ಆ ಬಳಿಕ ಟೀಶರ್ಟ್ ಹರಿದಿರವುದು ಗಮನಕ್ಕೆ ಬಂದಿದೆ.

ಅಷ್ಟಕ್ಕೂ ಸುಮ್ಮನಾಗದ ಸಂಬರಗಿ ಪದೇ ಪದೇ ಕದಿಯುವ ಯತ್ನ ನಡೆಸಿದರು. ಬಾಯಿಗೆ ಬಂದಂತೆ ಮಾತನಾಡಲು ಶುರುಮಾಡಿದರು. ನೀನು ಗಂಡಸಾ ಗಡ್ಡ ಮೀಸೆ ತೆಗೆದುಬಿಡು ಎಂದು ಶೆಟ್ಟಿಗೆ ಕುಟುಕಿದರು. ಇದರಿಂದ ಕೋಪಗೊಂಡ ರೂಪೇಶ್ ಶೆಟ್ಟಿ, ನಿನಗೆ ಮಾನ ಮರ್ಯಾದೆ ಇದ್ಯಾ ಕದ್ದುಕೊಂಡು ಹೋಗ್ತೀಯಾ ಎಂದು ಪ್ರಶ್ನಿಸಿದರು. ಬಳಿಕ, ಕೋಪದಿಂದ ಸಂಬರಗಿಯತ್ತ ನುಗ್ಗಿದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಮನೆಯ ಸದಸ್ಯರು ಇಬ್ಬರನ್ನೂ ತಡೆದರು. ಇದಕ್ಕು ಮುನ್ನ, ದೀಪಿಕಾ ದಾಸ್ ಅವರನ್ನು ಸಂಬರಗಿ ತಳ್ಳಾಡಿ ರಂಪಾಟ ಮಾಡಿದ್ದರು.

ಈ ಮಧ್ಯೆ, ರೂಪೇಶ್ ರಾಜಣ್ಣ ಮತ್ತು ರಾಕೇಶ್ ಅಡಿಗ ನಡುವೆ ಏಕವಚನದಲ್ಲಿ ವಾಕ್ಸಮರವೂ ನಡೆದುಹೋಯಿತು. 

ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ, ಗೊಬ್ಬರಗಾಲ, ಅರುಣ್ ನಡುವೆ ಮಾತಿನ ಚಕಮಕಿಯೂ ನಡೆಯಿತು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು