ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss Kannada | ಸ್ನೇಕ್‌ ಶ್ಯಾಮ್‌ ತೆರೆದಿಟ್ಟ ವಿಸ್ಮಯಕಾರಿ ಉರಗ ಪ್ರಪಂಚ!

Published 14 ಅಕ್ಟೋಬರ್ 2023, 7:34 IST
Last Updated 14 ಅಕ್ಟೋಬರ್ 2023, 7:34 IST
ಅಕ್ಷರ ಗಾತ್ರ

ಬಿಗ್‌ ಬಾಸ್ ಮನೆಯೊಳಗೆ ಕಾಲಿಟ್ಟಿರುವ ಸ್ನೇಕ್‌ ಶ್ಯಾಮ್‌, ಉರಗ ಪ್ರಪಂಚದ ರೋಚಕ ಕತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉರಗ ಪ್ರಪಂಚದ ವಿಸ್ಮಯಕಾರಿ ಕತೆ ಕೇಳಿದ ಸ್ಪರ್ಧಿಗಳು ಬೆಕ್ಕಸ ಬೆರಗಾಗಿದ್ದಾರೆ.

ಹೌದು..... ಸ್ನೇಕ್‌ ಶ್ಯಾಮ್‌ ಅವರಿಗೆ ಹಾವುಗಳ ಜೊತೆ ಅದೆಷ್ಟೋ ವರ್ಷದ ಒಡನಾಟವಿದೆ. ಹಾವುಗಳ ಚಲನವಲನಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ ತಿಳಿದುಕೊಂಡಿದ್ದಾರೆ. ಯಾವ ಹಾವು ಮೊಟ್ಟೆ ಇಡುತ್ತದೆ, ಯಾವ ಹಾವು ಮರಿ ಹಾಕುತ್ತೆ, ಯಾವ ಹಾವು ಗೂಡು ಕಟ್ಟತ್ತದೆ ಹೀಗೆ ಎಲ್ಲ ವಿಷಯವನ್ನು ಅವರು ತಿಳಿಸಿದ್ದಾರೆ.

ಹಾವುಗಳು ಹೊಡೆದಾಡುವುದು ಎರಡೇ ವಿಷಯಕ್ಕೆ!

ಹಾವುಗಳು ಮನುಷ್ಯನ ಹಾಗೆ ಎಲ್ಲದಕ್ಕೂ ಹೊಡೆದಾಡುವುದಿಲ್ಲ ಎನ್ನುತ್ತಾರೆ ಸ್ನೇಕ್ ಶ್ಯಾಮ್‌. ಅವುಗಳು ಹೊಡೆದಾಡುವುದು ಎರಡು ವಿಷಯಕ್ಕಂತೆ. ಅದು ಈಟಿಂಗ್‌ ಮತ್ತು ಮೇಟಿಂಗ್‌. ಈ ಬಗ್ಗೆ ಅವರು ಹೀಗೆ ಹೇಳುತ್ತಾರೆ...

‘ಮೇಟಿಂಗ್‌ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಬೆಳವಣಿಗೆಯಾದ ಆದ ಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ತಾಪಮಾನ ಸರಿಯಾಗಿರುವ ಜಾಗ ಸಿಗುವ ತನಕ ಕಾಯುತ್ತದೆ. ನಮ್ಮ ಹಾಗೆ ಒಂಬತ್ತು ತಿಂಗಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಅಂತೆಲ್ಲ ಮಾಡಲ್ಲ… ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುತ್ತದೆ. ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡುತ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65 ದಿನಗಳಲ್ಲಿ ಮರಿಗಳು ಹೊರಗೆ ಬರುತ್ತದೆ’ ಎಂದು ಸ್ನೇಕ್‌ ಶ್ಯಾಮ್‌ ವಿವರಿಸಿದರು.

ಹಾವಿನ ಮರಿಗಳು ಹುಟ್ಟುತ್ತಲೆ ಸ್ವಾವಲಂಬಿಗಳು

‘ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರುತ್ತವಂತೆ. ನಮ್ಮ ಹಾಗೆ ಹುಟ್ಟಿದ ಮೇಲೆ ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ. ಅವುಗಳ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ’ ಎಂದು ಹಾವಿನ ಮರಿಗಳ ಬಗ್ಗೆ ಕೆಲವೊಂದು ಮಾಹಿತಿ ನೀಡಿದರು.

ಮರಿ ಹಾಕಿದರು ಸಸ್ತನಿಗಳಲ್ಲ ಮೂರು ಜಾತಿಯ ಹಾವುಗಳು

ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕುತ್ತವೆ. ಅವುಗಳೆಂದರೆ ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತೆ ಮಂಡಲ ಹಾವು. ಮರಿ ಹಾಕಿದರೂ ಇವುಗಳನ್ನು ಸಸ್ತನಿಗಳೆಂದು ಕರೆಯೊದಿಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಆದರೆ ಇವುಗಳು ಮರಿ ಮಾತ್ರ ಹಾಕುತ್ತವೆ ಎಂದರು.

ಅಲೈಂಗಿಕ ಸಂತಾನೋತ್ಪತ್ತಿ

ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡು ಹಾವು ಇಲ್ಲ. ಇಲ್ಲಿ ಹೆಣ್ಣು ಹಾವು ಅಲೈಂಗಿಕ ಸಂತಾನೋತ್ಪತ್ತಿ (ಸೆಲ್ಫ್‌ ರಿಪ್ರೊಡಕ್ಷನ್) ಮೂಲಕ ಮೊಟ್ಟೆ ಹಾಕುತ್ತದೆ. ಈ ಹಾವು ನೋಡಲು ಎರೆಹುಳುವಿನ ಹಾಗೆ ಇರುತ್ತದೆ. ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಶೌಚಗೃಹದಲ್ಲಿ ಓಡಾಡುತ್ತಿರುತ್ತದೆ ಎಂಬ ರೋಚಕ ಕಥನವನ್ನು ಹೇಳಿದ್ದಾರೆ.

ಕಿಂಗ್‌ ಕೋಬ್ರಾ

ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿಯ ಹಾವು ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದೇ ಕಿಂಗ್ ಕೋಬ್ರಾ! ಎಂದು ಉರಗ ಪ್ರಪಂಚದ ವಿಸ್ಮಯಕಾರಿ ಕಥನಗಳನ್ನು ಶ್ಯಾಮ್‌ ಹಂಚಿಕೊಂಡರು.

ಓದಿ: Bigg Boss Kannada 10 | ಎಲ್ಲರ ಕಣ್ಣು ಡ್ರೋನ್‌ ಪ್ರತಾಪ್‌ ಮ್ಯಾಲೆ

ಓದಿ: Bigg Boss Kannada 10 | ಮೊದಲ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬಹುದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT