ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೇಕ್‌ನ ನಂತರ...‘ದೊರೆಸಾನಿ’ಯ ರೂಪಿಕಾ

Last Updated 13 ಜನವರಿ 2022, 22:45 IST
ಅಕ್ಷರ ಗಾತ್ರ

ಬಾಲನಟಿಯಾಗಿ ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದವರು. ಭರತನಾಟ್ಯ ಕಲಾವಿದೆಯಾಗಿ ಸಾವಿರಾರು ವೇದಿಕೆ ಕಾರ್ಯಕ್ರಮಗಳನ್ನು ನೀಡಿದವರು... ಇವರು ರೂಪಿಕಾ. ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ದೊರೆಸಾನಿ’ ಧಾರಾವಾಹಿಯ ನಾಯಕಿ ದೀಪಿಕಾ.

ಫಿಲ್ಟರ್‌ ಕಾಫಿ– ಮಸಾಲೆ ದೋಸೆ... ಗೂಬೆ– ಗುಬ್ಬಚ್ಚಿ ಹೀಗೆ ಸ್ಕ್ರಿಪ್ಟ್‌ನಲ್ಲಿರುವ ಹೆಸರುಗಳೇ ಇವರ ನಿಜ ಜೀವನದಲ್ಲೂ ಅಭಿಮಾನಿಗಳು ಕರೆಯಲಾರಂಭಿಸಿದಾಗ ಅದೊಂಥರಾ ಥ್ರಿಲ್‌ ಅನುಭವಿಸಿದ್ದಾರಂತೆ ರೂಪಿಕಾ.

ರೂಪಿಕಾ ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ದೊರೆಸಾನಿ’ ಧಾರಾವಾಹಿಯ ನಾಯಕಿ ದೀಪಿಕಾ.

ಅವರು ಬಾಲನಟಿಯಾಗಿ ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದವರು. ಭರತನಾಟ್ಯ ಕಲಾವಿದೆಯಾಗಿ ಸಾವಿರಾರು ವೇದಿಕೆ ಕಾರ್ಯಕ್ರಮಗಳನ್ನು ನೀಡಿದವರು. ಎಸ್‌.ನಾರಾಯಣ್‌ ನಿರ್ದೇಶನದ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ಹಿರಿತೆರೆ ಪ್ರವೇಶ ಮಾಡಿದವರು. ನಂತರ ಸಾಲು ಅವಕಾಶಗಳೇನೋ ಬಂದವು. ಈ ನಡುವೆ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಮತ್ತೆ ಕಿರುತೆರೆಗೆ ವಾಪಸಾಗಿದ್ದಾರೆ. ರೂಪಿಕಾ ಆಲಿಯಾಸ್‌ ದೀಪಿಕಾ ಅವರ ಮನದಲ್ಲೇನಿದೆ? ಅವರದೇ ಮಾತುಗಳಲ್ಲಿ ಕೇಳೋಣ.

‘ನನ್ನ ಅಜ್ಜ, ಅಪ್ಪ, ಅಮ್ಮ ಎಲ್ಲರೂ ಕಲಾ ಹಿನ್ನೆಲೆಯವರೇ. ಹಾಗಾಗಿ ನನ್ನ ಪ್ರತಿಯೊಂದು ಕಾರ್ಯಕ್ರಮಕ್ಕೂ ಅವರು ಬೆನ್ನೆಲುಬಾಗಿ ನಿಂತಿದ್ದರು. ನಾನು ಮೂಲತಃ ಭರತನಾಟ್ಯ ಕಲಾವಿದೆ. ರಂಗಭೂಮಿಯಲ್ಲೂ ಕೆಲಸ ಮಾಡಿದ್ದೇನೆ. ಬೆನಕ, ಪ್ರಭಾತ್‌, ಸೂರ್ಯ ಕಲಾವಿದರು ತಂಡಗಳಲ್ಲಿ, ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕಗಳಲ್ಲೂ ಅಭಿನಯಿಸಿದ ಅನುಭವ ನನಗಿದೆ’.

‘ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ನಾಯಕಿಯಾಗಿಯೇ ಕಾಣಿಸಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸದಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟಿದ್ದೆ. ಅದು ಈಗ ಸಾಕಾರಗೊಂಡಿದೆ. ಬೆಳ್ಳಿಚುಕ್ಕಿ (ನಾಗತಿಹಳ್ಳಿ ಚಂದ್ರಶೇಖರ್ – ನಿರ್ದೇಶನ), ತ್ರಿವೇಣಿ ಸಂಗಮ (ಶ್ರೀನಿವಾಸ ಮೂರ್ತಿ) ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದೆ. ‘ಕೃಷ್ಣ’, ‘ಜಾಲಿಡೇಸ್‌’... ಚಿತ್ರಗಳಲ್ಲೂ ಬಾಲನಟಿಯಾಗಿದ್ದೆ’.

ಒಂದು ಚಿಕ್ಕ ಬ್ರೇಕ್‌...

‘ದೈಹಿಕವಾಗಿ ಸ್ವಲ್ಪ ಫಿಟ್‌ ಆಗಬೇಕಿತ್ತು. ಸ್ವಲ್ಪ ಬದಲಾವಣೆ ಕಾಣಬೇಕಿತ್ತು. ಅದಕ್ಕಾಗಿ ಕೆಲಕಾಲ ಬ್ರೇಕ್‌ ತೆಗೆದುಕೊಂಡೆ. ಕಥೆ, ವಿಷಯಗಳ ಆಯ್ಕೆಯಲ್ಲಿ ಬಹಳ ಚೂಸಿ ಆಗಿದ್ದೆ. ಹಾಗಾಗಿ ಕೆಲಕಾಲ ವಿರಾಮ ತೆಗೆದುಕೊಂಡಂತಾಯಿತು.

‘ಈಗಿನ ಸನ್ನಿವೇಶದಲ್ಲಿ ಹಿರಿತೆರೆಗೂ ಕಿರುತೆರೆಗೂ ದೊಡ್ಡ ವ್ಯತ್ಯಾಸ ಇಲ್ಲ. ಯಾವುದೇ ಸಿನಿಮಾ ನಿರ್ಮಾಣಕ್ಕೂ ಕಡಿಮೆ ಇಲ್ಲದಂತೆ ಇಲ್ಲೂ ಪ್ರೊಡಕ್ಷನ್‌ ನಡೆಯುತ್ತದೆ. ಜನರಿಗೆ ಇಲ್ಲಿಯೂ ದೊಡ್ಡಮಟ್ಟದಲ್ಲಿ ತಲುಪುತ್ತೇವೆ. ಈಗ ಕಿರುತೆರೆ ಕೆಲಸ ಖುಷಿ ಕೊಡುತ್ತದೆ. ಸದ್ಯ ಕನ್ನಡದ ಎರಡು ಚಿತ್ರಗಳು ಚರ್ಚೆಯ ಹಂತದಲ್ಲಿವೆ. ತೆಲುಗಿನಲ್ಲಿ ‘ಛಿಲ್‌ ಬ್ರೋ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

‘ನನಗೆ ಅವಕಾಶ ಕೊಟ್ಟ ಎಲ್ಲ ನಿರ್ಮಾಣ ಸಂಸ್ಥೆಯವರು, ನಿರ್ದೇಶಕರಿಗೆ ಕೃತಜ್ಞಳಾಗಿದ್ದೇನೆ. ವಿಶೇಷವಾಗಿ ಎಸ್‌.ನಾರಾಯಣ್‌ ಅವರಿಗೆ ಧನ್ಯವಾದ ಹೇಳಬೇಕು. ನಾನು 9ನೇ ತರಗತಿ ಇರಬೇಕಾದರೆ ನನಗೆ ದೊಡ್ಡ ಅವಕಾಶ ನೀಡಿದರು. ಅವರು ಒಂದು ದೊಡ್ಡ ವಿಶ್ವವಿದ್ಯಾಲಯ ಇದ್ದಂತೆ. ಅಲ್ಲಿಗೆ ಹೋಗಬೇಕಾದರೆ ನನಗೆ ಏನೂ ಗೊತ್ತಿರಲಿಲ್ಲ. ಎಲ್ಲವನ್ನೂ ಅಲ್ಲಿ ಕಲಿತೆ. ಅದು ನನ್ನ ಜೀವನದ ದೊಡ್ಡ ಮೈಲಿಗಲ್ಲು. ಯಾವುದೇ ಆಡಿಷನ್ ಇಲ್ಲದೇ ಅವರ ತಂಡಕ್ಕೆ ಸೇರಿಸಿಕೊಂಡರು. ಈಗ‘ದೊರೆಸಾನಿ’ ತಂಡದ ಎಲ್ಲರಿಗೂ, ಟಿವಿ ವಾಹಿನಿಯವರಿಗೂ ಆಭಾರಿ.

ಮತ್ತೆ ಓದುವ ಕನಸು: ‘ಬೆಂಗಳೂರಿನಲ್ಲೇ ‘ಗೆಜ್ಜೆ’ ನೃತ್ಯ ಸ್ಟುಡಿಯೋ ಮಾಡಿದ್ದೇನೆ. ಅದರಲ್ಲಿ ನೃತ್ಯ ತರಬೇತಿ ಕೊಡುತ್ತಿದ್ದೇನೆ. ನೃತ್ಯದಲ್ಲೇ ಎಂ.ಎ. ಪಿಎಚ್‌.ಡಿ ಓದಬೇಕು ಎಂಬ ಆಸೆ ಇದೆ. ಹೀಗೆ ತುಂಬಾ ಕನಸುಗಳಿವೆ.

‘ದೊರೆಸಾನಿ’ಯ ದೀಪಿಕಾ

ಕಲರ್ಸ್‌ ಕನ್ನಡದ ‘ದೊರೆಸಾನಿ’ ಧಾರಾವಾಹಿಯ ನಾಯಕಿ, ಮಧ್ಯಮ ವರ್ಗದ ಮನೆಯ ಮುದ್ದಿನ ಮಗಳು ದೀಪಿಕಾ ಆಗಿ ಕಾಣಿಸಿಕೊಂಡಿದ್ದೇನೆ.ಕೂಡು ಕುಟುಂಬದ ಮನೆಯ ದೊಡ್ಡ ಮಗಳಾಗಿ ಜವಾಬ್ದಾರಿ ತೆಗೆದುಕೊಳ್ಳುವ ಹುಡುಗಿಯಾಗಿ ದೀಪಿಕಾ ಇದ್ದಾಳೆ. ಲೆಕ್ಕಪರಿಶೋಧಕಿಯ ಕೆಲಸ ಹುಡುಕುವುದು ದೀಪಿಕಾ ಪಾತ್ರ.ದೊರೆಸಾನಿ ಆರಂಭವಾಗಿ ಎರಡು ವಾರಗಳಾಗಿವೆ. ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕ ಇತ್ತು. ಆದರೆ, ಈಗ ಜನ ತುಂಬಾ ಗುರುತಿಸುತ್ತಾರೆ. ಪ್ರತಿ ದೃಶ್ಯ, ಸಂಭಾಷಣೆಯನ್ನು ಜನ ನೆನಪಿನಲ್ಲಿಟ್ಟುಕೊಳ್ಳುತ್ತಾರೆ’ ಎಂದು ಖುಷಿ ಹಂಚಿಕೊಂಡರು ರೂಪಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT