ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಣ್ಯಕಶಿಪುವಾದ ‘ಕೃಷ್ಣ’!

Last Updated 10 ಜನವರಿ 2019, 20:00 IST
ಅಕ್ಷರ ಗಾತ್ರ

‘ಹಿ ರಣ್ಯಕಶಿಪು’. ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ನರಸಿಂಹಾವತಾರದ ಎದುರಾಗಿ ಬರುವ ರೌದ್ರ ಪಾತ್ರ ಇದು. ಉಗ್ರನೋಟ, ಬಲಿಷ್ಠ ದೇಹ, ಭಾಷಾ ಶುದ್ಧತೆ, ಅಪಾರ ಅಭಿನಯ ಕೌಶಲ ಬೇಡುವ ಅಪೂರ್ವ ಪಾತ್ರವೂ ಹೌದು. ಇಂತಹ ಸವಾಲಿನ ಪಾತ್ರವನ್ನು ನಟ ನವೀನ್‌ ಕೃಷ್ಣ ಕಿರುತೆರೆಯಲ್ಲಿ ನಿರ್ವಹಿಸುತ್ತಿದ್ದಾರೆ.

‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀವಿಷ್ಣು ದಶಾವತಾರ’ ಧಾರಾವಾಹಿಯಲ್ಲಿ ಈಗ ನರಸಿಂಹಾವತಾರದ ದರ್ಶನ. ಹಿರಣ್ಯಕಶಿಪುವಿನ ರೌದ್ರ, ಕಯಾದು ಮತ್ತು ಪ್ರಹ್ಲಾದನ ಹರಿಭಕ್ತಿ, ವಿಷ್ಣುವಿನ ಉಗ್ರರೂಪದ (ನರಸಿಂಹನ ರೂಪ) ವಿರಾಟ ದರ್ಶನವಿರುವ ಈ ಕಥಾಭಾಗ ನಟರ ಪಾಲಿಗೆ ಸವಾಲೇ ಸರಿ. ಜನಜನಿತವಾಗಿರುವ ಪೌರಾಣಿಕ ಕಥೆಗಳನ್ನು ನಟನೆ ಮತ್ತು ತಾಂತ್ರಿಕ ಅಂಶಗಳಿಂದಲೇ ಮತ್ತಷ್ಟು ರೋಚಕವಾಗಿ, ಸ್ವಾರಸ್ಯಕರವಾಗಿ ಪ್ರೇಕ್ಷಕರಿಗೆ ತಲುಪಿಸುವುದು ನಿರ್ದೇಶಕನ ಕೌಶಲಕ್ಕೂ ಸವಾಲು.

ಹಿರಿ, ಕಿರಿ ತೆರೆಗಳಲ್ಲಿ ನಟ, ನಿರ್ದೇಶಕರಾಗಿ ಪರಿಚಿತರಾಗಿರುವ ನವೀನ್ ಕೃಷ್ಣ ಸದ್ಯ ಹಿರಣ್ಯಕಶಿಪುವನ್ನು ಆವಾಹನೆ ಮಾಡಿಕೊಂಡಿದ್ದಾರೆ. ‘ಕೆಲವು ಕಾಲದ ನಂತರ ಬಣ್ಣ ಹಚ್ಚಿದ್ದೇನೆ. ಪಾತ್ರದ ಮೇಲಿನ ಮೋಹವೇ ಇದಕ್ಕೆ ಕಾರಣ’ ಎನ್ನುವ ಅವರಿಗೆ, ಈ ಪಾತ್ರ ನಿಭಾಯಿಸಲು ಡಾ. ರಾಜ್‌ಕುಮಾರ್ ಸ್ಫೂರ್ತಿ.

‘ಹಿರಣ್ಯಕಶಿಪು ಎಂದರೆ ರಾಜ್‌ಕುಮಾರ್, ರಾಜ್‌ಕುಮಾರ್ ಎಂದರೆ ಹಿರಣ್ಯಕಶಿಪು. ಅವರ ನಟನೆಯೊಂದಿಗೆ ನನ್ನ ನಟನೆಯನ್ನು ಹೋಲಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ನನ್ನಿಂದ ಪಾತ್ರಕ್ಕೆ ಎಷ್ಟರಮಟ್ಟಿಗೆ ನ್ಯಾಯ ಕೊಡಲು ಸಾಧ್ಯವೋ ಅಷ್ಟನ್ನು ಖಂಡಿತ ಮಾಡುತ್ತೇನೆ. ಪಾತ್ರ ನಿಭಾಯಿಸುವ ವೇಳೆ ಎಲ್ಲಿಯೂ ರಾಜ್‌ಕುಮಾರ್ ಅವರನ್ನು ಅನುಕರಿಸದಂತೆ ಎಚ್ಚರವಹಿಸಿ, ನನ್ನದೇ ಶೈಲಿಯಲ್ಲಿ ಅಭಿನಯಿಸಿದ್ದೇನೆ’ ಎನ್ನುವ ವಿನಮ್ರ ನುಡಿ ನವೀನ್‌ ಕೃಷ್ಣ ಅವರದ್ದು.

ಪೌರಾಣಿಕ ಧಾರಾವಾಹಿಗಳೆಂದರೆ ಪುಸ್ತಕದ ಭಾಷೆ, ಸಂಸ್ಕೃತ ಮಿಶ್ರಿತ ಸಂಭಾಷಣೆ, ಸಾಮಾನ್ಯರಿಗೆ ಅರ್ಥವಾಗದ ಶಬ್ದಗಳು ಎನ್ನುವ ಆಪಾದನೆಯನ್ನು ಮೀರಿರುವ ‘ಶ್ರೀವಿಷ್ಣು ದಶಾವತಾರ’ ಧಾರಾವಾಹಿಯಲ್ಲಿ ಈ ಕಾಲದ ಮಕ್ಕಳಿಗೂ ಅರ್ಥವಾಗುವ ಭಾಷೆಯ ಬಳಕೆ ಇದೆ. ಹಿರಿಯರಿಗೆ ತಮ್ಮ ಅವಿಸ್ಮರಣೀಯ ನೆನಪುಗಳನ್ನು ಮೆಲುಕು ಹಾಕಲು ಬೇಕಿರುವ ಭಾಷಾ ಸೌಂದರ್ಯವೂ ಇದೆ.

‘ರಂಗಭೂಮಿ, ಬೆಳ್ಳಿತೆರೆ, ಕಿರುತೆರೆ... ಎಲ್ಲೇ ಇರಲಿ ಹಿರಣ್ಯಕಶಿಪುವಿನ ಪಾತ್ರ ಸಿಗಬೇಕಾದರೆ ಅದೃಷ್ಟ ಮಾಡಿರಬೇಕು’ ಎನ್ನುವುದು ನವೀನ್‌ ಭಾವನೆ.

‘ಉಘೇ ಉಘೇ ಮಾದೇಶ್ವರ’ ಧಾರಾವಾಹಿ ನಿರ್ದೇಶನ ‘ತ್ರಯಂಬಕ್‌’ ಸಿನಿಮಾಕ್ಕೆ ಸಂಭಾಷಣೆ ಜೊತೆಗೆ ನಟನೆಯನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ನವೀನ್‌ ಮತ್ತೊಂದು ಧಾರಾವಾಹಿ ನಿರ್ದೇಶನಕ್ಕೂ ಸಿದ್ಧತೆ ನಡೆಸಿದ್ದಾರೆ.

‘ನಿರ್ದೇಶನಕ್ಕಿಂತ ನಟನೆ ಹೆಚ್ಚು ಸವಾಲು’ ಎನ್ನುವ ಅವರಿಗೆ ಪಾತ್ರ ಪ್ರವೇಶ, ಪಾತ್ರದ ಸ್ವಭಾವಗಳ ಆವಾಹನೆಗೆ ವಿಶೇಷ ಸಿದ್ಧತೆ ಬೇಕಂತೆ. ‘ಆ್ಯಕ್ಷನ್‌ – ಕಟ್‌ ಹೇಳುವುದಕ್ಕಿಂತ ಅವೆರಡರ ನಡುವಿನ ಅವಧಿಯ ಅಭಿನಯ ಹೆಚ್ಚು ಸೃಜನಶೀಲತೆ ಬೇಡುತ್ತದೆ. ನಾನು ಈ ಎರಡೂ ಕೆಲಸಗಳನ್ನು ಇಷ್ಟಪಟ್ಟು ಮಾಡುತ್ತೇನೆ’ ಎನ್ನುತ್ತಾರೆ.

ಚಿಕ್ಕಂದಿನಿಂದಲೂ ರಂಗಭೂಮಿ ನಂಟು ಇವರಿಗೆ ಇದೆ. ಜೊತೆಗೆ, ಪೌರಾಣಿಕ ಕಥೆಗಳನ್ನು ಕೇಳುತ್ತಾ, ನೋಡುತ್ತಾ ಬೆಳೆದ ನವೀನ್ ಕೃಷ್ಣ ಅವರಿಗೆ ಪುರಾಣ ಪ್ರಪಂಚವೆಂದರೆ ವಿಶೇಷ ಒಲವು. ‘ಬಾಹುಬಲಿ’ ಸಿನಿಮಾದ ಗುಣಮಟ್ಟಕ್ಕೆ ಸರಿಸಾಟಿ ಆಗುವಂತೆ ‘ಚಾಣಕ್ಯ’ ಚಿತ್ರ ನಿರ್ದೇಶಿಸಬೇಕು ಎನ್ನುವುದು ಅವರ ಬಹುದೊಡ್ಡ ಕನಸು.

ಸು. ರುದ್ರಮೂರ್ತಿ ಶಾಸ್ತ್ರಿ ಅವರ ಮೂರು ಸಾವಿರ ಪುಟಗಳ ಕಾದಂಬರಿ ‘ಚಾಣಕ್ಯ’ ಆಧರಿಸಿ ದೊಡ್ಡಮಟ್ಟದ ಸಿನಿಮಾ ಅಥವಾ ಧಾರಾವಾಹಿ ನಿರ್ದೇಶಿಸುವ ಮೂಲಕ ಚಾಣಕ್ಯನ ಚರಿತ್ರೆಯನ್ನು ಪರಿಣಾಮಕಾರಿಯಾಗಿ ಕನ್ನಡಿಗರಿಗೆ ಕಟ್ಟಿ ಕೊಡಬೇಕು ಎನ್ನುವ ಹಂಬಲ ಹೊತ್ತಿದ್ದಾರೆ.

‘ಒಂದು ಪೌರಾಣಿಕ ಕಥೆಯನ್ನು ಪರಿಪೂರ್ಣ ಸಿನಿಮಾ ಆಗಿ ಈ ಕಾಲದ ಪ್ರೇಕ್ಷಕರಿಗೆ ತಲುಪಿಸಲು ಯಾವೆಲ್ಲಾ ಅಂಶಗಳು ಅಗತ್ಯವೋ ಅವೆಲ್ಲವೂ ಈ ಕಾದಂಬರಿಯಲ್ಲಿವೆ. ಮನರಂಜನೆ, ಥ್ರಿಲ್,‌ಯುದ್ಧ, ಹಾಸ್ಯ, ಕುಟುಂಬದ ನಡುವಿನ ಸಂಬಂಧಗಳು, ರೌದ್ರ, ಅಸೂಯೆ ಹೀಗೆ ಎಲ್ಲ ಅಂಶಗಳೂ ಇದರಲ್ಲಿ ಇವೆ. ದೊಡ್ಡ ಬಜೆಟ್‌ ಬೇಡುವ ಈ ಚಿತ್ರದಲ್ಲಿ ನಟ ಉಪೇಂದ್ರ ಚಾಣಕ್ಯನಾಗಿ ಅಭಿನಯಿಸಿದರೆ ಒಳಿತು’ ಎನ್ನುತ್ತಾ ತಮ್ಮ ಕನಸನ್ನು ತೆರೆದಿಡುತ್ತಾರೆ ನವೀನ್‌.

ಉಪೇಂದ್ರ ಅವರಲ್ಲಿ ಈ ವಿಷಯವನ್ನು ನವೀನ್ ಇನ್ನೂ ಪ್ರಸ್ತಾಪಿಸಿಲ್ಲ. ‘ಶ್ರೀ ವಿಷ್ಣು ದಶಾವತಾರ’ ಧಾರಾವಾಹಿ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಡ್ರಾಮಾ ಜ್ಯೂನಿಯರ್ಸ್‌ ಖ್ಯಾತಿಯ ಅಚಿಂತ್ಯ, ಪ್ರಹ್ಲಾದನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೆಜಿಎಫ್‌ ಖ್ಯಾತಿಯ ಅರ್ಚನಾ, ಕಯಾದು ಪಾತ್ರಕ್ಕೆ ಜೀವ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT